ಮುಖ್ಯ ಸುದ್ದಿ
ಜೆಡಿಎಸ್-ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುಖಂಡರು
CHITRADURGA NEWS | 02 FEBRUARY 2024
ಚಿತ್ರದುರ್ಗ: ಲೊಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ನಾಯಕರು, ಕಾರ್ಯಕರ್ತರ ಪಕ್ಷಾಂತರ ಪರ್ವವೂ ಶುರುವಾಗಿದೆ.
ಈ ಹಿಂದೆ ಬಿಜೆಪಿಯಲ್ಲೇ ಇದ್ದ ಐಮಂಗಲ ಭಾಗದ ಮುಖಂಡ ಜಿಪಂ ಮಾಜಿ ಉಪಾಧ್ಯಕ್ಷ ದ್ಯಾಮಣ್ಣ ಜೆಡಿಎಸ್ ಸೇರಿದ್ದರು. ಇಂದು ಜೆಡಿಎಸ್ ತೊರೆದು ತಮ್ಮ ಬೆಂಬಲಿಗರ ಜೊತೆಗೆ ಬಿಜೆಪಿಗೆ ಮರು ಸೇರ್ಪಡೆಯಾದರು.
ಇದೇ ವೇಳೆ ಹಿರಿಯೂರು, ಶಿರಾ ಭಾಗದ ಕೆಲ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರಿದರು.
ಇದನ್ನೂ ಓದಿ: ಚಲನಚಿತ್ರಗಳ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಬಿ.ಎಲ್.ವೇಣು
ಪಕ್ಷಕ್ಕೆ ಸ್ವಾಗತ ಮಾಡಿಕೊಂಡ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರವನ್ನು ಗೆಲಲ್ಲೇಬೇಕಿದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ನರೇಂದ್ರ ಮೋದಿ ಅವರನ್ನು ಮೂರನೇ ಅವಧಿಗೆ ದೇಶದ ಪ್ರಧಾನಿಯನ್ನಾಗಿ ಮಾಡಬೇಕಿದೆ. ಈ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಈ ಸಲ ಕಳೆದ ಬಾರಿಗಿಂತ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ತಿಳಿಸಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗಳಿಸಿದ್ದ ಮತಗಳಿಗಿಂತ ಈ ಚುನಾವಣೆಯಲ್ಲಿ ಶೇ.10 ರಷ್ಟು ಹೆಚ್ಚು ಮತ ಗಳಿಕೆ ಆಗಬೇಕು. ಇದಕ್ಕೆ ಎಲ್ಲರ ಸಹಕಾರವೂ ಅಗತ್ಯವಾಗಿದೆ.
ಕಳೆದ ಚುನಾವಣೆಯಲ್ಲಿ ಒಂದೇ ಸಮುದಾಯದ ಹಲವು ಅಭ್ಯರ್ಥಿಗಳು ಕಣದಲ್ಲಿದ್ದ ಕಾರಣ ನಮಗೆ ಅನುಕೂಲವಾಗಿತ್ತು. ಆದರೆ ಈ ಬಾರಿ ಪರಿಸ್ಥಿತಿ ಹಿಂದಿನಂತಿಲ್ಲ. ಈ ಕಾರಣಕ್ಕೆ ಈಗಿನಿಂದಲೇ ಚುನಾವಣೆ ಗೆಲ್ಲಲು ಶ್ರಮಿಸಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕೇಂದ್ರ ಬಜೆಟ್ನಲ್ಲಿ ಚಿತ್ರದುರ್ಗ ರೈಲ್ವೇಗೆ ಬಂಪರ್ ಕೊಡುಗೆ
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಅಕ್ಕಿ, ವಿದ್ಯುತ್ ಸೇರಿದಂತೆ ಜನತೆ ಏನು ಕೇಳಿದರೂ ಕೇಂದ್ರದ ಕಡೆಗೆ ಕೈ ತೋರಿಸುತ್ತಿದೆ. ಆದರೆ. ಈ ಸರ್ಕಾರಕ್ಕೆ ನೀಡುವ ಇಚ್ಚಾಶಕ್ತಿ ಇಲ್ಲ. ಈ ಕಾರಣಕ್ಕೆ ನಾಟಕ ಆಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಜೆಡಿಎಸ್ ತೋರಿದು ಬಿಜೆಪಿ ಸೇರಿದ ದ್ಯಾಮಣ್ಣ ಮಾತನಾಡಿ, ಹಿಂದೆ ನಾನು ಬಿಜೆಪಿಯಲ್ಲೇ ಇದ್ದೆ. ಕಾರಣಾತಂರದಿಂದ ಜೆಡಿಎಸ್ ಪಕ್ಷ ಸೇರಿದ್ದೆ. ಆದರೆ, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎನ್ನುವ ಕಾರಣಕ್ಕೆ ಮತ್ತೆ ಬಿಜೆಪಿಗೆ ಬಂದಿದ್ದೇನೆ. ನನ್ನ ಕ್ಷೇತ್ರ ವ್ಯಾಪ್ತಿಯ 284 ಬೂತ್ಗಳಲ್ಲೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲೀಡ್ ಕೊಡಿಸುತ್ತೇನೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಎ.ಮುರಳಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ಸಂಪತ್ಕುಮಾರ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರೇಶ್ ಸಿದ್ದಾಪುರ, ಹಿರಿಯೂರು ಮಂಡಲ ಅಧ್ಯಕ್ಷ ಶಿವಣ್ಣ, ಜಿಲ್ಲಾ ಕಾರ್ಯದರ್ಶಿ ಮೋಹನ್, ವಕ್ತಾರ ಶಿವಪ್ರಕಾಶ್ ದಗ್ಗೆ ಮತ್ತಿತರರಿದ್ದರು.
ಇದೇ ವೇಳೆ ಹಿರಿಯೂರು ತಾಲೂಕಿನ ರವಿವರ್ಮ, ಸೋಮಣ್ಣ, ಶೇಖರಪ್ಪ, ರಂಗನಾಥ್, ರುದ್ರೇಶ್ ಬಿಜೆಪಿ ಸೇರಿದರು.