ಮುಖ್ಯ ಸುದ್ದಿ
ಚಲನಚಿತ್ರಗಳ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಬಿ.ಎಲ್.ವೇಣು | ಅಭಿಮಾನಿಗಳ ಮನದಲ್ಲಿ ಸಂತಸ
CHITRADURGA NEWS | 02 FEBRUARY 2024
ಚಿತ್ರದುರ್ಗ: ಕತೆಗಾರರಾಗಿ ಮತ್ತು ಚಲನಚತ್ರ ಸಂಭಾಷಣಕಾರರಾಗಿ ಪ್ರಸಿದ್ಧಿ ಪಡೆದ ಬಿ.ಎಲ್. ವೇಣು ಅವರನ್ನು 2022ನೇ ಸಾಲಿನ ಕನ್ನಡ ಹಾಗೂ ಕರ್ನಾಟಕ ಪ್ರಾದೇಶಿಕ ಭಾಷಾ ಗುಣಾತ್ಮಕ ಚಲನಚಿತ್ರಗಳ ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಸದಸ್ಯರಾಗಿ ಹಿರಿಯ ಪತ್ರಕರ್ತ ಗುರುರಾಜ್, ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ, ನಿರ್ದೇಶಕ ಎಸ್.ಮಹೇಂದರ್, ನಟಿ ವೀಣಾ ಸುಂದರ್, ನಟ ಕರಿಸುಬ್ಬು ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ವಾರ್ತಾ ಇಲಾಖೆ ಆಯುಕ್ತರನ್ನು ನೇಮಕಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜೆ.ಸಿಂತ ಆದೇಶಿಸಿದ್ದಾರೆ.
ಇದನ್ನೂ ಓದಿ: ಟ್ರ್ಯಾಕ್ಟರ್ ಬಸ್ ಅಪಘಾತ | ಪಲ್ಟಿಯಾದ ರಾಜಹಂಸ ಬಸ್
ವೇಣು ಚಿತ್ರದುರ್ಗದಲ್ಲಿ 1945ರ ಮೇ 27ರಂದು ಜನಿಸಿದರು. ತಂದೆ ವೃತ್ತಿ ರಂಗಭೂಮಿ ನಟರಾಗಿದ್ದ ಲಕ್ಷ್ಮಯ್ಯ. ತಾಯಿ ಸುಶೀಲಮ್ಮ ಹಾರ್ಮೋನಿಯಂ ವಾದಕಿಯಾಗಿದ್ದರು. ವೇಣು ಅವರಿಗೆ ಪ್ರೈಮರಿ ಶಾಲೆಯಲ್ಲಿದ್ದಾಗಲೇ ನಾಟಕದ ಬಗ್ಗೆ ಆಸ್ಥೆ ಮೂಡಿತು. ದುರ್ಗಕ್ಕೆ ಬಂದ ದ ಕಂಪನಿ ನಾಟಕಗಳನ್ನು ನೋಡಿ ಗೆಳೆಯರ ಜೊತೆಗೂಡಿ ತಾವೂ ನಾಟಕ ಆಡುತ್ತಿದ್ದರು. ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ ಮಾಸ್ಟರ್ ಹಿರಣ್ಣಯ್ಯನವರ ಕಂಪನಿ ನಾಟಕದಲ್ಲಿ ಬಾಲ ಕಲಾವಿದನ ಪಾತ್ರ ವಹಿಸಿದ್ದರು.
ವೇಣು ತಾವು ಸಾಹಿತ್ಯ ಓದಿ ಪ್ರೇರಿತರಾಗಿ ಬರೆದ ಕಥೆಗಳು ಜನಪ್ರಗತಿ ಪತ್ರಿಕೆಯಲ್ಲಿ ಪ್ರಕಟಗೊಂಡವು. ಮುಂದೆ ಸುಧಾ, ಮಯೂರ, ಪ್ರಜಾವಾಣಿ, ಕನ್ನಡಪ್ರಭ, ಪತ್ರಿಕೆಗಳಿಗೆ ಸಣ್ಣ ಕತೆಗಳನ್ನು ಬರೆದರು. ‘ಪ್ರೇಮ ಮದುವೆ ಮತ್ತು ಶೀಲ’ ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡು ವಿಶೇಷ ಚರ್ಚೆಗೆ ನಾಂದಿ ಹಾಡಿತು. ಬಂಡಾಯದ ಎಳೆಯ ‘ಲಿಂಗನೆಟ್ಟ ಪ್ರಸಂಗ’ (1978), ‘ಬೆತ್ತಲೆ ಸೇವೆ’ ಕಾದಂಬರಿ (1979)‘ಸುಡುಗಾಡು ಸಿದ್ಧನ ಪ್ರಸಂಗ’ ಕಥೆಗಳು
ಪ್ರಜಾಮತ, ಪ್ರಜಾವಾಣಿಗಳಲ್ಲಿ ಬಹುಮಾನ ಪಡೆದವು. ಬೆಲ್ಚಿಯ ನಾರಾಯಣ ಪುರದಲ್ಲಿ ಸವರ್ಣೀಯರು ದಲಿತರನ್ನು ಜೀವಂತವಾಗಿ ಸುಟ್ಟ ವರದಿಯನ್ನಾಧರಿಸಿ ಬರೆದ ‘ಅತಂತ್ರರು’ ಕಾದಂಬರಿಗೆ ಸುಧಾ ಪತ್ರಿಕೆಯ ಮೊದಲ ಬಹುಮಾನ (1982) ಸಂದಿದ್ದಲ್ಲದೆ ಧಾರಾವಾಹಿಯಾಗಿ ಪ್ರಕಟಗೊಂಡಾಗ ವೇಣುರವರ ಸಾಹಿತ್ಯ ಸೃಷ್ಟಿಯ ಬಗ್ಗೆ ಸಾಹಿತ್ಯಾಸಕ್ತರು ಗಮನಹರಿಸಿದರು.
ಕನ್ನಡ ಪ್ರಭದಲ್ಲಿ ಪ್ರಕಟಗೊಂಡ ‘ದೊಡ್ಡಮನೆ’ ಕಥೆಯಾಧರಿಸಿ ‘ದೊಡ್ಡಮನೆ ಎಸ್ಟೇಟ್’ ಚಲನಚಿತ್ರವಾಯಿತು. ಸಿದ್ಧಲಿಂಗಯ್ಯನವರ ನಿರ್ದೇಶನದಲ್ಲಿ ‘ಪರಾಜಿತ’ ಕಾದಂಬರಿ ಚಲನಚಿತ್ರವಾಗಿ ಬಿಡುಗಡೆಯಾಗಿ ಶತದಿನೋತ್ಸವ ಆಚರಿಸಿತು. ಈ ಮಧ್ಯೆ ಚಿತ್ರದುರ್ಗದ ಇತಿಹಾಸದ ಮದಕರಿನಾಯಕ ಕಾದಂಬರಿ ಬರೆದು ವಾದವಿವಾದಗಳಾದರೂ ಸಮರ್ಥವಾಗಿ ಉತ್ತರಿಸಿದರು. ‘ಪ್ರೇಮಪರ್ವ’ ಕಾದಂಬರಿಯು ಚಲನಚಿತ್ರವಾಗಿ ಲವ್‌ಸ್ಟೋರಿಗಳ ಟ್ರೆಂಡ್‌ಗೆ ನಾಂದಿ ಹಾಡಿತು. ಇದೇ ಚಲನಚಿತ್ರವು ತಮಿಳಿನಲ್ಲಿ ‘ಪೂವಿಳಂಗು’ ತೆಲುಗಿನಲ್ಲಿ ‘ವಾಲಕ್ಕೋಸಿ’ ಮತ್ತು ಹಿಂದಿಯಲ್ಲಿ ‘ಜೀನಾ ಮರ್ನಾ ತೇರೇಸಂಗ್’ ಆಗಿ ಜಯಭೇರಿ ಬಾರಿಸಿತು. ‘ಅಮೃತಘಳಿಗೆ’ ಚಲನಚಿತ್ರಕ್ಕೆ ಸಂಭಾಷಣೆ ಬರೆಯಲು ಪುಟ್ಟಣ್ಣ ಕಣಗಾಲರು ಆಹ್ವಾನಿಸಿದರು. ಹೀಗೆ ಚಲನಚಿತ್ರಗಳಿಗೆ ಸಂಭಾಷಣೆ, ಕಾದಂಬರಿಗಳ ರಚನೆಯಲ್ಲಿ ತೊಡಗಿದರು.
ವೇಣು ಅವರು ಸಾಹಿತ್ಯ ಕ್ಷೇತ್ರದಲ್ಲಿ, ಚಲನಚಿತ್ರ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಿದ್ದಂತೆ ಒಮ್ಮೆ ಅಪಘಾತಕ್ಕೀಡಾಗಿ ಬಲಗೈ ಮುರಿದುಕೊಂಡು ಬರವಣಿಗೆಯೇ ಸಂಪೂರ್ಣ ನಿಂತೇ ಹೋಯಿತೇನೋ ಎಂಬ ಅಧೀರತೆ ಮನಸ್ಸಿಗೆ ಬಂದರೂ ಧೃತಿಗೆಡದೆ ಎಡಗೈಯಲ್ಲೇ ಬರೆಯುವುದನ್ನು ರೂಢಿಸಿಕೊಂಡು ಪತ್ರಿಕೆಗಳಿಗೆ ಬರೆಯತೊಡಗಿದರು. ಚೇತರಿಸಿಕೊಳ್ಳುತ್ತಿರುವಾಗಲೇ ಬೃಹನ್ಮಠದ ಮೂಲಪುರುಷರ ಬಗ್ಗೆ ಬರೆದ ಐತಿಹಾಸಿಕ ಕಾದಂಬರಿ ‘ಕ್ರಾಂತಿಯೋಗಿ ಮರುಳ ಸಿದ್ಧ’. ಕಷ್ಟಗಳು ಎದುರಾದಾಗಲೆಲ್ಲ ಧೃತಿಗೆಡದೆ ಬರೆಯತೊಡಗಿದರು.
ವೇಣು ಅವರ ಕಥಾಸಂಕಲನಗಳಲ್ಲಿ ಬಣ್ಣಗಳು, ದೊಡ್ಡಮನೆ ಎಸ್ಟೇಟ್, ಪ್ರೇಮ ಮದುವೆ ಮತ್ತು ಶೀಲ, ನೀಲವರ್ಣ, ದಲಿತಾವತಾರ ಮತ್ತು ಬಣ್ಣದ ಗೊಂಬಿ ಸೇರಿವೆ. ನಾಟಕಗಳಲ್ಲಿ ಯಮಲೋಕದಲ್ಲಿ ಮಾನವ (ನಗೆನಾಟಕ), ಭೂಲೋಕಕ್ಕೆ ಬಂದ ಬಸವಣ್ಣ, ರಾಜಾ ವೀರ ಗಂಡುಗಲಿ ಮದಕರಿನಾಯಕ, ಹೋರಾಟ (ಏಡ್ಸ್ ಬಗ್ಗೆ) ಮುಂತಾದವು ಇವೆ. ಮಿನಿಕಾದಂಬರಿಗಳು ಗುಹೆ ಸೇರಿದವರು (ಮಕ್ಕಳಿಗಾಗಿ), ಸಹೃದಯಿ, ಬೇರುಬಿಟ್ಟವರು, ಶೋಧನೆ, ವೀರವನಿತೆ ಓಬವ್ವ, ಕ್ರಾಂತಿ ಮೊದಲಾದವು.
ಕಾದಂಬರಿಗಳಲ್ಲಿ ಪರಾಜಿತ, ಪ್ರೇಮಪರ್ವ, ಅಜೇಯ, ಮೋಬಳ್ಳಿಯೋರ ಬೆತ್ತಲೆಸೇವೆ, ಅತಂತ್ರರು ಮುಂತಾದ ಸುಮಾರು 30 ಕೃತಿಗಳಿವೆ. ಇವುಗಳಲ್ಲಿ ಗಂಡುಗಲಿ ಮದಕರಿನಾಯಕ, ರಾಜಾಬಿಚ್ಚುಕತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ಧ, ಹೆಬ್ಬುಲಿ ಹಿರೇಮದಕರಿನಾಯಕ ಮುಂತಾದ 5 ಐತಿಹಾಸಿಕ ಕಾದಂಬರಿಗಳೂ ಸೇರಿ 50 ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ.
ವೇಣು ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿಗಳಾದ ರನ್ನ ಸಾಹಿತ್ಯ ಪ್ರಶಸ್ತಿ, ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ಚಿತ್ರದುರ್ಗದ ಬೃಹನ್ಮಠದಿಂದ, ಸಿರಿಗೆರೆ ಶ್ರೀ ಗಳಿಂದ ಸನ್ಮಾನ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು ಸಂದಿವೆ.
ಅಪರಂಜಿ ಚಿತ್ರದ ಸಂಭಾಷಣೆಗಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿ, ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಮತ್ತು ಅನೇಕ ಚಿತ್ರಗಳಿಗೆ ಚಿತ್ರಮಾಧ್ಯಮ ಲೋಕದ ಹಲವು ಪುರಸ್ಕಾರಗಳು ಸಂದಿವೆ. ವೇಣು ಅವರಿಗೆ 2009ರಲ್ಲಿ ಅರ್ಪಿಸಿದ ಅಭಿನಂದನ ಗ್ರಂಥ ‘ಚಿನ್ಮೂಲಾದ್ರಿಸಿರಿ’. ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.