Connect with us

ಕೋಟೆನಾಡಲ್ಲಿ ಚಂದ್ರಯಾನ-3 ಲ್ಯಾಂಡರ್‌ ವಿಕ್ರಮ್‌ ಲ್ಯಾಂಡಿಂಗ್ | ನಾಲ್ವಡಿ ಕೃಷ್ಣರಾಜ ಒಡೆಯರ್‌ ಆಗಮನ

ಮುಖ್ಯ ಸುದ್ದಿ

ಕೋಟೆನಾಡಲ್ಲಿ ಚಂದ್ರಯಾನ-3 ಲ್ಯಾಂಡರ್‌ ವಿಕ್ರಮ್‌ ಲ್ಯಾಂಡಿಂಗ್ | ನಾಲ್ವಡಿ ಕೃಷ್ಣರಾಜ ಒಡೆಯರ್‌ ಆಗಮನ

CHITRADURGA NEWS | 03 FEBRUARY 2024
ಚಿತ್ರದುರ್ಗ: ಚಂದ್ರನ ಅಂಗಳದಲ್ಲಿ ಇಳಿದ ಲ್ಯಾಂಡರ್‌ ವಿಕ್ರಮ್‌ ಹಾಗೂ ರೋವರ್‌ ಪ್ರಗ್ಯಾನ್‌ ನೋಡಬೇಕೆ ಆಗಿದ್ದರೆ ತಡ ಏಕೆ ನೇರವಾಗಿ ಚಿತ್ರದುರ್ಗದ ತೋಟಗಾರಿಕೆ ಇಲಾಖೆ ಆವರಣಕ್ಕೆ ಬನ್ನಿ.. ಇಲ್ಲಿ ಲ್ಯಾಂಡರ್ ವಿಕ್ರಮ್‌ ಅಷ್ಟೇ ಅಲ್ಲ ವರನಟ ಡಾ.ರಾಜ್‌ ಕುಮಾರ್, ಮಹಾಚೇತನ ನಾಲ್ವಡಿ ಕೃಷ್ಣರಾಜ ಒಡೆಯರ್ ಸಹ ಎದುರಾಗುತ್ತಾರೆ.

ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಶುಕ್ರವಾರ ರಾತ್ರಿ ಚಾಲನೆ ದೊರೆತ 31ನೇ ಫಲ-ಪುಷ್ಪ ಪ್ರದರ್ಶನ ಹೂವಿನ ಲೋಕವನ್ನೇ ಸೃಷ್ಟಿಸಿದೆ. ವಿವಿಧ ಹೂಗಳಿಂದ ಅಲಂಕರಿಸುವ ಭಾರತ ಸಂವಿಧಾನದ ಕಲಾಕೃತಿ, ಇತ್ತೀಚಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಅವರು ಚಂದ್ರಯಾನ-3 ಯಶ್ವಸಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ್ದು, ಪ್ರಪಂಚದ ಮೊದಲನೇ ದೇಶವಾಗಿರುತ್ತದೆ. ಇದು ದೇಶದ ಹೆಮ್ಮೆಯ ವಿಷಯವಾಗಿದ್ದು, ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಗ್ಯಾನ್ ಪ್ರತಿಕೃತಿ ಕಾಣಬಹುದಾಗಿದೆ.

ಇದನ್ನೂ ಓದಿ: ಮುಂದೆಂದೂ ಬಾಗೂರಿನ ಚೆನ್ನಕೇಶವ ಸ್ವಾಮಿ ದೇವಾಲಯಕ್ಕೆ ಹೋಗಲ್ಲ | ಹೊಸದುರ್ಗ ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ

ಐತಿಹಾಸಿಕ ಚಿತ್ರದುರ್ಗ ಕೋಟೆಯ ಗೋಪಾಲಸ್ವಾಮಿ ಹೊಂಡ, ಅಕ್ಕತಂಗಿ ಹೊಂಡ, ಸಿಹಿನೀರು ಹೊಂಡ ಹಾಗೂ ಸಂತೆ ಹೊಂಡಗಳು ಒಂದಕ್ಕೊಂದು ಸಂಪರ್ಕಿಸಿರುವ ಮಳೆ ನೀರು ಕೊಯ್ಲು ಘಟಕದ ಮಾದರಿಗಳ ಪ್ರದರ್ಶನ, ವಾಣಿವಿಲಾಸ (ಮಾರಿಕಣಿವೆ) ಅಣೆಕಟ್ಟು ಕಟ್ಟಿ ಜಿಲ್ಲೆಯ ಜನರ ದಾಹ ತಣಿಸಿದ, ರೈಲು ಮಾರ್ಗ, ರಸ್ತೆ ಮಾರ್ಗ ಕಲ್ಪಿಸಿದ ಮಹಾಚೇತನ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಕೃತಿ, ವಿಶ್ರ ತೋಟಗಾರಿಕೆ ಕೃಷಿ ಮಾದರಿ, 12ನೇ ಶತಮಾನದಲ್ಲಿಯೇ ಸಮಸಮಾಜದ ಚಿಂತನೆಯಲ್ಲಿ ಅನುಭವ ಮಂಟಪ ಸ್ಥಾಪಿಸಿ ಸರ್ವಸಮಾನತೆಯ ಕನಸನ್ನು ಸರ್ವಕಾಲಿಕ ನನಸನ್ನಾಗಿಸಿದ ಧೀಮಂತ ಶಕ್ತಿ ಬಸವಣ್ಣನವರ ಕಲಾಕೃತಿ, ಇದರ ಜೊತೆಗೆ ಶ್ರೀ ಶಿವಕುಮಾರ ಸ್ವಾಮಿಜಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಗೂ ಶ್ರೀ ಪುಟ್ಟರಾಜ ಗವಾಯಿಗಳ ಪ್ರತಿಕೃತಿಗಳು, ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ ವಿವಿಧ ಪುಷ್ಪ ಸಸಿಗಳು, ತಳಿಗಳು ಫಲ-ಪುಷ್ಪ ಪ್ರದರ್ಶನದಲ್ಲಿ ಗಮನಸೆಳೆಯುತ್ತಿವೆ.

ಫಲ-ಪುಷ್ಪ ಪ್ರದರ್ಶನ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌, ‘ಜಿಲ್ಲೆಯ ರೈತರು ಹೆಚ್ಚು ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು’ ಎಂದು ರೈತರಿಗೆ ಸಲಹೆ ನೀಡಿದರು.

ಇದನ್ನೂ ಓದಿ: ದಿವ್ಯ ಕ್ಷಣಕ್ಕೆ ಸಾಕ್ಷಿಯಾದ ರಂಗಕಾಶಿ ಸಾಣೇಹಳ್ಳಿ | ಸಮಾಗಮವಾಯ್ತು ಮಲೆನಾಡು, ಬಯಲುಸೀಮೆ ಸೊಬಗು

‘ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ತರಕಾರಿ, ಫಲ-ಪುಷ್ಪ ಬೆಳೆಗಳನ್ನು ಬೆಳೆಯುವ ಮೂಲಕ ತೋಟಗಾರಿಕೆ ಬೆಳೆಗಳನ್ನು ಅವಲಂಬಿಸಿದ್ದಾರೆ. ಅದರಂತೆ ಚಿತ್ರದುರ್ಗ ಜಿಲ್ಲೆಯ ರೈತರು ಕೂಡ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ತೋಟಗಾರಿಕೆ ಬೆಳೆಗಳಿಗೆ ಅವಶ್ಯಕ ಇರುವ ಸರ್ಕಾರದ ವತಿಯಿಂದ ಅಥವಾ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ, ‘ಫಲ-ಪುಷ್ಪ ಪ್ರದರ್ಶನ ವೀಕ್ಷಿಸುವ ಮೂಲಕ ಜಿಲ್ಲೆಯ ರೈತರು ತೋಟಗಾರಿಕೆ ಬೆಳೆಗಳ ಮಾಹಿತಿ ಪಡೆದು, ತೋಟಗಾರಿಕೆ ಬೆಳೆಗಳನ್ನು ಬೆಳೆದು ಉತ್ತಮ ಆದಾಯ ಗಳಿಸಬೇಕು’ ಎಂದರು.

‘ಫಲ-ಪುಷ್ಪ ಪ್ರದರ್ಶನದಲ್ಲಿ ಭಾರತದ ಸಂವಿಧಾನದ ಬಗ್ಗೆ ಕಲಾಕೃತಿ, ಐತಿಹಾಸಿಕ ಚಿತ್ರದುರ್ಗ ಕೋಟೆಯಲ್ಲಿ ಮಳೆ ನೀರು ಕೊಯ್ಲು ಘಟಕಗಳು, ತೋಟಗಾರಿಕೆ ಬೆಳೆಗಳ ಮಿಶ್ರ ಕೃಷಿ ಪದ್ದತಿ ಅಳವಡಿಕೆ ಮಾದರಿ ಸೇರಿದಂತೆ ರೈತರಿಗೆ ಪೂರಕವಾದ, ಉಪಯುಕ್ತವಾದ ಮಾಹಿತಿ ಇದೆ. ಜಿಲ್ಲೆಯ ರೈತರು, ಸಾರ್ವಜನಿಕರು ಫಲ-ಪುಷ್ಪ ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ‘ಚಿತ್ರದುರ್ಗ ತಾಲ್ಲೂಕಿನಲ್ಲಿ ಹೆಚ್ಚಾಗಿ ಪುಷ್ಪ ಬೆಳೆ ಬೆಳೆಯುತ್ತಾರೆ. ಹಿರಿಯೂರು ತಾಲ್ಲೂಕಿನಲ್ಲಿ ಫಲ ಬೆಳೆಯುತ್ತಾರೆ. ಫಲ-ಪುಷ್ಪ ಜಿಲ್ಲೆಯ ಎಲ್ಲಾ ತಾಲ್ಲೂಕಿನ ರೈತರಿಗೂ ಪರಿಚಯಿಸುವ ಕೆಲಸವಾಗಬೇಕು ಎಂದು ತಿಳಿಸಿದ ಅವರು, ಜಿಲ್ಲೆಯ ಎಲ್ಲ ಆಸಕ್ತ ರೈತರು ಫಲ-ಪುಷ್ಪ ಪ್ರದರ್ಶನ ವೀಕ್ಷಣೆಗೆ ವ್ಯವಸ್ಥೆ ಮಾಡಿ, ಜಿಲ್ಲೆಯ ರೈತರು ಫಲ-ಪುಷ್ಪ ಬೆಳೆಯಲು ಪ್ರೋತ್ಸಾಹ ಮಾಡಬೇಕು’ ಎಂದರು.

ಇದನ್ನೂ ಓದಿ: ಚಳ್ಳಕೆರೆ ಎಡಿಎಲ್‍ಆರ್ ಲೋಕಾಯುಕ್ತ ಬಲೆಗೆ

ವಿಧಾನ ಪರಿಷತ್ ಸದಸ್ಯ ಕೆ.ಎಸ್‌.ನವೀನ್‌ ಮಾತನಾಡಿ, ‘ಜಿಲ್ಲೆಯ ರೈತರಿಗೆ, ಸಾರ್ವಜನಿಕರಿಗೆ ಉತ್ತಮ ಸಂದೇಶ ನೀಡುವ ಫಲ-ಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಜಿಲ್ಲೆಯ ರೈತರಿಗೆ ಅವಶ್ಯಕವಿರುವ ಕೋಲ್ಡ್ ಸ್ಟೋರೇಜ್ ಘಟಕ ಹಾಗೂ ಜಿಲ್ಲೆಗೆ ಗ್ಲಾಸ್‍ಹೌಸ್ ಮಂಜೂರು ಮಾಡಿ, ಮುಂದಿನ ಬಾರಿಯ ಫಲ-ಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಗ್ಲಾಸ್‍ಹೌಸ್‍ನಲ್ಲಿಯೇ ಆಯೋಜನೆ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ಮನವಿ ಮಾಡಿದರು.

ಜಿಲ್ಲೆಯ ಕೃಷಿಗೆ ಅವಶ್ಯಕವಾಗಿರುವ ಮಳೆ ನೀರು ಕೊಯ್ಲು, ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರಿಗೆ ತೋಟಗಾರಿಕೆ ಬೆಳೆಗಳ ವೈಜ್ಞಾನಿಕ ಮಾಹಿತಿ, ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ನೀರು ಬಳಕೆಯೊಂದಿಗೆ ವಿವಿಧ ತೋಟಗಾರಿಕೆ ಬೆಳೆಗಳ ಮಿಶ್ರ ಕೃಷಿ ಪದ್ದತಿಯನ್ನು ಅಳವಡಿಕೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಫಲ-ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಮುಖ್ಯ ಯೋಜನಾಧಿಕಾರಿ ಸತೀಶ್ ರೆಡ್ಡಿ, ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ತಹಶೀಲ್ದಾರ್ ಡಾ.ನಾಗವೇಣಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಪದನಿಮಿತ್ತ ಕಾರ್ಯದರ್ಶಿ ಬಿ.ದೇವರಾಜು, ಜಿಲ್ಲಾ ತೋಟಗಾರಿಕೆ ಸಂಘದ ಖಜಾಂಚಿ ನಾಗರಾಜ ಬೇದ್ರೆ, ಸಹಕಾರ್ಯದರ್ಶಿ ಗಿರೀಶ್ ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version