CHITRADURGA NEWS | 08 JULY 2026
ಚಿತ್ರದುರ್ಗ: ಕೃಷಿಯನ್ನು ಮಾತ್ರ ನಂಬಿ ಕುಳಿತುಕೊಳ್ಳದೆ, ರೈತರು ಕಡಿಮೆ ಬಂಡವಾಳ ಮತ್ತು ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ತಂದುಕೊಡುವ ಅಣಬೆ ಬೇಸಾಯದಂತಹ ಉಪ ಕಸುಬುಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಹೇಳಿದರು.
ಇದನ್ನೂ ಓದಿ: ಜು.18 ರಂದು ಭೋವಿ ಜನೋತ್ಸವ | ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ 17ನೇ ಪಟ್ಟಾಭಿಷೇಕ ಮಹೋತ್ಸವ
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಈಚೆಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜಿಲ್ಲೆಯ ರೈತರಿಗಾಗಿ ಆಯೋಜಿಸಲಾಗಿದ್ದ “ಅಣಬೆ ಬೇಸಾಯ ಹಾಗೂ ಮೌಲ್ಯವರ್ಧನೆ” ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹವಾಮಾನ ವೈಪರೀತ್ಯದ ಈ ದಿನಗಳಲ್ಲಿ ಕೃಷಿಯ ಜೊತೆಗೆ ಜೇನು ಸಾಕಾಣಿಕೆ, ಹೈನುಗಾರಿಕೆ, ಕುರಿ-ಮೇಕೆ ಮತ್ತು ಕೋಳಿ ಸಾಕಾಣಿಕೆಯಂತಹ ಪೂರಕ ಚಟುವಟಿಕೆಗಳು ಆದಾಯದ ಸ್ಥಿರತೆ ಕಾಯ್ದುಕೊಳ್ಳಲು ನೆರವಾಗಲಿವೆ.
ಅಣಬೆ ಕೃಷಿಯು ಸಮಗ್ರ ಕೃಷಿ ಪದ್ಧತಿಯ ಪ್ರಮುಖ ಅಂಗವಾಗಿದ್ದು, ಆರಂಭದಲ್ಲಿ ಮನೆಯ ಸಣ್ಣ ಕೊಠಡಿಯಲ್ಲೇ ಹವ್ಯಾಸದ ರೂಪದಲ್ಲಿ ಇದನ್ನು ಆರಂಭಿಸಬಹುದು. ಅನುಭವ ಹಾಗೂ ಪರಿಣತಿ ಗಳಿಸಿದ ನಂತರ ವಾಣಿಜ್ಯ ಮಟ್ಟದಲ್ಲಿ ವಿಸ್ತರಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಇದನ್ನೂ ಓದಿ: SIR ನಡೆಸುತ್ತಿರುವುದು ಚುನಾವಣಾ ಆಯೋಗ, ಕೇಂದ್ರ ಸರ್ಕಾರ ಅಲ್ಲ | ಬಿ.ವೈ.ವಿಜಯೇಂದ್ರ
ವಿವಿಧ ಅಣಬೆ ಪ್ರಭೇದಗಳಲ್ಲಿ ಚಿಪ್ಪು ಹಾಗೂ ಹಾಲು ಅಣಬೆಗಳನ್ನು ಅತ್ಯಂತ ಸುಲಭವಾಗಿ ಬೆಳೆಯಬಹುದು. ಅಣಬೆಯಲ್ಲಿ ಹೆಚ್ಚಿನ ಪೌಷ್ಟಿಕಾಂಶ, ವಿಟಮಿನ್ ಹಾಗೂ ಖನಿಜಾಂಶಗಳಿದ್ದು, ಕಡಿಮೆ ಕೊಬ್ಬು ಮತ್ತು ಸಕ್ಕರೆ ಇರುವುದರಿಂದ ಇದು ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ನಿಯಂತ್ರಣಕ್ಕೂ ಸಹಕಾರಿಯಾಗಿದೆ ಎಂದು ರಜನೀಕಾಂತ ತಿಳಿಸಿದರು.
ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯದ ಕೃಷಿ ಸೂಕ್ಷ್ಮಜೀವ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಗೊರಪ್ಪನವರ ಭರಮಪ್ಪ ಅವರು ಅಣಬೆಯ ವಿವಿಧ ತಳಿಗಳ ಆಯ್ಕೆ, ಬೇಸಾಯ ಕ್ರಮ, ನಿರ್ವಹಣೆ ಹಾಗೂ ಅಣಬೆಯಿಂದ ತಯಾರಿಸಬಹುದಾದ ವಿವಿಧ ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಭೀಮಸಮುದ್ರದ ಪ್ರಗತಿಪರ ರೈತ ತಿಪ್ಪೇಸ್ವಾಮಿ ಹಾಗೂ ಚಿತ್ರದುರ್ಗದ ಗ್ರೀನ್ ಹುಡ್ಸ್ ಮಶ್ರೂಮ್ ಸಂಸ್ಥೆಯ ಜಿ.ಎ.ವಿಶ್ವನಾಥ್ ಅವರು ಅಣಬೆ ಕೃಷಿಯಲ್ಲಿನ ತಮ್ಮ ಪ್ರಾಯೋಗಿಕ ಅನುಭವ ಹಾಗೂ ಮಾರುಕಟ್ಟೆ ವ್ಯವಸ್ಥೆಯ ಯಶೋಗಾಥೆಯನ್ನು ರೈತರೊಂದಿಗೆ ಹಂಚಿಕೊಂಡರು.
ಇದೇ ವೇಳೆ ರೈತರಿಂದಲೇ ಪ್ರಾಯೋಗಿಕವಾಗಿ ಅಣಬೆ ಬೆಳೆಯುವ ವಿಧಾನವನ್ನು ಪ್ರದರ್ಶಿಸಲಾಯಿತು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 08 | ಶೇಂಗಾ, ರಾಗಿ ರೇಟ್ ಎಷ್ಟಿದೆ?
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 65ಕ್ಕೂ ಹೆಚ್ಚು ಆಸಕ್ತ ರೈತರು ಈ ತರಬೇತಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

