CHITRADURGA NEWS | 20 SEPTEMBER 2026
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಬಯಲು ಸೀಮೆಗೆ ಜೀವಜಲ ಹರಿಸುವ ರಾಜ್ಯ ಸರ್ಕಾರದ ಸಂಕಲ್ಪ ಸಾಕಾರಗೊಂಡಿದೆ. ಈ ಐತಿಹಾಸಿಕ ಸಾಧನೆಯ ಸಂಕೇತವಾಗಿ ಇದೇ ಸೆಪ್ಟೆಂಬರ್ 24ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಿತ್ರದುರ್ಗಕ್ಕೆ ಆಗಮಿಸಿ ಭದ್ರಾ ಜಲಕ್ಕೆ ಗಂಗಾಪೂಜೆ ನೆರವೇರಿಸಲಿದ್ದಾರೆ. ಬಳಿಕ ಬೃಹತ್ ಸಾರ್ವಜನಿಕ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಪಂಪ್ಸೆಟ್, ಬಿಡಿಭಾಗ ವಿತರಣೆ
ನಗರದ ದಾವಣಗೆರೆ ರಸ್ತೆಯಲ್ಲಿರುವ ಮಾದಾರ ಚನ್ನಯ್ಯ ಗುರುಪೀಠದ ಪಕ್ಕದ ಮೈದಾನದಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿ, ಯೋಜನೆ ಮತ್ತು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕೆಗಳು ವ್ಯಕ್ತವಾಗಿದ್ದರೂ, ಆ ಎಲ್ಲಾ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವ ಜೊತೆಯಲ್ಲೇ ಸರ್ಕಾರ ನೀರಾವರಿ ಯೋಜನೆಗಳಿಗೂ ಹೆಚ್ಚಿನ ಆದ್ಯತೆ ನೀಡಿದೆ. ಇತರ ರಾಜ್ಯಗಳು ಭರವಸೆಗಳನ್ನು ಈಡೇರಿಸಲು ಪರದಾಡುತ್ತಿದ್ದರೆ, ನಮ್ಮ ಸರ್ಕಾರ ಬರಗಾಲ ಹೊದ್ದು ಮಲಗಿದ್ದ ಚಿತ್ರದುರ್ಗಕ್ಕೆ ಭದ್ರೆಯ ನೀರು ಹರಿಸುವ ಮೂಲಕ ತನ್ನ ಬದ್ಧತೆ ಮೆರೆದಿದೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಗೆ 3 ಟಿಎಂಸಿ ನೀರನ್ನು ಪ್ರಾಯೋಗಿಕವಾಗಿ ಹರಿಸಲಾಗುತ್ತಿದೆ. ಪ್ರಸಕ್ತ ವರ್ಷದ ನವೆಂಬರ್-ಡಿಸೆಂಬರ್ ತಿಂಗಳ ಒಳಗೆ ತುಂಗಾ ನದಿಯಿಂದ 17.5 ಟಿಎಂಸಿ ನೀರನ್ನು ಲಿಫ್ಟ್ ಮಾಡುವ ಮೂಲಕ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಯಶಸ್ವಿಗೊಳಿಸಲು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದಕ್ಕಾಗಿ ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಪಡೆದು ವಿದ್ಯುತ್ ಟವರ್ಗಳ ಕಾಮಗಾರಿಯನ್ನು ಚುರುಕುಗೊಳಿಸಲಾಗಿದೆ ಎಂದರು.
ಇದನ್ನೂ ಓದಿ: ತಾಲ್ಲೂಕು ಮಟ್ಟದ ಕ್ರೀಡಾಕೂಟ | ಸಿರಿಗೆರೆ ಮೈಸೂರು ಬಸವಯ್ಯ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಈ ಮಹತ್ವಾಕಾಂಕ್ಷೆಯ ಯೋಜನೆಗೆ ಕೇಂದ್ರ ಸರ್ಕಾರದ ಅಸಹಕಾರ ಎದ್ದು ಕಾಣುತ್ತಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ರೂ.5,300 ಕೋಟಿ ಅನುದಾನವನ್ನು ಈವರೆಗೂ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರವೇ ಈಗಾಗಲೇ 12 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ತಿಳಿಸಿದ ಅವರು, ಇದೇ ವೇಳೆ, ಯಾವುದೇ ಇತರ ಅಭಿವೃದ್ಧಿ ಅನುದಾನವನ್ನು ಕೇಳದೆ ಕೇವಲ ಜಿಲ್ಲೆಗೆ ನೀರು ಹರಿಸುವಂತೆ ಪಟ್ಟು ಹಿಡಿದಿದ್ದ ದಿವಂಗತ ಸಚಿವ ಡಿ. ಸುಧಾಕರ್ ಅವರ ಕಳಕಳಿಯನ್ನು ಸಚಿವ ಚಲುವರಾಯಸ್ವಾಮಿ ಅವರು ಸ್ಮರಿಸಿಕೊಂಡರು.
ಇತಿಹಾಸ ನಿರ್ಮಾಣವಾಗುವ ಐತಿಹಾಸಿಕ ಸಂದರ್ಭ:
ಸೆಪ್ಟೆಂಬರ್ 24ರಂದು ನಡೆಯಲಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮವು ಈ ಭಾಗದ ಜನರ ದಶಕಗಳ ಕನಸು ನನಸು ಮಾಡುವ ಹಾಗೂ ಹೊಸ ಇತಿಹಾಸ ನಿರ್ಮಿಸುವ ಅತ್ಯಂತ ಮಹತ್ವದ ಸಂದರ್ಭವಾಗಿದೆ ಎಂದು ಜಲಸಂಪನ್ಮೂಲ ಸಚಿವರು ತಿಳಿಸಿದರು.
ಗಂಗಾಪೂಜೆ ಕಾರ್ಯಕ್ರಮವು ಸರ್ಕಾರದ ಈ ಸಾಧನೆಯ ಕೈಗನ್ನಡಿಯಾಗಲಿದ್ದು, ಇದನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡದ ಸಚಿವರು, ಶಿಷ್ಟಾಚಾರ ಉಲ್ಲಂಘನೆಯಾಗದಂತೆ, ಸಾರ್ವಜನಿಕರಿಗೆ ಯಾವುದೇ ಟ್ರಾಫಿಕ್ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಲು ತಿಳಿಸಿದರು.
ಇದನ್ನೂ ಓದಿ: ಬೀದಿ ನಾಯಿಗಳಿಗೆ ಉಚಿತ ಆಹಾರ ಒದಗಿಸಲು ಸಂಸ್ಥೆಗಳಿಂದ ಅರ್ಜಿ ಆಹ್ವಾನ
ವೇದಿಕೆಯ ಮುಂಭಾಗದ ಜನರಿಗೆ ಗಂಗಾಪೂಜೆಯ ನೇರ ಪ್ರಸಾರ ಒದಗಿಸುವುದು, ಸುಸಜ್ಜಿತ ಊಟದ ವ್ಯವಸ್ಥೆ ಹಾಗೂ ಸಾರ್ವಜನಿಕರ ಸುಗಮ ಪ್ರವೇಶಕ್ಕೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತೆಗಳನ್ನು ಲೋಪದೋಷವಿಲ್ಲದಂತೆ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಕುಡಾ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಜಿಲ್ಲಾಧಿಕಾರಿ ಎಸ್.ರಮ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಹೆಚ್.ಸಿ.ರಮೇಂದ್ರ, ಮುಖ್ಯ ಇಂಜಿನಿಯರ್ ರವಿಶಂಕರ್ ಸೇರಿದಂತೆ ಮತ್ತಿತರರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

