Connect with us

    Kannada Novel: 19. ಊರ ಬಾವಿ ತೋಡಿದರು

    Habbida Malemadhyadolage

    ಸಂಡೆ ಸ್ಪಷಲ್

    Kannada Novel: 19. ಊರ ಬಾವಿ ತೋಡಿದರು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 09 FEBRUARY 2025

    ಶಿವರಾತ್ರಿಯಿಂದಲೇ ಬಿಸಿಲು ಜೋರಾಗಿ ಕಾಯುತ್ತಿತ್ತು. ಈ ಬಾರಿಯ ಸುಗ್ಗಿ ರೈತರಲ್ಲಿ ತೃಪ್ತಿ ತರುವ ಬದಲು ಸ್ವಲ್ಪ ನಿರಾಶೆ ಮೂಡಿಸಿತ್ತು. ಕಾರಣ ಈ ಸಾಲಿನ ಫಸಲಿನಲ್ಲಿ ಗಟ್ಟಿ ಕಾಳಿಗಿಂತ ಜೊಳ್ಳು ಮತ್ತು ಹುಲ್ಲು ಹೆಚ್ಚಾಗಿತ್ತು. “ಹದಮಳೆ ಬೀಳೋ ಬದ್ಲು ಹಿಂದೆ ಮುಂದೆ ಬಿದ್ರೆ ಹಿಂಗಾಗುತ್ತೆ” ರೈತರು ಅಂದುಕೊಂಡಿದ್ರು,

    ರೈತರು ಕಾಲಕ್ಕೆ ಸರಿಯಾಗಿ ಚಂದ್ರನ ಬೆಳಕಿನ ಮಾಗಿ ಉಳುಮೆ ಆರಂಭ ಮಾಡಿದ್ರು. ಬೆಳಗಿನ ತಂಪು ಹೊತ್ತಿನ ಉಳುಮೆ. ನೇಗಿಲು ಎಳೆಯುವ ಎತ್ತುಗಳಿಗೂ ಮತ್ತು ರೈತರಿಗೂ ತ್ರಾಸದಾಯಕವಾಗಿರುತ್ತಿರಲಿಲ್ಲ.

    ಹಿಂದಿನ‌ ಸಂಚಿಕೆ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ

    ದೊಡ್ಡುಂಬೊತ್ತಿಗೆ ಹೊಲಕ್ಕೆ ತಂದ ಬುತ್ತಿಯನ್ನು ಉಂಡು, ಮತ್ತೊಂದು ಸರ್ತಿ ಮೇಲೆ ಹಿಡಕಂಡ್ರೆ ಎತ್ತುಗಳು ಬಿಸಿಲಿಗೆ ಬಸವಳಿಯುವ ಮೊದಲೇ ಪಪ್ಪಿದ್ದು ನಿಲ್ಲಿಸುತ್ತಿದ್ದರು.

    ಎತ್ತುಗಳ ಮೈ ಸವರಿ ನೀರು ಕುಡಿಸಿ ಬಣವೆಗೆ ಹೋಗಿ ಮರಗಳ ನೆರಳಲ್ಲಿ ಕಣ್ಣಿ ಹಾಕಿ ಮುಂದೆ ಮೇವು ಹರಡಿ ಮನೆಗೆ ಹಿಂತಿರುಗಿ, ಒಣಗಿದ ಕತ್ತಾಳೆ ಪಟ್ಟಿಗಳನ್ನು ಕೊಡತಿಯಿಂದ ಬಡಿದು ಕತ್ತಾಳೆ ನಾರು ಪಡೆಯುವುದು ವಾಡಿಕೆಯಾಗಿತ್ತು.

    ಮದ್ಯಾಹ್ನದೊತ್ತಿಗೆ ತಳಮೇಘಗಳು ಮೇಲೇರಿ ಅಗಾ ಇಗಾ ಅನ್ನೋದೊಳಗೆ ಮಳೆ ಸುರಿಯುತ್ತೆ ಅನ್ನೋ ಹಂಗೆ ಹಿಂಡುಗಲ್ಲಿ ಮೋಡಗಳು ದಟ್ಟಿಸಿ ಸಂಜೆ ವೇಳೆಗೆ ಕರಗಿ ಚುಕ್ಕೆಗಳು ಮಿನುಗುತ್ತಿದ್ದವು. ಅಶ್ವಿನಿ, ಭರಣಿ, ಕೃತ್ತಿಕೆ, ರೋಹಿಣಿ ಮಳೆಗಳ ಅವಧಿಯಲ್ಲಿ ಒಂದು ಕಾಳು ಬಿತ್ತನೆಯಾಗಲಿಲ್ಲ. ‘ಭರಣಿ ಮಳೆಯಾಗೆ ಬಿತ್ತಿಸ್ಟಂಡ್ರೆ ಧರಣಿಯೆಲ್ಲಾ ಜೋಳ, ರೋಹಿಣಿ ಮಳೆಯಾಗೆ ಬಿತ್ತಿಸ್ಸಂಡ್ರೆ ಓಣಿಯೆಲ್ಲಾ ಜೋಳ’ ಲೋಕಾನುಭವದ ನಾಣ್ಣುಡಿ ಸುಳ್ಳಾಗಿತ್ತು. ಮೃಗಶಿರಾ, ಆರಿದ್ರಾ ಮಳೆಗಳೂ ಭೂಮಿಯನ್ನು ತಣಿಸಲಿಲ್ಲ. ದನಕರುಗಳು ಅಡಿವಿಗೆ ನಡೆದು ಬಸವನ ಹೊಳೆಯ ಮಡುಗಳಲ್ಲಿ ನೀರು ಕುಡಿಯುತ್ತಿದ್ದವು.

    ಬಿರು ಬೇಸಗೆಯ ದಿನಗಳು ಮುಗಿದು ಮಳೆಗಾಲ ಬಂದರೂ ಮಳೆ ಹನಿಯಲಿಲ್ಲ. ಊರಿನ ಯಜಮಾನರು ಗೌಡ್ರು, ಗೊಂಚಿಗಾರು, ಯಜಮಾನಪ್ಪಾರು ಮಳಿಯಪ್ಪಯ್ಯರಲ್ಲಿ ಯಾಕೆ ಕಾಲ ಬದಲಾಗುತ್ತಿದೆ ಎಂದು ಪ್ರಾಸ್ತಾಪಿಸಲು ಬಂದರು.

    ಹಿಂದಿನ‌ ಸಂಚಿಕೆ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು

    ಅವರ ಮನೆಯಲ್ಲಿ ಮರುಳಯ್ಯನ ಪತ್ನಿ ಗಂಡು ಕೂಸಿಗೆ ಜನ್ಮ ನೀಡಿದ್ದರು. ಮಳಿಯಪ್ಪಯ್ಯ ನಂದನ ಸಂವತ್ಸರದಲ್ಲಿ ಹುಟ್ಟಿದ್ದರೂ ಕೂಸು ಬೆಳೆದು ಗಣ್ಯ ವ್ಯಕ್ತಿ ಆಗುತ್ತಾನೆ ಎಂದು ಜಾತಕ ಬರೆದಿದ್ದರು. ಅಂತೂ ಗೌನಳ್ಳಿಗೆ ವಲಸೆ ಬಂದ ಮೇಲೆ ನಮ್ಮ ಕುಟುಂಬ ಏಳೆಯಾಗುತ್ತಿದೆ ಅಂದುಕೊಂಡಿದ್ದರು.

    ಊರಿನ ಯಜಮಾನರು ಐಗಳ ಗುಡಿಸಿಲಿಗೆ ಆಗಮಿಸಿದಾಗ ಹೆಣ್ಣು ಮಕ್ಕಳು ಮತ್ತು ಮಳಿಯಪ್ಪಯ್ಯ ಇದ್ದರು. “ಸ್ವಾಮಿ ಬರ್ರಿ ನಮ್ಮ ಆಟ್ ಮಾಳಿಗೆಗೆ ಹೋಗಾನ. ಪಂಚಾಂಗ ಹಿಡಕಂಡ್ ಬರಿ” ಎಂದು ಮೂರೂಜನ ಮಳಿಯಪ್ಪಯ್ಯರನ್ನು ಆಮಂತ್ರಿಸಿದರು. ಸುಳಿವನ್ನು ಅರಿತಿದ್ದ ಮಳಿಯಪ್ಪಯ್ಯ ಅವರ ಹಿಂದೆಯೇ ಗೌಡರ ಮನೆಗೆ ನಡೆದರು.

    ಯಾರ ಮುಖದಲ್ಲೂ ಅಧೀರತೆ ಇರಲಿಲ್ಲ. ಇದನ್ನು ಗಮನಿಸಿದ ಮಳಿಯಪ್ಪಯ್ಯ ತಮ್ಮ ಪಂಚಾಂಗವನ್ನು ಬಿಚ್ಚಿ “ಕೇಳಪ್ಪಾ ನಾನು ಹೋದ ಮೂರು ತಿಂಗಳ ಹಿಂದೇನೇ ಈ ಸಂವತ್ಸರ ನಂದನ ನಾಮ ಸಂವತ್ಸರ. ‘ಈ ಸಂವತ್ಸರ ಬಂದಾಗೆಲ್ಲಾ ಜನ, ಜಾನುವಾರು ಮಕ್ಕಳು, ಬಾಧೆ ಪಡ್ತಾರೆ’ ಅಂತ ಪಂಚಾಂಗಕಾರ ಬರೆದಿದ್ದಾನೆ. ಅರುವತ್ತು ವರ್ಷಕ್ಕೊಂದು ಸರ್ತಿ ಈ ಸಂವತ್ಸರ ಬಂದು ಲೋಕಕ್ಕೆ ಎಚ್ಚರಿಕೆ ಕೊಡುತ್ತೆ” ಎಂದು ಹೇಳಿ ಮಳಿಯಪ್ಪಯ್ಯ ಮತ್ತೆಲ್ಲರ ಮುಖಗಳನ್ನು ನೋಡಿದರು. ಗೌಡ್ರು, ಗೊಂಚಿಕಾರು ಮತ್ತು ಯಜಮಾನಪ್ಪಾರು ಇದನ್ನು ನಿರೀಕ್ಷಿಸಿದ್ದರೇನೋ ಅನ್ನುವಂತೆ ಗಂಭೀರರಾಗಿದ್ದರು.

    ಹಿಂದಿನ‌ ಸಂಚಿಕೆ: 3. ಎಲ್ಲರೂ ಲಿಂಗವಂತರಾದರು

    “ನೆಂಟ್ರಿ ಈಗ ತುರ್ತಾಗಿ ಒಂದು ಕುಡಿಯೋ ನೀರಿನ ಬಾವಿ ತೋಡಬೇಕಾಗೈತೆ. ಬಸವನಳ್ಳಾಗೆ ಬೆಳಗಿನಾಗೆ ನೀರು ಸಣ್ಣಗೆ ಹರಿಯುತ್ತೆ ಹೊತ್ತೇರಿದಂಗೆ ಹರಿಯೋ ನೀರು ಇಂಗಿ ಹೋಗುತ್ತೆ. ಹಳ್ಳದ ಮಡುವುಗಳಿಂದ ನೀರು ಹೊರಗೆ ಹರೀತಾ ಇಲ್ಲ. ಈ ಹಳ್ಳ ನಮಿಗೆ ಕುಡಿಯಾಕೆ ನೀರು, ಹೊಟ್ಟೆಗೆ ಅನ್ನ ಕೊಟ್ಟೆತೆ. ಮುಂದೆ ಎಂಥಾ ಕಾಲ ಬರುತ್ತೋ ಗೊತ್ತಿಲ್ಲ” ಗೊಂಚಿಗಾರು, ಗೌಡ್ರಿಗೆ ಮತ್ತು ಯಜಮಾನಪ್ಪಾರಿಗೆ ತಿಳಿಸಿದರು.

    ಗೌಡರೂ ಇದನ್ನು ಗಮನಿಸಿದ್ದಿರಬೇಕು ಅವರು “ನೆಂಟ್ರೇ ನೀವೇಳಿದ್ದು ಸರಿ. ಬಾಯಾರಿಸಿದಾಗ ಬಾವಿ ತೋಡಕಾಗಲ್ಲ. ನಾಳೆಯಿಂದಲೇ ಬಾವಿ ತೋಡೋ ಕೆಲ್ಸ ಆರಂಭಿಸಬೇಕು. ನಾವು ಮನಿಗೊಬ್ಬೋ ಇಸ್ರೋ ಮಣ್ಣ ತುಂಬಾಕೆ ಹೊರಾಕೆ ಬರಬೇಕಾಗುತ್ತೆ. ನಮ್ಮೂರಿಗೆ ಬಂದಿರೋ ವಡ್ರನ್ನೂ ಕರಕಂಬಾನಾ” ತಮ್ಮ ಅಭಿಪ್ರಾಯವನ್ನು ತಿಳಿಸಿದರು. “ನಾನು ಹಳ್ಳದ ಕಡೀಕೋಗಿಲ್ಲ. ನೀರು ಇಂಗೋ ವಿಚಾರ ನನಿಗೊತ್ತಿಲ್ಲ. ಊರ ಮುಂದ್ಧ ಹಳ್ಳದ ನೀರೊಳೇ ಹಾದಿ ಮಗ್ಲಲಾಗೆ ಬಾವಿ ತೋಡಬೌದು” ಯಜಮಾನಪ್ಪರು ತಮ್ಮ ದನಿಗೂಡಿಸಿದರು.

    ಇವರ ಅನ್ನೋನ್ಯತೆ ಮತ್ತು ಸ್ಪಂದನೆಯನ್ನು ಕೇಳಿದ ಮಳಿಯಪ್ಪಯ್ಯ “ಜಾಗ ನೋಡಿಕೊಂಡು ಬರಾನಾ ನಡೀರಿ” ಎಂದು ಉತ್ತೇಜಿಸಿದರು. ಕೂಡಲೇ ಎಲ್ಲರೂ ಎದ್ದು ಊರ ಮುಂದ ಹಳ್ಳದ ದಿಕ್ಕಿಗೆ ನಡೆದರು. ಹಳ್ಳದ ಪಡುವಲಕ್ಕೆ 200 ಗಜ ಮತ್ತು ಹಾದಿಗೆ 100 ಗಜ ತೆಂಕಲಿಗೆ ಬಾವಿಯ ಜಾಗವನ್ನು ಗುರ್ತಿಸಿದರು. ಆ ಜಾಗ ಗೌಡರ ಗುಂಪಿನವರಿಗೇ ಸೇರಿತ್ತು. ಇದರಿಂದ ಯಾರ ಆಕ್ಷೇಪವೂ ಇರಲಿಲ್ಲ. ಮಳಿಯಪ್ಪಯ್ಯ ಸ್ಥಳ ಪ್ರಶಸ್ತವಾಗಿದೆ ಎಂದು ಎಲ್ಲರನ್ನೂ ಸಮಾಧಾನಪಡಿಸಿದರು.

    ಊರ ಬಾವಿ ತೋಡಿದರು:

    “ಹಳ್ಳದ ನೀರು ಬತ್ತುವುದರೊಳಗೆ ಬಾವಿ ತೋಡುವುದು ಮುಗಿಯಬೇಕು. ಐಗಳು ಹೇಳಿದಂಗೆ ಈ ವರ್ಷ ಬರ ಬಂದೇ ಬಿಟ್ಟಿತೆ. ಯಾರೂ ಧೈಯ್ಯ ಕಳಕೊಳ್ಳಾರು” ಎಂದು ಗೌಡ್ರು ಗೊಂಚಿಗಾರು ಮತ್ತು ಯಜಮಾನಪ್ಪಾರೂ ತೀರಾನ ಮಾಡಿ ಬೋವಿಗಳನ್ನ ಗೌಡ್ರ ಆಟ್ ಮಾಳಿಗೆಗೆ ಕರೆಸಿಕೊಂಡು “ಕೇಳಪ್ಪಾ ನೀವು ಅದೇನ್ ನಂಬಿಕೊಂಡು ನಮ್ಮೂರಿಗೆ ಬಂದಿರೊ ಗೊತ್ತಿಲ್ಲ.

    ಹಿಂದಿನ‌ ಸಂಚಿಕೆ: 4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ

    ನೀವೆಲ್ಲಾ ನಮ್ಮೂರಿಗೆ ಬಂದ ಮ್ಯಾಲೆ ಸುಖವಾಗೇ ಇದೀರ, ಈಗ ಗಂಡಾಂತರ ವದಗಿ ಬಂದೈತೆ. ಈ ವರ್ಷ ಬರ ಬಂದೈತೆ. ಬರ ಬಂದ್ರೂ ಹೆಂಗೋ ಜೀವನ ಮಾಡತಿದ್ವಿ, ಆದರೆ ತಲೆ ತಲಾಂತರದಿಂದ ನಮ್ಮೂರಿನ ಜನ ಜಾನುವಾರುಗಳ ಸಾಕಿ ಸಲುವಿದ್ದ ಬಸವನಹಳ್ಳ ಬತ್ತುತಾ ಐತೆ. ಅಂದ್ರೆ ನಮ್ಮ ಬದುಕು ಅಪಾಯದಾಗೆ ಸಿಕ್ಕಂಡೈತೆ. ಅದಕೆ ತುರ್ತಾಗಿ ಕುಡಿಯೋ ನೀರಿನ ಬಾವಿ ತೋಡಬೇಕು” ಗೌಡರು ಪ್ರಸ್ತಾಪಿಸುತ್ತಿದ್ದಂತೆಯೇ ಬೋವಿಗಳ ಹಿರಿಯ “ಗೌಡ್ರ, ಗೊಂಚಿಗಾರೆ ನಾವು ಅನಾಪರದೇಶಿಗಳಾಗಿ ಈ ಊರಿಗೆ ಬಂದ್ವಿ, ಬಂದಾಗ ನಮ್ಮನ್ನೆಲ್ಲಾ ಮಕ್ಕಳಂಗೆ ಕಂಡಿದೀರ. ನೀವೇಳೋದು ನಿಜ.

    ಹಳ್ಳ ಬತ್ತುತಾ ಐತೆ. ಇಲ್ಲಿ ಮೂಡ್ಲಗುಡ್ಡ ಪಡ್ಲಗುಡ್ಡ ಸನೇಪ ಇರೋದ್ರಿಂದ ಗುಡ್ಡದ ಬಸಿ ಎಲ್ಲಾ ಹಳ್ಳದ ಕಡೀಗೆ ಬಸಿಯುತ್ತೆ. ಊರಿಗೂ ಹಳ್ಳಕೂ ಸನೇಪ ಬಾವಿ ತೋಡಿದರೆ ದಂಡಿಯಾಗೆ ನೀರು ಸಿಗುತ್ತೆ” ಮಧ್ಯೆ ಬಾಯಿ ಹಾಕಿ ಮಾತಾಡಿದ.

    “ಬೋವಿ ನಾವು ಹಳ್ಳದ ಸಮಾಪ ಮತ್ತೆ ಊರಿಗೂ ಸಮಾಪದಾಗೆ ಬಾವಿ ತೋಡಬೇಕು ಅಮ್ಮ ಜಾಗ ಗುರು ಮಾಡೀದೀವಿ. ಹೋಗಿ ನೋಡಿ-ಕೆಂಡು ಬರಾನ. ಅದ್ರೂ ಮೊದ್ಲು ನಿಮ್ಮಲ್ಲಿ ಯಾರಾದ್ರೂ ಏರಿ ಬದ ಹಾಕಾಕೆ ಒಪ್ಪಂಡು ಕೆಲ್ಸಾ ಮಾಡ್ತಿದ್ರೆ ಅವರ ಹೊಟ್ಟೆ ಮ್ಯಾಲೆ ಹೊಡಿಯಾದು ಬ್ಯಾಡ. ಅವು ಬಾವಿ ಕೆಲಸಕ್ಕೆ ಬರಾದು ಬ್ಯಾಡ. ಉಳಿದೋರು ಮನಿಗೊಬ್ರು ಇಬ್ರು ಬಾವಿ ತೋಡಾಕೆ ಬರಬೇಕು” ಗೊಂಚಿಕಾರರು ಮಾತಾಡಿದರು.

    ಹಿಂದಿನ‌ ಸಂಚಿಕೆ: 5. ಕೆನ್ನಳ್ಳಿಯ ದುರಂತ

    “ಸರಿ ಸ್ವಾಮಿ ನಾವು ಕೆಲಸಕ್ಕೂ ಬರ್ತಿವಿ. ನಮ್ಮ ಹಾರೆ, ಗುದ್ದಿ ಸಲಿಕೆ ಮಣ್ಣು ಹೊರಾಕೆ ಈಸ್ಲು ಪುಟೀನೂ ತರೀವಿ” ಇನ್ನೊಬ್ಬ ಬೋವಿ ಆಶ್ವಾಸನೆ ನೀಡಿದ. “ಬರ್ರಿ ಸ್ವಾಮಿ ಜಾಗ ನೋಡಿಕೆಂಡ್ ಬರಾನ” ಎಂಬ ಅವನ ಸಲಹೆಯಂತೆ. ಗೌಡ್ರು, ಯಜಮಾನಪ್ಪಾರು ಗೊಂಚಿಕಾರು ಮತ್ತು ಬೋವಿಗಳು ನೀರೊಳೆ
    ಹಾದಿಯಲ್ಲಿ ನಡೆದು ಬಾವಿ ತೋಡಲು ಗುರುತಿಸಿದ್ದ ಸ್ಥಳದ ಬಳಿ ಬಂದರು.

    ಹಿರಿಯ ಬೋವಿ ಎರಡೂ ಗುಡ್ಡದ ಸಾಲು ಮತ್ತು ಹಳ್ಳದ ಕಡೆ ನೋಡಿ. “ಸ್ವಾಮಿ ಬರುಬಾರದ ಮಳೆ ಬಂದು ಹಳ್ಳ ತುಂಬಿ ಹರಿದಾಗ ಹಳ್ಳದ ನೀರು ಬಾವಿಗೆ ನುಗ್ಗದಂಗೆ ಬಾವಿಗೆ ಮಣ್ಣು ಅಡ್ಡ ಹಾಕಬೇಕು” ಸಲಹೆ ನೀಡಿದ. “ಸರಿ ಹಂಗೇ ಮಾಡಾನ ನಾಳೆಯಿಂದ ಕೆಲಸಕ್ಕೆ ಬರ್ತಿರಾ. ಮದ್ಯಾಹ್ನದ ಊಟ ನಾವೇ ಮಾಡಿಸ್‌ತೀವಿ. ಊರ ಜನಾನೂ ಬತ್ತಾರೆ. ಆದ್ರೆ ಈಸ್ಲ ಪುಟೀದೇ ಸಮಸ್ಯೆ. ನೋಡಾನ ಸಗಣಿ ತಟೀನೂ ತಂದ್ರಾತು” ಯಜಮಾನಪ್ಪಾರು ನಾಳೆಯಿಂದ್ದೇ ಬಾವಿ ತೋಡುವ ಕಾವ್ಯವನ್ನು ಖಚಿತ ಪಡಿಸಿದರು.

    “ಸರಿ ಸ್ವಾಮಿ ನಮ್ಮೋರೆಲ್ಲಾ ಹೇಳಿ ಬೆಳಿಗ್ಗೇನೇ ಕೆಲಸಕ್ ಬತ್ತೀವಿ. ಆಟೊತ್ತಿಗೆ ಪೂಜೆ ಸಾಮಾನು ಎಲ್ಲಾ ತಂಗಡ್ ಬರ್ರಿ” ಎಂದು ತಿಳಿಸಿ ಬೋವಿಗಳು ಎದ್ದು ಹೊರಟರು. ಸಂಜೆ ಹೊತ್ತಿಗೆ ಊರ ತುಂಬಾ ಸುದ್ದಿಯಾಯಿತು. ಅಟ್ಟದಲ್ಲಿದ್ದ ಹಾರೆ ಸಲಿಕೆ ಪುಟ್ಟಿಗಳು ಕೆಳಗಿಳಿದವು. ಗುಂಡಾಚಾರಿಗೂ ಸುದ್ದಿ ಮುಟ್ಟಿತ್ತು. ಆತ ನಸೀಗ್ಗೆಲೇ ಹಳ್ಳಕ್ಕೋಗಿ ನೀರು ತುಂಬಿಸಿಕೊಂಡು ಬರುತ್ತಿದ್ದ. ಪತ್ನಿ ತಿಪ್ಪಕ್ಕಳ ಸಮೇತ ಬಾವಿಯ ಜಾಗ ನೋಡಿಕೊಂಡು ಬಂದಿದ್ದ.

    ಹಿಂದಿನ‌ ಸಂಚಿಕೆ: 6. ಎಲ್ಲೆಲ್ಲಿಂದಲೋ ಬಂದರು

    ಮಾರನೇ ದಿನ ಬೆಳಗಿನಲ್ಲಿ ಮಳಿಯಪ್ಪಯ್ಯ ತಣ್ಣೀರಲ್ಲಿ ಮಿಂದು ಪೂಜೆ ನೆರವೇರಿಸಲು ಸಿದ್ಧರಾಗಿ ಕುಳಿತಿದ್ದರು. ಅಷ್ಟರಲ್ಲಿ ಊರಜನ ತಲಾಕೊಂದೊಂದು ಮಾತಾಡುತ್ತಾ ಹತಾರಗಳ ಸಮೇತ ನೀರೊಳೇ ಹಾದಿಯಲ್ಲಿ ನಡೆದಿದ್ದರು. ಗೌಡ್ರು, ಗೊಂಚಿಕಾರು, ಯಜಮಾನಪ್ಪಾರು ಇನ್ನೂ ಅನೇಕ ಜನ ಐಗಳ ಮನೆಗೆ ಬಂದು “ಗುರುವೇ ಬಾರಪ್ಪಾ ಮುಂದೆ ದಾರಿ ತೋರು” ಗೌಡರು ಕರೆದಿದ್ದೇ ತಡ ಕೆಂಪು ವಸ್ತ್ರವನ್ನುಟ್ಟು ಮಳಿಯಪ್ಪಯ್ಯ ಹೊರಬಂದರು. ಎಲ್ಲರೂ ಮೆರವಣಿಗೆ ರೀತಿಯಲ್ಲಿ ಬಾವಿ ತೋಡಲಿರುವ ಸ್ಥಳಕ್ಕೆ ನಡೆದರು. ಮಳಿಯಪ್ಪಯ್ಯ ಗಂಗಾ ಸ್ತೋತ್ರವನ್ನು ಪಠಿಸಿ ಎಲ್ಲಾ ಹತಾರಗಳನ್ನೂ ಪೂಜಿಸಿ ಜೋಡಿ ತೆಂಗಿನ ಕಾಯಿ ಒಡೆದು ಮಂಗಳಾರತಿ ಬೆಳಗಿ ಅಲ್ಲಿದ್ದ ಎಲ್ಲರಿಗೂ ಸರಿಸಿದರು. “ಏಳು ಕೋಟಿ” “ಏಳುಕೋಟಿ” ಘೋಷಣೆ ಮುಗಿಲು ಮುಟ್ಟಿತ್ತು.

    “ಗೌಡ್ರ, ಗೊಂಚಿಕಾರೇ ಯಜಮಾನಪ್ಪಾರೇ, ಬರ್ರಿ ಸ್ವಾಮಿ, ಹಾರೆ ಗಾತಾಕ ಬರಿ” ಎಂದು ದೇವ ಮೂಲೆಗೆ ಹಿರಿಯ ಬೋವಿ ಆಹ್ವಾನಿಸಿದ. ಕೂಡಲೇ ಮೂರೂ ಜನ “ಜೈ ಗಂಗಾಮಾತೆ ಏಳುಕೋಟಿ, ಏಳುಕೋಟಿ”
    ಎಂದು ಉಗ್ಗಡಿಸಿ ಹಾರೆ ಗುದ್ದಲಿಗಳಿಂದ ದೇವಮೂಲೆಯ ಭೂಮಿಯನ್ನು ಅಗೆದರು. ಅಷ್ಟರಲ್ಲಿ ಬೋವಿಗಳಿಬ್ಬರು ದೊಡ್ಡೆಜ್ಜೆ ಮೇಲೆ ಅಗಿಯುವ ನೆಲವನ್ನು ಗುರುತುಮಾಡಿ ಒಂದು ಜೋಡಿಗೆ ಇಬ್ಬರು ಅಗೆಯುವವರು, ಇಬ್ಬರು ಮಣ್ಣು ತುಂಬುವವರು ನಾಲ್ಕುಜನ ಮಣ್ಣು ಹೊರುವವರು ಇವರಿಗೆ ಎರಡೆರಡು ಗಜದಗಲ ಭೂಮಿಯನ್ನು ಹಂಚಿಕೊಟ್ಟರು.

    ಬೋವಿ ಹೆಣ್ಣು ಮಕ್ಕಳು ಸೀರೆಯನ್ನು ಕಾಸಿ ಕಟ್ಟಿಕೊಂಡು ಸಲೀಸಾಗಿ ಮಣ್ಣು ಹೊರುತ್ತಿದ್ದರೆ ಊರಿನ ಲಿಂಗಾಯ್ತರ ಹೆಣ್ಣುಮಕ್ಕಳು ತುಸು ನಾಚುಗೆ ಪಟ್ಟುಕೊಂಡು ತಾವು ಕಾಸಿಕಟ್ಟಿಕೊಂಡರು. ಬಾವಿಯ ಬದಿಯಿಂದ ಕನಿಷ್ಠ ಹತ್ತು ಗಜ ದೂರಕ್ಕೆ ಮಣ್ಣನ್ನು ಹೊತ್ತುಯ್ದು ಸುರಿಯಲು ಬೋವಿಗಳ ಹಿರಿಯ ವಸೂರಾ ಬೋವಿ ಗೆರೆ ಎಳೆದಿದ್ದ “ಇಲ್ಲಿಂದ ಮುಂದಕೆ ಮಣ್ಣ ಸುರೀರಮ್ಮ” ಎಂದು ಸೂಚಿಸಿದ್ದ. ಅದರಂತೆ ಸಾಲಾಗಿ ಮಣ್ಣು ಸುರಿದು ತೋರಿಸಿದ್ದ. ಅಲ್ಲಿದ್ದವರೆಲ್ಲಾ ಇಂಥ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದವರೇ ಆಗಿದ್ದ-ರಿಂದ ಅದೂ ಇದೂ ಮಾತಾಡುತ್ತಾ ಕಿಲಕಿಲ ನಗುತ್ತಾ ವಾತಾವರಣವನ್ನು ರಂಗೇರಿಸಿದ್ದರು.

    ಹಿಂದಿನ‌ ಸಂಚಿಕೆ: 7. ಊರು ತೊರೆದು ಬಂದವರು

    ಇತ್ತ ಯಜಮಾನಪ್ಪರ ಹಿತ್ತಿಲಿನಲ್ಲಿ ಪರೇವು ಊಟದ ತಯಾರಿ ನಡೆದಿತ್ತು. ಅವರ ಮನೆಯ ಹೆಣ್ಣು ಮಕ್ಕಳಲ್ಲದೆ ಗೌಡ್ರು ಮತ್ತು ಗೊಂಚಿಕಾರರ ಮನೆಯವರೂ ಸೇರಿ ಹಗಲೂಟಕ್ಕೆ ಬಿಸಿಬಿಸಿ ರಾಗಿಮುದ್ದೆ ಬದನೆಕಾಯಿ ಬಜ್ಜಿ ತಯಾರು ಮಾಡುತ್ತಾ ಅಲ್ಲಿಯೂ ಸಡಗರದ ವಾತಾವರಣವನ್ನು ಸೃಷ್ಟಿಸಿದ್ದರು. “ಕನಿಷ್ಠ ನೂರೈವತ್ತು ಇನ್ನೂರು ರಾಗಿ ಮುದ್ದೆ. ಒಂದು ಕೊಳಗ ಆಮ್ರ ತಯಾರಾಗಬೇಕು. ಒಂದು ಕೊಳಗ ಮಜ್ಜಿಗೆ ಇದ್ರೆ ಬಿಸಿಲಕಾಲಕ್ಕೆ ತಂಪಾಗುತ್ತೆ” ಅಂತ ಯಜಮಾನು ಸೂಚನೆ ಕೊಟ್ಟಿದ್ರು. ಅದರಂತೆ ಮುದ್ದೆ ಬೇಯಿಸುವ ಮೂರು ಹಂಡ್ಯಾಗಳಲ್ಲಿ ಉಂಡೆಗಟ್ಟುವ ಮಹಿಳೆಯರು ರಾಗಿ ಹಿಟ್ಟನ್ನು ಜರಡಿಯಾಡಿ ಹಂಡ್ಯಾಗಳಲ್ಲಿ ಸುರಿದು ಕೊತಕೊತ ಕುದಿಸುತ್ತಿದ್ದರು.

    “ಸಿಲ್ಲಿಂಗಪ್ಪನ್ನ ಕರೀರಮ್ಮ ಗಾಡಿ ಹೂಡಿಕೊಂಡೋಗಿ ಇಸ್ತ್ರದ ಎಲೆ ತಲ್ಲ” ಎಂದು ಹಿರಿಯಾಕೆ ಕೂಗಿ ಹೇಳುವ ಸಮಯಕ್ಕೆ ಮುತ್ತುಗದ ಎಲೆ ತುಂಬಿಕೊಂಡ ಗಾಡಿಯೇ ಆಗಮಿಸಿತ್ತು. “ನೀವು ಅಂಗೆ ಗಾಡಿ ಹೊಡಕಂಡೋಗಿ ಬಾವಿ ಹತ್ರ ಸುರು ಬರಿ” ಎಂದು ಹಿರಿಯಾಕೆಯೇ ಕೂಗಿ ಹೇಳಿದರು.

    ಗಾಡಿಯನ್ನು ತಿರುಗಿಸಿಕೊಂಡು ಸಿದ್ದಿಂಗಪ್ಪ ಕೆಲಸದ ತಾವು ಆಗಮಿಸಿದರೆ ಅಲ್ಲಿ ಸಂತೆಯಂತೆ ಜನ ಸೇರಿ ಕಿಲ ಕಿಲ ಮಾತಾಡುತ್ತಾ ಜನನಿಯ ಮಣ್ಣು ಅಗೆಯುವುದು ಈಚಲ ಪುಟ್ಟಿಗಳಲ್ಲಿ ತುಂಬಿ ಹೆಂಗಸರ ತಲೆ ಮೇಲೆ ಹೊರಿಸುವುದು, ಪುಟ್ಟಿ ಹೊತ್ತ ಹೆಂಗಸರು ಸರಬರಾ ನಡೆದ ಹೋಗಿ ಮಣ್ಣು ಸುರಿಯುವುದೂ ಮಾಡುತ್ತಿದ್ದರು. ಪಡುವಲಲ್ಲಿ ಮುತ್ತುಗದ ಎಲೆಗಳನ್ನು ಸುರಿದ ಕೂಡಲೇ ಅಲ್ಲಿದ್ದ ಕೆಲವು ಹುಡುಗರು, ಹುಡುಗಿಯರು ಕೆಲವು ಹಿರಿಯರು ಎಲೆಗಳನ್ನು ಬಿಡಿಸಿ ಎರಡೆರಡು ಮೂರು ಮೂರು ಎಲೆಗಳನ್ನು ಜೋಡಿಸಿ ಸಣ್ಣ ಸಣ್ಣ ಇಸ್ತ್ರಗಳನ್ನು ಮಾಡಲು ತೊಡಗಿಕೊಂಡರು.

    ಹಿಂದಿನ‌ ಸಂಚಿಕೆ: 8. ಮೋಜಣಿಕೆ ಮಾಡಿದರು

    “ಈಟೊತ್ತಿಗೆಲೇ ಊಟ ತರಬ್ಯಾಡಪ್ಪೋ’ ಯಾರೋ ಕೂಗಿ ಹೇಳಿದ್ದರು. ಸಿಲ್ಲಿಂಗಪ್ಪ ಅದನ್ನು ಕೇಳಿಸಿಗೊಂಡು ಗಾಡಿಯನ್ನು ಹಿಂತಿರುಗಿಸಿದ್ದ, ಮನೆ ಬಳಿಗೆ ಬಂದರೆ ರಾಗಿಮುದ್ದೆ ಉಂಡೆಗಟ್ಟುವ ಕಾರ್ ನಡೆದಿತ್ತು. ಉಂಡೆಗಟ್ಟಿದ ಮುದ್ದೆಗಳನ್ನು ಕೊಳಗಕ್ಕೆ ತುಂಬುತ್ತಿದ್ದರು. ಬಗ್ಗೆಕಾಯಿ ಬೇಯಿಸಿ ಮಾಡಿದ್ದ ಬಜ್ಜಿಯ ಘಮಘಮಾ ವಾಸನೆ ಬಾಯಲ್ಲಿ ನೀರೂರಿಸಿತ್ತು.

    ಯಜಮಾನಪ್ಪರು ಆಗಮಿಸುತ್ತಲೇ ಹಿತ್ತಿಲಿಗೆ ಬಂದು ಅಡಿಗೆಯ ಹಂತವನ್ನು ನೋಡಿ ಮುದ್ದೆ ತುಂಬಿದ ಕೊಳಗ ಆಮ್ರದ ಕೊಳಗಗಳನ್ನು ಪರಿಕ್ಷಿಸಿ ಗಾಡಿಗೆ ಏರಿಸಲು ಗುರುಸಿದ್ದಪ್ಪ ಮತ್ತಿತರರನ್ನು ಕರೆದರು. “ಈಟೊತ್ತಿಗೆಲೆ ಊಟ ತರಬ್ಯಾಡಪ್ಪೋ” ಅಂತ ಯಾರೋ ಕೂಗಿ ಹೇಳಿದ್ದನ್ನು ಅಜ್ಜಾರಿಗೆ ತಿಳಿಸಿದ. “ಊನಪ್ಪಾ ಬ್ಯಾಸ್ಥೆ ಕಾಲ ನೀರು ಕುಡಿದೂ ಕುಡಿದು ಸುಸ್ತಾಗಿದ್ದಾರೆ. ನಾವು ಅಲ್ಲಿಗೆ ಮುಟ್ಟೋ ಹೊತ್ತೆ ಸರಿಯಾಗುತ್ತೆ ಬರ್ರಿ ಕೊಳಗಾನೆಲ್ಲಾ ಗಾಡೀಗೇರ ಬರಿ” ಎಂದು ಅವಸರಿಸಿದರು.

    “ಎಲ್ಲಾ ಕೊಳಗ ಅಂಡ್ಯಾಗಳನ್ನು ಗಾಡಿಗೇರಿಸಿ ನಾಕೈದು ಜನ ಹೆಣ್ಣು ಮಕ್ಕಳು ಗಾಡಿ ಹತ್ತಿರಿ, ಅಲ್ಲಿ ಊಟ ಹಂಚಬೇಕು” ಎಂದು ತಿಳಿಸಿ ಕೆಲಸದ ಜಾಗದತ್ತ ನಡೆದರು. ಅಲ್ಲಿ ಇಸ್ತ್ರ ಮಾಡುತ್ತಾ ಕುಳಿತಿದ್ದ ಗೌಡ್ರು, ಗೊಂಚಿಕಾರರ ಬಳಿಗೆ ನಡೆದು ಹೋಗಿ ತಾವೂ ಇಸ್ತ್ರ ಮಾಡುತ್ತ ಕುಳಿತರು.

    ಹಿಂದಿನ‌ ಸಂಚಿಕೆ: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ

    ಮಳಿಯಪ್ಪಯ್ಯ ಮರುಳಯ್ಯ ಮತ್ತು ಶಿವಲಿಂಗಯ್ಯರು ಇಲ್ಲಿ ನಡೆಯುತ್ತಿದ್ದ ಪವಾಡ ಸದೃಶ ಕಾವ್ಯವನ್ನು ಮೆಚ್ಚಿಕೊಂಡು ಮಾತಾಡುತ್ತಾ ಬಾವಿಯ ಸುತ್ತ ಅಡ್ಡಾಡುತ್ತಿದ್ದರು. ಗುಂಡಾಚಾರಿ ಎರಡು ಬಾರಿ ಸ್ಥಳಕ್ಕಾಗಮಿಸಿ ಈ ರೀತಿಯ ಜನರ ಸಹಕಾರ ಮನೋಭಾವವನ್ನು ಮೆಚ್ಚಿ ಮಾತಾಡಿದ್ದ.
    ಊಟ ತುಂಬಿದ್ದ ಸಿದ್ದಿಂಗಪ್ಪನ ಗಾಡಿ ಆಗಮಿಸಿತ್ತು. ಕೆಲಸ ಮಾಡುತ್ತಿದ್ದವರು ನಿಲ್ಲಿಸಿ ಹಳ್ಳಕ್ಕೆ ಹೋಗಿ ಮಡುವಿನಲ್ಲಿ ಕೈಕಾಲು ಮುಖ ತೊಳೆದುಕೊಂಡು ಬಂದರು.

    ಎಲ್ಲರ ಕೈಗೂ ಇಸ್ತ್ರಗಳನ್ನು ಒಬ್ಬರು ಹಂಚಿದರೆ ಇನ್ನೊಬ್ಬರು ನೀರು ಚಿಮುಕಿಸಿದರು. ಹೆಣ್ಣು ಮಕ್ಕಳು ಬಿಸಿಬಿಸಿ ರಾಗಿ ಮುದ್ದೆಗಳನ್ನು ಹಂಚುತ್ತಾ ನಡೆದಂತೆ ಇನ್ನಿಬ್ಬರು ಬದನೆ ಕಾಯಿ ಬಜ್ಜಿಯನ್ನು ವಿತರಿಸಿದರು. ಮೊದಲು ಊಟ ಸವಿದವರು ‘ಬಜ್ಜಿ ವಾಳ ರುಶಿಯಾಗೈತೆ” ಎಂದು ಉದ್ಗಾರ ಎತ್ತಿದರೆ ಬೋವಿಗಳು “ನಮಿಗೊಂದೀಟು ಖಾರ ಇರಬೇಕಾಗಿತ್ತು” ಅಂದರು. ಗೌಡರು. ಗೊಂಚಿಕಾರರು ಮತ್ತು ಯಜಮಾನಪ್ಪರೂ ಕೂಡ ರಾಗಿ ಮುದ್ದೆ ಬದ್ದೆ ಕಾಯಿ ಬಜ್ಜಿ ಸವಿದರು. ಎರಡನೇ ಸರ್ತಿ ಮುದ್ದೆ ಹಂಚಿದಾಗ ಕೆಲವರು ಮಾತ್ರ “ಮುರುಕು ಮುದ್ದೆ ನೀಡ್ರಮ್ಮಾ” ಎಂದು ಅರ್ಧ ಮುದ್ದೆ ಉಂಡರು.

    “ನೀವು ಇಲ್ಲೆ ಊಟ ಮಾಡ್ರಿ” ಎಂದು ಊಟ ತಂದವರಿಗೆ ಯಜಮಾನಪ್ಪರು ಸೂಚಿಸಿದಾಗ ಅವರು ಕಿಮಕ್ಕೆನ್ನದೆ ಊಟ ಮಾಡಲು ಕುಳಿತರು. ಹುಡುಗರು ಮೂವರು ಎಲ್ಲಾರಿಗೂ ಮಜ್ಜಿಗೆ ಹಂಚಿದರು. ಕೆಲವರು ಮಾತ್ರ ಮುದ್ದೆ ಜತೆ ಮಜ್ಜಿಗೆ ಕಲಸಿಕೊಂಡು ಉಂಡರೆ ಉಳಿದವರು ಮಜ್ಜಿಗೆ ಕುಡಿದು ಸಂತೃಪ್ತಿಯ ಡೇಗು ಬರಿಸಿದರು.

    ಹಿಂದಿನ‌ ಸಂಚಿಕೆ: 10. ಹೊಸ ಬಂಡಿಗಳ ಆಗಮನ

    ಹಿರಿಯ ಬೋವಿ ಜತೆ ಗೌಡ್ರು, ಗೊಂಚಿಕಾರು ಮತ್ತು ಯಜಮಾನಪ್ಪರು ಮಣ್ಣು ತೋಡಿದ್ದ ಗುಂಡಿಗಳಲ್ಲಿ ಓಡಾಡಿ ಮುಂದಿನ ಅಗಾಧ ಕೆಲಸದ ಕಲ್ಪನೆ ಮಾಡಿಕೊಂಡರು. ಮಣ್ಣು ರಾಸಿ ಅವರ ಮನ ಸೆಳೆಯಿತು. ಬರಿ ಹೊಯ್ದೆ ಮಣ್ಣು ಕಲ್ಲು ಹೊಲಗಳಿಗೆ ಹೇರಿ ಹರಡಿದರೆ ಫಲವತ್ತು ಮೂಡಬೌದು ಅನ್ನಿಸಿತು. ಅಷ್ಟರಲ್ಲಿ ಹಿರಿಯ ಬೋವಿ “ಲೇಯಂಡ್ರಾ ದಾಂಡಿ ಪದೌವದಿ” (ಏಟ್ರೋ, ಬಸ್ರೋ, ವತ್ತಾಗತ್ತೆ) ಎಂದು ಮಣ್ಣು ಅಗೆಯುವ ಕೆಲಸಕ್ಕೆ ತೊಡಗಿಕೊಳ್ಳಲು ಕರೆದ. ಕೂಡಲೇ ಬೋವಿ ಜನರೆಲ್ಲಾ ತಮ್ಮತಮ್ಮ ಗುಂಡಿಗಳ ಬಳಿ ನಡೆದರು. ಇತರರೂ ಕೂಡಾ ಅವರನ್ನು ಅನುಸರಿಸಿದರು.

    ಬೆಳಗಿನ ಹುಮ್ಮಸ್ಸಿನಿಂದಲೇ ಕೆಲಸ ಆರಂಭಗೊಂಡಿತ್ತು. ದೂರಕ್ಕೆ ಮಣ್ಣು ಹೊತ್ತೊಯ್ಯುತ್ತಿದ್ದ ಕೆಲ ಅನನುಭವಿ ಹೆಣ್ಣು ಮಕ್ಕಳು ತಮ್ಮ ಕತ್ತು ಮುರಿದುಕೊಳ್ಳುತ್ತಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ ಹಿರಿಯ ಬೋವಿ “ಮನೇಲಿ ಕೆಲ್ಸಾ ಇದ್ರೆ ಮಾಡಿಕೊಳ್ಳೋರು ಹೋಗ್ರಮ್ಮಾ” ಎಂದು ಗಟ್ಟಿಯಾಗಿ ಹೇಳಿದೆ. ಆಗ ಕೆಲವರು ಅನುಮಾನಿಸುತ್ತ ಅತ್ತಿತ್ತ ನೋಡಿದರು. ಹೊತ್ತು ನಾಕಾಳು ಇರುವಾಗ “ಪನಿ ನಿಲ್ದಂಡ್ರಿ ಇಂಜ್ಞಾ ಪೋಯಿ ಏಮನಾ ಪನಿ ಉಂಟೆ ಸೇಸ್ಕೊ ಪೋಯಂಡ್ರಿ” (ಕೆಲ್ಲ ನಿಲ್ಲಿಸಿ, ಮನೆಗೋಗಿ ಏನಾದ್ರು ಕೆಲ್ಲ ಇದ್ರೆ ಮಾಡಿಕೋ ಹೋಗಿ)ಎಂದು ಪೋಷಿಸಿದ. ಗೌಡ್ರ ಗೊಂಚಿಕಾರ ಯಜಮಾನಪ್ಪಾರೂ ಬೋವಿಯ ತೀರಾನವನ್ನು ಸ್ವಾಗತಿಸಿದರು.

    “ಇವತ್ತಿಗೆ ಸಾಕು ಮನಿಗೆ ಹೋಗಿ ನಿಮ್ ನಿಮ್ ಕೆಲ್ಲಾ ಮಾಡೋ ಹೋಗಿ” ಅವರೂ ಕೂಡಾ ಕರೆ ಕೊಟ್ಟರು. ಕೆಲಸ ನಿಲ್ಲಿಸಿದ ಜನರೆಲ್ಲಾ ತಮ್ಮ ಹತ್ತಾರ, ತಟ್ಟಿ, ಮಟ್ಟಿ ನೆಲಕ್ಕೆ ಬಡಿದು ಅಂಟಿಕೊಂಡಿದ್ದ ಮಣ್ಣು ಉದರಿಸಿದರೆ ಹೆಂಗಸರು ಸೀರೆ ಕಾಸಿ ಕಟ್ಟಿಕೊಂಡಿದ್ದನ್ನು ಬಿಚ್ಚಿ ಕೊಡವಿಕೊಂಡು ಕತ್ತು ಮುರಿದುಕೊಂಡು ಊರಕಡೆ ಹೊರಟರು.

    ಅವರೆಲ್ಲಾ ತೆರಳಿದ ಬಳಿಕ ಅಲ್ಲೇ ಉಳಿದುಕೊಂಡಿದ್ದ ಗೌಡು, ಗೊಂಚಿಕಾರು, ಯಜಮಾನಪ್ಪಾರು ಮತ್ತು ಕೆಲವು ಬೋವಿಗಳು ಮಣ್ಣು ತೆ ಡಿದ್ದ ಗುಂಡಿಗಳಲ್ಲಿ ಇಳಿದು “ನಾವು ಹದಿನೈದು ದಿನ ಮುಂಚೇಲೆ ಬಾವಿ ತೋಡೋ ಕೆಲ್ಸಾ ಆರಂಭಿಸಬೇಕಾಗಿತ್ತು” ಎಂದು ಗೌಡ್ರ ಗೊಂಚಿಕಾರೂ ಏಕ ಕಾಲದಲ್ಲಿ ಅಭಿಪ್ರಾಯ ಪಟ್ಟರು. ಬೋವಿ “ಹಳ್ಳಕ್ಕಿಂತ ತಗ್ಗಾದ್ರೆ ನೀರಿನ ಬಸಿ ಕಾಣಿಸಿಗೆಂಬುತ್ತೆ ನೀವೇನೂ ಅಂದ್ಯಾಬ್ಯಾಡ್ರಿ, ಬಾವಿ ತೋಡಾದೇನನಾ ತಡಾ ಆದ್ರೆ ಹಳ್ಳದಾಗೆ ಎಲ್ಡ್ ಮೂರ್ ಗಜದ ಒಂದು ಶ್ಯಾದೆ (ಗುಂಡಿ) ತೋಡಿಕ್ಕಮನಾ ನೀರಿನ ಬಸಿ ಬರುತ್ತೆ ಕುಡಿಯ ನೀರಿಗೆ ಆಪತ್ ಬರಲ್ಲ” ಬೋವಿ ಅವರ ಅನುಮಾನಕ್ಕೆ ಪರಿಹಾರ ಸೂಚಿಸಿದ.

    ಮಾದಿಗರ ಹೆಂಗಸರು ಉಂಬೊತ್ತಿನಿಂದಲೇ ನಾಲ್ಕು ಬೀಸೋಕಲ್ಲುಗಳಲ್ಲಿ ರಾಗಿ ಬೀಸುತ್ತಿದ್ದರು. ಹೊತ್ತು ನಾಲಕ್ಕು ಮಾರು ಇದ್ದಾಗ ಅವರು ಬೀಸುವುದನ್ನು ನಿಲ್ಲಿಸಿ ತಮ್ಮ ಮಜೂರಿ ಪಡೆದು ಹಟ್ಟಿಕಡೆಗೆ ನಡೆದಿದ್ದರು. ಅವರಿಗೆ ಬಾವಿ ತೋಡಲು ಹೋಗಿದ್ದವರು ಎದುರಾದರು. ಯಜಮಾನಪ್ಪರ ಮನೆಯ ಹೆಂಗಸರು “ಬರೇ ತಾಯೇರಾ, ರಾಗಿ ಮುದ್ದೆ ಉಳಕಂಡಿದಾವೆ ಇಸಗಂಡೋಗ್ರಿ” ಎಂದು ನಿಲ್ಲಿಸಿ “ನಿಮ್ಮನೆಗೋಗಿ ಪಾತ್ರೆ ಪಡಗ ತಗಂಡ್ ಬರಿ” ಎಂದು ಕರೆದರು. ಮಾದಿಗರ ಹೆಂಗಸರು ಕೆಲವರು ತಮ್ಮ ಮನೆಗಳ ಕಡೆ ಹೋಗಿ ಕೆಲವು ಮಕ್ಕಳೊಂದಿಗೆ ಆಗಮಿಸಿ ಯಜಮಾನಪ್ಪರ ಮನೆಯಿಂದ ರಾಗಿ ಮುದ್ದೆ ಬದನೆಕಾಯಿ ಬಜ್ಜಿ ಪಡೆದುಕೊಂಡರು.

    ಕಮ್ಮಾರ ಕುಲುಮೆ ಬಳಿ ಜನ ಸಂದಣಿ ಸೇರಿತ್ತು. ಹಾರೆ ಗುದ್ದಲಿಗಳ ಮೊನೆ ಮಾಡಿಸಿಕೊಂಡವರು ಮನೆಕಡೆ ತೆರಳುತ್ತಿದ್ದರೆ, ಹೊಸಬರು ಆಗಮಿಸುತ್ತಿದ್ದರು. ಎಲ್ಲರ ಬಾಯಲ್ಲೂ ಊರ ಬಾವಿ ತೋಡೋ ವಿಷಯ ಪ್ರಸ್ತಾಪವಾಗುತ್ತಿತ್ತು. ಕಮ್ಮಾರರ ಹಿರಿಯಾತ ಈಚಲ ಪುಟ್ಟಿ ಹೆಣೆಯುವುದನ್ನು ಕಲಿತಿದ್ದ. ಈಗ ಈಚಲ ಪುಟ್ಟಿಗಳ ಅವಶ್ಯಕತೆ ಇರುವುದು ಅವನ ಗಮನಕ್ಕೆ ಬಂದಿರಲಿಲ್ಲ. ಕುಲುಮೆ ಬಳಿ ಆಗಮಿಸಿದ್ದವರು ಈಚಲ ಪುಟ್ಟಿಗಳ ಕೊರತೆಯನ್ನು ಪ್ರಸ್ತಾಪಿಸಿದ್ದರು. ಕಮ್ಮಾರರ ಹುಡುಗ ತಿಮ್ಮ ಅವನ ಅಜ್ಜನಿಗೆ ಈ ವಿಷಯ ತಿಳಿಸಿದ್ದ. ಅವನ ಅಜ್ಜ ಯಾರಾದರೂ ಈಚಲ ಕಡ್ಡಿಗಳನ್ನು ಕಡಿದು ಸವರಿಕೊಟ್ಟರೆ ತಾನು ಪುಟ್ಟಿ ಹೆಣೆಯುವುದಾಗಿ ಪ್ರತಿಕ್ರಿಯಿಸಿದ್ದ.

    ಇದು ಹೇಗೋ ಗೌಡ್ರ ಕಿವಿಗೆ ತಲುಪಿತ್ತು. “ಹೋಗ್ರಪ್ಪಾ ಕಮ್ಮಾರಜ್ಜನ್ನ ಕರಕಂಡ್ ಬರಿ” ಎಂದು ಹುಡುಗರನ್ನು ಅಟ್ಟಿದ್ದರು. ಅವರು ಕಮ್ಮಾರರ ಗುಡಿಸಲ ಬಳಿ ಹೋಗಿ ಅಜ್ಜನನ್ನು ಕರೆತಂದರು. ಅಜ್ಜ ಬರುತ್ತಲೇ ಗೌಡರು “ನಿನಗೆ ಈಚಲ ಪುಟ್ಟಿ ಹೆಣಿಯೋದು ಬರುತ್ತಂತೆ. ಈಗ ನಮ್ಮ ಪುಟ್ಟ ಬೇಕಾಗೈದಾವೆ. ಮತ್ತೆ ನೀನು ಹಣಕೊಡಬೇಕಲ್ಲ. ನಿನಗೆ ಯಾರನಾ ಸಹಾಯ ಬೇಕಿದ್ರೆ ಕೊಡತೀವಿ” ಅಂದರು. “ಅದೇನು ಗಾರುಡಿ ಇದೆ ಸ್ವಾಮಿ ಹಣಕೊಡತೀನಿ. ಆದ್ರೆ ನನಿಗೆ ತಿರುಗಾಡೊ ಸಗತಿ ಇಲ್ಲ.

    ಯಾರಾನಾ ಕಡ್ಡಿ ಕಡ್ಡು ಸವರಿಕೊಟ್ರೆ ಹಣಕೊಡ್ತೀನಿ” ಅಜ್ಜ ತಿಳಿಸಿದ. “ಸರಿ ನಾವು ಕಡ್ಡಿ ತಂದು ಕೊಡ್ತೀವಿ, ನೀನು ಹಣಕೊಡಪ್ಪಾ” ಗೌಡರು ತಿಳಿಸಿ ಕಮ್ಮಾರಜ್ಜನನ್ನು ಕಳಿಸಿಕೊಟ್ಟರು. “ನಾಳೆ ಬೆಳಿಗ್ಗೆ ಗಾಡಿ ಹೂಡಿಕೆಂಡು ಈಸ್ಥಳ್ಳತ್ತಕೋಗಿ ನಾಕೈದು ಹೊರೆ ಈಸ್ಲಕಡ್ಡಿ ಕೊಯ್ಕಂಡ್ ಬರಬೇಕು. ಯಾರಾರು ಹೋಗೀರಪ್ಪಾ” ಗೌಡರು ತಮ್ಮ ಮನೆಯ ಹುಡುಗರಲ್ಲಿ ವಿಚಾರಿಸಿದರು. ಅವರ ಹಿರಿಯ ಮಗ ಚಿಕ್ಕಪ್ಪ “ನಾಕೈದು ಜನಾನಾದ್ರೂ ಬೇಕಾಗುತ್ತೆ, ಅಚ್ಚಾರ. ಸಿದ್ದಿಂಗಪ್ಪನ್ನ ಕರಕಸ್ತೀವಿ” ಎಂದುತ್ತರಿಸಿದ್ದ. “ಬ್ಯಾಡ ಕಣಯ್ಯಾ, ಸಿಲ್ಲಿಂಗಪ್ಪ ಊಟದೆಲೆ ತಾನೆ. ಬ್ಯಾರೆ ಯಾರನ್ನಾದ್ರೂ ಕರಕಂಡೋಗ್ರಿ” ಗೌಡರು ತಿಳಿಸಿ ನಾಳಿನ ಅಡಿಗೆ ವ್ಯವಸ್ಥೆ ಕುರಿತು ಮಾತಾಡಲು ಯಜಮಾನಪ್ಪರ ಮನೆಯತ್ತ ನಡೆದರು.

    ಯಜಮಾನಪ್ಪರ ಮನೆಯಲ್ಲಿ ನಾಳಿನ ಊಟಕ್ಕೆ ರಾಗಿ ಮುದ್ದೆ ಜತಿಗೆ ನೀರಾಮ್ರ ಮಾಡಾನ. ತರಕಾರಿ ಇಲ್ಲ. ನಾಡಿದ್ದು ಬೇಕಾದ್ರೆ ಸೊಪ್ಪು ಬೇಯ್ತಿ ಉದಕ ಮಾಡಾನ ಎಂದು ಹೆಣ್ಣು ಮಕ್ಕಳು ಮಾತಾಡತಿದ್ರು. “ಯಾರಾರ ಮನೇಗೆ ಮೊಳಕೆ ಹುರುಳಿಕಾಳು ಸಿಗ್ತಾವೆ ಕೂಡಿಸಿಕೊಂಡು ಬ್ಯಾಳೆ ಜತೆಗೆ ಬೇಯಿ ನೀರಾಮ್ರ ಮಾತೀವಿ” ತಮ್ಮ ನಿಯಾರವನ್ನು ತಿಳಿಸಿದ್ದರು.

    ಅದೇ ಸಮಯಕ್ಕೆ ಅಲ್ಲಿಗೆ ಆಗಮಿಸಿದ ಗೌಡ್ರು “ಅಲ್ಲಮ್ಮಾ ನಾಡಿದ್ದು ಸೊಪ್ಪಿನುದಕ ಮಾಡಾನಾ ಅಯ್ತಾರ, ಆಟೊಂದ್ ಸೊಪ್ಪಲ್ಲಿಂದ ತರೀರಾ ಆಶ್ಚರದಿಂದ ಕೇಳಿದರು. “ಈಗಂತೂ ಸೊಪ್ಪಿಲ್ಲ, ನೋಡಾನಾ, ನಾಳಕ್ಕೆ ಸಿಕ್ಕಿದರೆ ಅಂಗೆ ಮಾಡತೀವಿ. ಇಲ್ಲಿದ್ರೆ ಮೊಳಕೆ ಕಾಳೇ ಬೇಯ್ಲಿ ಉದಕೆ ಮಾಡತೀವಿ” ಅಂದರು. “ನೋಡ್ರಮ್ಮಾ ಇದು ಊರ ಬಾವಿ ತೋಡೋ ಕೆಲ್ಲ. ಒಂದು ತಿಂಗಳ ತಂಕ ಆದ್ರೂ ಆಗ ಬೌದು.

    ರಾಗಿ ಐದಾವೆ ದಿನಾ ಬೀಸಬೇಕು. ಅದೇನೂ ತೊಂದ್ರ ಇಲ್ಲ. ಆಮ್ರಕ್ಕೆ ಜೋಡಿಸೋದೇ ಕಷ್ಟ” ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅಷ್ಟೊತ್ತಿಗೆ ಯಜಮಾನಪ್ಪಾರೂ ದನಿಗೂಡಿಸಿ, “ಗೌಡ್ರ ಮಾತು ನಿಜ. ಆದ್ರೂ ನಮ್ ನಮ್ ಮನಿಯಾಗೆ ಹೆಂಗ್ ನಡೀತೆ-ತೋ ಅಂಗೆ ಅದ್ರೂ ಒಂದು ದಾರಿ ಸಿಗುತ್ತೆ” ಅಂದರು. ಹೆಂಗಸರಿಗೆಲ್ಲಾ ಸಮಾಧಾನ ಆಗಿತ್ತು. “ಒಂದು ತಿಂಗಳ ಕಾಲ ದಿನಾ ಹುಳ್ಳಿಕಾಳು ನೆನೆ ಹಾಕನಾ. ಮೊಳಕೆ ಕಟ್ಟಿ ಆಮ್ರ ಮಾಡಾನ ಜತಿಗೆ ಎಂಗಿದ್ರೂ ದಂಡಿಯಾಗಿ ಮಜ್ಜಿಗೆ ಇದ್ದಾವೆ” ಅಂದರು.

    ಮಾರನೇ ದಿನ ಕೋಳಿ ಕೂಗುತ್ತಲೂ ಗೌಡ್ರ ಮಗ ಚಿಕ್ಕಪ್ಪ ಎದ್ದು ಎತ್ತುಗಳಿಗೆ ನೀರು ಕುಡಿಸಿ ಚಪ್ಪರದಲ್ಲಿ ಕಣ್ಣು ಹಾಕಿ ಜತೆಗಾರರ ಸಂಗಡ ಗಾಡಿ ಅಚ್ಚಿಗೆ ಕೀಲೆಣ್ಣೆ ಹಚ್ಚಿದ. “ಬುತ್ತಿ ಮಾಡೈದೀರೇನವ್ವಾ” ಎಂದು ಹೆಣ್ಣು ಮಕ್ಕಳಲ್ಲಿ ವಿಚಾರಿಸಿ ಅವರು ತಂದುಕೊಟ್ಟ ಬುತ್ತಿಯನ್ನು ಪಡೆದು ಗಾಡಿಯಲ್ಲಿರಿಸಿ ಅವನ ಜತೆಗಾರರ ಸಂಗಡ ಈಚಲಗರಿ ತರಲು ಸಿದ್ಧನಾದ. ಗೌಡ್ರು ಅವರ ಬಳಿ ಬಂದು “ಈಸ್ಲ ಗರಿ ಕಡೀಬೇಕಾದ್ರೆ ಗಿಡದ ಬೊಡ್ಡೆಗೆ ಹುಳ ಹುಪ್ಪಟ ಇದ್ದಾವೆ ಹುಷಾರಾಗಿ ಕವೆಗೋಲಾಗೆ ಗಿಡದ ಬೊಡ್ಡಗೆ ಬಡ್ಡು ಗರಿ ಕೊಯ್ದಳ್ಳಿ, ದಿಮ್ಮನ್ನಾವು ಆರೇಳು ಹೊರೆ ಆದ್ರೆ ಸಾಕು” ಎಂದು ಗಾಡಿ ಕಟ್ಟಿಸಿ ಅವರನ್ನು ಸಾಗ ಹಾಕಿದರು.

    ಎಂದಿನಂತೆ ಬೆಳಿಗ್ಗೆ ಊರ ಮುಂದಲ ಹಳ್ಳದ ಬಳಿ ನೀರು ತುಂಬುವವರು, ಬಟ್ಟೆ ಒಗೆಯುವವರು ಕಂಡುಬಂದರು. ಎಲ್ಲರೂ ನೀರಿನ ಹರಿವು ಸಣ್ಣಗಾಗುತ್ತಿರುವುದನ್ನು ಗಮನಿಸುತ್ತ ಹಳ್ಳ ಬತ್ತೊಗಹೊತ್ತಿಗೆ ಬಾವಿ ತೋಡೋ ಕೆಲ್ಸ ಮುಗಿದರೆ ಕುಡಿಯೋ ನೀರಿಗೆ ಬರ ಇಲ್ಲ ಮುಂತಾಗಿ ಮಾತಾಡಿಕೊಳ್ಳುತ್ತಿದ್ದರು. ಚಿಕ್ಕುಂಬೊತ್ತಿಗೆಲ್ಲಾ ಬೋವಿ ಜನ ಗಂಡು ಹೆಣ್ಣು ಬಾವಿ ತೋಡುವ ಕೆಲಸಕ್ಕೆ ಹಾಜರಾದರು. ಗಂಡಸರು ತಲೆಗೊಂಡು ಬಟ್ಟೆ ಸುತ್ತಿಕೊಂಡು ಬರಿ ಮೈಯಲ್ಲಿ ಹಾರೆ ಗುದ್ದಲಿ ಸಮೇತ ಗುಂಡಿಗಳಿಗಿಳಿದರೆ ಹೆಂಗಸರು ಗಿಡದ ಮರೆಗೆ ಹೋಗಿ ಬಂದು ಸೀರೆಯನ್ನು ಕಾಸಿ ಕಟ್ಟಿಕೊಂಡು ಮಣ್ಣು ಹೊರಲು ಸಿದ್ಧರಾದರು. ಬೋವಿಗಳು ಹಾರೆ ಗುದ್ದಲಿಗಳನ್ನು ಮಣ್ಣಿಗೆ ಗಾತಾಕಿ “ಮೂಡ್ಯಗಿರಿ ತಿಮ್ಮ ಏಳುಕೋಟಿ” ಎಂದು ಕೂಗುತ್ತಾ ಭೂಮಿ ತಾಯಿಗೆ ನಮಸ್ಕರಿಸಿ ಅಗೆಯಲು ಆರಂಭಿಸಿದರು.

    ಬೋವಿಜನ ಬಾವಿ ತೋಡುವ ಕೆಲಸಕ್ಕೆ ಬಂದುದನ್ನು ಕೆಲವು ಹಳ್ಳಿಗರು ಕಂಡರಾದರೂ, ಅವರ ಹಾಲು ಕರೆಯುವ, ಕರುಗಳಿಗೆ ಮೇವು ಹಾಕುವ ಕೆಲಸಗಳು ಮುಗಿದಿರಲಿಲ್ಲ. ಆದರೂ ಕೆಲವರಿಗೆ ನಾಚುಗೆಯಾಗಿ ಅವರೂ ಬಾವಿ ಕೆಲಸಕ್ಕೆ ಆಗಮಿಸಿದರು. ಅಗಾ ಇಗಾ ಅನ್ನುವುದರೊಳಗೆ ಬಹುಪಾಲು ಜನ ಕೆಲಸಕ್ಕೆ ಆಗಮಿಸಿದರು. ಹಿಂದೆಯೇ ಗೌಡ್ರು, ಗೊಂಚಿಕಾರು ಮತ್ತು ಯಜಮಾನಪ್ಪಾರೂ ಆಗಮಿಸಿದರು.

    ಜನರ ಮಾತುಕತೆಯಲ್ಲಿ ಲವಲವಿಕೆ ಮೂಡಿತ್ತು. ಅಗೆಯುವುದು ಮಣ್ಣು ತುಂಬುವುದು, ಹೊರಿಸುವುದು, ಹೊತ್ತೊಯ್ದು ಸುರಿಯುವುದು ಭರಾಟೆಯಿಂದ ನಡೆದಿತ್ತು. ಇದನ್ನೆಲ್ಲಾ ನೋಡಿದ ಊರ ಹಿರಿಯರಿಗೆ ಸಮಾಧಾನವಾಗಿತ್ತು. ಅಲ್ಲಿ ಬಿಸಿಲಲ್ಲಿ ಕೂಡ್ರಲಾಗದೆ ಹತ್ತಿರದಲ್ಲಿದ್ದ ಹುಣಿಸೆ ಮರದಡಿಗೆ ಹಿರಿಯರು ತೆರಳಿದರು. ಅಗಾಧ ಮಣ್ಣಿನ ರಾಸಿಯನ್ನು ನೋಡಿ ಅಲ್ಲಿಗೆ ಬಂದ ಮಳಿಯಪ್ಪಯ್ಯ “ಬಾವಿ ಬಾಳ ದೊಡ್ಡದಾಗುತ್ತೇನೋ ಇನ್ನೊಂದೀಟು ಅಗಲ ಉದ್ದ ಕಡಿಮೆ ಮಾಡಬೌದಿತ್ತೀನೋ” ಎಂದು ತಮ್ಮ ಅನಿಸಿಕೆಯನ್ನು ತೋಡಿಕೊಂಡರು.

    “ಇಲ್ಲ ಸ್ವಾಮಿ ಸರಿಯಾಗೈತೆ. ಮೂಡಾ ಪಡುವ ಇಪ್ಪತ್ತು ಮೂರು ಗಜ ತೆ-ಂಕ ಬಡಗ ಇಪ್ಪತ್ತು ಗಜ ಮ್ಯಾಗಳ ಅಳತೆ. ಗಟ್ಟಿ ಸಿಕ್ಕಾಗ ಮೂರು ಮೂರು ಗಜ ಕಮ್ಮಿಯಾಗುತ್ತೆ. ಮ್ಯಾಗಳ ಹೊಯ್ದೆ ಮಣ್ಣು ಕುಸ್ಟೇ ಕುಸಿಯತ್ತೆ. ಮೂರುಗಜ ಛಡಿ ಬಿಡ್ತೀವಲ್ಲ. ಅದರ ಮ್ಯಾಲೆ ಮಣ್ಣು ಬಿದ್ದು ಅಲ್ಲೇ ಗಟ್ಟಿಯಾಗುತ್ತೆ. ನೋಡಾನ ಭೂಮಿ ಒಳಗಿಂದ್ ಎಂಗೈತೋ” ಗೌಡರು ಅವರ ಶಂಕೆಯನ್ನು ದೂರ ಮಾಡಲು ಯತ್ನಿಸಿದರು.

    ಗೊಂಚಿಕಾರೂ, ಯಜಮಾನಪ್ಪಾರು ತಲೆ ಹಾಕಿ ತಮ್ಮ ಸಮ್ಮತಿ ಸೂಚಿಸಿದ್ದರು. ಸ್ವಲ್ಪ ಹೊತ್ತಿನಲ್ಲಿ ಇಸ್ತದೆಲೆಯ ಗಾಡಿ ಆಗಮಿಸಿತು. ಕೆಲಸದ ಜಾಗದ ಬಳಿ ಮುತ್ತುಗದ ಎಲೆಗಳನ್ನು ಸುರುವಿ ಗುರುಸಿದ್ದಪ್ಪ ಗಾಡಿಯನ್ನು ಹಿಂತಿರುಗಿಸಿಕೊಂಡು ತೆರಳಿದ. ಕೂಡಲೇ ಮಣ್ಣು ಕೆಲಸ ಮಾಡುವವರನ್ನುಳಿದು ಉಳಿದವರು ಇಸ್ತ್ರ ಹಚ್ಚಲು ತೊಡಗಿಕೊಂಡರು.

    ಹಗಲೂಟದೊತ್ತಿಗೆ ಸರಿಯಾಗಿ ಸಿದ್ದಿಂಗಪ್ಪ ಐದಾರು ಜನ ಹೆಣ್ಣು ಮಕ್ಕಳ ಜತೆ ಊಟದ ಗಾಡಿಯನ್ನು ಹೊಡೆತಂದ. ಬೋವಿಗಳು ತಲೆಎತ್ತಿ ಹೊತ್ತು ನೋಡಿ ಕೆಲಸ ನಿಲ್ಲಿಸಿದರು. ಎಲ್ಲರೂ ಹಳ್ಳಕ್ಕೆ ಹೋಗಿ ಮುಖ ಕೈಕಾಲು ತೊಳೆದು ಬಂದರು. ಸಾಲಾಗಿ ಕುಳಿತವರಿಗೆ ಹುಡುಗರು ಇಸ್ತ್ರ ಹಂಚಿ ನೀರು ಚಿಮುಕಿಸಿದರು. ಹೆಣ್ಣು ಮಕ್ಕಳು ಕುಳಿತೆಲ್ಲರಿಗೆ ತಲಾ ಒಂದೊಂದು ಮುದ್ದೆ ಎರಡು ಸೌಟು ನೀರಾಮ್ರ ಬಡಿಸಿದರು. ಆಮ್ರದ ರುಚಿಯನ್ನು ಮೆಚ್ಚಿಕೊಂಡವರಿಂದ ‘ಬೋ ರುಸಿಯಾಗೈತೆ’ ಎಂಬ ಉದ್ಗಾರಗಳು ಹೊರಟವು. ಇನ್ನೊಂದು ಸುತ್ತು ಮುದ್ದೆ ಹಂಚಿಕೆಯಾಗಿ ಕೆಲವರಿಗೆ ಆಮ್ರ ನೀಡಿದರು.

    ಬಹುಪಾಲು ಎಲ್ಲರಿಗೂ ಮಜ್ಜಿಗೆ ನೀಡುವ ಸಮಯಕ್ಕೆ ಡೇಗುಗಳ ಸದ್ದು ಕೇಳಿ ಬಂದವು. ಮಾದಿಗರ ಹಟ್ಟಿಯ ಕೆಲ ಮಕ್ಕಳು ತಟ್ಟೆ ಪಾತ್ರೆ ಹಿಡಿದು ಬಂದರು. ಅವರೆಲ್ಲರಿಗೆ ಮುದ್ದೆ ಆಮ್ರ ನೀಡಿ ಕಳಿಸಿ ಯಜಮಾನರುಗಳು ಮತ್ತು ಊಟ ತಂದಿದ್ದವರು ಊಟಕ್ಕೆ ಕೂಡ್ರುವ ಸಮಯಕ್ಕೆ ಗೌಡ್ರ ಚಿಕ್ಕಪ್ಪನ ಈಚಲಗರಿಯ ಗಾಡಿ ಹಳ್ಳದ ದಡ ಹತ್ತಿ ಬಂದಿತ್ತು. “ಈಚಲಗರಿ ಹೊರೆ ಎಲ್ಲಿ ಕೆಡವಲಿ” ಎಂಬ ಚಿಕ್ಕಪ್ಪನ ಪ್ರಶ್ನೆಗೆ “ಇಲ್ಲೇ ಕೆಡವಿ” ಗೌಡ್ರು ಸೂಚಿಸಿ “ಎಲ್ಲಾರೂ ಮುದ್ದೆ ಉಣ್ಣು ಬರಿ” ಕರೆದರು. “ಇಲ್ಲ ನಾವು ಬುತ್ತಿ ಉಂಡಿದೀವಿ ಊಟ ಬ್ಯಾಡ” ಅಂದರು.

    ಈಚಲಗರಿ ತರಿಸಿದ ವಿಷಯ ಕೇವಲ ಕೆಲವರಿಗೆ ಮಾತ್ರ ಗೊತ್ತಿತ್ತು. ಉಳಿದೆಲ್ಲರಿಗೆ ಸಖೇದಾಶ್ಚರವಾಗಿತ್ತು. ಗೌಡ್ರ ಚಿಕ್ಕಪ್ಪ ಮತ್ತು ಅವನ ಸ್ನೇಹಿತರು ಹೊರೆಗಳನ್ನು ಕೆಡವಿ ಕಟ್ಟು ಬಿಚ್ಚಿ ಗರಿಗಳನ್ನು ಬಿಸಿಲಿಗೆ ಹರಡಿದರು.

    ಈಚಲ ಪುಟ್ಟಿ ಹೆಣೆಸಿದರು:

    ಮಳಿಯಪ್ಪಯ್ಯ ಗುಂಡಾಚಾರಿ ಬಾವಿ ತೋಡುವ ಜಾಗದ ಬಳಿಗೆ ಬಂದರು. ಆವೊತ್ತಿನ ಕೆಲಸ ನಿಲ್ಲಿಸಿದ್ದ ಬೋವಿಗಳು ಮತ್ತು ಊರಜನ ತಮ್ಮ ಮನೆಗೆಲಸಗಳನ್ನು ಮಾಡಿಕೊಳ್ಳಲು ಎಲ್ಲಾ ತೆರಳಿದ್ದರು. “ಗೌಡ್ರ, ಗೊಂಚಿಕಾ-ಲೆ, ಈ ಬಾವಿ ತೋಡೋ ಕಲ್ಲ ಎಂದು ಮುಗಿಬೌದು ಅಂದ್ಯಂಡಿದ್ದೀರಿ” ಗುಂಡಾಚಾರಿ ವಿಚಾರಿಸಿದರು. “ಇಂಗೇ ಅಮ್ಮ ಹೇಳಾಕ್ ಬರಲ್ಲ. ಆಗಬೌದು ಇನ್ನಾ ಒಂದು ವಾರ ಅಶ್ಚ ಹದಿನೈದು ದಿನ. ಇಂಥಾ ಕೆಟ್ ಕಾಲ ಬರುತ್ತೇ ಅಮ್ಮ ನಾವು ಅಂದ್ಯಂಡಿಲ್ಲಲ್ಲ.

    ” ಗೌಡ್ರು ಉತ್ತರಿಸಿದರು. ಹತ್ತಿರದಲ್ಲೇ ಇದ್ದ ಹಿರಿಯ ಬೋವಿ “ಆಗಬೌದು ಸ್ವಾಮಿ, ನೀವೇಳಿದಂಗೆ ಎಂಟತ್ತು ದಿನ ಆಗಬೌದು. ಮಳೆ ಬಂದ್ರೆ ಎಲ್ಲಾರಿಗೂ ಕೆಲ್ಲಾ. ಮಳೇನೇ ಇಲ್ಲ ಅಂದೇಲೆ ಯಾರೂ ಕೆಲ್ಸ ಇಲ್ಲ. ಅದೈ ಎಲ್ಲಾರೂ ತುಡ್ರಿಕೆಂಡ್ ಬಾವಿ ತೋಡ್‌ತೀವಿ” ದನಿಗೂಡಿಸಿದ. “ಸುತ್ತಾ ಎಲ್ಲಾ ಒಂದು ಗಜದ ಮ್ಯಾಲೆ ತೋಡೀದೀವಿ. ಇನ್ನಾ ಗಟ್ಟಿ ನೆಲ ಸಿಕ್ಕಿಲ್ಲ ನಾಳೆ ನಾಡಿದ್ದರಾಗೆ ಸಿಗಬೌದು” ಬೋವಿಯೇ ಮಾತಾಡಿದ್ದ.

    “ಇಂಗಿಂಗೇ ಮಾಡಬೇಕು ಆನೂಕಾಳೂ ಹತಾರ ಎಲ್ಲಾ ಜೋಡಿಗ್ಗಂಡು ಇಂಥಾ ದೊಡ್ ಕೆಲ್ಸಾ ಹಿಡಿಬೇಕಿತ್ತು. ನೀವು ನಾಳಿಕ್ಕೇ ಬಾವಿ ತೋಡೋ ಕೆಲ್ಸಾ ಆರಂಭಿಸಬೇಕು ಅಮ್ಮ ಕೆಲ್ಸ ಆರಂಭಿಸಿಬಿಟ್ರಿ. ನಿಮ್ ಧೈಯ್ಯಕ್ಕೆ ಮೆಚ್ಚಬೇಕು” ಗುಂಡಾಚಾರಿ ಉದ್ಗಾರವೆತ್ತಿದ. “ಅಲ್ಲೋ ಆಚಾರಪ್ಪಾ, ಕುಡಿಯ ನೀರೇ ಇಲ್ಲ ಅಂದೇಲೆ ನಾವು ಎಲ್ಲಿಗೋಗಾನ. ಈ ಹಳ್ಳ ನಂಬಿಕೆಂಡು ಈಸೊರಾ ಜೀವ್ಹಾ ಮಾಡಿದೀವಿ. ಇಂಥಾ ಜೀವನದೀನೇ ಬತ್ತುತ್ತೇ ಅಂದ್ರೆ ಮುಂದಿನ್ನೆಂಥಾ ಕಾಲ ಬರುತ್ತೊ. ಅದಕ್ಕೆ ತಯಾರಿ ಗಿಯಾರಿ ಏನೂ ಇಲ್ಲೆ ಏಳುಕೋಟಿ ಮೈಲಾರ ನಿಂಗಪ್ಪನ್ನ ನಂಬಿಕೆಂಡು ಬಾವಿ ತೋಡೋ ಕೆಲ್ಸ ಆರಂಭಿಸಿದಿವಿ” ಯಜಮಾನಪ್ಪರು ನಿಧಾನವಾಗಿ ದನಿಗೂಡಿಸಿದರು.

    “ಈ ಊರಿನ ಜನಾ ಎಲ್ಲಾ ಬಾಳ ಹೊಂದಾಣಿಕೆಯಿಂದ ಬಾಳ್ತಾ ಇದಾರೆ. ಒಬ್ರು ಒಂದು ನಿರಾರ ತಗಂಡ್ರೆ ಇನ್ನೊಬ್ರು ಅವ್ರ ಜತೆಗೂಡ್ತಾರೆ. ಅಪಸ್ವರ ಇಲ್ಲ. ಇಂಥಾದ್ದು ಬ್ಯಾರೆ ಊರುಗಳಾಗೆ ಇಲ್ಲ” ಮಳಿಯಪ್ಪಯ್ಯ ತಮ್ಮ ಮೌನ ಮುರಿದು ಮಾತಾಡಿದರು. “ಅಲ್ಲಾ ಸ್ವಾಮಿ, ಬರೇ ಮಾತಿಗೆ ಮಾತು ಆಡಿಕೆ-ಂಡ್ ಕುಂತ್ರೆ ಕೆಲ್ಸ ಆಗ್ತಾವ? ಹಿಂದಿನಿಂದ್ದೂ ನಮ್ಮೂರಾಗೆ ಇಂಗೇ ನಡಕಂಡ್ ಬಂದೈತೆ” ಗೊಂಚಿಕಾರು ದನಿಗೂಡಿಸಿದರು.

    “ಬರೆಪ್ಪಾ ನಾಳೆ ಕೆಲ್ಸ ನೋಡೈಮಾನ, ಕಮ್ಮಾರಜ್ಜಗೆ ಈಸ್ಟ ಪುಟ್ಟಿ ಹೆಣಿಯೋ ಕೆಲ್ಲ ಹಚ್‌ಬೇಕು” ಎಂದು ಗೌಡರು ಎಲ್ಲರನ್ನೂ ಕರೆದುಕೊಂಡು ಹೊರಟರು. ಎಂದಿನಂತೆ ಕಮ್ಮಾರರ ಕುಲುಮೆ ಬಳಿ ಊರ ಮಂದಿ ಸೇರಿದ್ದರು. ಹುಡುಗ ತಿಮ್ಮ ತನ್ನ ಕಾವ್ಯ ನೈಪುಣ್ಯತೆಯಿಂದ ಕೆಲಸ ಮಾಡುತ್ತಲೇ ಎಲ್ಲರ ಗಮನ ಸೆಳೆದಿದ್ದ. ಪುಟ್ಟಿ ಹೆಣೆಯುವ ಈಚಲ ಕಡ್ಡಿ ತಂದಿರುವುದು ಅವನಿಗೆ ಮತ್ತು ಅವರ ಅಜ್ಜನಿಗೆ ರವಾನೆಯಾಗಿತ್ತು. “ಯಾರಾದ್ರೂ ಮಚ್ಚು ತಂದು ತಟ್ಟಿಸ್ಕಳ್ಳಿ ಈಸ್ಲಕಡ್ಡಿ ಸೀಳಬೇಕಂತೆ ಅಜ್ಜ ಹೇಲೈತೆ” ಎಂಬ ಮುನ್ಸೂಚನೆಯನ್ನೂ ರವಾನಿಸಿದ್ದ ತಿಮ್ಮ.

    ಮೂಡಲಗುಡ್ಡ ಪಡುವಲ ಗುಡ್ಡಗಳ ನಡುವಿನ ಗೌನಳ್ಳಿಯ ಸದ್ಯದ ಕಾರುಬಾರು ಊರಬಾವಿ ತೋಡುವುದಾಗಿತ್ತು. ಊರ ನಿವಾಸಿಗಳೆಲ್ಲರ ತುರ್ತು ಕಾರವಾದ ಬಾವಿ ತೋಡುವ ಕಾರಕ್ಕೆ ಮಾಮೂಲಿಯಂತೆ ಕಾರ ಆರಂಭವಾದ ಮೂರನೇ ದಿನವೂ ಆಗಮಿಸಿದರು. ಕೆಲವು ಬೋವಿ ಗಂಡಾಳುಗಳು ನಿನ್ನೆ ಅಗೆದಿದ್ದ ಗುಂಡಿಗಳಲ್ಲಿ ತಂಪು ಪಸಿಮೆ ಇದೆಯೋ ಎಂದು ಹಾರೆಗಾತಾಕಿ ಪರೀಕ್ಷಿಸಿದರು. ‘ನಾಳಿಕ್ಕೆ ಖಂಡಿತ ಕಾಣಿಸಿಗೆಂಬತ್ತೆ’.

    ಅವರ ಊಹೆ ಬೆಳಗಿನ ಹುಮ್ಮಸ್ಸಿನ. ಕೆಲಸ ಆರಂಭವಾದ ಸ್ವಲ್ಪ ಹೊತ್ತಿಗೆಲ್ಲಾ ಕಮ್ಮಾರಜ್ಜ ಕಡ್ಡಿ ಸೀಳುವ ಮಚ್ಚುಗಳೊಂದಿಗೆ ಆಗಮಿಸಿದ. ಗೌಡ್ರ ಚಿಕ್ಕಪ್ಪ ಮತ್ತು ಅವನ ಸಂಗಡಿಗರು ಈಚಲಗರಿಗಳನ್ನು ಕೆಳಗೆ ಮೇಲೆ ತಿರುವಿ ಗರಿಗಳ ತುದಿಗಳನ್ನು ಕತ್ತರಿಸಿದರು. ಅಷ್ಟೊತ್ತಿಗೆ ಕಮ್ಮಾರಜ್ಜ ಅರ್ಧ ಹೊರೆ ಕಡ್ಡಿಗಳನ್ನು ಸೀಳಿ ಈಚಲಕಡ್ಡಿಗಳನ್ನು ಒಣಗಲು ಹರಡಿದ. ಚಿಕ್ಕಪ್ಪನ ತಂಡವೂ ಕಡ್ಡಿಗಳನ್ನು ಸೀಳಲು ತೊಡಗಿದರು. “ಕೈ ಜ್ವಾಪಾನಪ್ಪಾ” ಕಮ್ಮಾರಜ್ಜ ಕೂಗಿ ಹೇಳಿದ.

    ಹೊತ್ತಿಗೆ ಮುಂಚೆ ಸಿದ್ದಿಂಗಪ್ಪ ಮುತ್ತುಗದೆಲೆಗಳನ್ನು ತುಂಬಿಕೊಂಡು ಗಾಡಿ ಹೊಡೆದುಕೊಂಡು ಬಂದ. ಮುತ್ತುಗದೆಲೆಗಳನ್ನು ಸಿದ್ದಿಂಗಪ್ಪ ಸುರುವಿದ ಕೂಡಲೇ ಅಲ್ಲಿದ್ದ ಹುಡುಗರು ದೊಡ್ಡವರು ಎಲೆಗಳನ್ನು ಬಾಚಿ-ಕೊಂಡು ಇಸ್ತ್ರಗಳನ್ನು ಹಚ್ಚಲು ಸುರುಮಾಡಿದರು. ಕಮ್ಮಾರಜ್ಜನಿಗೆ ಇಲ್ಲಿನ ಚಟುವಟಿಕೆಯನ್ನು ನೋಡಿ ಆಶ್ಚರವಾಗಿತ್ತು. ‘ನಾವು ದೇಶಾನೆಲ್ಲಾ ತಿರುಗಿ ಈ ಊರಿಗೆ ಬಂದು ನೆಲಸಿದ್ದು ಒಳ್ಳೇದೇ ಆಯ್ತು’ ಅಂದುಕೊಂಡ.

    ಈಚಲ ಕಡ್ಡಿಗಳು ಸ್ವಲ್ಪ ಒಣಗಿ ನರುಮ್ ಆದಮೇಲೆ ಕಡ್ಡಿಗಳನ್ನು ಹರಡಿಕೊಂಡು ಪುಟ್ಟಿ ಹೆಣೆಯಲು ಸುರುವಿಟ್ಟುಕೊಂಡ. ಕಮ್ಮಾರಜ್ಜ ಪುಟ್ಟಿ ಹೆಣೆಯಲು ತಳಜೋಡಿಸುವುದನ್ನು ಚಿಕ್ಕಪ್ಪ ಅವನ ಸಂಗಡಿಗರು ತದೇಕ ದೃಷ್ಟಿಯಿಂದ ನೋಡುತ್ತ ತಾವೂ ಪುಟ್ಟಿ ಹೆಣೆಯಲು ಪ್ರಯತ್ನ ಪಟ್ಟರು. “ಅಂಗೇ ಸ್ವಾಮಿ ತಳದ ಕಡ್ಡಿಗಳನ್ನು ಬಿಗಿಯಾಗಿ ತುಳಕಂಡು ಹೆತೇರಿ, ಇದೇನು ಗಾರುಡಿ ವಿದ್ಯೆ ಅಲ್ಲ” ಅನ್ನುತ್ತಾ ಅಜ್ಜ ಹುರುಪು ನೀಡಿದ. ಯುವಕರು ಅಜ್ಜನ ಕೈಚಳಕವನ್ನು ಗಮನಿಸುತ್ತಲೆ ಮೂರು ನಾಲ್ಕು ಸುತ್ತು ಈಚಲ ಕಡ್ಡಿಗಳನ್ನು ತೂರಿಸಿ ಸಫಲರಾದರು. ಅವರಿಗೆ ಖುಷಿಯಾಯಿತು. ಶಿಳ್ಳು ಹೊಡೆದು ಕೇಕೇ ಹಾಕಿದರು.

    ಮಣ್ಣು ಕೆಲಸ ಮಾಡುತ್ತಿದ್ದವರಿಗೆ ತುಸು ಅಶ್ಚರವಾಯಿತು. ನೋಡನೋಡುತ್ತಲೇ ಎರಡು ಹೊಸಾ ಈಚಲ ಪುಟ್ಟಿಗಳು ಸಿದ್ಧವಾದವು. ಯಜಮಾನರುಗಳು ಇವರ ಉತ್ಸಾಹವನ್ನು ದೂರದಿಂದಲೇ ಗಮನಿಸುತ್ತಿದ್ದರು.

    ಸ್ವಲ್ಪ ಹೊತ್ತಿನಲ್ಲಿ ಬುತ್ತಿ ಹೊತ್ತ ಗಾಡಿ ಆಗಮಿಸಿತು. ಕೆಲಸ ಮಾಡುತ್ತಿದ್ದವರು ತಲೆ ಎತ್ತಿ ನೋಡಿ “ಇನ್ನೊಂದು ಸೆಣ ತಡೀರಪ್ಪಾ ಆಮೇಲೆ ಊಟ ಮಾಡಾನಾ” ಅಂದು ತಮ್ಮ ಕೆಲಸವನ್ನು ಮುಂದುವರೆಸಿದರು. ಈಚಲ ಪುಟ್ಟಿಗಳು ಒಣಗಬೇಕಾಗಿದ್ದರಿಂದ ಅವನ್ನು ಬಿಸಿಲಲ್ಲಿ ಹಾಕಿ ಕೆಲವರು ಕಡ್ಡಿಗಳನ್ನು ಸೀಳಿದರೆ ಮತ್ತೆ ಕೆಲವರು ಪುಟ್ಟಿ ಹೆಣೆಯುವ ಪ್ರಯೋಗವನ್ನು ಮುಂದುವರೆಸಿದರು.

    ಸಿದ್ದಿಂಗಪ್ಪ ಅಡಿಗೆ ಕೊಳಗಗಳನ್ನು ಗಾಡಿಯಿಂದಿಳಿಸಲು ಚಿಕ್ಕಪ್ಪನ ಸಹಾಯ ಕೋರಿದ. ಹೆಣ್ಣು ಮಕ್ಕಳು ತೋಡಿದ್ದ ಬಾವಿಯ ಸುತ್ತ ಓಡಾಡಿ ಸುತ್ತಾ ಬಿದ್ದಿರುವ ಅಗಾಧ ಮಣ್ಣಿನ ರಾಸಿಯನ್ನು ನೋಡಿ ಆಶ್ಚಯ್ಯ ಚಕಿತರಾದರು. ಅಂತೂ ಕೊಂಚ ಹೊತ್ತಿಗೆ ಊಟದ ಬಿಡುವು ಘೋಷಣೆಯಾಗಿ ಕೆಲಸ ಮಾಡುತ್ತಿದ್ದವರೆಲ್ಲಾ ನಿಲ್ಲಿಸಿ ಮುಖ ಕೈಕಾಲು ತೊಳೆಯಲು ಹಳ್ಳದ ಕಡೆ ನಡೆದರು.

    ಇಸ್ತ್ರ ಹಂಚುವ ಹುಡುಗರು ಬಂದು ಕುಳಿತವರಿಗೆಲ್ಲಾ ಹಂಚಿ ನೀರು ಚಿಮುಕಿಸಿದರು. ಹೆಣ್ಣು ಮಕ್ಕಳು ಮುದ್ದೆ ಮೊಳಕೆ ಹುರುಳಿಕಾಳು ಎಸರು ಮತ್ತು ಕಾಳನ್ನು ಹಂಚಿದರು. ಪ್ರತಿದಿನದಂತೆ “ಆಮ್ರ ರುಸಿಯಾಗೈತೆ ಒಂದೆಕ್ಟ್ ಮೆಂಚೆಕಾಯಿ ಕೊಡ್ರಮ್ಮಾ” ಎಂಬಾ ಮೆಚ್ಚುಗೆ ಮಾತುಗಳು ಕೇಳಿ ಬಂದವು. ಮತ್ತೆ ಮುದ್ದೆ ಎಸರು, ಮಜ್ಜಿಗೆ ಹಂಚಿಕೆಯಾದ ಬಳಿಕ ಚಿಕ್ಕಪ್ಪ “ಕಮ್ಮಾರಜ್ಞಾ ನೀನಿವತ್ತು ಮುದ್ದೆ ಎಸರು ಉಣ್ಣಲೇಬೇಕು. ದಿನಾ ರೊಟ್ಟಿ ತಿಂದು, ಬೇಜಾರಾಗಲ್ವೆ” ಎಂದು ಒತ್ತಾಯಿಸಿದ. ಕಮ್ಮಾರಣ್ಣ ನಗು ನಗುತ್ತಾ “ನಾನು ಮುದ್ದೆ ಉಣ್ಣೆ ಕಲ್ತಿದೀನಿ, ಎಸರು ಉಂಡಿಲ್ಲ ಇವೊತ್ತು ನೋಡಾನ್ ಪ್ರತಿಕ್ರಿಯಿಸಿದೆ.

    ಅಷ್ಟೊತ್ತಿಗೆ ಗೌಡ್ರು, ಗೊಂಚಕಾರು, ಯಜಮಾನಪ್ಪಾರೂ ಮುದ್ದೆ ಉತ್ತಲ ಬಂದರು. ಅವರ ಜತೆಯಲ್ಲೇ ಕಮ್ಮಾರಜ್ಞ ಸಿಲ್ಲಿಂಗಪ್ಪ, ಚಿಕ್ಕಪ್ಪ ಮತ್ತು ಅದನ ಸಂಗಡಿಗರೂ ಬಂದು ಕುಳಿತರು. ಹೆಣ್ಣು ಮಕ್ಕಳು ಕೆಲವು ಕೆಲಸದವರು ಸೇರಿಕೊಂಡು ಇವರಿಗೆಲ್ಲಾ ಊಟಕ್ಕೆ ಬಡಿಸಿದರು. ಕೊನೆಗೆ ಅಡಿಗೆ ತಯಾರು. ಮಾಡಿದವರ ಸರದಿ. ಅವರಿಗೆ ಊಟಕ್ಕೆ ಬಡಿಸಿದ ಹೆಣ್ಣು ಮಕ್ಕಳು “ಅಕ್ಕಾ ನಾಳಕ್ಕೆ ಯಾತ್ರಾ೦ಬ್ರ ಮಾಡ್ತೀರ. ಈ ಮೂರ್ ದಿನದ ಆಮ್ರಕ್ಕೆ ತೂಕ ಮಾಡಿದಂಗೆ ಉಪ್ಪು ಖಾರ ಹಾಕೀದೀರಾ” ನಗುತ್ತಲೇ ವಿಚಾರಿಸಿದರು. ಮುದ್ದೆ ಉಣ್ಣುತ್ತಿದ್ದವರು ಮುಖ ಮುಖ ನೋಡಿಕೊಂಡರು.

    “ಏನು ಮಾಡಬೇಕು. ನೀವೇ ಹೇಳಿ” ಒಬ್ಬಾಕೆ ಹಾಕಿದ ಮರು ಪ್ರಶ್ನೆಗೆ ನಸುನಗುತ್ತಲೇ “ಆರ್ಧಾಮ” ಮಾಡ್ರಿ. ನಿನ್ನೆ ಮಾಡಿದ್ದು ಬಾಳ ಸೆಂದಾಕಿತ್ತು” ಎಂದು ಎಗ್ಗಿಲ್ಲದೆ ಉತ್ತರಿಸಿದ್ದಳು. “ಅಂಗ ಮಾಡಾನ ಮಳಿಕೆ ಉಳ್ಳಕಾಳ್ಳೆದಾವೆ” ಹಿರಿಯಾಕೆ ಉತ್ತರಿಸಿದ್ದರು.

    “ಲೇಯಂಡ್ರಿ ಲೇಯಂಡ್ರಿ ಪದ್ಮತದಿ” (ಏಳಿ ಏಳಿ ಹೊತ್ತಾಗತ್ತೆ)ಹಿರಿಯ ಬೋವಿ ಕೂಗಿ ಎಚ್ಚರಿಸಿದ. ಕಮ್ಮಾರಜ್ಜನ ಕಣ್ಣು ಮುಚ್ಚಿಕೊಳ್ಳುತ್ತಿದ್ದವು. “ಆಶಾರಿಲ್ಲದ್ದು (ಆಚಾರಿಲ್ಲದ್ದು) ಈ ಶರೀಳ ಕೆಲ್ಸ ಇಲ್ಲದಿದ್ರೆ ನಿದ್ದೆ ಅಮರಿಕೆಂಡು ಬರುತ್ತೆ” ಎಂದು ಕಮ್ಮಾರಜ್ಜ ಕಣ್ಣೆರೆಸಿಕೊಂಡು ಈಚಲಕಡ್ಡಿ ಸೀಳಲುದ್ಯುಕ್ತನಾದ.

    ಭರಾಟೆಯಿಂದಲೇ ಮಣ್ಣಿನ ಕೆಲಸ ಪುನರಾರಂಭಗೊಂಡಿತು. ಸಿದ್ದಿಂಗಪ್ಪನ ಗಾಡಿಯಲ್ಲಿ ಅಡಿಗೆ ಹೆಣ್ಣು ಮಕ್ಕಳು ತೆರಳಿದರೆ ಚಿಕ್ಕಪ್ಪ ಮತ್ತು ಅವನ ತಂಡ ಈಚಲ ಕಡ್ಡಿಗಳನ್ನು ಸೀಳುತ್ತಾ ಕುಳಿತರು. ಗೌಡ್ರು, ಗೊಂಚಿಕಾರು ಮತ್ತು ಯಜಮಾನಪ್ಪರು ಬಾವಿಯ ಗುಂಡಿಯಲ್ಲಿಳಿದು ತಳದ ಮಣ್ಣನ್ನು ಪರೀಕ್ಷಿಸಿದರು. ಅವರ ಬಳಿ ಬಂದ ಹಿರಿಯ ಬೋವಿ “ಇವತ್ತು ಸಂಜೀಗೆ ಅಲ್ವಾ ನಾಳೆ ಬೆಳಿಗ್ಗೆ ಗಟ್ಟಿ ನೆಲ ಸಿಗುತ್ತೆ” ಎಂದು ಹೇಳುತ್ತಿರುವಂತೆ ಪಡುವಲ ಮೂಲೆಯಲ್ಲಿ ಹಾರೆ ಗಾತಾಕಿದಾಗ “ಧಣ್” ಎಂಬ ಸದ್ದು ಕೇಳಿಸಿತು.

    ಕೂಡಲೇ ಅವರೆಲ್ಲ ಅಲ್ಲಿಗೆ ಸರಿದರು. ಹಾರೆ ಹಾಕಿದಾತ ಮತ್ತೆರಡು ಬಾರಿ ತನ್ನೆಲ್ಲಾ ಶಕ್ತಿಯಿಂದ ಹಾರೆ ಗಾತಾಕಿದಾಗ ಅದೇ ಸದ್ದಿನ ಜತೆಗೆ ಬೆಂಕಿಯ ಕಿಡಿ ಚಿಮ್ಮಿತ್ತು. ಹತ್ತಿರದ ಇನ್ನೊಬ್ಬಾತನ ಹಾರೆಗೂ ಅಡಿಯಲ್ಲಿ ಕಲ್ಲು ಅಥವಾ ಬಂಡೆ ಎಡತಾಕಿತ್ತು. ಅಂತೂ ಗಟ್ಟಿ ಸಿಕ್ಕಿತು ಎಂದು ಅವರೆಲ್ಲಾ ಖುಷಿಗೊಂಡರು. ಚೊಂಬು, ಬಿಂದಿಗೆ ಗಾತ್ರದ ಕಲ್ಲು ಗುಂಡುಗಳು ಜತೆಗೆ ಸುಣ್ಣ ಪಟರು ಕಲ್ಲಿನಂಥಾ ಬಿಳಿ ಮಣ್ಣು ಕಾಣಿಸಿಗೊಂಡಿತ್ತು. ಹಿರೇಬೋವಿ “ಇನ್ನೇಲೆ ಈ ಬೆಳೆ ಮಣ್ಣ ಮೂಡುಗಡೆ ಮಣ್ಣಿನ ಮಾಲೆ ಸುರೀರಮ್ಮಾ” ಎಂದು ಮಣ್ಣು ಹೊರುವವರಿಗೆ ತಾಕೀತು ಮಾಡಿದ. ಕಲ್ಲು ಗುಂಡುಗಳು ತುಂಬಿಕೊಂಡಿದ್ದ ನೆಲದಲ್ಲಿನ ಮಣ್ಣು ಒಂದಿಷ್ಟೂ ಕೈಗೆ ಅಂಟುತ್ತಿರಲಿಲ್ಲ. ಸಂಜೆ ಹೊತ್ತಿಗೆ ಬಾವಿಯ ತಳವೆಲ್ಲಾ ಕಲ್ಲು ಗುಂಡು ಮತ್ತು ಬಿಳಿ ಮಣ್ಣಿನಿಂದ ತುಂಬಿತ್ತು.

    ಈಗ ಊರ ಯಜಮಾನರು ಮತ್ತು ಹಿರಿಯ ಬೋವಿ ಬಾವಿಯ ಅಂಚಿನಿಂದ ಮೂರು ಗಜ ಅಳೆದು ಮೊನೆಗುದ್ದಿಯಿಂದ ಗುರುತುಮಾಡಿ “ಇದರೊಳಗೆ ಆಗೆಯಬೇಕು. ಇಷ್ಟುಛಡಿ ಬಿಡಬೇಕು. ಮ್ಯಾಗಳ ಹೊಯ್ದೆ ಮಣ್ಣು ಕುಸಗಂಡ್ರೆ ಇದರ ಮ್ಯಾಲೆ ಬೀಳುತ್ತೆ” ಎಂದು ಸೂಚಿಸಿದರು. ಅದರಂತೆ ಮಣ್ಣು ಅಗೆಯುವವರು ಮೂರು ಗಜದಗಲ ಬಿಟ್ಟು ಅಗೆಯಲು ಸುರುಮಾಡಿದರು. ಕಲ್ಲು ಗುಂಡುಗಳು ಸಿಗುತ್ತಿದ್ದರಿಂದ ಮಣ್ಣು ಕಡಿಮೆಯಾಗಿತ್ತು. ಮಣ್ಣು ಹೊರುವ ಹೆಣ್ಣು ಮಕ್ಕಳು ನಿಂತು, ಕುಳಿತು ಮಾತಾಡಲು ಪುರುಸೊತ್ತು ಸಿಕ್ಕಿತ್ತು.

    ಕೆಲಸ ನಿಲ್ಲಿಸುವ ಹೊತ್ತಿಗೆ ಒಳಬಾವಿಯ ಆಕಾರ ಖಚಿತಗೊಂಡಿತ್ತು. ಊರಿನ ಯಜಮಾನರುಗಳು ಮತ್ತು ಬೋವಿಗಳ ಹಿರಿಯಾತ ಬಾವಿಯಲ್ಲಿ ಅಡ್ಡಾಡುತ್ತಿರುವ ಸಮಯಕ್ಕೆ ಮಳಿಯಪ್ಪಯ್ಯ ಮರುಳಯ್ಯ ಮತ್ತು ಗುಂಡಾಚಾರಿ ಆಗಮಿಸಿ ಬಾವಿಯ ಆಕಾರವನ್ನು ಕಂಡು “ಇದೂ ದೊಡ್ಡ ಬಾವೀನೆ ಆಗುತ್ತೆ. ಸುಣ್ಣಪಟರು ಸಿ೦ತೆ ಅಂದ್ಮಲೆ ನೀರಿನ ಸೆಲೆ ಕಾಣಿಸ್ಸೆಂಬುತ್ತೆ”. ಮಳಿಯಪ್ಪಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. “ಹಳ್ಳಕ್ಕಿಂತ ತಗ್ಗು ತೋಡೀದೀವಿ. ಹಳ್ಳದ ಬಸಿ ಕಾಣಸ್ಲಂಡೂ ಕಾಣಸ್ಯಬೌದು” ಬೋವಿ ಹೇಳಿದ. “ಒಟ್ನಲ್ಲಿ ಕುಡಿಯೋ ನೀರಿನ ಬವಣೆ ತಪ್ಪಿದರೆ ಸಾಕು. ಎಲ್ಲಾರೂ ನಿರುಮ್ಮಳವಾಗಿರಬೌದು” ಗೌಡರು ಆಡಿದ ಮಾತಿಗೆ ಎಲ್ಲರೂ ತಲೆಯಾಡಿಸಿದರು.

    ಎರಡು ಪಲ್ಲ ರಾಗಿ ಬೀಸಿಕೊಟ್ಟ ಮಾದಿಗರ ಹೆಂಗಸರು ಯಜಮಾನಪ್ಪರ ಮನೆಯಿಂದ ರಾಗಿ ಮುದ್ದೆ ಹುರುಳಿಕಾಳು ಎಸರು ಇಸಗೊಂಡು ಕರುವುಗಲ್ಲ ಬಳಿ ಊರ ಹಿರಿಯರಿಗೆ ಎದುರಾದರು. “ನಿಮ್ಮ ಗಂಡಸರು ಏನ್ ಮಾಡ್ತಾರಮ್ಮಾ” ಗೌಡರ ಪ್ರಶ್ನೆಗೆ “ಎನ್ ಮಾಡ್ತಾರೆ ಮನಗಿ ಎದ್ದಾರೆ” ಒಬ್ಬಾಕೆ ಉತ್ತರಿಸುತ್ತಾ ನಡೆದು ಹೋದಳು. ಮಾದಿಗರನ್ನು ಯಾರೂ ಕೆಲಸಕ್ಕೆ ಕರೆಯುತ್ತಿರಲಿಲ್ಲ. ಯಾವುದಾದರೂ ಪ್ರಾಣಿ ಸತ್ತರೆ ಅದರ ಚರ ಸುಲಿದು ಗಲ್ಲೆಗುಂಡಿ ನೀರಿನಲ್ಲಿ ಕೊಳೆ ಹಾಕಿ ಸಂಸ್ಕಾರ ಮಾಡಿ ಮೆಟ್ಟುಕೆರ. ಬ್ಯಾಸಾಯದ ಪಟಗಣ್ಣಿ ಮುಂತಾದುವನ್ನು ಹೊಲಿದು ಕೊಡುತ್ತಿದ್ದರು. ಅವರಿಗೆ ಬ್ಯಾರೆ ಕೆಲಸದ ಅನುಭವ ಇರಲಿಲ್ಲ. ಹೀಗಾಗಿ ಅವರದೇ ಆದ ರೀತಿಯಲ್ಲಿ ಬದುಕಿದ್ದರು.

    ಹಿಂದಿನ‌ ಸಂಚಿಕೆ: 11. ಬಂಡಿ ತಂದ ಬದಲಾವಣೆ

    ಯಜಮಾನಪ್ಪರ ಮನೆಯಲ್ಲಿ ಸೇರಿದ್ದ ಅಡಿಗೆ ತಯಾರಿಸುವ ಮಹಿಳಾ ತಂಡ ನಾಳಿನ ವ್ಯವಸ್ಥೆಯನ್ನು ತೀರಾನ ಮಾಡಿದ್ದರು. ಮನೆಗೆ ಬಂದ ಯಜಮಾನಪ್ಪರಿಗೆ ವರದಿಯೊಪ್ಪಿಸಿ ಕೆಲವು ಮಹಿಳೆಯರು ತಮ್ಮ ಮನೆಗಳಿಗೆ ಹೊರಟರು. ಸಿದ್ದಿಂಗಪ್ಪ “ಬಾವಿ ತೋಡೋರಿಗೆ ಊಟ ಹಾಕ್ತಾ ಮುತ್ತುಗದ ಮರ ಬೋಳುಗೆಡವಿದೀವಿ. ಇನ್ನಾ ಏಸುಮರ ಕೊಂಪೆಕೂಲಿಸ್‌ಬೇಕೋ?” ಅಂದ. “ಈ ನರಮನಿಸ್ಯ ಅಡವಿ ಮ್ಯಾಗಳ ಸೊಪ್ಪು ಸೆದೆ ತಿಂದೇ ಬದುಕ್ತಾನೆ. ಅಂದೇಲೆ ಇನ್ನಾ ನಾಕೈದು ಮುತ್ತುಗದ ಮರ ಬೋಳಾಗ್ತವೆ” ಯಜಮಾನಪ್ಪರು ಮಾತಾಡಿದ್ದರು.

    ಮಾರನೇ ದಿನ ಬೆಳಿಗ್ಗೆ ಊರಿನ ಜನ ಹಳ್ಳದಿಂದ ನೀರು ತರುತ್ತಿದ್ದ -ರೆ ಗೌಡ್ರು, ಗೊಂಚಕಾರು. ಯಜಮಾನಪ್ಪಾರು ಮತ್ತು ಮಳಿಯಪ್ಪಯ್ಯ ಬಾವಿ ತೋಡುವ ಸ್ಥಳದಲ್ಲಿ ಅಡ್ಡಾಡುತ್ತಿದ್ದರು. ಅವರಿಗೆ “ನೀರಿನ ಸೆಲೆ ಕಾಣಿಸಿಕೊಂಡಿರಬೇಕು” ಎಂಬಾಶೆಯಿಂದ ಅವರೆಲ್ಲಾ ಬೆಳ್ಳಂಬೆಳಿಗ್ಗೆಯೇ ಊರು ಬಾವಿ ಬಳಿಗೆ ಆಗಮಿಸಿದ್ದರು. ಬಾವಿಯೊಳಗೆ ಇಳಿದ ಅವರಿಗೆ ನಿರಾಶೆಯೇನೂ ಆಗಲಿಲ್ಲ. ಬಿಳಿಕೆಸರು ಮಣ್ಣಿನಂತೆ ಮತ್ತು ಅವರ ಅಂಗಾಲು ತೇವವಾದಂತೆ ಅನುಭವವಾಗಿತ್ತು.

    ಎಂದಿನಂತೆ ಬೋವಿಜನ ಬಾವಿ ತೋಡುವ ಕೆಲಸಕ್ಕೆ ಆಗಮಿಸಿದರು. ಅವರಲ್ಲಿ ಒಬ್ಬ ಯುವಕ ಗಡ್ಡೆ ಮೇಲಿಂದಲೇ ಹಾರೆಯನ್ನು ತನ್ನ ಶಕ್ತಿಮೀರಿ ಬಾವಿಯೊಳಗೆ ಎಸೆದು ಗಾತಾಕಿದ. ಅದು ಗೇಣುದ್ದ ಮಣ್ಣಿನಲ್ಲಿ ಧಸಕ್ಕೆಂದು ಸಿಕ್ಕಿಕೊಂಡು ನಿಂತಿತ್ತು. ಬಾವಿಯೊಳಗೆ ಇಳಿದು ಹಾರೆಯನ್ನು ಕಿತ್ತು ಅದರ ಮೊನೆಯನ್ನು ಗಮನಿಸಿದಾಗ ಅದು ಒದ್ದೆಯಾಗಿರುವಂತೆ ಕಂಡಿತ್ತು. ಹಿಂದೆ-ಯೇ ಆಗಮಿಸಿದ ಹಿರಿಯ ಬೋವಿ ದೇವಮೂಲೆಯಲ್ಲಿ ಒಂದು ಕ್ಯಾದೆ ತೋಡಲು ಸೂಚಿಸಿದ. ಕೂಡಲೇ ಗಂಡಾಳುಗಳು ಹಾರೆಯಲ್ಲಿ ಗಾತಾಕಿ ಮೊನೆಗುದ್ದಲಿಯಲ್ಲಿ ಅಗೆದರು. ನಾಕೈದು ಪುಟ್ಟಿಗಳಲ್ಲಿ ಬಿಳಿ ಮಣ್ಣು ತುಂಬಿ “ದಾಂಡ್ರಮ್ಮಾ”(ಬರೆಮಾ) ಎಂದು ಪುಟ್ಟಿ ಹೊರುವ ಮಹಿಳೆಯರನ್ನು ಕರೆದು ತುಂಬಿದ ಪುಟ್ಟಿಗಳನ್ನು ಹೊರೆಸಿದರು.

    ಆಗಾ ಇಗಾ ಅನ್ನುವುದರೊಳಗೆ ಗಜದಾಳದ ಗುಂಡಿ ತೋಡಿದ್ದರು. ಅಷ್ಟೊತ್ತಿಗೆ ಆಗಮಿಸಿದ ಊರ ಜನ ಯಾಕೆ ಏನು ಎಂದು ವಿಚಾರಿಸದೆ ಸರಿಕಂಡ ಕಡೆ ಮಣ್ಣು ಅಗೆಯಲು ಸುರುವಿಟ್ಟುಕೊಂಡರು. ಹಿಂದೆಯೇ ಕಮ್ಮಾರಜ್ಜ ಮತ್ತು ಚಿಕ್ಕಪ್ಪನ ತಂಡವೂ ಆಗಮಿಸಿ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡರು. ಶ್ಯಾದೆ ತೋಡುತ್ತಿದ್ದವರಿಗೆ ತಳದಲ್ಲಿ ಕಲ್ಲುಗುಂಡುಗಳು ಕಡಿಮೆಯಾಗಿ ನೆಟ್ಟಕಲ್ಲು ಬಂಡೆ ಗೋಚರಿಸಿತು. ಅದು ಮೂಡಪಡುವ ಹಬ್ಬಿತ್ತು. ತೆಂಕಲ ಮೂಲೆಯಲ್ಲಿ ಗುಂಡಿ ತೋಡಿಕೊಂಡು ಹಾಸುಬಂಡೆಯನ್ನು ಸೀಳತೊಡಗಿದಾಗ ಹಲಗೆಯಂತಹ ಬಂಡೆಯ ಪದರಗಳು ಬಾಯಿಬಿಟ್ಟು ಅಗೆಯಲು ಸುಲಭವಾಗಿತ್ತು.

    ಕಲ್ಲಿನ ಪದರಗಳನ್ನು ಸೀಳುತ್ತಾ ಆಳಕ್ಕಿಳಿದಂತೆ ಗಟ್ಟಿಬಂಡೆಯ ಬದಲು ಹಿಟ್ಟುಕಲ್ಲು ಬಂಡೆಯ ಸಳಗು ಕಂಡಿತ್ತು. ಹಿರಿಯ ಬೋವಿ ಕಲ್ಲುಗಳನ್ನು ಹೊರಲು ಸುಲಭವಾಗುವಂತೆ ಒಡೆದು ತುಂಡು ಮಾಡಲು ಅಗೆಯುತ್ತಿದ್ದವರಿಗೆ ಸೂಚಿಸಿ ಬಾವಿಯ ಮೂಡಲು ಮತ್ತು ಬಡಗಲ ದಿಕ್ಕಿನ ಮಣ್ಣಿನ ಏರಿಯ ಮೇಲೆ ಕಲ್ಲು ಬಂಡೆಗಳನ್ನು ಹಾಕಲು ಹೆಣ್ಣು ಮಕ್ಕಳಿಗೆ ಸೂಚನೆ ನೀಡಿದ. “ಶ್ಯಾದೆ ತೋಡಬೇಕಾ? ಇಲ್ಲ ಇಂಗೆ ಅಗೆದುಕೊಂಡು ಮುಂದಕ್ಕೆ ಹೋಗಬೇಕಾ?” ಎಂದು ಕೇಳಿದ ಕೆಲಸಗಾರರಿಗೆ “ಮೂರ್ ಮೂರ್ ಗಜ ಅಗಲ ಉದ್ದ ತೋಡ್ರಿ” ಎಂದು ಸೂಚನೆ ಕೊಟ್ಟ ಹಿರಿಯಬೋವಿ.

    ಹಿಂದಿನ‌ ಸಂಚಿಕೆ: 12. ಜಂಗಮಯ್ಯರ ಆಗಮನ

    ಹಾರೆ ಗಾತಾಕಿದಂತೆಲ್ಲಾ ಕಲ್ಲು ಬಂಡೆ ಸೀಳಿ ಬಾಯಿ ಬಿಡುತ್ತಿತ್ತು. ಮಣ್ಣಿನ ಕಣಗಳು ಬಂಡೆ ಸಂದಿನಲ್ಲಿ ಕಾಣಿಸಲಿಲ್ಲ. ಹೆಣ್ಣಾಳುಗಳು ಬಂಡೆಯ ತುಣುಕುಗಳನ್ನು ಹೊತ್ತೊಯ್ದು ಮಣ್ಣಿನ ರಾಸಿಯ ಮೇಲೆ ಹಾಕುತ್ತಿದ್ದರು.

    “ಆಡೇಲಿ ಇನ್ ಮ್ಯಾಲೆ ಗಟ್ಟಿ ಕಲ್ಲುಬಂಡೆ ಸಿಕ್ಕುತ್ತೆ, ಬಂಡೆ ಒಡಿಯಾಕೆ ಸೆಮನೆಗೆ ಬೇಕಾಗುತ್ತೆ” ಅಗೆಯುತ್ತಿದ್ದ ಬೋವಿಗಳು ಮಾತಾಡಿಕೊಂಡರು.

    ಬಾವಿಯ ತೆಂಕಲ ದಿಕ್ಕಿನಲ್ಲಿ ಕಲ್ಲು ಬಂಡೆಯ ಸಳಗು ಕಾಣಿಸಿಕೊಂಡಿತು. ಒಂದು ಮೂಲೆಯಲ್ಲಿ ತಗ್ಗು ತೋಡಿಕೊಂಡು ಕಲ್ಲಿನ ಸಳಗನ್ನು ಬಿಡಿಸಲು ಪ್ರಯತ್ನಿಸುತ್ತಿದ್ದವರಿಗೆ ಹಾಸು ಬಂಡೆಯಂತೆ ಕಂಡಿತ್ತು. ಅಲ್ಲಿ ಅಗೆಯುತ್ತಿದ್ದವರೂ ಹಾರೆಯಿಂದ ಕಲ್ಲಿನ ಪದರನ್ನು ಸೀಳುವಲ್ಲಿ ಯಶಸ್ವಿಯಾಗಿದ್ದರು. ಹಾಸು ಬಂಡೆಯನ್ನು ಒಡೆಯುವುದರ ಬದಲು ಇಬ್ಬರು ಮೂರುಜನ ಅವನ್ನು ಮೇಲಕ್ಕೆ ಸಾಗಿಸಿ ಬಾವಿ ಮಣ್ಣಿನ ಮೇಲೆ ಹಾಕಿದರು. ಸುಮಾರು ನಾಲ್ಕು ಗಜ ಆಳ ಅಗೆದಿರುವಾಗ ಶ್ಯಾದೆಯ ಮೂಡಲ ದಿಕ್ಕಿನಲ್ಲಿ ಸಣ್ಣಗೆ ನೀರಿನ ಬಸಿ ಕಾಣಿಸಿಗೊಂಡಿತು. ಕೂಡಲೇ ಅಲ್ಲಿ ಅಗೆಯುತ್ತಿದ್ದವರಲ್ಲಿ ಒಬ್ಬಾತ “ನೀಳು ಸಿಕ್ಕೆ ನೀಳು ವಚ್ಚೆ” (ನೀರು ಸಿಕ್ಕತು ನೀರು ಬಂದಿತು)ಎಂದು ಕೂಗಿಕೊಂಡ ಕೂಡಲೇ ಕೆಲಸ ಮಾಡುತ್ತಿದ್ದವರೆಲ್ಲಾ ನಿಲ್ಲಿಸಿ ಧಾವಿಸಿ ಬಂದು ಆಗಲೇ ಪಾದಮಟ್ಟ ಇದ್ದ ತಿಳಿ ನೀರನ್ನು ನೋಡಿ ಖುಷಿಗೊಂಡರು.

    ಹಿರಿಯ ಬೋವಿ ಊರ ಯಜಮಾನರುಗಳಿಗೆ ಸುದ್ದಿ ಕೊಡಲು ಅಲ್ಲಿದ್ದ ಹುಡುಗರಿಗೆ ಸೂಚಿಸಿದ. ಅವರು “ಬಾವೇಗೆ ನೀರು ಬಿದೈತೆ” ಎಂದು ಕೂಗುತ್ತಾ ಊರೊಳಗೆ ಓಡಿದರು. ಸ್ವಲ್ಪ ಹೊತ್ತಿನಲ್ಲಿ ಗೌಡ್ರು, ಗೊಂಚಿಗಾರು, ಯಜಮಾನಪ್ಪಾರು, ಮಳಿಯಪ್ಪಯ್ಯ ಮತ್ತು ಗುಂಡಾಚಾರಿ ಪೂಜಾ ಸಾಮಗ್ರಿಯೊಂದಿಗೆ ಬಾವಿ ಬಳಿಗೆ ಆಗಮಿಸಿದರು. ಎಲ್ಲರೂ ಶ್ಯಾದೆಯ ಬಳಿಗೆ ನಡೆದು ಪಾದ ಮುಚ್ಚುವಷ್ಟು ನಿಂತಿದ್ದ ತಿಳಿ ನೀರನ್ನು ನೋಡಿ ಸಂತಸಗೊಂಡರು.

    ಮಳಿಯಪ್ಪಯ್ಯ ಶ್ಯಾದೆಯಲ್ಲಿಳಿದು ಗಂಗಾ ಪೂಜೆ ನೆರವೇರಿಸಿ ತಿಳಿನೀರನ್ನು ಕುಡಿದು “ಅಮೃತ ಇದ್ದಂಗಿದೆ” ಅಂದು ತಂಬಿಗೆ ತುಂಬಿ ನೀರನ್ನು ಸವಿಯಲು ಯಜಮಾನರುಗಳಿಗೆ ನೀಡಿದರು. ಅವರು ತಲೆಎತ್ತಿ, ಉರಿಯುತ್ತಿದ್ದ ಸೂರದೇವನಿಗೆ ನಮಿಸಿ ನೀರು ಕುಡಿದು “ಈ ಸಂವತ್ಸರ ಅರ್ಧಕ್ಕೆ ಬಂತು ಇನ್‌ಮೇಲಾದ್ರೂ ಮಳೆ ಬರಪ್ಪಾ” ಎಂದು ಬೇಡಿಕೊಂಡರು. ಹಾಗೆ ಗಾತಾಕಿ ನೀರು ಕಂಡಿದ್ದ ಬೋವಿ ಯುವಕನ ಕೊರಳಿಗೆ ಹೊಸಾ ಬಟ್ಟೆ ಹಾಕಿ ಸನ್ಮಾನಿಸಿದರು.

    ಅನಂತರ ಯಜಮಾನರು ಮತ್ತು ಹಿರಿಯ ಬೋವಿ ಒಂದು ಗಜದುದ್ದ ಕಡ್ಡಿಯಿಂದ ಅಳೆದು “ಇನ್ನಾ ನಾಲಕ್ಕು ಗಜ ಆಗೆದಿದ್ದೀವಿ. ಇದು ಹಳ್ಳದ ಬಸಿ ಇದ್ರೂ ಇರಬೌದು” ಎಂದು ಅಭಿಪ್ರಾಯ ಪಟ್ಟರು. “ಛ ಛೇ ಅಲ್ಲ ಅಲ್ಲ ಬಿಡ್ರಿ ಇದು ಕಲ್ಲೊಳಗಿನ ಜಲ. ಹಳ್ಳದ ಬಸಿಯಾಗಿದ್ರೆ ಇನ್ನಾ ಮ್ಯಾಲೇನೇ ಕಾಣಬೇಕಿತ್ತು” ಗುಂಡಾಚಾರಿ ಮಾತಾಡಿದ್ದ. “ಇದ್ರೂ ಇರಬೌದು” ಅಲ್ಲಿದ್ದವರು ತಲೆಯಾಡಿಸಿದರು.

    ಹಿಂದಿನ‌ ಸಂಚಿಕೆ: 13. ಮತ್ತೆರಡು ಬಂಡಿ ತಂದರು

    ಹಗಲೂಟದೊತ್ತಿಗೆ ಇಡೀ ಬಾವಿ ತುಂಬಾ ಹಿಟ್ಟುಕಲ್ಲು ಬಂಡೆಯ ಸಳಗು ಕಾಣಿಸಿಕೊಂಡಿತ್ತು. ಸಿಲ್ಲಿಂಗಪ್ಪನ ಮುತ್ತುಗದೆಲೆಯ ಗಾಡಿ ಬಂದು ಇಸ್ತ್ರದ ಎಲೆ ಸುರಿದು ಹೋಗಿತ್ತು. ಇಸ್ತ್ರ ಮಾಡುವವರು ಅದರಲ್ಲಿ ತೊಡಗಿಕೊಂಡಿದ್ದರೆ ಬಾವಿ ತೋಡುವವರು ನಿಷ್ಠೆಯಿಂದ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ತಮ್ಮ ಕಡೆಯೂ ನೀರಿನ ಸೆಲೆ ಕಾಣಸಿಕೊಳ್ಳಲಿ ಎಂಬುದು ಅವರ ಆಶೆಯಾಗಿತ್ತು.

    ಹಗಲೂಟದ ಗಾಡಿ ಬಂದು ಅಡಿಗೆಯ ಕೊಳಗಗಳನ್ನಿಳಿಸಿದರೂ ಯಾರೂ ತಮ್ಮ ಕೆಲಸ ನಿಲ್ಲಿಸಲಿಲ್ಲ. ಬದಲು “ಸ್ವಲ್ಪ ತಡೀರಿ, ನೀರಿನ ಸೆಲೆ ಕಾಣಿಸಿಗಂಡೂ ಕಾಣಿಸಿಗಳ್ಳಲಿ” ಎಂಬ ಧೋರಣೆಯಿಂದ ಬಾವಿಯ ತಳವನ್ನೇ ಕುತೂಹಲಿಗಳಾಗಿ ಗಮನಿಸುತ್ತಿದ್ದರು. “ಬರೆಷ್ಟೋ, ಮುದ್ದೆ ಉಣ್ಣು ಬರಿ. ಬರೆಮ್ಮಾ ನಿಮಿಗೆ ಹೊಟ್ಟೆ ಹಸ್ಟಿಲ್ವೆ” ಎಂದು ಕೂಗಿ ಕರೆದಾಗ ಕೆಲವರು ಹಳ್ಳಕ್ಕೆ ಹೋಗಿ ಮುಖ, ಕೈಕಾಲು ತೊಳೆದು ಬಂದರೆ ಇನ್ನೂ ಕೆಲವರು ಶ್ಯಾದೆಯಲ್ಲಿನ ನೀರಿನಲ್ಲಿ ತೊಳೆದುಕೊಂಡರು. ಅಡಿಗೆ ಮಾಡಿ ತಂದವರಿಗೂ ನೀರು ಕಾಣಿಸಿಕೊಂಡಿರುವ ವಿಷಯ ತಿಳಿದಿತ್ತು. ಅವರು “ಉಂಡ ಮೇಲೆ ಹೋಗಿ ನೋಡೋಣ” ಎಂದು ತಡೆದಿದ್ದರು.

    ಬಿಸಿ ಬಿಸಿ ರಾಗಿ ಮುದ್ದೆಗೆ ಅರ್ಧಾಮ್ರ ನೀಡಿದಾಗ “ಇವೊತ್ತು ನೀರಾಮ ಮಾಡೀದೀರ ಬಾಳರುಸಿಯಾಗೈತೆ” ಎಂದು ಮೆಚ್ಚಿಕೊಂಡು ಉಂಡವರೇ ಎಲ್ಲಾ. “ಮಜ್ಜಿಗೆ ಬಾಳ ಮಂದಗದಾವೆ ಒಂದೀಸು ನೀರು ಬೆರಸಿದ್ರೂ ನಡಿಯುತ್ತೆ. ಇಂಥ ಮಜ್ಜಿಗೆ ಕುಡಿದರೆ ಅಂಗೆ ಕಣ್ಣು ಮುಚ್ಚಿ ಬತ್ತಾವೆ” ಯಾರೋ ಇಬ್ಬರ ಅನಿಸಿಕೆ. ಕಮ್ಮಾರಜ್ಜ ಉಂಡು ನಿದ್ದೆಗೆ ಜಾರಿದ್ದ.

    ಯಜಮಾನರುಗಳು ಅಡಿಗೆಯವರು ಊಟ ಮಾಡಿದ ಬಳಿಕ ಹೆಣ್ಣು ಮಕ್ಕಳು ಬಾವಿಯೊಳಗಿಳಿದು ನೀರು ಒಸರುತ್ತಿದ್ದ ಮೂಲೆಯನ್ನು ಬಗ್ಗಿ ಬಗ್ಗಿ ನೋಡಿದರು. ನೀರು ನಿಧಾನವಾಗಿ ಮೇಲೇರುತ್ತಿತ್ತು. ಬರೀ ಕಲ್ಲು ಬಂಡೆಯ ಸಳಗು ಆಗಿದ್ದರಿಂದ ಕೆಸರಿನ ರಾಡಿ ಇರಲಿಲ್ಲ. ಇವರೆಲ್ಲಾ ಬಾವಿಯ ದಡಹತ್ತಿ ಕೊಳಗಗಳನ್ನು ಸಿದ್ದಿಂಗಪ್ಪನ ಗಾಡಿಗೆ ತುಂಬಿ ಗಾಡಿ ನೊಗಕ್ಕೆ ಎತ್ತುಗಳನ್ನು ಹೂಡುವ ಸಮಯಕ್ಕೆ ಹಿರಿಯ ಬೋವಿ ‘ಲೇಯಂಡಿ ಲೇಯಂಡಿ’ (ಎದ್ದೇನೆ, ಎದ್ದೇಳಿ) ಎಂದು ಕೆಲಸಗಾರರನ್ನು ಏಳಿಸಿದ.

    ಯಜಮಾನರುಗಳು ಬಾವಿಯೊಳಗಿಳಿದು ತಳದ ಕಲ್ಲುಗಳನ್ನು ಕುಟ್ಟಿ ಅವುಗಳ ಗಡಸುತನವನ್ನು ಪರೀಕ್ಷಿಸಿದರು. ಎಂಥಾ ಕಲ್ಲೇ ಆಗಲಿ ಬಾವಿಯ ದಡ ಕುಸಿಯದಿದ್ದರಾಯಿತು ಅವರೆಲ್ಲಾ ಅಂದುಕೊಂಡರು. ಶ್ಯಾದೆಯಲ್ಲಿ ನೀರು ಒಸರುವುದು ನಿಧಾನವಾಗಿ ಜಾಸ್ತಿಯಾಗುತ್ತಿತ್ತು. ಆದರೂ ಕಲ್ಲು ಸೀಳುವುದಕ್ಕೆ ಅಡ್ಡಿಯಾಗಿರಲಿಲ್ಲ. ಒಂದು ಕಡೆಯಿಂದ ಕಲ್ಲು ಚಪ್ಪಡಿಗಳನ್ನು ಸೀಳುತ್ತಾ ಆಳಕ್ಕೆ ಇಳಿದಿದ್ದರು. ಅಳತೆ ಕಡ್ಡಿಯಿಂದ ಅಳೆದರೆ ಒಂದು ಮೂಲೆ ನಾಲ್ಕು ಗಜ ಇದ್ದರೆ ಪಡುವಲ ಮೂಲೆ ಐದುಗಜ ಇಳಿದಿತ್ತು. ಈ ಮೂಲೆಯಲ್ಲಿ ಮೊಳಕಾಲು ಮಟ್ಟ ನೀರು ನಿಂತಿತ್ತು.

    ಕೆಲಸ ಪುನರಾರಂಭವಾಗಿ ಭರದಿಂದ ಕಲ್ಲು ಸೀಳುವುದು ನಡೆದಿದ್ದಾಗ ಆಗ್ನೆಯ ಮೂಲೆಯಲ್ಲಿ ನಾಲ್ಕು ಗಜಕ್ಕಿಂತ ಸ್ವಲ್ಪ ಆಳ ತೋಡಿದಾಗ ಒಮ್ಮೆಲೇ ನೀರಿನ ಸೆಲೆ ಚಿಮ್ಮಿ ಬಂದಿತ್ತು. ಕೂಡಲೇ ಅಲ್ಲಿದ್ದವರು “ನೀರು ನೀರು” ಎಂದು ಕೂಗಿಕೊಂಡರು. ಕೂಡಲೇ ಕೆಲಸಗಾರರೆಲ್ಲಾ ಹತ್ತಿರ ಹೋಗಿ ನೋಡಿದರೆ ನೀರ ಸೆಲೆ ಚಿಮ್ಮುತ್ತಿದ್ದು ಇದು ಖಂಡಿತಾ ಜಲ ಮೂಲವೆಂದು ಮಾತಾಡಿಕೊಂಡರು. ದಡದ ಮೇಲಿದ್ದ ಊರ ಯಜಮಾನರುಗಳಿಗೆ ಸಮಾಧಾನವಾಗಿತ್ತು. ಅವರೂ ಬಗ್ಗಿ ನೋಡಿದರು. ಹೆಣ್ಣು ಮಕ್ಕಳಿಗೆ ಮಣ್ಣು ಹೊರುವುದು ಕಡಿಮೆಯಾಗಿ ಅನುಮತಿ ಪಡೆದು ಕೆಲವರು ತಮ್ಮ ಮನೆ ಕಡೆ ನಡೆದರೆ ಬೋವಿ ಹೆಣ್ಣು ಮಕ್ಕಳು ಕಲ್ಲು ಪುಡಿ ತುಂಬಿದ ಪುಟ್ಟಿಗಳನ್ನು ಹೊತ್ತಾಕುತ್ತಿದ್ದರು.

    ಹಿಂದಿನ‌ ಸಂಚಿಕೆ: 14. ಗೌನಳ್ಳಿ ಬದುಕಿನಲ್ಲಿ ಬಂಡಿಗಳ ಪಾತ್ರ

    ಕಮ್ಮಾರಜ್ಜ ಸಣ್ಣ ನಿದ್ದೆ ಮಾಡಿ ಎದ್ದು ಕೂತವನು “ಪುಟ್ಟಿ ಹೆಣೆಯೋ ಕೆಲ್ಸ ನಾಳಿಕ್ಕೆ ಮುಗಿಯುತ್ತೆ, ಬೇಕಾದ್ರೆ ಐದಾರು ಸಗಣಿ ತಟ್ಟಿ ಹೆಣೀಬೌದು” ಚಿಕ್ಕಪ್ಪನ ತಂಡಕ್ಕೆ ಸೂಚಿಸಿದ. “ಸಣ್ಣಪುಟ್ಟಿ ಸಾಕು, ದಂಡಿಯಾಗೈದಾವೆ. ನಾಳಿಕ್ಕೆ ಸಗಣಿ ತಟೀನೇ ಹೆಣಿಯಾನ” ಚಿಕ್ಕಪ್ಪನೂ ದನಿಗೂಡಿಸಿದ. ಅಷ್ಟೊತ್ತಿಗೆ ಸಿದ್ದಿಂಗಪ್ಪ ಒಂದು ದೊಡ್ಡ ಸೆಮಟಿಗೆ ಮತ್ತು ಎರಡು ಚಾಣಗಳೊಂದಿಗೆ ಆಗಮಿಸಿದ.

    ಅವುಗಳನ್ನು ಬಾವಿ ಬಳಿಗೊಯ್ದು “ಎಲ್ಲಿ ಹಾಕಲಿ” ಬಾವಿಯೊಳಗಿದ್ದವರನ್ನು ಕೇಳಿದ “ಇಲ್ಲ್ಯಾಕು ಇಲ್ಲಾಕು” ಎಂದು ನಾಕೈದು ದನಿಗಳು ಕೇಳಿಬಂದವು.

    “ದೂರ ನಡೀರಿ, ದೂರ ನಡೀರಿ” ಎಂದು ಕೆಲಸ ಮಾಡುತ್ತಿದ್ದವರನ್ನು ಚದುರಿಸಿ ಸೆಮಟಿಗೆ ಚಾಣಗಳನ್ನು ಬಾವಿಯೊಳಗೆ ಎಸೆದ. ಕೂಡಲೇ ತಾ ಮುಂದು ತಾ ಮುಂದು ಎಂದು ಅವುಗಳನ್ನು ಎತ್ತಿಕೊಂಡ ಬೋವಿಗಳು ಕಲ್ಲು ಬಂಡೆಯ ಸಳುಗಿನ ಮೇಲೆ ಚಾಣವನ್ನು ನಿಲ್ಲಿಸಿ ಸೆಮಟಿಗೆಯಿಂದ “ಹಮ್ಮ:” ಎಂಬ ಸದ್ದಿನೊಂದಿಗೆ ಹೊಡೆದರು. ಒಡೆದ ಏಟಿಗೆ ಚಾಣ ಅರ್ಧ ಭಾಗ ಕಲ್ಲೊಳಗೆ ಕುಸಿದಿತ್ತು. ಇನ್ನೊಂದೇಟು ಜಡಿದಾಗ ಬಂಡೆ ಪರಪರ ಎಂದು ಸೀಳಿಕೊಂಡಿತ್ತು. ಹಾರೆಯಿಂದ ಮಾಟಿ ಬಂಡೆಯನ್ನು ಕೆಡವಿ ಸೆಮಟಿಗೆಯಿಂದ ಅದರ ಮೇಲೆ ಹೊಡೆದಾಗ ಬಂಡೆ ಎರಡು ಮೂರು ಸೀಳಾಗಿ ಒಡೆಯಿತು. ಸೆಮಟಿಗೆ ಮತ್ತು ಚಾಣಗಳಿಂದ ಬಂಡೆ ಸೀಳುವುದು ಸುಲಭ ಸಾಧ್ಯವಾಗಿತ್ತು.

    ಕೆಲಸ ನಿಲ್ಲಿಸುವ ಸಮಯ ಬಾವಿ ತಳದಲ್ಲಿ ನೀರು ಪಾದ ಮುಚ್ಚುವ ಮಟ್ಟಕ್ಕೆ ನಿಂತು ಅಗೆಯುವವರೆಲ್ಲಾ “ಚಪಚಪ” ಸದ್ದು ಮಾಡುತ್ತಾ ಓಡಾಡುತ್ತಿದ್ದರು.

    ಕೆಲಸ ನಿಲ್ಲಿಸಿದ ಬಳಿಕ ಗಜದ ಕಡ್ಡಿಯಲ್ಲಿ ಅಳೆದಾಗ ಬಡಗಲ ದಿಕ್ಕಿನಲ್ಲಿ ಆರುಗಜ ಇಳಿದಿತ್ತು. ಪಡುವ ಮತ್ತು ತೆಂಕಲ ದಿಕ್ಕಿನಲ್ಲಿ ಆರು ಗಜಕ್ಕಿಂತ ಜಾಸ್ತಿ ಅಗೆದಿದ್ದರು. ಶ್ಯಾದೆ ಮಾತ್ರ ಏಳು ಗಜಕ್ಕೆ ಕೊಂಚ ಕಮ್ಮಿ ಇತ್ತು. ಇದರಲ್ಲಿ ನೀರು ಮೊಳಕಾಲ ಮಟ್ಟಕ್ಕಿಂತ ಹೆಚ್ಚಿತ್ತು. ನಾಳೆ ಕೆಲಸಕ್ಕೆ ಬರುವಾಗ ಬಿಂದಿಗೆ, ಸೆಮಟಿಗೆ ಮತ್ತು ಚಾಣಗಳನ್ನು ತರಬೇಕು ಎಂದು ಮಾತಾಡಿಕೊಂಡರು.

    ಗೌಡರು ಮತ್ತು ಗೊಂಚಿಕಾರರು ತಮ್ಮ ಅಟ್ಟ ಸೇರಿದ್ದ ಒಂದೊಂದು ಸೆಮಟಿಗೆ ಮತ್ತು ಕೆಲವು ಉದ್ದ ಮತ್ತು ದಪ್ಪನೆಯ ಚಾಣಗಳನ್ನು ಹುಡುಕಿ, ಚಾಣಗಳನ್ನು ಕಮ್ಮಾರ ಕುಲುಮೆಗೊಯ್ದು ಚೂಪು ಮಾಡಿಸಿದರು. ಮಾರನೇ ದಿನ ಎಂದಿನಂತೆ ಗೌಡ್ರು, ಗೊಂಚಿಕಾರರು, ಯಜಮಾನಪ್ಪಾರು ಮತ್ತು ಮಳಿಯಪ್ಪಯ್ಯ ಬೆಳಿಗ್ಗೇನೇ ಊರಬಾವಿಗಿಳಿದು ಮೊಳಕಾಲುದ್ದದ ನೀರಿನಲ್ಲಿ ಓಡಾಡಿದರು. ಇಷ್ಟೊಂದು ನೀರು ಹೆಂಗಪ್ಪಾ ತುಂಬಿ ಎತ್ತೊಯ್ಯುವುದು ಎಂಬ ಸಮಸ್ಯೆ ಅವರಿಗೆ ಕಾಡಿತು.

    ಹಿಂದಿನ ಸಂಚಿಕೆ ಓದಿ: 15.ಹಿರೇ ಬಡಗಿ ಗೌನಹಳ್ಳಿಗೆ ಬಂದರು

    “ಏಳು ಗಜ ಆಳ ತೋಡಿದರೆ ಸಾಕು ಅನ್ನಿಸುತ್ತೆ” ಮಳಿಯಪ್ಪಯ್ಯ ತಮ್ಮ ಅಭಿಪ್ರಾಯ ತಿಳಿಸಿದರು. “ನೋಡಾನ, ಸ್ವಾಮೇರಿ: ನೀರು ದಂಡಿಯಾಗಿ ಬರಂಗೈತೆ” ಗೊಂಚಿಕಾರು ಅವರ ಅಭಿಪ್ರಾಯವನ್ನು ಪುಷ್ಟಿಕರಿಸಿದರು. ಕಲ್ಲೊಳಗಿನ ನೀರಾಗಿದ್ದರಿಂದ ಹೊಂಡು ಕಂಡು ಬಂದಿರಲಿಲ್ಲ. ಇವರೆಲ್ಲಾ ತಮ್ಮ ಮನೆಗಳಿಗೆ ಹಿಂತಿರುಗಿ, ಸಮಟಿಗೆ, ಚಾಣ ಮತ್ತು ಬಿಂದಿಗೆಗಳನ್ನು ಬಾವಿ ಕೆಲಸಕ್ಕೆ ಒಯ್ಯಲು ಊರ ಜನಕ್ಕೆ ಸೂಚಿಸಿದರು. ಆದರೆ ಸೆಮಟಿಗೆಗಳು ಸಿಗಲಿಲ್ಲ. ಹೆಣ್ಣು ಮಕ್ಕಳು ಚಿಕ್ಕುಂಬೊತ್ತಿಗೆ ಊಟ ಮಾಡಿ ಬಾವಿ ಕೆಲಸಕ್ಕೆ ಹೊರಡುತ್ತಿರುವಾಗ ‘ಬಿಂದಿಗೆ ತರಬೇಕಂತೆ’ ಎಂಬ ಸೂಚನೆ ಕೊಡಲಾಗಿತ್ತು.

    ಬೋವಿಗಳು ಕೆಲಸಕ್ಕೆ ಬರುವಾಗ ಮೂರು ಸೆಮಟಿಗೆ, ಚಾಣಗಳು ಮತ್ತು ಬಿಂದಿಗೆ ಸಮೇತ ಬಂದಿದ್ದರು. ಬಾವಿ ಬಳಿ ಬಂದ ಬೋವಿಗಳು “ದಾಂಡ್ರಮಾ ನೀಳೆತ್ತಿ ಪೊಯ್ಯ ರಂಡಿ” (ಬನ್ನಮ್ಮಾ, ನೀರೆತ್ತಿ ಹಾಕುವಂತೆ ಬರಿ) ಎಂದು ಸೂಚಿಸಿ ಸೆಮಟಿಗೆಗಳನ್ನು ಬಾವಿಯೊಳಗೆ ಎಸೆದು ಇಳಿದರು. ಹೆಂಗಸರು ಸೀರೆಯನ್ನು ಕಚ್ಚೆ ಕಟ್ಟಿ ಬಿಂದಿಗೆಗಳಲ್ಲಿ ನೀರು ತುಂಬಿ ಮಣ್ಣಿನ ರಾಸಿಯ ಮೇಲೆ ಸುರಿಯಲಾರಂಭಿಸಿದರು. ಹಿಂದೆಯೇ ಆಗಮಿಸಿದ ಹಿರಿಯ ಬೋವಿ ಕೆಲಸ ಆರಂಭಿಸಿರುವುದನ್ನು ಕಂಡು ಸಮಾಧಾನಪಟ್ಟ.

    ಸ್ವಲ್ಪ ಹೊತ್ತಿನಲ್ಲಿ ಊರ ಜನ ಎರಡು ಸೆಮಟಿಗೆ ಕೆಲವು ಚಾಣ ಮತ್ತು ಬಿಂದಿಗೆಗಳೊಂದಿಗೆ ಆಗಮಿಸಿದರು. ಇವರು ತಂದಿದ್ದ ಎರಡು ಸೆಮಟಿಗೆಗಳನ್ನು ನೋಡಿದ ಹಿರಿಯ ಬೋವಿಗೆ ಸಾಕೆನಿಸಿತ್ತು. “ಒಟ್ಟು ಐದು ಸೆಮಟಿಗೆ ಆದ್ದು, ಸಾಕು. ಐದು ಕಡೆ ಬಂಡೆ ಸೀಳಬೌದು” ಅಂದುಕೊಂಡು ಅಗೆಯುವ ಜಾಗಗಳನ್ನು ಹಂಚಿದ.

    ನಾಲ್ಕು ಕಡೆಗಳಿಂದ ಹೆಣ್ಣು ಮಕ್ಕಳು ನೀರು ಹೊತ್ತೊಯ್ಯುತ್ತಿದ್ದರು. ಬಂಡೆಗಳನ್ನು ಸೀಳಿ, ಅವನ್ನು ಸೆಮಟಿಗೆಯಿಂದ ಒಡೆದು ತುಂಡು ಮಾಡಿ ಗಂಡಾಳುಗಳೇ ಹೊತ್ತೊಯ್ಯುತ್ತಿದ್ದರು. ಕೆಲಸ ಬಿರುಸಾಗಿ ನಡೆಯುತ್ತಿತ್ತು. ಸ್ವಲ್ಪ ತಡವಾಗಿ ಆಗಮಿಸಿದ್ದ ಕಮ್ಮಾರಜ್ಜ ಬಿರುಸಿನಿಂದ ನಡೆಯುತ್ತಿದ್ದ ಕೆಲಸವನ್ನು ನೋಡಿ ಹೆಮ್ಮೆ ಪಟ್ಟುಕೊಂಡ. ಚಿಕ್ಕಪ್ಪ ಒಣಗಿದ್ದ ಈಚಲಪುಟ್ಟಿಗಳನ್ನು ಒಂದೆಡೆ ಪೇರಿಸಿ ಸಗಣಿ ತಟ್ಟಿ ಹೆಣೆಯಲು ಸುರುಮಾಡಿದ. ಕಮ್ಮಾರಜ್ಜನ ಪುಟ್ಟಿ ಹೆಣೆಯುವ ಕೈಚಳಕವನ್ನು ಗಮನಿಸುತ್ತಲೇ ಚಿಕ್ಕಪ್ಪ ಮತ್ತು ಅವನ ತಂಡ ಸಗಣಿ ತಟ್ಟಿ ಹೆಣೆಯುತ್ತಿದ್ದರು.

    ಸಿಲ್ಲಿಂಗಪ್ಪ ತನ್ನ ಗಾಡಿ ತುಂಬ ಮುತ್ತುಗದ ಎಲೆ ತುಂಬಿಕೊಂಡು ಬಂದ. ಹಿಂದೆಯೇ ಗೌಡ್ರು, ಗೊಂಚಿಕಾರು, ಯಜಮಾನಪ್ಪಾರೂ ಆಗಮಿಸಿದರು.

    ಹಿಂದಿನ ಸಂಚಿಕೆ ಓದಿ: 16. ಬಡಗಿ ಕಂಡ ಗೌನಳ್ಳಿ

    ಅವರು ಬಾವಿಯ ಬಳಿ ಬರುತ್ತಲೇ ಬೆಳಗ್ಗೆಯಿಂದ ಹೆಣ್ಣು ಮಕ್ಕಳು ಬಾವಿಯೊಳಗಿನ ನೀರನ್ನು ಹೊತ್ತೊಯ್ದು ಹೊರ ಚೆಲ್ಲುತ್ತಿದ್ದರೂ ನೀರು ಕಡಿಮೆಯಾಗಿರಲಿಲ್ಲ. “ನೀರು ಏಟುದ್ದ ಐದಾವಪ್ಪಾ ಬೋವಿ” ಎಂದು ಗೌಡರು ಕೇಳಿದಾಗ ‘ಈಟುದ್ದ’ ಎಂದು ಗುದ್ದುಮೊಳದುದ್ದದ ಒಂದು ಕಡ್ಡಿಯಲ್ಲಿ ತೋರಿಸಿದ. ‘ನೀರನ್ನು ಹೊತ್ತೊಯ್ದು ಬಾವಿಯನ್ನು ಬರಿದು ಮಾಡಲು ಸಾಧ್ಯವಿಲ್ಲ’ ಎಂದು ಬಗೆದ ಅವರು “ನೀರೊರ ನಿಲ್ಲಪ್ಪಾ” ಎಂದು ಕೂಗಿ ಹೇಳಿದರು. ಬೋವಿಗೂ ಇದು ಮನವರಿಕೆಯಾಗಿತ್ತು. “ಸಾಲ ನಿಲ್ದಂಡ್ರಮ್ಮಾ”(ಸಾಕು ನಿಲ್ಲಿಸ್ರಮ್ಮಾ) ಎಂದು ಗಟ್ಟಿಯಾಗಿ ಹೇಳಿದ. ಕೂಡಲೇ ಹೆಣ್ಣು ಮಕ್ಕಳು ಬಿಂದಿಗೆಗಳನ್ನು ಇಳಿಸಿ ಸೊಂಟ ಮುರಿದುಕೊಂಡರು. “ಎದ್ದಾಗಿಂದ ದಣೇ ಹೊತ್ತೀವಿ” ಒಂದಿಬ್ಬರು ಮಾತಾಡಿಕೊಂಡರು.

    ಬಾವಿಯೊಳಗೆ ಇಳಿದ ಗೌಡ್ರು ಗೊಂಚಿಕಾರು ಮತ್ತು ಯಜಮಾನಪ್ಪರು ಗಜಕಡ್ಡಿಯಿಂದ ಗಟ್ಟಿಕಲ್ಲಿನ ದಡಗಳನ್ನು ಅಳೆದರು. ಶಾದೆಯಲ್ಲಿ ಐದೂವರೆ ಗಜ ಇಳಿದಿತ್ತು. “ಇದೇ ಅಳತೆಗೆ ಬಂಡೆ ಕೆಡವಿರಿ ಸಾಕು” ಎಂದು ತಿಳಿಸಿದಾಗ ಅಲ್ಲಿದ್ದ ಬೋವಿ ಯುವಕರು ಖುಷಿಗೊಂಡರು. “ಮೇಲಿನಿಂದ ಏಳೂವರೆ ಗಜ ಆಗುತ್ತದೆ. ‘ಮಳಿಯಪ್ಪಯ್ಯ ಏಳುಗಜ ಸಾಕು’ ಅಂತ ಹೇಳಿದಾರೆ ಗೌಡ್ರು ಕೆಲಸಗಾರರಿಗೆ ತಿಳಿಸಿದರು. ಬಾವಿಯ ಇನ್ನೊಂದು ಭಾಗದಲ್ಲಿ ಕೆಲಸ ಮಾಡುತ್ತಿದ್ದವರು “ನಮ್ಮೂ ಐದುಗಜ ಇಳಿದೈತೆ” ಎಂದು ಅಳೆದು ತೋರಿಸಿದರು.

    ಅಷ್ಟೊತ್ತಿಗೆ ಸಿದ್ದಿಂಗಪ್ಪನ ಗಾಡಿ ಊಟದ ಕೊಳಗಗಳನ್ನೇರಿಕೊಂಡು ಆಗಮಿಸಿತು. “ಬರಿಬರಿ ಮುದ್ದೆ ಉಣ ಬರ್ರಿ” ಎಂದು ಸಿಲ್ಲಿಂಗಪ್ಪ ಎಲ್ಲರನ್ನೂ ಊಟಕ್ಕೆ ಆಹ್ವಾನಿಸಿದ. ಬಿಂದಿಗೆಗಳಲ್ಲಿ ನೀರು ತುಂಬಿಕೊಂಡು ಬಾವಿದಡ ಹತ್ತಿ ಎಲ್ಲರೂ ಮುಖ ಕೈಕಾಲು ತೊಳೆದುಕೊಂಡು ಊಟಕ್ಕೆ ಕುಳಿತರು. ಎಲ್ಲರಿಗೂ ಇಸ್ತ್ರ ನೀಡಿ ನೀರು ಚಿಮುಕಿಸಿ ಬಿಸಿ ಬಿಸಿ ರಾಗಿ ಮುದ್ದೆ ಕುಸುಮೆ ಹಿಂಡಿ ನೀಡಲಾಯಿತು. “ಬಲುಬಾಗ ಸೇಸ್ತಾರು ಮನಮೈತೆ ರವಂತ ಖಾರ ವಿಸ್ತಾಮು”( ಬಾಳ ಚನ್ನಾಗಿ ಮಾಡ್ತೀರಾ, ನಾವಾದ್ರೆ ಸ್ವಲ್ಪ ಖಾರ ಹಾಕ್ತಿವಿ) ಎಂದು ಬೋವಿ ಹೆಣ್ಣು ಮಕ್ಕಳು ಮಾತಾಡಿಕೊಂಡರು. “ಅಕ್ಕಾ ಏಸು ಕುಸ್ಮ ಉರು ರುಬ್ಬಿದಿರಕ್ಕಾ” ಎಂದು ಒಬ್ಬಾಕೆ ಕೇಳಿದ್ದಳು.

    ಆನಂತರ ಊಟಕ್ಕೆ ಕುಳಿತ ಗೌಡ್ರು, ಗೊಂಚಿಕಾರು ಮತ್ತು ಯಜಮಾನಪ್ಪಾರು ಐದು ಮಟ್ಟ ಅಗೆದಿದ್ರೆ ಒಂದು ಮಟ್ಟ ಆಗುತ್ತಿತ್ತು “ಸ್ವಾಮೇರು ಏಳು ಗಜ ಸಾಕು ಅಂದಿದಾರೆ” ಗೌಡ್ರು ತಮ್ಮ ಅನಿಸಿಕೆಯನ್ನು ಹೊರ ಹಾಕಿದರು. “ಐದು ಮಟ್ಟ ಅಂದ್ರೆ ಒಂದು ಮಟ್ಟ ಅಂಬೋದೇನೋ ಸರಿ. ಈಗ ಏಳುಗಜಕ್ಕೆ ನೀರು ಕೆಲ್ಸ ಮಾಡಾಕೆ ಬಿಡೋದಿಲ್ಲ. ನನಿಗೇನೋ ಸದ್ಯಕ್ಕೆ ಸಾಕು ಅತ್ತೆ ಕಾಣುತ್ತೆ.

    ಮುಂದೆ ಬರಬಾರದ ಬರ ಬಂದು ಬಾವ್ಯಾಗೆ ನೀರು ಬತ್ತಿದಾಗ ಇನ್ನಾ ಒಂದೀಟು ತೋಡಾನ” ಗೊಂಚಿಕಾರರು ತಮ್ಮ ಅನಿಸಿಕೆಯನ್ನು ಹೇಳಿದರು. ಇವರಿಬ್ಬರ ಅನಿಸಿಕೆಗಳನ್ನು ಸಮರ್ಥಿಸುವಂತೆ “ಈಗ ಉಂಡ ಮ್ಯಾಲೆ ಬಾವಿ ತೋಡಾಕೆ ಇಳಿತೀವಲ್ಲ ಅವಾಗ ನೋಡಾನ ನೀರು ಏಟು ಮ್ಯಾಲಕ್ಕೆ ಬಂದಿರುತ್ತೇ ಅಮ್ಮ. ಈಸೊಂದು ಜನ ಹೆಣ್ಮಕ್ಕು ಬೆಳಿಗ್ಗೆಯಿಂದ ನೀರೊತ್ತೊಯ್ದರೂ ಒಂದೀಟನಾ ನೀರು ಕಮ್ಮಿಯಾಗಿಲ್ಲ ಅಂದ್ ಮ್ಯಾಲೆ ಈಟೆ ಸಾಕು ಬಿಡ್ರಪ್ಪ” ಅಂದರು.

    ಹಿಂದಿನ ಸಂಚಿಕೆ ಓದಿ: 17. ಕೊಳ್ಳಿ ಇಕ್ಕಿದರು

    “ಹೆಣ್ ಮಕ್ಕು ಮನೀಗೋಗ್ರಮ್ಮಾ ಕೆಲಸ ಇಲ್ಲೋರು ಉಳಕಳಿ” ಎಂದು ಗೌಡರು ಹೇಳಿದ ಕೂಡಲೇ ಕೆಲವು ಹೆಣ್ಣು ಮಕ್ಕಳು ತಮ್ಮ ಬಿಂದಿಗೆಗಳಲ್ಲಿ ಬಾವಿ ನೀರು ತುಂಬಿಕೊಂಡು ಮನೆಗಳತ್ತ ನಡೆದರು. ಸ್ವಲ್ಪ ಸಮಯದ ನಂತರ ಹಿರಿಯ ಬೋವಿ “ಲೇಯಂಡ್ರಪ್ಪಾ ಇಪದ್ದು ಮುಗುಸ್ತಾಮು”(ಎದ್ದೇಳ್ತಪ್ಪಾ, ಇವತ್ತು ಮಗಿಸಾನ) ಆಕಳಿಸುತ್ತಿದ್ದವರನ್ನು ಎಚ್ಚರಿಸಿದ. ತಡಮಾಡದೆ ಎದ್ದ ಗಂಡಾಳುಗಳು ತಮ್ಮ ತಮ್ಮ ಕೆಲಸದ ಜಾಗಗಳು ಇಳಿದರು. ಕೆಲಸ ನಿಲ್ಲಿಸಿ ಊಟ ಮಾಡಿ ಮತ್ತೆ ನೀರಿಗಿಳಿಯುವ ಹೊತ್ತಿಗೆ ನೀರು ಗೇಣುದ್ದ ಮೇಲೆ ಬಂದಿತ್ತು. ನೀರೊಳಗಿನ ಬಂಡೆ ಸಳಗನ್ನು ಚಾಣ ಇಟ್ಟು ಸೆಮಟಿಗೆಯಿಂದ ಹೊಡೆದಾಗ ನೀರು ಚಿಮ್ಮಿ ಮುಖಕ್ಕೆ ಎರಚುತ್ತಿತ್ತು. ಆದರೂ ಬಿಡದೆ ಕಲ್ಲು ಸೀಳುವ ಕೆಲಸವನ್ನು ಮುಂದುವರಿಸಿದರು. ಇದರಿಂದ ಕೆಲಸ ಸ್ವಲ್ಪ ನಿಧಾನವಾಯಿತು.

    ಕಮ್ಮಾರಜ್ಜ ಪುಟ್ಟಿ ಹೆಣೆಯುವ ಕೆಲಸ ಮುಗಿಸಿ ತನ್ನ ಮನೆಕಡೆಗೆ ಹೊರಟವನನ್ನು ತಡೆದು “ಸಂಜೆ ಮನೆಗೆ ಬಂದು ರಾಗಿನೋ, ಸಜ್ಜೆನೋ ಇಸಗಂಡೋಗು” ಚಿಕ್ಕಪ್ಪ ಹೇಳಿಕಳಿಸಿದ. ಯಜಮಾನರುಗಳು ಬಾವಿಯೊಳಗಿಳಿದು ಮಣ್ಣಿನ ಬಿಡುವಿನ ಮೇಲೆ ಕುಳಿತು ನಿಧಾನಗತಿಯಲ್ಲಿ ನಡೆದಿದ್ದ ಕೆಲಸವನ್ನು ನೋಡಿದರು. ಇಬ್ಬರು ಬೋವಿಯಾಳುಗಳನ್ನು ಕರೆದು ಮಣ್ಣಿನ ಮೇಲೆ ಹಾಕಿರುವ ಬಂಡೆಗಳನ್ನು ತಂದು ಮೆಟ್ಟಿಲು ಜೋಡಿಸಲು ಹೇಳಿದರು. ಕೂಡಲೇ ಹಿರಿಯಬೋವಿ ಊರ ಕಡೆಯಿಂದ ಬಾವಿಗಿಳಿಯಲು ಮತ್ತು ತೆಂಕಲಕಡೆಯಿಂದ ಇನ್ನೊಂದು ಮೆಟ್ಟಿಲು ಮಾಡಲು ಜಾಗ ತೋರಿಸಿದೆ. ಮರುದ್ದದ ಬಂಡೆಗಳನ್ನು ಹೊತ್ತು ತಂದ ಅವರು ಗುದ್ದಲಿಯಿಂದ ಅಗೆದು ಬಂಡೆಗಳನ್ನು ಜೋಡಿಸಲುದ್ಯುಕ್ತರಾದರು.

    ಹಿರಿಯಬೋವಿ ಗಜಕಡ್ಡಿ ಹಿಡಿದು ಬಾವಿಯ ಆಳ ಮತ್ತು ನಿಂತ ನೀರಿನ ಮಟ್ಟವನ್ನು ಅಳೆದು ತೋರಿಸಿದ ನೀರು ಗಜದೆತ್ತರ ಶೇಖರವಾಗಿದ್ದರೆ ಬಾವಿಯ ನಾಲ್ಕೂಕಡೆ ಏಳರಿಂದ ಏಳೂವರೆ ಗಜ ಇಳಿದಿತ್ತು. ಇನ್ನು ತೋಡುವುದು ಸಾಧ್ಯವಿಲ್ಲ ಎಂದು ಕೆಲಸಗಾರರು ಚಾಣ ಹಾರೆ ಸೆಮಟಿಗೆಗಳನ್ನು ಹೊತ್ತು ಗಡ್ಡೆಗೆ ಬಂದರು. ಕೆಲವರು ಮೆಟ್ಟಿಲು ಜೋಡಿಸುತ್ತಿದ್ದವರಿಗೆ ನೆರವಾಗಲು ಅತ್ತ ನಡೆದರು.

    “ದಾಂಡ್ರೆ ದಾಂಡ್ರ ಮೆಟ್ಟು ವಿಸ್ತಾಮು(ಬರಿ ಬರಿ ಮೆಟ್ಟು ಹಾಕಾನ) ಹಿರಿಯಬೋವಿ ದಡಹತ್ತಿದವರನ್ನು ಕರೆದ. ಕೂಡಲೇ ಎಲ್ಲರೂ ತುಡ್ರಿಕೆಂಡು ಸಂಜೆಯ ಹೊತ್ತಿಗೆ ಎರಡೂ ಕಡೆ ಮುವ್ವತ್ತು ಮುವ್ವತ್ತು ಮೆಟ್ಟಿಲುಗಳನ್ನು ಭದ್ರವಾಗಿ ಜೋಡಿಸಿ ಮೇಲಕ್ಕೆ ಹತ್ತಿ ಬಂದರು. ಅದೇ ಸಮಯಕ್ಕೆ ಮಳಿಯಪ್ಪಯ್ಯ ಮತ್ತು ಗುಂಡಾಚಾರಿ ಜತೆಗೂಡಿ ಅಲ್ಲಿಗೆ ಆಗಮಿಸಿದರು. ಅಲ್ಲೇ ದಡದ ಮೇಲೆ ಕುಳಿತಿದ್ದ ಊರ ಯಜಮಾನರುಗಳನ್ನುದ್ದೇಶಿಸಿ “ನೀವು ತ್ರಿಮೂರ್ತಿಗಳು ಇರೋದ್ರಿಂದಾನೇ ಊರ ಜನ ದನ, ಕರ ಎಲ್ಲಾ ಸುಖವಾಗೈದಾವೆ.

    ಎಂಟೇ ದಿನಕ್ಕೆ ಸಮುದ್ರದಂಥಾ ಬಾವಿ ತೋಡ್ತಿದಿರಿ” ಎಂದು ಗೌಡ್ರು ಗೊಂಚಿಕಾರು ಮತ್ತು ಯಜಮಾನಪ್ಪರನ್ನು ಮೆಚ್ಚಿ ಮಾತಾಡಿದರು. “ಕುಡಿಯಾಕೇ ನೀರಿಲ್ಲ ಅಂದ್ರೆ ನಮ್ ಮನೆ ಮಂದಿ, ದನಾ ಕರ ಎತ್ತು ಎಮ್ಮೆ ಹೊಡಕಂಡು ಯಾವ ದೇಶಾಂತರ ಹೋಗೋನಪ್ಪಾ” ಗೌಡರು ನಿಧಾನವಾಗಿ ಮಾಡಾಡಿದರು.

    “ಮುಂಗಾರು ಮಳೆಕತೆ ಆಯ್ತು ಮಗೆ ಮಳೆ, ಒಕ್ಕಲು ಮಗಂಗೆ ಬಾಸೆ ಕೊಟ್ಟಿರೋ ಉತ್ರೆ ಮಳೆ ಏನಾದ್ರೂ ಬರುತ್ತೋ ಎಂಗಪ್ಪಾ ಗುರುವೆ” ಗೊಂಚಿಕಾರು ಹತಾಶರಾಗಿ ಮಳಿಯಪ್ಪಯ್ಯ”ರನ್ನು ಕೇಳಿದರು. “ಮಗೆ ಮಳೆ ವಿಷ್ಯಾ ಹೇಳಾಕ್ ಬರಲ್ಲ. ಇನ್ನಾ ಉತ್ತರೆ ಬಂದ್ರೂ ಬರಬೌದು” ಕೈತಿರುವಿ ಮಳಿಯಪ್ಪಯ್ಯ ತಿಳಿಸಿದರು. ಎಲ್ಲರೂ ಮೆಟ್ಟಿಲುಗಳನ್ನಿಳಿದು ಬಾವಿಯ ತಿಳಿನೀರು ಕುಡಿದರು. ಆವಾಗ ಹಿರಿಯಬೋವಿ “ಸ್ವಾಮಿ ನಾಳಿಕ್ಕೆ ಕೆಲಸಕ್ಕೆ ಬರಬೇಕಾ ಹೆಂಗೆ?” ಹಿರಿಯರನ್ನು ವಿಚಾರಿಸಿದ. “ಬರೇ ಕೈಯಾಗೆ ಬರಿ, ಬಾವಿ ಪೂಜೆ ಕರುವುಗಲ್ ಪೂಜೆ ಮಾಡಾನ” ಯಜಮಾನಪ್ಪ ತಿಳಿಸಿದರು. ಎಲ್ಲರೂ ಸಂತೃಪ್ತ ಭಾವನೆಯಿಂದ ಮನೆಗೆ ಮರಳಿದರು.

    ಹಿಂದಿನ ಸಂಚಿಕೆ ಓದಿ: 18. ಜಂಗಮಯ್ಯರಿಗೆ ಪುತ್ರೋತ್ಸವ

    ಮಾರನೇ ದಿನ ಕೋಳಿ ಕೂಗುತ್ತಲೂ ಗೌನಳ್ಳಿವಾಸಿಗಳಿಗೆ ಹೊಸದಿನವೇ ಆರಂಭವಾಗಿತ್ತು. ಮಾರಿಗುಡಿ ಹಳ್ಳಕ್ಕೆ ನೀರಿಗೆ ಹೋಗುವವರು ಊರ ಬಾವಿ ಕಡೆಗೆ ನಡೆದಿದ್ದರು. ಊರ ದಿಕ್ಕಿಗಿದ್ದ ಬಾವಿ ಮೂಲೆಯ ಮೆಟ್ಟಿಲುಗಳನ್ನಿಳಿದು ನೀರು ತುಂಬಿಕೊಳ್ಳುವವರೇ ಜಾಸ್ತಿಯಾಗಿದ್ದರು. ತಮ್ಮ ಮನೆಗಳಿಗೆ ಸಮಾಪವಾಗಿದ್ದ ತೆಂಕಲ ಮೂಲೆಯ ಮೆಟ್ಟಿಲುಗಳನ್ನಿಳಿದು ನೀರು ತುಂಬಿಕೊಳ್ಳುವವರೂ ಇದ್ದರು.

    ಚಿಕ್ಕುಂಬೊತ್ತಿಗೆಲ್ಲಾ ಊರಿನ ಎಲ್ಲಾ ಹೆಣ್ಣು ಮಕ್ಕಳು ಮಿಂದು ಮಡಿ ಸೀರೆ ಕುಪ್ಪಸ ತೊಟ್ಟು ತಾಮ್ರದ ಕೊಡಗಳನ್ನು ಬೆಳಗಿ ಬಾವಿಯ ಗಂಗಮ್ಮನ ಪೂಜೆಗೆ ಸಿದ್ಧರಾದರು. ಬೋವಿ ಹೆಣ್ಣು ಮಕ್ಕಳು. ಮಡಿವಾಳರ ಹೆಣ್ಣು ಮಕ್ಕಳು ಕಮ್ಮಾರರ ಹೆಣ್ಣು ಮಕ್ಕಳು, ಜಂಗಮಯ್ಯರ ಹೆಣ್ಣುಮಕ್ಕಳು. ಅಕ್ಕಸಾಲಿ ತಿಪ್ಪಮ್ಮ ಮತ್ತು ಮಾದಿಗರ ಹೆಣ್ಣು ಮಕ್ಕಳು ಎಲ್ಲರೂ ಮಿಂದು ಮಡಿಯುಟ್ಟು ಪೂಜೆಗೆ ಹೊರಟರು. ಇಡೀ ಊರಿನಲ್ಲಿ ಸಂಭ್ರಮದ ವಾತಾವರಣ ಇತ್ತು.

    ಮುಂಚೆಯೇ ಆಗಮಿಸಿದ ಬೋವಿ ಹೆಣ್ಣು ಮಕ್ಕಳು ಹಳ್ಳದ ದಂಡೆಯಲ್ಲಿ ಕನಗಿಲ ಗಿಡಗಳಿಂದ ಹೂಬಿಡಿಸಿ ತಂದರು. ಹಿಂಡುಹಿಂಡಾಗಿ ಆಗಮಿಸಿ ಊರ ಮಹಿಳೆಯರೆಲ್ಲಾ ಜಂಗಮಯ್ಯರ ಹೆಣ್ಣು ಮಕ್ಕಳ ನೇತೃತ್ವದಲ್ಲಿ ತುಂಬಿದ ಕೊಡಗಳನ್ನು ಸಾಲಾಗಿರಿಸಿ ಅರಿಸಿನದ ನೂಲನ್ನು (ಅಂಗೂಲು) ಕೊಡದ ಕಂಠಕ್ಕೆ ಹೂವಿನೊಂದಿಗೆ ಕಟ್ಟಿ ವಿಭೂತಿ ಕುಂಕುಮ ಅಕ್ಷತೆ ಹೂ ಪತ್ರೆಗಳಿಂದ ಅಲಂಕರಿಸಿ ಮಂಗಳಾರತಿ ಎತ್ತಿದರು. ನೆನೆಯಕ್ಕಿ ನೆನಗಡಲೆ ಹಣ್ಣುಕಾಯಿ ನೈವೇದ್ಯ ಮಾಡಿ ಐದು ಜನ ಕೋರು (ಅವಿವಾಹಿತೆ) ಹುಡುಗಿಯರು ಮತ್ತು ನಾಲ್ಕು ಕೋರು ಹುಡುಗರ ತಲೆ ಮೇಲೆ ಕೊಡಗಳನ್ನು ಹೊರಿಸಿ, ಅವರ ಹಿಂದೆ ಎಲ್ಲರೂ ಕರುವುಗಲ್ಲ ಬಳಿಗೆ ನಡೆದು, ಒಂಬತ್ತು ಕೊಡದ ನೀರನ್ನು ಕರುವುಗಲ್ಲ ಮೇಲೆ ಸುರಿಸಿ, ಕರುವುಗಲ್ಲನ್ನು ಪೂಜಿಸಿ ಆರತಿ ಬೆಳಗಿ ಅನಂತರ ಎಲ್ಲರಿಗೂ ಪಲಾರ ಹಂಚಿದರು.

    ಗೌಡ್ರು ಗೊಂಚಿಕಾರರು, ಯಜಮಾನಪ್ಪಾರು, ಜಂಗಮಯ್ಯರು, ಗುಂಡಾಚಾರಿ ಮತ್ತು ಬೋವಿಜನ ಮತ್ತಿತರರು ಮೂಕಪ್ರೇಕ್ಷಕರಾಗಿ ಎಲ್ಲಾ ಆಚರಣೆಗಳನ್ನು ಗಮನಿಸಿದ್ದರು.

    ಅನಂತರ ಗೌಡ್ರು “ಕೇಳಪ್ಪಾ ಇಲ್ಲಿಗೆ ನೀರಿನ ಗಂಡಾಂತರ ಬಗೆಹರೀತು. ಇನ್ನ ಮೇಲೆ ಧೈಯವಾಗಿ ಇರಿ ಬಾವಿ ಒಳಕೆ ದನಕರು ಇಳೀದಂತೆ ಅಡ್ಡ ಬೇಲಿ ಹಾಕಬೇಕು. ಇನ್ನ ಬಾವಿ ತೋಡಿದೋರಿಗೆ ಕೂಲಿ ಅಲ್ಲದಿದ್ರು ಯಾರಿಗೇನ ನಾ ತೊಂದ್ರೆ ಇದ್ರೆ ಗೌಡ್ರ ಮನೀಗೆ ಬಂದು ಕಾಳು ಇಸಗಂಡೋಗ್ರಿ” ಎಂದು ತಿಳಿಸಿದರು. ಹಿರಿಯ ಬೋವಿ “ಸ್ವಾಮಿ ನಮ್ಮೂರ್ ಕೆಲ್ಸ ಮಾಡಿದೀವಿ ಇದಕ್ಕೆಲ್ಲಾ ಕೂಲಿ ಬ್ಯಾಡಾ ಸ್ವಾಮಿ” ವಿನಮ್ರವಾಗಿ ತಿಳಿಸಿದ.

    “ಬರೆಪ್ಪಾ ಊಟ ಮಾಡಾನ ಬರಿ. ಇನ್ನ ನಿಮ್ ನಿಮ್ ಕೆಲ್ಸ ನೋಡ್ಕಳಿ” ಎಂದು ಗೌಡರು ತಿಳಿಸಿದಾಗ ಜನರೆಲ್ಲಾ ಅಲ್ಲಿಂದ ಚದುರಿದರು.

    1 Comment

    1 Comment

    1. ಉಜ್ಜಿನಪ್ಪ ಅವರಿಗೆ ಧನ್ಯವಾದಗಳು.
      ಹಬ್ಬಿದ ಮಲೆ ಮಧ್ಯದೊಳಗೆ ಗೆ ಹೃತ್ಪೂರ್ವಕ ಧನ್ಯವಾದಗಳು
      ಆತ್ಮೀಯ ಉಜ್ಜಿನಪ್ಪನವರೇ,
      ನಿಮ್ಮ ಅಸಾಧಾರಣ ಕಥಾ ಸರಣಿ ಹಬ್ಬಿದ ಮಲೆ ಮಧ್ಯದೊಳಗೆಗಾಗಿ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಸ್ವಲ್ಪ ಸಮಯ ಬಯಸುತ್ತೇನೆ. ಪ್ರತಿ ಸಂಚಿಕೆಯಲ್ಲಿ ನಿಮ್ಮ ಕಥಾ ನಿರೂಪಣೆಯು ನಿಜವಾಗಿಯೂ ಆಕರ್ಷಕವಾಗಿದೆ, ಭಾವನೆಗಳು, ಆಳ ಮತ್ತು ತೇಜಸ್ಸನ್ನು ಹೆಣೆಯುತ್ತಿದೆ. ಈ ಪ್ರಯಾಣವನ್ನು ಅನುಸರಿಸಲು ಇದು ಸಂಪೂರ್ಣ ಸಂತೋಷವಾಗಿದೆ ಮತ್ತು ನಿಮ್ಮ ಕೆಲಸವು ಶಾಶ್ವತವಾದ ಪರಿಣಾಮವನ್ನು ಬೀರಿದೆ.
      ಇಂತಹ ಸುಂದರ ಮತ್ತು ಅರ್ಥಪೂರ್ಣ ಕಥೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಇನ್ನಷ್ಟು ಅದ್ಭುತವಾದ ರಚನೆಗಳಿಗಾಗಿ ಎದುರು ನೋಡುತ್ತಿದ್ದೇನೆ!
      ಶುಭಾಶಯಗಳು,
      ದಯಾನಂದ ಪಟೇಲ್‌ ತಿಪ್ಪಯ್ಯ,
      ಗುಯಿಲಾಳು

    Leave a Reply

    Your email address will not be published. Required fields are marked *

    More in ಸಂಡೆ ಸ್ಪಷಲ್

    To Top