ಚಿತ್ರದುರ್ಗ ನ್ಯೂಸ್.ಕಾಂ: ಕಳೆದೊಂದು ದಶಕದಿಂದ ಜಿಲ್ಲೆಯ ಜನ ಹಂಬಲಿಸುತ್ತಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಸದ್ದಿಲ್ಲದೆ ಕಾರ್ಯಾರಂಭ ಮಾಡಲು ಅಣಿಯಾಗಿದೆ.
ಇಂದಿನಿಂದ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗುತ್ತಿರುವುದು ಇಡೀ ಜಿಲ್ಲೆ ಸಂತಸಪಡುವ ಸುದ್ದಿಯಾಗಿದೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ದಶಕಗಳ ಕನಸಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಒಂದೊಂದು ಸರ್ಕಾರ ಬಂದಾಗಲೂ ಒಂದೊಂದು ಸ್ವರೂಪ ಪಡೆದುಕೊಳ್ಳುತ್ತಿತ್ತು.
ಈ ವರ್ಷ ಮೆಡಿಕಲ್ ಕಾಲೇಜು ಆರಂಭವಾಗುವುದೋ ಇಲ್ಲವೋ ಎನ್ನುವ ಹಲವು ಅನುಮಾನಗಳ ನಡುವೆಯೇ ಅಕ್ಟೋಬರ್ 5 ಗುರುವಾರದಿಂದ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಪ್ರಾರಂಭಿಸಲಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಮೆಡಿಕಲ್ ಕಾಲೇಜಿನ ಎಲ್ಲ ಸೀಟುಗಳು ಭರ್ತಿ
ಚಿತ್ರದುರ್ಗ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ(ಸಿಎಂಸಿಆರ್‍ಐ) ಹೆಸರಿನಲ್ಲಿ ನೊಂದಣಿಯಾಗಿರುವ ಮೆಡಿಕಲ್ ಕಾಲೇಜಿಗೆ 150 ಸೀಟುಗಳ ಪ್ರವೇಶಕ್ಕೆ ಎಂಸಿಐ ಅನುಮತಿ ನೀಡಿತ್ತು. ಅಚ್ಚರಿ ಎಂಬಂತೆ ಮೊದಲ ವರ್ಷವೇ ಎಲ್ಲ 150 ಸೀಟುಗಳು ಭರ್ತಿಯಾಗಿವೆ.
ಇಂದು (ಅ.5 ಗುರುವಾರ) ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮೊದಲ ಬ್ಯಾಚಿನ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮೊದಲ ವರ್ಷದ ಎಲ್ಲ ವಿಷಯಗಳ ಪರಿಚಯ(ಓರಿಯಂಟೇಶನ್) ಕಾರ್ಯಕ್ರಮ ನಡೆಯುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸುತ್ತಿದ್ದಾರೆ.

ಮೊದಲ ವರ್ಷದ ಎಂಬಿಬಿಎಸ್‍ಗೆ ಅನಾಟಮಿ, ಫಿಜಿಯಾಲಜಿ, ಬಯೋಕೆಮಿಸ್ಟ್ರಿ ಜೊತೆಗೆ ಕಮ್ಯುನಿಟಿ ಮೆಡಿಸಿನ್ ವಿಷಯಗಳಿದ್ದು, ಕೊಪ್ಪಳದ ಕಿಮ್ಸ್, ಹುಬ್ಬಳ್ಳಿ ಕಿಮ್ಸ್, ಬಳ್ಳಾರಿ ವಿಮ್ಸ್ ಹಾಗೂ ಗದಗ ಸರ್ಕಾರಿ ಮೆಡಿಕಲ್ ಕಾಲೇಜುಗಳಿಂದ 11 ಜನ ಪ್ರೊಫೆಸರ್‍ಗಳು ನಿಯೋಜನೆ ಮೇರೆಗೆ ಚಿತ್ರದುರ್ಗಕ್ಕೆ ಬಂದು ಬೋಧನೆ ಮಾಡಲಿದ್ದಾರೆ.
ಮೊದಲ ದಿನ ವಿಷಯಗಳ ಪರಿಚಯದ ನಂತರ ಆರಂಭದ 10-12 ದಿನಗಳ ಕಾಲ ಆನ್‍ಲೈನ್ ಮೂಲಕ ತರಗತಿಗಳು ನಡೆಯಲಿವೆ. ಆನಂತರ ಜಿ.ಆರ್.ಹಳ್ಳಿ ಜ್ಞಾನಗಂಗೋತ್ರಿ ಕ್ಯಾಂಪಸ್‍ನಲ್ಲಿ ತರಗತಿಗಳು ಆರಂಭವಾಗಲಿವೆ.
ದಾಖಲಾಗಿರುವ 150 ವಿದ್ಯಾರ್ಥಿಗಳ ಪೈಕಿ 147 ವಿದ್ಯಾರ್ಥಿಗಳು ಹಾಸ್ಟೆಲ್‍ಗೆ ಅರ್ಜಿ ಹಾಕಿದ್ದಾರೆ. 81 ವಿದ್ಯಾರ್ಥಿಗಳಿಗೆ ಜಿಲ್ಲಾ ತರಬೇತಿ ಕೇಂದ್ರ(ಡಿಟಿಐ)ನಲ್ಲಿ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ. 66 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಕಟ್ಟಡ ಅಂತಿಮವಾಗಬೇಕಿದೆ.
ನವೆಂಬರ್ ತಿಂಗಳಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ವೈಟ್‍ಕೋಟ್ ಸೆರ್ಮನಿ ನಡೆಯಲಿದೆ.
ಇನ್ನೂ ಬೋಧಕರ ನೇಮಕಾತಿ ವಿಷಯವಾಗಿ ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ 79 ಬೋಧಕರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ. ಇದರೊಟ್ಟಿಗೆ 3 ಡಾಟಾ ಎಂಟ್ರಿ ಆಪರೇಟರ್ ಹಾಗೂ 12 ಡಿ ಗ್ರೂಪ್ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಡಿಕೊಳ್ಳಲು ಈಗಾಗಲೇ ಆದೇಶ ಬಂದಿದೆ.
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗುವಮೆಡಿಕಲ್ ಕಾಲೇಜು ಕಟ್ಟಡಕ್ಕೆ 500 ಕೋಟಿ ಬಜೆಟ್:
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗಲಿರುವ ಸಿಎಂಸಿಆರ್‍ಐ ಕಟ್ಟದಕ್ಕೆ 500 ಕೋಟಿ ಬಜೆಟ್ ಮಾಡಿದ್ದು, ಇದರಲ್ಲಿ 379 ಕೋಟಿ ರೂ. ಕಟ್ಟಡಕ್ಕೆ, ಉಳಿದ ಹಣ ಲ್ಯಾಬ್, ಪೀಠೋಪಕರಣಗಳಿಗೆ ಬಳಕೆಯಾಗಲಿದೆ.
ಮೊದಲ ಹಂತದಲ್ಲಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ 132 ಕೋಟಿ ರೂ. ಮಂಜೂರು ಮಾಡಲು ಆರ್ಥಿಕ ಇಲಾಖೆಗೆ ಕಡತ ಮಂಡಿಸಲಾಗಿದೆ.
ಜಿಲ್ಲಾ ಖನಿಜ ಪ್ರತಿಷ್ಠಾನ(ಡಿಎಂಎಫ್)ದಿಂದ 25 ಕೋಟಿ ರೂ.ಗಳನ್ನು ನೀಡಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕಾಲೇಜಿನ ಆರಂಭಿಕ ಚಟುವಟಿಕೆಗಳಿಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಈಗಾಗಲೇ 1.48 ಕೋಟಿ ರೂ. ಅನುದಾನ ಬಂದಿದೆ.
ಕಾಲೇಜು ಆರಂಭಕ್ಕೆ ಎಲ್ಲ ಸಿದ್ಧತೆಗಳು ನಡೆಯುತ್ತಿದ್ದು, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ನಡೆಯಲಿದೆ. ಆರಂಭದಲ 10-12 ದಿನ ಆನ್‍ಲೈನ್ ತರಗತಿಗಳನ್ನು ನಡೆಸಿ, ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಡ ಅಂತಿಮವಾದ ನಂತರ ಭೌತಿಕ ತರಗತಿಗಳು ಆರಂಭವಾಗಲಿವೆ.
| ಡಾ.ಯುವರಾಜ್, ಸಿಎಂಸಿಆರ್‍ಐ ವಿಶೇಷಾಧಿಕಾರಿ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
