ಮುಖ್ಯ ಸುದ್ದಿ
ಕರ್ತವ್ಯ ಲೋಪ | ನಾಲ್ವರು ಪಿಡಿಓಗಳು ಅಮಾನತು

CHITRADURGA NEWS | 04 MARCH 2024
ಚಿತ್ರದುರ್ಗ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಹಿರಿಯೂರು ತಾಲೂಕು ಒಂದರಲ್ಲೇ ನಾಲ್ವಲ್ವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ)ಗಳನ್ನು ಅಮಾನತು ಮಾಡಲಾಗಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ಪಿಡಿಓಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಭದ್ರಾ ಮೇಲ್ದಂಡೆ | ಯೋಜನೆ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಎಂಟ್ರಿ
ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮ ಪಂಚಾಯಿತಿ ಪಿಡಿಓ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುತ್ತಿಲ್ಲ. ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುವುದಿಲ್ಲ. ಜನಪ್ರತಿನಿಧಿಗಳೊಂದಿಗೆ ಸೌಜನ್ಯದಿಂದ ವರ್ತಿಸುವುದಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯರು ಸಾಮೂಹಿಕವಾಗಿ ರಾಜಿನಾಮೆ ಸಲ್ಲಿಸಲು ಮುಂದಾಗಿದ್ದರು.
ಈ ಹಿನ್ನೆಲೆಯಲ್ಲಿ ಇಲ್ಲಿನ ಪಿಡಿಓ ಚಂದ್ರಕಲಾ ಅವರನ್ನು ಜಿಪಂ ಸಿಇಓ, ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದಿರುವುದು, ಜನಪ್ರತಿನಿಧಿಗಳೊಂದಿಗೆ ಸೌಜನ್ಯದಿಂದ ವರ್ತಿಸದಿರುವುದು, ಕಂದಾಯ ವಸೂಲಿ ಮಾಡದ ಆರೋಪಗಳಡಿ ಮಾರ್ಚ್ 2 ರಿಂದ ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ.
ಇದನ್ನೂ ಓದಿ: ವರ್ಷಾಂತ್ಯಕ್ಕೆ ಮನೆ ಮನೆಗೆ ಮಾರಿಕಣಿವೆ ನೀರು
ಇನ್ನೂ ಯರಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲಹಳ್ಳಿಯ ಖಾಸಗಿ ಶಿಕ್ಷಣ ಸಂಸ್ಥೆಯೊಂದಕ್ಕೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ, ಅಕ್ರಮ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿ ಇ-ಸ್ವತ್ತು ಮಾಡಿಕೊಡುವ ಮೂಲಕ ಸರ್ಕಾರ ಹಾಗೂ ಗ್ರಾಮ ಪಂಚಾಯಿತಿಗೆ ಆರ್ಥಿಕ ನಷ್ಟ ಉಂಟು ಮಾಡಿದ ಆರೋಪದಡಿ ಯರಬಳ್ಳಿ ಪಿಡಿಓ ಎಸ್.ಬಸವರಾಜ್ ಅವರನ್ನು ಅಮಾನತು ಮಾಡಲಾಗಿದೆ.
ಈ ಸಂಬಂಧ ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ಅಧ್ಯಕ್ಷ ಕೆ.ಜಗದೀಶ್ ದೂರು ಸಲ್ಲಿಸಿದ್ದರು.
ಇದನ್ನೂ ಓದಿ: ಬಿಜೆಪಿ ಮಹತ್ವದ ಸಭೆ | ಆಕಾಂಕ್ಷಿಗಳು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ
ನರೇಗಾ ಕಾಮಗಾರಿಗಳಲ್ಲಿ 60:40 ಅನುಪಾತ ನಿಯಮ ಪಾಲನೆ ಮಾಡದ ಹಿನ್ನೆಲೆಯಲ್ಲಿ ಇಕ್ಕನೂರು ಗ್ರಾಮ ಪಂಚಾಯಿತಿ ಪಿಡಿಓ ಎಚ್.ಎನ್.ಮಹಾಂತೇಶ್, ಹಾಗೂ ಗೌಡನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ತಿಪ್ಪೇಸ್ವಾಮಿ ಅವರನ್ನು ಫೆಬ್ರವರಿ 28 ರಂದು ಅಮಾನತು ಮಾಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಮಾನತುಗೊಂಡ ಪಿಡಿಓಗಳ ಸ್ಥಳಕ್ಕೆ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಿ ಮೂರು ಜನರನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ: ಪಿಡಿಓ ವಿರುದ್ಧ ಅಸಮಧಾನ | ಸಾಮೂಹಿಕ ರಾಜಿನಾಮೆಗೆ ಮುಂದಾದ ಗ್ರಾಮ ಪಂಚಾಯಿತಿ ಸದಸ್ಯರು
ಯರಬಳ್ಳಿ ಗ್ರಾಮ ಪಂಚಾಯಿತಿಗೆ ರಂಗೇನಹಳ್ಳಿ ಪಿಡಿಓ ಬಿ.ಪ್ರದೀಪ್, ಕರಿಯಾಲ ಗ್ರಾಮ ಪಂಚಾಯಿತಿಗೆ ಗೌಡನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಕೆ.ಎನ್.ರಾಜೇಶ್ವರಿ ಹಾಗೂ ಇಕ್ಕನೂರು ಗ್ರಾಮ ಪಂಚಾಯಿತಿಗೆ ರಂಗನಾಥ ಪುರದ ಪಿಡಿಓ ಈರಣ್ಣ ಅವರಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಿ ನೇಮಕ ಮಾಡಲಾಗಿದೆ.
