CHITRADURGA NEWS | 27 OCTOBER 2026
ಚಿತ್ರದುರ್ಗ: ಜಿಲ್ಲೆಗೆ ಕಳೆದ 40 ದಿನಗಳಿಂದ ಭದ್ರಾ ನೀರು ಹರಿದರು ಹೊಳಲ್ಕೆರೆ ತಾಲೂಕಿನ ತಾಳ್ಯ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸದೆ ಅನ್ಯಾಯ ಮಾಡಲಾಗುತ್ತಿದೆ. ಈ ಮಾರ್ಗದಲ್ಲಿನ ಪೈಪ್ಲೈನ್ ದೋಷಗಳನ್ನು ಗುರುತಿಸಿ ಸರಿಪಡಿಸುವ ಬದಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ರೈತರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 27 | ಹತ್ತಿ ರೇಟ್ ಎಷ್ಟಿದೆ?
ಹೊಳಲ್ಕೆರೆ ತಾಲೂಕಿನ ತಾಳ್ಯ ಹೋಬಳಿಗೆ ಒಳಪಡುವ ಹೊರಕೆರೆದೇವಪುರ, ನಂದನಹೊಸೂರಿನ ಗುಂಡಿಕೆರೆ, ಕೆರೆಯಾಗಳಹಳ್ಳಿ ಕೆರೆಗಳಿಗೆ ಭದ್ರಾ ನೀರು ಈವರೆಗೆ ಹರಿದಿಲ್ಲ. ನೀರು ಹರಿಸುವ ಹಾಗೂ ಪೈಪ್ಲೈನ್ ಲೋಪದೋಷ ಗಳನ್ನು ಸರಿಪಡಿಸುವಂತೆ ಆಗ್ರಹಿಸಿ ವಿಶ್ವೇಶ್ವರಯ್ಯ ಜಲ ನಿಗಮದ ಭದ್ರಾ ಚಿತ್ರದುರ್ಗ ವಲಯದ ಮುಖ್ಯ ಇಂಜಿನಿಯರ್ಗೆ ರೈತರು ಮನವಿ ಸಲ್ಲಿಸಿದರು.
ತಾಳ್ಯ ಹೋಬಳಿ ವ್ಯಾಪ್ತಯ 7 ಕೆರೆಗಳ ರೈತರು ಹಾಗೂ ರೈತ ಸಂಘದ ನೇತೃತ್ವದಲ್ಲಿ ಪದಾಧಿಕಾರಿಗಳು ಮಂಗಳವಾರ ಭದ್ರಾ ಮೇಲ್ದಂಡೆ ಯೋಜನೆ ಕಚೇರಿಗೆ ಭೇಟಿ ನೀಡಿ ಸಮಸ್ಯೆಗಳನ್ನು ವಿವರಿಸಿದರು.
ಜಿಲ್ಲೆಯ ಹಲವು ಭಾಗಗಳಲ್ಲಿ ನೀರು ಹರಿದರೂ, ಹೊರಕೆರೆದೇವರಪುರ, ಉಪ್ಪರಿಗೇನಹಳ್ಳಿ, ನಂದನಹೊಸೂರು ಭಾಗದ ರೈತರಿಗೆ ತೀವ್ರ ನಿರಾಸೆಯಾಗಿದೆ. ಹೊಳಲ್ಕೆರೆ ಪಂಪ್ಹೌಸ್ ಹಾಗೂ ಟಿ.ಎಮ್ಮಿಗನೂರು ಗ್ರಾಮದ ಬಳಿಯಿಂದ ಗ್ರಾವಿಟಿ ಮೂಲಕ ಸುಮಾರು 35 ಕಿ.ಮೀ. ದೂರದಲ್ಲಿರುವ ಈ ಕೆರೆಗಳಿಗೆ ನೀರು ಹರಿಯದಿರಲು ಪೈಪ್ಲೈನ್ನಲ್ಲಿನ ದೋಷಗಳು ಹಾಗೂ ತಾಂತ್ರಿಕ ಸಮಸ್ಯೆಗಳೇ ಕಾರಣವಾಗಿದೆ ಎಂದು ದೂರಿದರು.
ಇದನ್ನೂ ಓದಿ: ಚಿತ್ರದುರ್ಗ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಗ್ಯಾಸ್ಟ್ರೊ ಶಿಬಿರ
ಈ ಸ್ಥಳಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಖುದ್ದು ಭೇಟಿ ನೀಡಿ, ಪೈಪ್ಲೈನ್ ಲೊಕೇಷನ್ ಉದ್ದಕ್ಕೂ ಕನಿಷ್ಠ 50 ಜನ ಕಾರ್ಮಿಕರ ತಂಡದೊಂದಿಗೆ ಪರಿಶೀಲನೆ ನಡೆಸಿ, ದಾರಿಯಲ್ಲಿರುವ ಲೋಪ ದೋಷಗಳನ್ನು ತಕ್ಷಣವೇ ಸರಿಪಡಿಸಿ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕು.
ಒಂದು ವೇಳೆ ಈ ಪೈಪ್ಲೈನ್ ಮುಖಾಂತರ ನೀರು ತಲುಪಿಸುವುದು ಕಷ್ಟಸಾಧ್ಯವಾದಲ್ಲಿ, ಕೇವಲ 2 ಕಿ.ಮೀ. ದೂರದಲ್ಲಿರುವ ಉಪ್ಪರಿಗೇನಹಳ್ಳಿ ಹಾಗೂ ಗೂಳಿಹೊಸಹಳ್ಳಿ ಸರ್ವೇ ನಂಬರ್ನಲ್ಲಿ ಹಾದು ಹೋಗಿರುವ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆಯಿಂದ ಏತಾ ನೀರಾವರಿ ಮೂಲಕ ಎಚ್.ಡಿ.ಪುರ ಕೆರೆ, ಗುಂಡಿಕೆರೆ ಮತ್ತು ಕೆರೆಯಾಗಳಹಳ್ಳಿ ಕೆರೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಇದರೊಟ್ಟಿಗೆ ಉಪ್ಪರಿಗೇನಹಳ್ಳಿ, ಗೊಲ್ಲರಹಳ್ಳಿ, ನಂದನಹೊಸೂರು, ಓ.ಗೊಲ್ಲರಹಳ್ಳಿ ಎಂ.ಜಿ. ಕಟ್ಟೆ, ಚೌಡಗೊಂಡನಹಳ್ಳಿ, ಹಾಲೇನಹಳ್ಳಿ, ಬೂದಿಪುರ, ಗೂಳಿಹೊಸಹಳ್ಳಿ, ಕಣಿವೆ ಜೋಗಿಹಳ್ಳಿ, ಸಂಗೇನಹಳ್ಳಿ, ಕಸವನಹಳ್ಳಿ, ಮತಿಘಟ್ಟ, ನಲ್ಲಿಕಟ್ಟೆ, ಬೋರೆನಹಳ್ಳಿ, ಬ್ರಹ್ಮಪುರ, ಪಂಪಾಪುರ, ನಗರಘಟ್ಟ ಈಚಘಟ್ಟ, ತೇಕಲವಟ್ಟಿ, ಕೊಳಾಳು ಕೋಮಾರನಹಳ್ಳಿ ಭಾಗದ ಕೆರೆ ಹಾಗೂ ಒಡ್ಡುಗಳಿಗೂ ನೀರು ತುಂಬಿಸುವ ಯೋಜನೆ ಮುಂದಿನ ದಿನಗಳಲ್ಲಿ ಆಗಬೇಕು ಎಂದು ಆಗ್ರಹ ಮಾಡಿದರು.
ಇದನ್ನೂ ಓದಿ: ಜಿಲ್ಲಾ ಆಸ್ಪತ್ರೆಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ
ಕೆರೆಗಳಿಗೆ ನೀರು ಒದಗಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು ತಕ್ಷಣವೇ ಯೋಜನೆ ರೂಪಿಸಬೇಕು. ಇಂದಿನ ತೀವ್ರ ಬರಗಾಲದ ಪರಿಸ್ಥಿತಿಯಲ್ಲಿ ಹಾಗೂ ಮುಂಬರುವ ದಿನಗಳಲ್ಲಿ ನಮ್ಮ ಭಾಗದ 10 ಹಳ್ಳಿಗಳ ರೈತರು ಹಾಗೂ ಕೃಷಿ ಭೂಮಿಗೆ ಜಾನುವಾರುಗಳಿಗೆ ಕುಡಿಯಲು ಸಮರ್ಪಕವಾಗಿ ನೀರು ಸಿಗುವಂತೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರೈತ ಸಂಘದಿಂದ 7 ಕೆರೆಯ ರೈತರು ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ರೈತರಾದ ರಾಮಸ್ವಾಮಿ ಕೆರೆಯಾಗಹಳ್ಳಿ, ರೈತ ಬಂಧು ಮಧು, ಚೌಡಗುಡ್ಡನಹಳ್ಳಿ ಹುಲಿಕೆಂಚಪ್ಪ, ಉಪ್ಪೇರಿಗೇನಹಳ್ಳಿ ಗಜೇಂದ್ರ, ಮಂಜುನಾಥ್, ವಿನಯಕುಮಾರ್ ನಂದನಹೊಸೂರು, ಶ್ರೀನಿವಾಸ್ ಹೆಚ್.ಡಿ. ಪುರ, ರಾಮಸ್ವಾಮಿ ಮತ್ತಿತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

