CHITRADURGA NEWS | 13 OCTOBER 2026
ಚಿತ್ರದುರ್ಗ: ವೇಗವಾಗಿ ಬೆಳೆಯುತ್ತಿರುವ ತಾಂತ್ರಿಕ ಪ್ರಗತಿಯ ನಡುವೆ ಕೃತಕ ಬುದ್ಧಿಮತ್ತೆ (ಎಐ) ಕುರಿತ ಚರ್ಚೆಗಳು ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿವೆ. ಎಐ ತಂತ್ರಜ್ಞಾನವನ್ನು ಸದುದ್ದೇಶದಿಂದ ಬಳಸುವುದರ ಜೊತೆಗೆ, ಅದರ ದುರುಪಯೋಗದ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹರಿಹರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಎಸ್.ಬಿ. ಪಾಟೀಲ್ ತಿಳಿಸಿದರು.
ಇದನ್ನೂ ಓದಿ: ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಆರಂಭ | ಕ್ವಿಂಟಾಲ್ಗೆ ₹8,343 ನಿಗದಿ
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಸಮಾಜಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ಭದ್ರತೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವನ ದೌರ್ಬಲ್ಯಗಳು ಮತ್ತು ಕೃತಕ ಬುದ್ಧಿಮತ್ತೆಯ ಅಗಾಧ ಸಾಮರ್ಥ್ಯದ ನಡುವಿನ ಹೋಲಿಕೆ ಇಂದು ಚರ್ಚೆಯ ಕೇಂದ್ರಬಿಂದುವಾಗಿದೆ. ಎಐ ತಂತ್ರಜ್ಞಾನವು ಜಾಗತಿಕ ಶಕ್ತಿಗಳ ನಡುವೆ ಹೊಸ ರೀತಿಯ ಪೈಪೋಟಿಗೆ ಕಾರಣವಾಗುವ ಆತಂಕವಿದೆ. ಅಮೆರಿಕ ಮತ್ತು ಚೀನಾ ನಡುವೆ ಎಐ ಆಧಾರಿತ ಶಸ್ತ್ರಾಸ್ತ್ರಗಳ ಸ್ಪರ್ಧೆ ಆರಂಭವಾಗಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಎಐ ಬಳಸಿ ಓದಿಗೆ ಅಗತ್ಯವಾದ ಟಿಪ್ಪಣಿಗಳು, ಪ್ರಬಂಧಗಳು ಹಾಗೂ ಸಂಶೋಧನಾ ಕಾರ್ಯಗಳಿಗೆ ನೆರವು ಪಡೆಯಬಹುದು. ಆದರೆ, ಎಐ ಮೂಲಕ ಸಿದ್ಧಪಡಿಸಿದ ವಿಷಯಗಳನ್ನು ನಕಲು ಮಾಡುವ ಬದಲು ಕಲಿಕೆ ಮತ್ತು ಜ್ಞಾನವೃದ್ಧಿಗೆ ಬಳಸಬೇಕು. ಒಂದೇ ಸಾಲಿನ ಸೂಚನೆಯ ಮೂಲಕ ವಿಡಿಯೊ ಹಾಗೂ ಪೋಸ್ಟರ್ಗಳನ್ನು ರಚಿಸುವ ಸಾಮರ್ಥ್ಯ ಈ ತಂತ್ರಜ್ಞಾನಕ್ಕಿದೆ ಎಂದರು.
ಇದನ್ನೂ ಓದಿ: ಕೆಳಗೋಟೆಯ ಅಂಬಾ ಭವಾನಿ ದೇವಿಗೆ ಅರಿಶಿನ ಅಲಂಕಾರ
ಎಐ ದುರುಪಯೋಗದ ಬಗ್ಗೆ ಎಚ್ಚರಿಕೆ ಅಗತ್ಯ
ಎಐ ಬಳಸಿ ತಂದೆಯ ಧ್ವನಿಯನ್ನು ನಕಲು ಮಾಡಿ ಮಗಳ ಬಳಿ ₹50 ಸಾವಿರ ವಸೂಲಿ ಮಾಡುವಂತಹ ವಂಚನೆಗಳು ನಡೆಯುತ್ತಿವೆ. ಸಾಮಾಜಿಕ ಜಾಲತಾಣಗಳಿಂದ ಫೋಟೊಗಳನ್ನು ಪಡೆದು ಅಶ್ಲೀಲ ಚಿತ್ರಗಳನ್ನು ಸೃಷ್ಟಿಸುವುದು ಹಾಗೂ ನಕಲಿ ಉದ್ಯೋಗಾವಕಾಶಗಳ ಹೆಸರಿನಲ್ಲಿ ಹಣ ವಸೂಲಿ ಮಾಡುವಂತಹ ಸೈಬರ್ ಅಪರಾಧಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಅನುಮಾನಾಸ್ಪದ ಕರೆಗಳು, ಸಂದೇಶಗಳು ಹಾಗೂ ಉದ್ಯೋಗದ ಆಮಿಷಗಳನ್ನು ಪರಿಶೀಲಿಸದೆ ನಂಬಬಾರದು. ಖಾತೆಗಳ ಸುರಕ್ಷತೆಗಾಗಿ ಬಹುಹಂತದ ದೃಢೀಕರಣ (ಎಂಎಫ್ಎ) ಸಕ್ರಿಯಗೊಳಿಸಬೇಕು. ಸೈಬರ್ ವಂಚನೆಗೆ ಒಳಗಾದ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಬೇಕು. ಎಐ ಮೂಲಕ ಸೃಷ್ಟಿಸಿದ ನಕಲಿ ಚಿತ್ರ, ಧ್ವನಿ ಹಾಗೂ ವಿಡಿಯೊಗಳನ್ನು ಗುರುತಿಸಲು ಪರಿಶೀಲನಾ ಸಾಧನಗಳ ನೆರವು ಪಡೆಯಬೇಕು. ಅಂತರ್ಜಾಲದಲ್ಲಿ ಹಂಚಿಕೊಳ್ಳುವ ಪ್ರತಿಯೊಂದು ಫೋಟೊ ಮತ್ತು ಪ್ರತಿಕ್ರಿಯೆಯ ಬಗ್ಗೆಯೂ ಎಚ್ಚರಿಕೆ ಇರಲಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಮಾಜಿ ಸಚಿವ ಅಶ್ವತ್ಥರೆಡ್ಡಿ ಮೊಮ್ಮಗ ಸಂದೀಪ್ ಗುಂಡಾರ್ಪಿ ಕಾಂಗ್ರೆಸ್ಗೆ ಸೇರ್ಪಡೆ
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಶಿವಣ್ಣ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿಜಯಲಕ್ಷ್ಮಿ ಮಾತನಾಡಿದರು. ಹರಿಹರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಮಮತಾ ಸಾಹುಕಾರ ವೇದಿಕೆಯಲ್ಲಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

