CHITRADURGA NEWS | 14 OCTOBER 2026
ಚಿತ್ರದುರ್ಗ: ಸಂಸದರ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೈಗೊಂಡಿರುವ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 14 | ರಾಗಿ, ಶೇಂಗಾ ರೇಟ್ ಎಷ್ಟಿದೆ?
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಂಸದರು ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಮಗಾರಿಗಳ ಮಂದಗತಿ ಹಾಗೂ ವಿಳಂಬ ಧೋರಣೆ ವಿರುದ್ಧ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅಪರ ಜಿಲ್ಲಾಧಿಕಾರಿಗಳು, ನೀವೇ ಸ್ವತಃ ಸ್ಥಳ ಆಯ್ಕೆ ವೀಕ್ಷಿಸಿ, ಶಿಫಾರಸ್ಸು ಮಾಡಿ ಕಾಮಗಾರಿಗಳಿಗೆ ಅನುಮೋದನೆ ಪಡೆದಿದ್ದರೂ ಜಾಗದ ಸಮಸ್ಯೆ ಅಥವಾ ಇತರೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ ಸೂಕ್ತ ಸ್ಥಳಾವಕಾಶವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ತದನಂತರವೇ ಇಂಜಿನಿಯರ್ಗಳು ಜಾಗವನ್ನು ಪರಿಶೀಲಿಸಿ ವರದಿ ನೀಡಬೇಕು. ಕಾಮಗಾರಿಗಳ ಬಿಲ್ ಪಾವತಿ ಹಾಗೂ ಪ್ರಸ್ತಾವನೆಗಳನ್ನು ‘ಇ-ಸಾಕ್ಷಿ’ ತಂತ್ರಾಂಶದ ಮೂಲಕವೇ ಕಡ್ಡಾಯವಾಗಿ ಅನುಮೋದನೆಗೊಳಿಸಬೇಕು. ವಿಳಂಬಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: 8ನೇ ತರಗತಿ ವಿದ್ಯಾರ್ಥಿಗಳಿಗೆ ಎನ್ಎಂಎಂಎಸ್ ವಿದ್ಯಾರ್ಥಿವೇತನ ಪರೀಕ್ಷೆ | ಅ.31ರೊಳಗೆ ಅರ್ಜಿ ಸಲ್ಲಿಸಿ
ವಿವಿಧ ಕ್ಷೇತ್ರಗಳಲ್ಲಿ ಸಮುದಾಯ ಭವನ ನಿರ್ಮಾಣ, ಶೌಚಾಲಯ ನಿರ್ಮಾಣ, ಶಾಲಾ ಕೊಠಡಿ, ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ ಅಭಿವೃದ್ಧಿ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಕಾಮಗಾರಿಗಳು ವಿವಿಧ ಹಂತಗಳಲ್ಲಿವೆ. ಕೆಲವೆಡೆ ಕೇವಲ ಪಾಯದ ಹಂತದಲ್ಲೇ ಕಾಮಗಾರಿ ನಿಂತಿರುವುದು ಕಂಡುಬಂದಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ವೈಯಕ್ತಿಕ ಆಸಕ್ತಿ ವಹಿಸಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಹೇಳಿದರು.
ಅಂಗನವಾಡಿ ಹಾಗೂ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ನಿಗದಿತ ಮಾನದಂಡದಂತೆ ನಡೆಯಬೇಕು: ಅಂಗನವಾಡಿ, ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗಳು ಇಲಾಖಾ ವಿನ್ಯಾಸದ ಹಾಗೂ ನಿಗದಿತ ಮಾನದಂಡಗಳ ಅನ್ವಯವೇ ಚಾಲನೆಗೆ ತೆಗೆದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಯಾವುದೇ ಆಸ್ತಿ, ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಮುನ್ನ ಆಸ್ತಿ ಮಾಲೀಕರ ಎನ್ಒಸಿ ಪಡೆಯುವುದು ಕಡ್ಡಾಯವಾಗಿದೆ. ಇದು ಟ್ರಸ್ಟ್ ಅಥವಾ ಯಾವುದೇ ಸರ್ಕಾರದ ಅಧೀನಕ್ಕೆ ಒಳಪಟ್ಟಿರಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಒ ಹಾಗೂ ಕಂದಾಯ ಇಲಾಖೆಯಡಿ ಸರ್ಕಾರದ ಗೋಮಾಳ ಅಥವಾ ಇತರೆ ಜಮೀನುಗಳಿದ್ದಲ್ಲಿ ತಹಶೀಲ್ದಾರ್ ಅವರು ಕಸ್ಟೋಡಿಯನ್ ಆಗಿರುತ್ತಾರೆ.
ಇದನ್ನೂ ಓದಿ: ಮೆದೇಹಳ್ಳಿಯಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ | 200ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ
ಎಲ್ಲರ ಅನುಮತಿ ಹಾಗೂ ಎನ್ಒಸಿ ಪಡೆದ ನಂತರವೇ ಕಾಮಗಾರಿಗಳನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಬೇಕು. ಟ್ರಸ್ಟ್ ಅಥವಾ ಇತರ ಸಂಸ್ಥೆಗಳ ಅಧೀನದಲ್ಲಿರುವ ಆಸ್ತಿಗಳಿಗೂ ಸಹ ಕಡ್ಡಾಯವಾಗಿ ಅನುಮತಿ ಪಡೆಯಬೇಕಿದೆ ಎಂದು ತಿಳಿಸಿದ ಅವರು, ನವೆಂಬರ್ 13 ರೊಳಗೆ ಮತ್ತೊಂದು ಸಭೆ ಕರೆಯಲಾಗುವುದು. ಅಷ್ಟರೊಳಗೆ ಬಾಕಿ ಉಳಿದಿರುವ ಎಲ್ಲಾ ಹಳೆಯ ಕಾಮಗಾರಿಗಳನ್ನು ವಿಲೇವಾರಿ ಮಾಡಿ, ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅಮರನಾಥ್ ಜೈನ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹರೀಶ್, ಕೆಆರ್ಐಡಿಎಲ್ ಚಳ್ಳಕೆರೆ ಕಾರ್ಯಪಾಲಕ ಅಭಿಯಂತರ ಸಚಿನ್, ಚಿತ್ರದುರ್ಗ ಕಾರ್ಯಪಾಲಕ ಅಭಿಯಂತರ ವಿನಯ್, ಪಿಆರ್ಇಡಿ ಇಂಜಿನಿಯರ್ ರಫೀಕ್, ವಿಷಯ ನಿರ್ವಾಹಕಿ ಇಮ್ನಾಜ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

