Connect with us

ಮಾನವೀಯತೆ ಮರೆತು ಶುಲ್ಕ ವಸೂಲಿ ಮಾಡಿದರೆ ಕ್ರಮ ಅನಿವಾರ್ಯ | ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ

ಮಾನವೀಯತೆ ಮರೆತು ಶುಲ್ಕ ವಸೂಲಿ ಮಾಡಿದರೆ ಕ್ರಮ ಅನಿವಾರ್ಯ

ಮುಖ್ಯ ಸುದ್ದಿ

ಮಾನವೀಯತೆ ಮರೆತು ಶುಲ್ಕ ವಸೂಲಿ ಮಾಡಿದರೆ ಕ್ರಮ ಅನಿವಾರ್ಯ | ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ

CHITRADURGA NEWS | 21 MAY 2024

ಚಿತ್ರದುರ್ಗ: ಜಿಲ್ಲೆಯಲ್ಲಿ ಹಲವು ಶಿಕ್ಷಣ ಸಂಸ್ಥೆಗಳು ಮಾನವೀಯತೆ ಮರೆತು, ಸರ್ಕಾರ ನಿಗಧಿ ಮಾಡಿರುವ ಶುಲ್ಕಕ್ಕಿಂತ ಅಧಿಕ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಶೈಕ್ಷಣಿಕ ಪ್ರಗತಿ, ಕಲಿಕೆಯಲ್ಲಿ ಗುಣಾತ್ಮಕ ಸುಧಾರಣೆ ಮತ್ತು ಮಾದರಿ ಫಲಿತಾಂಶದ ಕುರಿತು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ಇದನ್ನೂ ಓದಿ: ಸೂಗೂರಿನಲ್ಲಿ 108 ಮಿ.‌ಮೀ ಮಳೆ | 34 ಮನೆಗಳಿಗೆ ಹಾನಿ | 28 ಎಕರೆ ತೋಟಗಾರಿಕೆ ಬೆಳೆ ಹಾನಿ

ಶಾಲಾ ದಾಖಲಾತಿಯ ಆರಂಭ, ಅಗತ್ಯ ದಾಖಲೆಗಳು, ದಾಖಲಾತಿಯ ಮುಕ್ತಾಯ, ಶುಲ್ಕ, ಸರ್ಕಾರದ ಮಾನದಂಡ, ಮತ್ತಿತರ ನಿಬಂಧನೆಗಳ ಕುರಿತು ಜನಸಾಮಾನ್ಯರಿಗೆ ಹಾಗೂ ಪೋಷಕರಿಗೆ ತಿಳಿಯುವಂತೆ ಶಾಲೆಯ ಪ್ರಕಟಣಾ ಫಲಕದಲ್ಲಿ ಮಾಹಿತಿ ಬಿತ್ತರಿಸುವಂತೆ ಸೂಚಿಸಿದರು.

ಚಿತ್ರದುರ್ಗ ಬರಪೀಡಿತ ಪ್ರದೇಶ. ಇಲ್ಲಿ ಜನ ಜೀವನ ನಡೆಸುವುದೇ ದುಸ್ತರವಾಗಿದೆ. ಹೀಗಿರುವಾಗ ಶಾಲಾ ದಾಖಲಾತಿಗಾಗಿ ಹೆಚ್ಚಿನ ಶುಲ್ಕ ವಸೂಲಿ ಮಾಡುವುದು ಸರಿಯಲ್ಲ. ಸರ್ಕಾರ ನಿಗಧಿಪಡಿಸಿದ ಶುಲ್ಕವನ್ನು ಪಡೆದು ಮಕ್ಕಳ ದಾಖಲಾತಿ ಮಾಡಿಕೊಳ್ಳಬೇಕು ಎಂದರು.

ಇದನ್ನೂ ಓದಿ: ಕತ್ತಲಲ್ಲಿ ಮೊಳಕಾಲ್ಮುರು ಆಸ್ಪತ್ರೆ..ನಿಮ್ಮ ಸರ್ಕಾರದಲ್ಲಿ ದುಡ್ಡಿಲ್ಲವೋ..? | ಸರ್ಕಾರಕ್ಕೆ ಮಾಜಿ ಸಚಿವ ಬಿ.ಶ್ರೀರಾಮುಲು ಪ್ರಶ್ನೆ

ಕೆಲ ಸಂದರ್ಭದಲ್ಲಿ ಮಕ್ಕಳಿಗೆ ಶುಲ್ಕ ಪಾವತಿಸಲು ಕಷ್ಟಸಾಧ್ಯವಾದಲ್ಲಿ ಸುಲಭ ಕಂತಿನಲ್ಲಿ ಹಣ ಪಾವತಿಸಲು ಅವಕಾಶ ನೀಡಬೇಕು. ಒಟ್ಟಾರೆಯಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಜನಸ್ನೇಹಿಯಾಗಿ ವ್ಯವಹರಿಸುವಂತೆ ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ ಕಳಪೆ ಫಲಿತಾಂಶಕ್ಕೆ ಕಾರಣವೇನು ?

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಅತ್ಯಂತ ಕನಿಷ್ಠವಾಗಿದೆ. ಈ ಕಳಪೆ ಫಲಿತಾಂಶಕ್ಕೆ ಸೂಕ್ತ ಕಾರಣ ಏನು ಎನ್ನುವ ಬಗ್ಗೆಯೂ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಅವಲೋಕನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ಇದನ್ನೂ ಓದಿ: ಮಳೆ ಬಂದಾಗ ಈ ಆಸ್ಪತ್ರೆಯಲ್ಲಿ ಉಂಟು..ಕ್ಯಾಂಡಲ್‌ ಲೈಟ್‌ ಟ್ರೀಟ್‌ಮೆಂಟ್‌…!

ಪ್ರಸಕ್ತ ಶೈಕ್ಷಣಿಕ ಸಾಲಿನ ಆರಂಭದಲ್ಲಿಯೇ ಕಳೆದ ಸಾಲಿನ ನ್ಯೂನತೆಗಳು ಮರುಕಳಿಸದಂತೆ ಫಲಿತಾಂಶ ಸುಧಾರಣೆಗೊಳಿಸಲು ಶಿಕ್ಷಕರು ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಅವರು, ಅಗತ್ಯವಿದ್ದಲ್ಲಿ ವಿಷಯ ತಜ್ಞರನ್ನು ಆಹ್ವಾನಿಸಿ, ಅವರಿಂದ ವಿಷಯಾಧಾರಿತ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.

ಮುಂದಿನ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಉತ್ತಮ ಶ್ರೇಣಿಯಲ್ಲಿದ್ದು, ಮುಂಚೂಣಿ ಹತ್ತರಲ್ಲಿ ಒಂದಾಗಿರುವಂತೆ ಶಿಕ್ಷಕರು ಗಮನಹರಿಸಬೇಕು. ಅದಕ್ಕಾಗಿ ಶಿಕ್ಷಕರು ಈಗಿನಿಂದಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಆಂಗ್ಲ, ಗಣಿತ ಮತ್ತು ವಿಜ್ಞಾನ ವಿಷಯಗಳ ಶಿಕ್ಷಕರು ವಿಶೇಷವಾಗಿ ಕಾಳಜಿ ವಹಿಸಬೇಕೆಂದ ಅವರು, ಎಲ್ಲಾ ಶಿಕ್ಷಕರು ತಮ್ಮ ಜವಾಬ್ದಾರಿಯರಿತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಇದನ್ನೂ ಓದಿ: ಕೋಟೆನಾಡಲ್ಲಿ ತಡರಾತ್ರಿ ಅಬ್ಬರಿಸಿದ ಮಳೆ | ಕೊಚ್ಚಿ ಹೋದ ರಸ್ತೆ, ಕುಸಿದು ಬಿದ್ದ ಮನೆ

ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಶಿಕ್ಷಕರು ಮಾಡಿಕೊಂಡಿರುವ ಸಿದ್ಧತೆಗಳ, ಬೋಧನಾ ಕ್ರಮಗಳ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಖುದ್ದು ಶಾಲೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಸೂಕ್ತ ಸುಧಾರಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಶಿಕ್ಷಕರ ಕ್ರಮವನ್ನು ಸಹಿಸಿಕೊಳ್ಳಲಾಗುವುದಿಲ್ಲ. ಅಲ್ಲದೇ ಅಂತಹ ಶಿಕ್ಷಕರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಸುಧಾರಣಾ ಕ್ರಮವಾಗಿ ದಕ್ಷ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದರು.

ಇದನ್ನೂ ಓದಿ: ವಾಹನ ಸವಾರರೇ ಎಚ್ಚರ…ಕೊರಕಲು ಬಿದ್ದಿವೆ ರಸ್ತೆಗಳು | ಕ್ರಮಕ್ಕೆ ಸ್ಥಳೀಯರ ಒತ್ತಾಯ

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ನಾಸಿರುದ್ದೀನ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ ಸೇರಿದಂತೆ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯೋಪಾಧ್ಯಾಯರು, ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version