CHITRADURGA NEWS | 26 October 2026
ಚಿತ್ರದುರ್ಗ: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸೋಮವಾರ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ವಿವಿಧ ವಾರ್ಡ್ ಗಳಲ್ಲಿ ರೋಗಿಗಳೊಂದಿಗೆ ಸಮಾಲೋಚನೆ ನಡೆಸಿ ಆಸ್ಪತ್ರೆಯ ಕಾರ್ಯವೈಖರಿ ಪರಿಶೀಲಿಸಿದರು.
ಇದನ್ನೂ ಓದಿ: ಆತ್ಮಾವಲೊಕನದಿಂದ ಅಂತರಂಗದ ಪರಿವರ್ತನೆ ಸಾಧ್ಯ | ಡಾ.ಯುವರಾಜ್
ಜಿಲ್ಲಾ ಆಸ್ಪತ್ರೆಯಲ್ಲಿ ಹೊರರೋಗಿಗಳು ಸೇರಿದಂತೆ ಒಳರೋಗಿಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಶಾಸಕರು ಭೇಟಿ ನೀಡಿ ವಿಚಾರಿಸಿದ್ದಾರೆ.
ವೈದ್ಯರು, ಸಿಬ್ಬಂದಿ ಸರಿಯಾಗಿ ಚಿಕಿತ್ಸೆ ನೀಡುತ್ತಿದ್ದಾರೆಯೇ ಎಂಬುದರ ಕುರಿತು ರೋಗಿಗಳನ್ನು ವಿಚಾರಿಸಿದರು. ಅಗತ್ಯ ಔಷಧಿಗಳು ದೊರೆಯುತ್ತಿವೆಯೇ, ಚಿಕಿತ್ಸೆಯ ಸಂದರ್ಭದಲ್ಲಿ ತೊಂದರೆ ಎದುರಾಗುತ್ತಿದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು.
ಚಿಕಿತ್ಸೆ ನೀಡಲು ಅಥವಾ ಶಸ್ತ್ರಚಿಕಿತ್ಸೆ ನಡೆಸಲು ಹಣ ಕೇಳಲಾಗುತ್ತಿದೆಯೇ ಎಂಬ ಪ್ರಶ್ನೆಯನ್ನೂ ರೋಗಿಗಳ ಮುಂದಿಟ್ಟರು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಅಥವಾ ನಿಯಮಾನುಸಾರ ದೊರೆಯಬೇಕಾದ ಸೇವೆಗಳಿಗೆ ಅನಧಿಕೃತವಾಗಿ ಹಣ ಪಡೆಯುವ ದೂರುಗಳು ನಿಜವೆಂದು ಸಾಬೀತಾದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಇದನ್ನೂ ಓದಿ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ
ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿ ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಶಾಸಕರು ಸೂಚಿಸಿದರು. ವೈದ್ಯಕೀಯ ಸೇವೆ ಎನ್ನುವುದು ಮಾನವೀಯತೆ ಮತ್ತು ಸೇವಾ ಮನೋಭಾವಕ್ಕೆ ಸಂಬಂಧಿಸಿದ ಮಹತ್ವದ ಕರ್ತವ್ಯವಾಗಿದ್ದು, ವಿಶೇಷವಾಗಿ ಬಡವರು ಮತ್ತು ಅಸಹಾಯಕ ರೋಗಿಗಳಿಗೆ ಯಾವುದೇ ತಾರತಮ್ಯವಿಲ್ಲದೆ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.
ಆಸ್ಪತ್ರೆಗೆ ಬರುವ ರೋಗಿಗಳು ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರನ್ನು ಅನಗತ್ಯವಾಗಿ ಅಲೆದಾಡಿಸುವುದು, ಚಿಕಿತ್ಸೆ ವಿಳಂಬ ಮಾಡುವುದು ಅಥವಾ ಅವರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರುವುದು ಸರಿಯಾದ ಕ್ರಮವಲ್ಲ. ಪ್ರತಿಯೊಬ್ಬ ರೋಗಿಗೂ ಗೌರವಯುತವಾಗಿ ಸ್ಪಂದಿಸಿ, ಅಗತ್ಯ ವೈದ್ಯಕೀಯ ಸೇವೆಗಳನ್ನು ಸಕಾಲದಲ್ಲಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆಸ್ಪತ್ರೆಯ ಆಡಳಿತದಲ್ಲಿ ಯಾವುದೇ ಲೋಪದೋಷಗಳಿದ್ದರೆ ಅವುಗಳನ್ನು ಸರಿಪಡಿಸಬೇಕು. ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಬಳಿಕ ಮಾತ್ರ ಎಚ್ಚೆತ್ತುಕೊಳ್ಳುವ ಬದಲು, ಪ್ರತಿದಿನವೂ ಸೇವೆಗಳ ಗುಣಮಟ್ಟದಿಂದ ನಿರ್ವಹಿಸಿ ಎಂದು ಆಸ್ಪತ್ರೆಯ ಸಿಬ್ಬಂದಿಗಳಿಗೆ ತಿಳಿಸಿದರು. ನಂತರ ಆಸ್ಪತ್ರೆಯ ಅಡುಗೆ ಕೋಣೆಗೆ ಭೇಟಿ ನೀಡಿ ಆಹಾರದ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ: ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಅಗ್ನಿವೀರ್ ನೇಮಕಾತಿಗೆ ಸಿದ್ದತೆ | ಡಿಸಿ ರಮ್ಯಾ ಸಭೆ
ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ಕೊಠಡಿಗಳು, ಅಡುಗೆಗೆ ಬಳಸುವ ಸಾಮಗ್ರಿಗಳು ಹಾಗೂ ಅಡುಗೆ ಕೋಣೆಯ ಸ್ವಚ್ಛತೆಯ ಬಗ್ಗೆ ಗಮನ ಹರಿಸಿದರು.
ರೋಗಿಗಳಿಗೆ ನೀಡುವ ಆಹಾರದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಕಡಿಮೆ ಬೆಲೆಯ ಪದಾರ್ಥಗಳನ್ನು ಖರೀದಿಸುವುದಕ್ಕೆ ಮಾತ್ರ ಗಮನ ಹರಿಸದೆ, ಗುಣಮಟ್ಟದ ತರಕಾರಿಗಳನ್ನು ಖರೀದಿಸಿ ಪೌಷ್ಟಿಕಾಂಶಯುಕ್ತ ಆಹಾರ ತಯಾರಿಸಬೇಕು. ತರಕಾರಿ ಮತ್ತು ಸೊಪ್ಪುಗಳನ್ನು ಸೂಕ್ತ ಪ್ರಮಾಣದಲ್ಲಿ ಬಳಸಿಕೊಂಡು ರುಚಿಕರವಾದ ಹಾಗೂ ಆರೋಗ್ಯಕರ ಆಹಾರವನ್ನು ರೋಗಿಗಳಿಗೆ ನೀಡಬೇಕು ಎಂದು ಸಿಬ್ಬಂದಿಗೆ ತಿಳಿಸಿದರು.
ಪ್ರತಿದಿನ ಸುಮಾರು 600 ರಿಂದ 800 ಜನರಿಗೆ ಊಟ ವಿತರಿಸಲಾಗುತ್ತದೆ ಎಂಬ ಹಿನ್ನೆಲೆಯಲ್ಲಿ, ಆಹಾರ ತಯಾರಿಕೆ ಮತ್ತು ವಿತರಣೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ಉಂಟಾಗಬಾರದು ಎಂದು ಸೂಚಿಸಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಣ ವಸೂಲಿ ಆರೋಪ ಪರಿಶೀಲನೆ:
ಹೆರಿಗೆ ಮಾಡಿಸಲು 8 ರಿಂದ 10 ಸಾವಿರ ರೂ. ಹಣ ಪಡೆಯಲಾಗುತ್ತಿದೆ ಎಂಬ ಮಾಹಿತಿ ಕೇಳಿಬಂದ ಹಿನ್ನೆಲೆಯಲ್ಲಿ, ಶಾಸಕರು ವಾರ್ಡ್ಗಳಿಗೆ ತೆರಳಿ ಅಲ್ಲಿದ್ದ ಮಹಿಳೆಯರು ಮತ್ತು ಅವರ ಕುಟುಂಬದವರೊಂದಿಗೆ ಸಮಾಲೋಚನೆ ನಡೆಸಿದರು. ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾದಾಗ ಯಾವುದೇ ಹಣದ ಬೇಡಿಕೆ ಎದುರಾಯಿತೇ, ವೈದ್ಯರು ಮತ್ತು ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿದ್ದಾರೆಯೇ ಎಂಬ ಕುರಿತು ಮಾಹಿತಿ ಪಡೆಯಲು ಮುಂದಾದರು.
ಇದನ್ನೂ ಓದಿ: ಆದರ್ಶಗಳ ಚೌಕಟ್ಟು ಕಟ್ಟಿಕೊಟ್ಟ ಮಹರ್ಷಿ ವಾಲ್ಮೀಕಿ | ಡಿಸಿ ರಮ್ಯಾ
ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಸಂಬಂಧಿಸಿದ ಸೇವೆಗಳಿಗಾಗಿ ಅನಧಿಕೃತವಾಗಿ ಹಣ ಪಡೆಯಲಾಗುತ್ತಿದೆ ಎಂಬ ಆರೋಪಗಳು ದೃಢಪಟ್ಟರೆ, ಅದು ಗಂಭೀರ ವಿಚಾರವಾಗಲಿದೆ. ವಿಶೇಷವಾಗಿ ಬಡ ಕುಟುಂಬಗಳು ಹೆರಿಗೆ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಬಾರದು. ಸರ್ಕಾರಿ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವುದರ ಜೊತೆಗೆ, ಅರ್ಹರಿಗೆ ನಿಯಮಾನುಸಾರ ಸೇವೆಗಳು ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಹೆರಿಗೆ ವಾರ್ಡ್ಗಳಲ್ಲಿ ಮಹಿಳೆಯರಿಗೆ ಅಗತ್ಯ ಆರೈಕೆ, ವೈದ್ಯಕೀಯ ನೆರವು ಮತ್ತು ಗೌರವಯುತ ಸೇವೆ ದೊರೆಯಬೇಕು. ಹಣದ ವಿಚಾರದಲ್ಲಿ ಯಾವುದೇ ಗೊಂದಲ ಅಥವಾ ದೂರುಗಳಿದ್ದರೆ ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುವ ಅಗತ್ಯವಿದೆ.
ಡೀನ್ ಮತ್ತು ಆರ್ಎಂಒ ನಡುವಿನ ಭಿನ್ನಾಭಿಪ್ರಾಯ ಮತ್ತೆ ಮುನ್ನೆಲೆಗೆ
ಜಿಲ್ಲಾಸ್ಪತ್ರೆಯ ವೈದ್ಯಕೀಯ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯದ ವಿಚಾರವೂ ಶಾಸಕರ ಭೇಟಿಯ ಸಂದರ್ಭದಲ್ಲಿ ಚರ್ಚೆಗೆ ಬಂದಿತು. ನಿವಾಸಿ ವೈದ್ಯಾಧಿಕಾರಿ (ಆರ್ಎಂಒ) ಡಾ. ಪಾರ್ವತಿ ಅವರು ಆಸ್ಪತ್ರೆಯ ಆಡಳಿತಾತ್ಮಕ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಡೀನ್ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರೊಂದಿಗಿನ ಸಮನ್ವಯದ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು.
ಇದನ್ನೂ ಓದಿ: ಕಿವಿಗೆ ಕೀಟ ಹೋದರೆ ಏನು ಮಾಡಬೇಕು ತಿಳಿಯಿರಿ
ಕಳೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿಯೂ ಆಸ್ಪತ್ರೆಯ ವೈದ್ಯಕೀಯ ಆಡಳಿತ ಮತ್ತು ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾಗಿ ಡಾ. ಪಾರ್ವತಿ ತಿಳಿಸಿದ್ದಾರೆ.
ಆರ್ಎಂಒ ಹುದ್ದೆಯ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ಡೀನ್ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಿಂದ ಅಗತ್ಯ ಸಹಕಾರ ದೊರೆಯುತ್ತಿಲ್ಲ ಎಂಬುದು ಅವರ ಆರೋಪವಾಗಿದೆ.
ಬಡ ರೋಗಿಗಳಿಗೆ ಉಚಿತವಾಗಿ ಮತ್ತು ಪ್ರಾಮಾಣಿಕವಾಗಿ ಆರೋಗ್ಯ ಸೇವೆ ಒದಗಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಅಧಿಕಾರಿಗಳ ವರ್ತನೆ ಹಾಗೂ ಆಡಳಿತಾತ್ಮಕ ಅಡೆತಡೆಗಳಿಂದ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಡಾ. ಪಾರ್ವತಿ ಅವರು ಶಾಸಕರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.
ಇದನ್ನೂ ಓದಿ: ಹೆಚ್ಚು ನೀರು ಕುಡಿಯುವುದರಿಂದ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯೇ?
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಮೆಡಿಕಲ್ ಕಾಲೇಜು ಡೀನ್ ಡಾ. ಯುವರಾಜ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ, ಡಾ.ಪಾರ್ವತಿ, ನಗರಡಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಂಜಿನಪ್ಪ ಹಾಗೂ ಇತರರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

