CHITRADURGA NEWS | 01 OCTOBER 2026
ಚಿತ್ರದುರ್ಗ: ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಇಓ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್‌ಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ರಮ್ಯ ನಿರ್ದೇಶನ ನೀಡಿದರು.
ಇದನ್ನೂ ಓದಿ: ಕಾಂಗ್ರೆಸ್‌ನ ಕೀಳುಮಟ್ಟದ ರಾಜಕೀಯಕ್ಕೆ ಜನರೇ ಉತ್ತರ ನೀಡಲಿದ್ದಾರೆ | ಬಿ.ವೈ.ವಿಜಯೇಂದ್ರ
ನಗರ ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ, ಬುಧುವಾರ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ಗೊಂದಲಗಳಿಗೆ ಆಸ್ಪದ ನೀಡದ ತಳ ಹಂತದ ಅಧಿಕಾರಿಗಳು ಸೂಕ್ಷö್ಮವಾಗಿ ಕೆಲಸ ನಿರ್ವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ತಕ್ಷಣ ಸ್ಪಂದಿಸಬೇಕು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಹಾಗೂ ನೀರಿನ ಸರಬರಾಜಿನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳೂವಂತೆ ಜಿಲ್ಲಾಧಿಕಾರಿ ಎಸ್.ರಮ್ಯ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನಗರ ಪ್ರದೇಶಗಳಲ್ಲಿ ಮಳೆ ಬಂದಾಗ ನೀರು ರಸ್ತೆಗಳ ಮೇಲೆ ಹರಿಯುವುದನ್ನು ತಡೆದು, ತಾಂತ್ರಿಕವಾಗಿ ಸಮರ್ಪಕ ಚರಂಡಿ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ಎಲ್ಲಾ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಲಭ್ಯತೆಯನ್ನು ಆಧರಿಸಿ ಸಮರ್ಪಕವಾಗಿ ಕುಡಿಯುವ ನೀರನ್ನು ವಿತರಿಸಬೇಕು. ಪ್ರಸ್ತುತ ಸ್ಥಿತಿಯಲ್ಲಿ ನೀರನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಣೆ ಮಾಡುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಎಸ್.ರಮ್ಯ ಅಭಿಪ್ರಾಯಪಟ್ಟರು.
ಕುಡಿಯುವ ನೀರು ಸರಬರಾಜಿಗೆ ಟೆಂಡರ್ ಪ್ರಕ್ರಿಯೆ ಕಡ್ಡಾಯ:
ಹೊಸ ಬೋರ್‌ವಲ್ ಕೊರೆಯುವ ಬದಲು, ಖಾಸಗಿ ಮೂಲಗಳಿಂದ ನೀರು ಪಡೆಯಲು ತಹಶೀಲ್ದಾರರು ಮಾತುಕತೆ ನಡೆಸಿ ಮಾಲಿಕರನ್ನು ಒಪ್ಪಿಸಬೇಕು. ಟ್ಯಾಂಕರ್ ಮೂಲಕ ನೀರು ಪೂರೈಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಕಡ್ಡಾಯವಾಗಿ ಟೆಂಡರ್ ಕರೆಯಬೇಕು. ಕಿಲೋ ಮೀಟರ್ ಆಧಾರದಲ್ಲಿ ಟೆಂಡರ್ ಕರೆಯುವುದರಿಂದ ‘ಟ್ಯಾಂಕರ್ ಮ್ಯಾನೇಜ್‌ಮೆಂಟ್ ಆಪ್’ ಮೂಲಕವೇ ನೀರು ಸರಬರಾಜು ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ದಿನ ಭವಿಷ್ಯ | ಅಕ್ಟೋಬರ್ 01 | ವ್ಯವಹಾರದಲ್ಲಿ ಹೂಡಿಕೆ ಬೇಡ, ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ
ನೀರಿನ ಅಭಾವ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಾಗ ಜಿಪಿಎಸ್ ಫೋಟೋ ಅಪ್‌ಲೋಡ್ ಮಾಡಬೇಕು, ಟೆಂಡರ್ ಪ್ರಕ್ರಿಯೆ ಹಾಗೂ ಸೂಕ್ತ ರಸೀದಿಗಳೊಂದಿಗೆ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಹೊಸದಾಗಿ ಬೋರ್‌ವೆಲ್ ಕೊರೆಸುವ ಸಂದರ್ಭದಲ್ಲಿ ಲಭ್ಯವಿರುವ ಉಪಕರಣಗಳು, ಪಂಪ್ ಮೋಟಾರ್ ಹಾಗೂ ಪೈಪ್‌ಲೈನ್‌ಗಳನ್ನು ಸರಿಯಾಗಿ ಬಳಸಿಕೊಂಡು ಅನಗತ್ಯ ವೆಚ್ಚವನ್ನು ತಡೆಯಬೇಕು. ಪಿಡಿಒ ಹಾಗೂ ಕಾರ್ಯದರ್ಶಿಗಳು ವ್ಯವಸ್ಥವಾಗಿ ದಾಖಲೆಗಳನ್ನು ನಿರ್ವಹಣೆ ಮಾಡಿ, ವಾರ ಅಥವಾ 15 ದಿನಗಳ ಒಳಗಾಗಿ ಆಯಾ ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ ಮಾಡಬೇಕು. ತಿಂಗಳುಗಟ್ಟಲೆ ಬಿಲ್ ಬಾಕಿ ಇಟ್ಟುಕೊಳ್ಳಬಾರದು ಎಂದು ಎಚ್ಚರಿಸಿದರು.
ನೀರು ಪೂರೈಕೆ ಮಾಡುವ ವೇಳೆ ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯಬೇಕು. ವಾಟರ್‌ಮೆನ್‌ಗಳು ನೀರು ಪೂರೈಕೆಯ ಉಸ್ತುವಾರಿಯನ್ನು ಸರಿಯಾಗಿ ನಿರ್ವಹಿಸಿ, ಎಲ್ಲಾ ವಾರ್ಡ್ಗಳಿಗೂ ಹಾಗೂ ಸಾರ್ವಜನಿಕರಿಗೆ ಸಮಾನವಾಗಿ ನೀರು ತಲುಪುವಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಪೈಪ್‌ಲೈನ್‌ಗಳು ಎಲ್ಲಾದರೂ ಹಾನಿಗೊಳಗಾಗಿದ್ದರೆ ತಕ್ಷಣವೇ ದುರಸ್ತಿಪಡಿಸಬೇಕು. ಚರಂಡಿ ನೀರು ಮತ್ತು ಕುಡಿಯುವ ನೀರು ಮಿಶ್ರಣವಾಗಿ ರೋಗರುಜಿನಗಳು ಹರಡದಂತೆ ಹಾಗೂ ಯಾವುದೇ ಅನಾಹುತ ಸಂಭವಿಸದಂತೆ ತಕ್ಷಣವೇ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲೆಯ ಹಿರಿಯೂರು, ಹೊಳಲ್ಕೆರೆ, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಕುರಿತು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಹೊಸದುರ್ಗ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ವೇದಾವತಿ ನದಿ ಮೂಲ, ಬೊರನಕಣಿವೆ ಜಲಾಶಯ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯ ನೀರಿನ ಲಭ್ಯತೆಯ ಕುರಿತು ವರದಿ ಪಡೆದು, ಮೇಲಧಿಕಾರಿಗಳೊಂದಿಗೆ ಸಮಾಲೋಚಿಸಿ ಅಗತ್ಯ ನೀರು ಬಿಡುಗಡೆಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು.
ಇದನ್ನೂ ಓದಿ: ಸಿಸಿಟಿವಿ ಕಣ್ಗಾವಲಿನಲ್ಲಿ ಭೂಮಾಪಕ, ಗ್ರಾಮ ಆಡಳಿತಾಧಿಕಾರಿ ಪರೀಕ್ಷೆ | ಡಿಸಿ ರಮ್ಯಾ
ಜಿಲ್ಲೆಯ ಒಟ್ಟು 132 ಕೆರೆಗಳ ಪೈಕಿ ಶೇ. 30 ಕ್ಕೂ ಹೆಚ್ಚು ಭರ್ತಿಯಾಗಿರುವ ಕೆರೆಗಳು ಕೇವಲ ಬೆರಳೆಣಿಕೆಯಷ್ಟಿದ್ದು, ಬಹುತೇಕ ಕೆರೆಗಳು ಖಾಲಿಯಾಗಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಗೋಶಾಲೆ ಮತ್ತು ಮೇವಿನ ನಿರ್ವಹಣೆ:
ಜಿಲ್ಲೆಯ ಚಳ್ಳಕೆರೆ, ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಮುಂತಾದ ಪ್ರದೇಶಗಳಲ್ಲಿ ಮೇವಿನ ಕೊರತೆ ಎದುರಾಗದಂತೆ ಕ್ರಮ ವಹಿಸಲು ಸಭೆಯಲ್ಲಿ ಸೂಚಿಸಲಾಯಿತು. ಗೋಶಾಲೆಗಳಲ್ಲಿ ಪ್ರತಿ ಜಾನುವಾರಿಗೆ ದಿನಂಪ್ರತಿ ಲೆಕ್ಕಾಚಾರದಲ್ಲಿ ಮೇವು ಮತ್ತು ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶಿಸಲಾಯಿತು. ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸಿ, ಅಗತ್ಯವಿರುವ ಕಡೆಗಳಲ್ಲಿ ಗೋಶಾಲೆಗಳನ್ನು ಪ್ರಾರಂಭಿಸಲು ತಾಲೂಕು ಆಡಳಿತದಿಂದ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲಾಯಿತು.
ಜಿಲ್ಲೆಯಲ್ಲಿರುವ ದೇವರ ಎತ್ತುಗಳಿಗೆ ಸಂಘಗಳ ಮೂಲಕ ಅಥವಾ ಸರ್ಕಾರಿ ನಿಯಮಾವಳಿಗಳ ಅಡಿಯಲ್ಲಿ ಮೇವು ಒದಗಿಸುವ ಕುರಿತು ನಿರ್ದೇಶನ ನೀಡಲಾಯಿತು. ಮೇವಿನ ಬ್ಯಾಂಕ್ ನಿರ್ವಹಣೆಯಲ್ಲಿ ಯಾವುದೇ ಲೋಪದೋಷಗಳು ಹಾಗೂ ದುರುಪಯೋಗವಾಗದಂತೆ ಸರಿಯಾದ ದಾಖಲಾತಿ ಕಾಯ್ದುಕೊಳ್ಳಲು ಸೂಚನೆ ನೀಡಲಾಯಿತು. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಅಧ್ಯಯನ ಮಾಡಲು ಭೇಟಿ ನೀಡಲಿರುವ ಕೇಂದ್ರ ತಂಡದ ಪರಿಶೀಲನೆಗೆ ಅಗತ್ಯವಿರುವ ಎಲ್ಲಾ ಮಾಹಿತಿ ಮತ್ತು ಸಿದ್ಧತೆಗಳನ್ನು ಕೃಷಿ ಮತ್ತು ಕಂದಾಯ ಇಲಾಖೆಗಳು ಸಮನ್ವಯದಿಂದ ಮಾಡಿಕೊಳ್ಳಲು ಸೂಚಿಸಲಾಯಿತು.
ಇದನ್ನೂ ಓದಿ: ಮೌಲ್ಯಯುತ ಬದುಕಿಗೆ ಗಮಕ ಮಾರ್ಗದರ್ಶಕ | ನಾಗರತ್ನ ಬದರೀನಾಥ್
ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ಜಿ.ಪಂ.ಸಿಪಿಓ ಗಾಯಿತ್ರಿ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಇಲಾಕೆ ಜಂಟಿ ನಿರ್ದೇಶಕಿ ಸವಿತಾ, ಆಹಾರ ಜಂಟಿ ನಿರ್ದೇಶಕ ಸಿದ್ರಾಮ ಮಾರಿಹಾಳ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಉಪಸ್ಥಿತರಿದ್ದರು. ಎಲ್ಲ ತಾಲ್ಲೂಕು ಮಟ್ಟದ ಅಧಿಕಾರಿಗಳು ವಿಡಿಯೋ ಕಾನ್ಫರೆನಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

