
ಚಿತ್ರದುರ್ಗನ್ಯೂಸ್.ಕಾಂ
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪವಿತ್ರ ದೈವೀ ಕ್ಷೇತ್ರವಾದ ಕಲ್ಲತ್ತಿಗಿರಿಯ ವಾತಾವರಣವನ್ನು ಮೂಢನಂಬಿಕೆ ಹೆಸರಲ್ಲಿ ಹಾಳು ಮಾಡಬೇಡಿ ಎಂದು ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯ ತಿಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲತ್ತಿಗಿರಿಯಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಕಾರ್ತೀಕೋತ್ಸವಕ್ಕೆ ದೀಪ ಬೆಳಗಿ ಚಾಲನೆ ನೀಡಿ ಮಾತನಾಡಿ, ‘ರಾಮಾಯಣ ಕಾಲದಿಂದಲೂ ಕೂಡಾ ಔಷಧೀಯ ಸಸ್ಯಗಳಿಗೆ,ಧಾರ್ಮಿಕ ನಂಬಿಕೆಗೂ ಕೂಡಾ ಅಷ್ಟೇ ಹೆಸರುವಾಸಿಯಾಗಿದೆ’ ಎಂದರು.

‘ವೀರಭದ್ರೇಶ್ವರ ಸ್ವಾಮಿ, ಚೌಡೇಶ್ವರಿ ದೇವಿ ದೇವಾಲಯಕ್ಕೆ ಭಕ್ತರು ಮತ್ತು ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಇಲ್ಲಿಗೆ ಬರುವ ಕೆಲವರು ಮೂಢನಂಬಿಕೆ ಹೆಸರಲ್ಲಿ ತಮ್ಮ ಹಳೆಯ ಬಟ್ಟೆಗಳನ್ನು ಇಲ್ಲಿಯೇ ಬಿಟ್ಟು ಹೋಗುವುದರಿಂದ ಇಲ್ಲಿನ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುವುದರ ಜೊತೆಗೆ ಪುಣ್ಯ ಕ್ಷೇತ್ರ ಮಲೀನವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಕಲ್ಲತ್ತಿಗಿರಿಗೆ ಬರುವ ಪ್ರವಾಸಿಗರು ತಮ್ಮ ಮನಸೋ ಇಚ್ಛೆ ತ್ಯಾಜ್ಯ ಎಸೆದು ಪುಣ್ಯ ಕ್ಷೇತ್ರವನ್ನು ಅಪವಿತ್ರ ಸ್ಥಳವನ್ನಾಗಿ ಮಾಡಬಾರದು. ಇದರಿಂದ ಪರಿಸರದ ಸೂಕ್ಷ್ಮತೆಗೆ ಧಕ್ಕೆ ತರುವುದಲ್ಲದೆ ಜಲಮೂಲದ ಪವಿತ್ರತೆಯನ್ನು ಅಪವಿತ್ರ ಮಾಡಿ ಔಷಧೀಯ ಗುಣಗಳುಳ್ಳ ಸಸ್ಯಗಳ ವಿನಾಶಕ್ಕೆ ಕಾರಣವಾಗುತ್ತದೆ’ ಎಂದು ಎಚ್ಚರಿಸಿದರು.
‘ಪರಿಸರ ಸೂಕ್ಷ್ಮ ಹಾಗೂ ಪವಿತ್ರ ಪುಣ್ಯಸ್ಥಳಗಳ ಸಂರಕ್ಷಣೆ ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ಆದ್ಯ ಕರ್ತವ್ಯ. ಸಂಬಂಧಪಟ್ಟ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಇದಕ್ಕೆಲ್ಲ ಕಡಿವಾಣ ಹಾಕಬೇಕು. ಈ ಮೂಲಕ ಈ ಸ್ಥಳವನ್ನು ಸಂರಕ್ಷಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು’ ಎಂದರು.
ಕಲ್ಲತ್ತಿಗಿರಿಯ ನಿಸರ್ಗ ಸೌಂದರ್ಯವನ್ನು ಸವಿದ ಸ್ವಾಮೀಜಿ, ಸುಮಾರು 400 ಅಡಿ ಎತ್ತರದಿಂದ ಚಂದ್ರ ದ್ರೋಣ ಬೆಟ್ಟಗಳ ಕೆಳಗೆ ಬೀಳುವ ಕಲ್ಲತ್ತಿಗಿರಿ ಜಲಪಾತದ ನೀರನ್ನು ನೆರೆದಿದ್ದ ಭಕ್ತರಿಗೆ ಪ್ರೋಕ್ಷಿಸಿದರು. ಹರಿಯುವ ಜಲಧಾರೆಯ ಬಹುಕಾಂತೀಯ ದೃಶ್ಯವನ್ನು ಮನತುಂಬಿಕೊಂಡರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
