CHITRADURGA NEWS | 27 OCTOBER 2026
ಚಿತ್ರದುರ್ಗ: ಕೇಂದ್ರ ಚುನಾವಣಾ ಆಯೋಗ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 ಕಾರ್ಯ ಪೂರ್ಣಗೊಂಡಿದ್ದು, 13,17,025 ಮತದಾರರು ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅಂತಿಮ ಪಟ್ಟಿ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್ (ಸಹಾಯಕ ಚುನಾವಣಾಧಿಕಾರಿ) ಕಚೇರಿ ಹಾಗೂ ಚುನಾವಣೆ ಆಯೋಗದ ಅಧಿಕೃತ ವೆಬ್ಸೈಟ್ನಲ್ಲೂ ಸಾರ್ವಜನಿಕರ ಪರಿಶೀಲನೆಗೆ ಲಭ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ಗುಂಡಿಕೆರೆ, ಕೆರೆಯಾಗಳಹಳ್ಳಿ ಸೇರಿ 7 ಕೆರೆಗಳಿಗೆ ನೀರು ತುಂಬಿಸಿ | ರೈತ ಸಂಘದಿಂದ ಮನವಿ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಈ ಕುರಿತು ಪತ್ರಿಕಾಗೋಷ್ಠಿ ನಡಿಸಿ ಅವರು ಮಾತನಾಡಿದರು.
2002 ವಿಶೇಷ ಸಮಗ್ರ ಪರಿಷ್ಕರಣೆ ಮತದಾರರ ಪಟ್ಟಿಯ ಆಧಾರದ ಮೇಲೆ, 2026ರ ಜೂನ್ 16 ರಂದು ಪ್ರಕಟಿಸಲಾಗಿದ್ದ ಪಟ್ಟಿಯಲ್ಲಿ ಜಿಲ್ಲೆಯಲ್ಲಿ 14,40,534 ಮತದಾರರಿದ್ದರು. ನಂತರ ಬಿಎಲ್ಒಗಳ ಮೂಲಕ 14,04,219 ಮತದಾರ ಮ್ಯಾಪಿಂಗ್ ಕಾರ್ಯ ಪೂರ್ಣಗೊಳಿಸಿ ಶೇ 97.48 ರಷ್ಟು ಮ್ಯಾಪಿಂಗ್ ಸಾಧನೆ ಮಾಡಲಾಗಿತ್ತು. ಮ್ಯಾಪಿಂಗ್ ಆದವರ ಪೈಕಿ 12,97,789 ಮತದಾರರ ಗಣತಿ ನಮೂನೆಗಳ ಡಿಜಿಟಲೀಕರಣ ಪೂರ್ಣಗೊಳಿಸಗಿದ್ದು, ಈ ವೇಳೆ ಜಿಲ್ಲೆಯಲ್ಲಿ 30,854 ಮರಣ, 70,525 ಶಾಶ್ವತ ವಲಸೆ, 21,537 ಡಬಲ್ ಎಂಟ್ರಿ, 18,837 ಗೈರು ಹಾಜರಿ ಹಾಗೂ ಇತರೆ ಕಾರಣಗಳಿಂದ 992 ಸೇರಿ ಒಟ್ಟು 1,42,745 ಮತದಾರರನ್ನು ಎ.ಎಸ್.ಡಿ.ಡಿ.ಒ ಅಡಿ ಗುರುತಿಸಲಾಗಿತ್ತು.
24 ಆಗಸ್ಟ್ 2026 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿದಾಗ ಜಿಲ್ಲೆಯಲ್ಲಿ 12,97,789 ಮತದಾರರಿದ್ದರು. ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ ಸಂದರ್ಭದಲ್ಲಿ 22,751 ಅರ್ಹ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಇದೇ ವೇಳೆ ನಿಧನ, ನಿವಾಸ ಸ್ಥಳ ಬದಲಾವಣೆ ಹಾಗೂ ದ್ವಿಪ್ರತಿ ಹೆಸರು ಹೊಂದಿದ್ದ 3,515 ಮತದಾರರ ಹೆಸರುಗಳನ್ನು ನಮೂನೆ-7ರ ಅಡಿಯಲ್ಲಿ ಕೈಬಿಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ಜಿಲ್ಲೆಯಲ್ಲಿ ಮಹಿಳಾ ಮತದಾರರು ಹೆಚ್ಚು:
ಪ್ರಕಟಿತ ಅಂತಿಮ ಮತದಾರರ ಪಟ್ಟಿಯಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 13,17,025 ಮತದಾರರಿದ್ದು, ಇದರಲ್ಲಿ 6,55,220 ಪುರುಷ, 6,61,737 ಮಹಿಳಾ ಮತದಾರರು ಹಾಗೂ 68 ಇತರೆ ಮತದಾರರಿದ್ದಾರೆ. ಮತದಾರರ ಲಿಂಗಾನುಪಾತ ಪ್ರತಿ 1000 ಪುರಷರಿಗೆ 1010 ಮಹಿಳಾ ಮತದಾರರು ಇದ್ದು, ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 27 | ಹತ್ತಿ ರೇಟ್ ಎಷ್ಟಿದೆ?
ಜಿಲ್ಲೆಯ ಅಂದಾಜು ಜನಸಂಖ್ಯೆ 18,71,543 ಇದ್ದು, ಒಟ್ಟು ಜನಸಂಖ್ಯೆಯ ಶೇ.70.37 ರಷ್ಟು ಜನರು ಮತದಾರರಾಗಿದ್ದಾರೆ.
18 ರಿಂದ 19 ವರ್ಷದ ಒಳಗಿನ 26,228, 85 ವರ್ಷದಾಟಿದ 11,394, ವಿಕಲಚೇತನ 23,774 ಸೇವಾ ಮತದಾರ 360, ಹಾಗೂ 9 ಎನ್.ಆರ್.ಐ ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾಹಿತಿ ನೀಡಿದರು.
ಎಸ್ಐಆರ್ ಪ್ರಕ್ರಿಯೆಗೆ ರಾಜಕೀಯ ಪಕ್ಷಗಳ ಮೆಚ್ಚುಗೆ:
ಜಿಲ್ಲಾಡಳಿತವು ಪಾರದರ್ಶಕವಾಗಿ ಎಸ್ಐಆರ್ ಕಾರ್ಯವನ್ನು ಪೂರ್ಣಗೊಳಿಸಿರುವುದಕ್ಕೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿ ನಂತರ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರಪಡಿಸಿದರು.
ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆ ಮತ್ತು ಹೆಬ್ಬೆರಳ ಗುರುತು ಲಿಂಕ್ ಮಾಡುವ ವ್ಯವಸ್ಥೆ ಜಾರಿಗೆ ತಂದರೆ ನಕಲಿ ಮತದಾನ ತಡೆಯಲು ಸಾಧ್ಯ ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಲಹೆ ನೀಡಿದರು. ಅಲ್ಲದೆ, ಜಿಲ್ಲಾಡಳಿತವು ಪಾರದರ್ಶಕವಾಗಿ ಎಸ್ಐಆರ್ ಕಾರ್ಯ ಪೂರ್ಣಗೊಳಿಸಿರುವುದಕ್ಕೆ ಧನ್ಯವಾದ ಸಲ್ಲಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಗ್ಯಾಸ್ಟ್ರೊ ಶಿಬಿರ
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಮತದಾರರ ಪಟ್ಟಿ ಸೇರ್ಪಡೆ ನಿರಂತರ ಪ್ರಕ್ರಿಯೆಯಾಗಿದ್ದು, ಅರ್ಹರು ನಮೂನೆ-6 ಸಲ್ಲಿಸಿ ಹೆಸರು ಸೇರಿಸಬಹುದು, = ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರ್ಪಡೆ ಮಾಡಲು 4 ಅರ್ಹತಾ ದಿನಾಂಕಗಳನ್ನು ನೀಡಿ ಅವಕಾಶ ಕಲ್ಪಿಸಿದ್ದು, ಅದರಂತೆ 1ನೇ ಜನವರಿ, 1ನೇ ಏಪ್ರಿಲ್, 1ನೇ ಜುಲೈ, 1ನೇ ಅಕ್ಟೋಬರ್ ಆಗಿರುತ್ತದೆ.
18 ವರ್ಷ ಪೂರ್ಣಗೊಳ್ಳುವವರು ಹಾಗೂ ಅರ್ಹ ಮತದಾರರು ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಲ್ಲದವರು ಹಾಗೂ ಹೆಸರು ಕೈಬಿಟ್ಟು ಹೋಗಿರುವವರು ಹಾಗೂ ಮತದಾರರ ಪಟ್ಟಿಯಲ್ಲಿ ಮಾಹಿತಿಯನ್ನು ತಿದ್ದುಪಡಿ ಮಾಡಿಸಬೇಕಾದಲ್ಲಿ ಮತ್ತು ಅದೇ ವಿಧಾನಸಭಾ ಕ್ಷೇತ್ರದ ಬೇರೆ ಮತಗಟ್ಟೆಗೆ ವರ್ಗಾಯಿಸಬೇಕಾಗಿದಲ್ಲಿ ನಿಗಧಿಪಡಿಸಿರುವ ನಮೂನೆಗಳಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ತಮ್ಮ ವ್ಯಾಪ್ತಿಯ ಮತದಾನ ಕೇಂದ್ರದಲ್ಲಿ ತಾಲ್ಲೂಕು ಕಚೇರಿಯಲ್ಲಿ, ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಅಗತ್ಯ ದಾಖಲೆಗಳೊಂದಿಗೆ ನೀಡಿ ಸ್ವೀಕೃತಿ ಪಡೆಯಬಹುದಾಗಿದೆ.
ಇದನ್ನೂ ಓದಿ: ಮಧುಮೇಹ ರೋಗಿಗಳು ಈ ಹಣ್ಣುಗಳನ್ನು ತಿನ್ನಲು ಭಯಪಡುವ ಅಗತ್ಯವಿಲ್ಲ
ಸಭೆಯಲ್ಲಿ ಚುನಾವಣಾ ತಹಶೀಲ್ದಾರ್ ಬೀಬಿ ಫಾತೀಮ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಬಿಎಸ್ಪಿ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್, ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಸಿಪಿಐ (ಎಂ) ಡಿಒಸಿ ಸಿ.ಕೆ.ಗೌಸ್ಪೀರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಸಿ.ಜೆ.ನಾಸಿರುದ್ದೀನ್, ಎಎಪಿ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಪಿ.ಎಂ.ಮಂಜುನಾಥ್ ಸೇರಿದಂತೆ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

