CHITRADURGA NEWS | 29 OCTOBER 2026
ಚಿತ್ರದುರ್ಗ: ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರು ಕೇವಲ ಪದವಿ ಶಿಕ್ಷಣಕ್ಕೆ ಸೀಮಿತವಾಗದೆ, ಕೌಶಲ್ಯ ಆಧಾರಿತ ಉದ್ಯೋಗ ಕಂಡುಕೊಳ್ಳಲು ಅಗತ್ಯ ತರಬೇತಿ ಪಡೆಯುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಯುವ ಜನರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿಗೆ ಆದ್ಯತೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 29 | ಹತ್ತಿ ರೇಟ್….
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೌಶಲ್ಯ ತರಬೇತಿ ಕಾರ್ಯಕ್ರಮಗಳು ಯುವಜನತೆಗೆ ಸ್ವಾವಲಂಬನೆ ಮತ್ತು ಉದ್ಯೋಗಾವಕಾಶಗಳ ಕಂಡುಕೊಳ್ಳಲು ಸಹಕಾರಿಯಾಗಲಿವೆ. ಕೌಶಲ್ಯಾಭಿವೃದ್ಧಿ ಯೋಜನೆಗಳ ಅನುಷ್ಠಾನ ಹಾಗೂ ಯುವಜನತೆಗೆ ಸೂಕ್ತ ತರಬೇತಿ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಹಾಗೂ ಸಂಸ್ಥೆಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು, ಜಿಟಿಟಿಸಿ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜುಗಳು, ಸರ್ಕಾರಿ ಹಾಗೂ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು, ಖಾಸಗಿ ವೃತ್ತಿಪರ ತರಬೇತಿ ಸಂಸ್ಥೆಗಳು ಯುವ ಜನರಿಗೆ ನೀಡುತ್ತಿರುವ ತರಬೇತಿ ಮತ್ತು ಉದ್ಯೋಗಾವಕಾಶ ಕುರಿತು ಮಾಹಿತಿ ಪಡೆದ ಅಪರ ಜಿಲ್ಲಾಧಿಕಾರಿಗಳು, ಯುವ ಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಉದ್ಯೋಗಾಧಾರಿತ ಕೋರ್ಸ್ಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ (ಸಿಎಂಕೆಕೆವೈ) ಯೋಜನೆ ಅನುಷ್ಠಾನಗೊಳಿಸಲು ಬೇಡಿಕೆಗೆ ಅನುಗುಣವಾಗಿ ಕ್ರಿಯಾ ಯೋಜನೆ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ABVP ಅರಳುವ ಪ್ರತಿಭೆ | ರಾಜ್ಯ ಮಟ್ಟದ ಬರಹಗಾರರ ಶಿಬಿರ
ಜಿಲ್ಲೆಯಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ತರಬೇತಿ ಅವಶ್ಯಗಳ ಗುರುತಿಸುವಿಕೆ, ಕೈಗಾರಿಕಾ ಸಂಪರ್ಕ ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಜಿಲ್ಲೆಯಲ್ಲಿರುವ ಶೈಕ್ಷಣಿಕ ಸಂಸ್ಥೆಗಳು, ಕಾಲೇಜುಗಳು, ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳ, ಬ್ಯಾಂಕುಗಳು ಮತ್ತು ಇತರೆ ಸಂಸ್ಥೆಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಬೇಕು. ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳು, ಲೀಡ್ ಬ್ಯಾಂಕ್ ಬ್ಯಾಂಕ್ ವ್ಯವಸ್ಥಾಪಕರು, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು ಸಭೆ ನಡೆಸುವಂತೆ ತಿಳಿಸಿದರು.
ರುಡ್ಸೆಡ್ ಸಂಸ್ಥೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ 1,000 ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ 654 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಇನ್ನು 346 ಅಭ್ಯರ್ಥಿಗಳಿಗೆ ತರಬೇತಿ ನೀಡಬೇಕಿದೆ. ನಮ್ಮಲ್ಲಿ ಮೊಬೈಲ್ ರಿಪೇರಿ, ಸಿಸಿಟಿವಿ ಅಳವಡಿಕೆ, ಹೌಸ್ ವೈರಿಂಗ್ ಹಾಗೂ ಗೃಹೋಪಯೋಗಿ ಉಪಕರಣಗಳ ದುರಸ್ತಿ ಕುರಿತು ಉಚಿತ ವಸತಿಯುತ ತರಬೇತಿ ನೀಡಲಾಗುತ್ತಿದೆ.
ತರಬೇತಿ ಪಡೆದ ಶೇ.70ರಷ್ಟು ಜನ ಸ್ವಯಂ ಉದ್ಯೋಗ ಕಂಡುಕೊಂಡಿದ್ದಾರೆ ಎಂದು ತಿಳಿಸಿದ ಅವರು, ಐಟಿಐ ಹಾಗೂ ವಿವಿಧ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ರುಡ್ಸೆಟ್ ತರಬೇತಿ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರೆ ಹೆಚ್ಚಿನ ಯುವಜನರಿಗೆ ಅನುಕೂಲವಾಗುತ್ತದೆ ಎಂದು ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಹೆಚ್.ಟಿ.ಬಸವರಾಜ್ ಅಶೋಕಪ್ಪ ಮನವಿ ಮಾಡಿದದರು.
ಇದನ್ನೂ ಓದಿ: ರಾಜ್ಯಮಟ್ಟದ ಕಲಾಶ್ರೀ ಸ್ಪರ್ಧೆಗೆ ಜಿಲ್ಲಾಮಟ್ಟದ ಆಯ್ಕೆ | 9ರಿಂದ 16 ವರ್ಷದ ಮಕ್ಕಳಿಗೆ ಅವಕಾಶ
ನ.03ರಂದು ‘ಯುವ ಉದ್ಯೋಗ ಸೇತು’ ಪೋರ್ಟಲ್ ಬಿಡುಗಡೆ:
ರಾಜ್ಯ ಸರ್ಕಾರವು ಉದ್ಯೋಗಾಂಕ್ಷಿಗಳು ಹಾಗೂ ಉದ್ಯೋಗದಾತರನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ‘ಯುವ ಉದ್ಯೋಗ ಸೇತು’ ಫೋರ್ಟಲ್ ಅನ್ನು ನವೆಂಬರ್ 3 ರಂದು ಮುಖ್ಯಮಂತ್ರಿಗಳು ಬಿಡುಗಡೆ ಮಾಡಲಿದ್ದಾರೆ. ಜಿಲ್ಲೆಯಿಂದ ನವೆಂಬರ್ 3 ರೊಳಗಾಗಿ ಕನಿಷ್ಠ 200 ಉದ್ಯೋಗಾಕಾಂಕ್ಷಿಗಳನ್ನು ಈ ಪೋರ್ಟಲ್ನಲ್ಲಿ ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಣ್ಣಕ್ಕಿ ಮಾರುತಿ ಮಾಹಿತಿ ನೀಡಿದರು.
ಖಾಸಗಿ ಕಂಪನಿಗಳು ಹಾಗೂ ಉದ್ಯೋಗದಾತರನ್ನೂ ಈ ಪೋರ್ಟಲ್ನಲ್ಲಿ ನೋಂದಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಕಾಲೇಜುಗಳು ತಮ್ಮ ಹಳೆ ವಿದ್ಯಾರ್ಥಿಗಳಿಗೆ ಈ ಕುರಿತು ಮಾಹಿತಿ ತಲುಪಿಸಿ ಗರಿಷ್ಠ ಸಂಖ್ಯೆಯಲ್ಲಿ ನೋಂದಣಿಯಾಗುವಂತೆ ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಸರ್ಕಾರಿ ನರ್ಸಿಂಗ್ ಕಾಲೇಜು | ಅ.31ರಂದು ಕೌನ್ಸೆಲಿಂಗ್
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಮಂಜುನಾಥ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ.ಪಿ.ಪ್ರವೀಣ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯ ಸಹಾಯಕ ಸಾಂಖ್ಯಿಕ ಅಧಿಕಾರಿ ವೇಮಣ್ಣ, ಡೇ ನಲ್ಮ್ ಅಭಿಯಾನ ವ್ಯವಸ್ಥಾಪಕ ಅತೀಕ್ ರೆಹಮಾನ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ ಭಾವಿಮಠ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ, ಚಿತ್ರದುರ್ಗ ಜಿಟಿಟಿಸಿ ಕಾಲೇಜು ಪ್ರಾಂಶುಪಾಲ ಸುಹಾಸ್, ಜಿಲ್ಲಾ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಜಿ.ಡಿ.ಕೆಂಚವೀರಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

