ಮುಖ್ಯ ಸುದ್ದಿ
ಮಹಿಳಾ ದಿನಾಚರಣೆ ವಿಶೇಷ | ನಿನಗೆ ಬೇರೆ ಹೆಸರು ಬೇಕೇ.. ಸ್ತ್ರೀ ಎಂದರೆ ಅಷ್ಟೇ ಸಾಕೇ..!

CHITRADURGA NEWS | 08 MARCH 2025
ಹಿಂದಿನಿಂದ ಇಂದಿನವರೆಗಿನ ಮಹಿಳೆಯ ಸ್ಥಾನಮಾನ, ಆಕೆಯ ಜೈವಿಕ ತಲ್ಲಣಗಳು, ಸಾಂಸ್ಕೃತಿಕ ನಿಲುವುಗಳು, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ತನ್ನನ್ನು ತೊಡಗಿಸಿಕೊಂಡ ಬಗೆ, ಬದಲಾವಣೆಯ ಕಾಲಘಟ್ಟದಲ್ಲಿ ಮಹಿಳೆಯರ ಅಸ್ಮಿತೆ ಮುಂತಾದ ವಿಚಾರಗಳು ಚರ್ಚಿತವಾಗುವ ದಿನವೇ “ಮಹಿಳಾ ದಿನಾಚರಣೆ “.
Also Read: ಬಜೆಟ್‍ನಲ್ಲಿ ರೈತರಿಗೆ ಬಂಪರ್ | ಜಾನುವಾರು ಮೃತಪಟ್ಟರೆ 15 ಸಾವಿರ ಪರಿಹಾರ
ಇಂದಿನ ಬಹುಮುಖತೆಯ ಸ್ತ್ರೀವಾದ ಪ್ರಜ್ಞೆಯ ವಿಕಾಸದ ಬೇರೆ ಬೇರೆ ಹಂತಗಳು ಸಕಾಲಿಕವಾಗಿ ಅಸ್ಥಿತ್ವದಲ್ಲಿರುವ ಪರಿಣಾಮ ಅನೇಕ ನೆಲೆಗಳಲ್ಲಿ ವಿಸ್ತರಿಸಿಕೊಳ್ಳುತ್ತದೆ. ಮನುಷ್ಯನ ನಾಗರೀಕತೆಯ ಉತ್ಕರ್ಷದ ಸಂದರ್ಭದಲ್ಲಿಯೂ ಲಿಂಗಸಮಾನತೆಯಲ್ಲಿ ಸಹಮತವೊಂದು ಮೂಡಿದೆ ಎನ್ನುವುದು ಸುಲಭ ಸಾಧ್ಯವಾಗಿಲ್ಲ. ಇದು ಪರಂಪರೆಯ ಸಮಸ್ಯೆಯೂ ಹೌದು.
ಇಂದು ತನ್ನ ಸಾಮರ್ಥ್ಯ ಶಕ್ತಿಗಳಿಂದಲೇ ಅಪಾರವಾದುದನ್ನು ಸಾಧಿಸಿರುವ ಮಹಿಳೆ ಮತ್ತು ಅವೇ ಸಾಂಪ್ರದಾಯಿಕ ಕಾರಣಗಳಿಂದಲೇ ಶೋಷಣೆಗೆ ಒಳಗಾಗುತ್ತಿರುವುದನ್ನು ಸುಲಭವಾಗಿ ನಿರಾಕರಿಸುವಂತಿಲ್ಲ.
ಮಹಿಳಾ ತಲ್ಲಣಗಳ ಕುರಿತು ಅರಿವು, ಜಾಗೃತಿ, ಸಂಘಟನೆಗಾಗಿ “ಮಹಿಳಾಪರ ನಿಲುವುಗಳು ಮತ್ತು ಸಾಮರಸ್ಯವು “ಈ ನೆಲದ ಸತ್ಯವನ್ನು ಪ್ರತಿಸ್ಪಂದಿಸುವಂತಿದೆ. ಈ ನಿಟ್ಟಿನಲ್ಲಿ ಮನುಷ್ಯ ಕೇಂದ್ರ ಪ್ರಜ್ಞೆಯೊಳಗೆ “ಹೆಣ್ಣು “ಸಮಾನತೆಯನ್ನು ಬಯಸುವುದು ಇಡಿಯಾಗಿ ಪುರುಷ ಕುಲವನ್ನೇ ಪ್ರಶ್ನಿಸುವಂತಾಗಿದೆ.
ಮನೆ ಮನೆಯಲ್ಲಿ ದೀಪ ಮುಡಿಸಿ, ಹೊತ್ತು ಹೊತ್ತಿಗೆ ಅನ್ನ ಉಣಿಸಿ, ತಂದೆ ಮಗುವ ತಬ್ಬಿದಾಕೆ, ನಿನಗೆ ಬೇರೆ ಹೆಸರು ಬೇಕೇ, ಸ್ತ್ರೀ ಎಂದರೆ ಅಷ್ಟೇ ಸಾಕೆ……
ಎನ್ನುವ ಈ ಸಾಲುಗಳಲ್ಲಿ ಹೆಣ್ಣು ಇಡೀ ಮನುಕುಲವನ್ನು ತನ್ನ ಗರ್ಭದಲ್ಲಿರಿಸಿಕೊಂಡು ತಾಯಾಗಿ, ಮಗಳಾಗಿ, ಪತ್ನಿಯಾಗಿ, ಅತ್ತೆಯಾಗಿ, ಸೊಸೆಯಾಗುವುದರ ಜೊತೆಗೆ ದುಡಿಯುವ ಕ್ಷೇತ್ರದಲ್ಲೂ ತನ್ನನ್ನು ತಾನು ಸಾಬೀತುಪಡಿಸಿಕೊಂಡಿರುವವಳು.
Also Read: ಚಿತ್ರದುರ್ಗ KSRTC ನೂತನ ಡಿಸಿಯಾಗಿ ಕೆ.ವೆಂಕಟೇಶ್ ನೇಮಕ
ಸಮಾಜದ ವ್ಯವಸ್ಥೆಯೊಳಗೆ ಪುರುಷ ನಿಷ್ಟವಾಗಿ ಆಲೋಚನೆಯನ್ನು ಮಾಡುತ್ತಾ ಸಂಸ್ಕೃತಿ ಸಂವರ್ಧನೆಯಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ಆದರೂ ಅದನ್ನೆಲ್ಲ ಮೆಟ್ಟಿ ತನ್ನ ಅಸ್ಥಿತ್ವವನ್ನು ಬೌದ್ಧಿಕ ವಲಯದಲ್ಲಿ ಸಶಕ್ತಗೊಳಿಸಲು ನಡೆಸಿದ ಹೋರಾಟಗಳು ಇಂದು ಫಲ ನೀಡಿ ಎಲ್ಲ ಕ್ಷೇತ್ರಗಳಲ್ಲೂ ಮುನ್ನುಗ್ಗುವ ಧೈರ್ಯವನ್ನು ಪಡೆದಿದ್ದಾಳೆ.

ಗೀತಾ ಭರಮಸಾಗರ
ಪ್ರಸ್ತುತ ಸಂದರ್ಭದಲ್ಲಿ ಮಹಿಳೆ ಪ್ರವೇಶಿಸದ ಯಾವುದೇ ಕ್ಷೇತ್ರವಿಲ್ಲ. ಹಾಗೆಯೇ ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾಗಿ ಬೆಳೆಯುತ್ತಿದ್ದಾಳೆ. ಆದರೂ ಈ ಯಶಸ್ಸು ಒಟ್ಟು ಮಹಿಳೆಯರಲ್ಲಿ ಬೆರಳೆಣಿಕೆಯಷ್ಟು ಎಂದರೂ ತಪ್ಪಾಗಲಾರದು. ಉಳಿದಂತೆ ಬಹುದೊಡ್ಡ ಸ್ತ್ರೀ ಗುಂಪು ಬೇರೆ ಬೇರೆ ಕಾರಣಗಳಿಂದ ಯಾವ ಕ್ಷೇತ್ರದಲ್ಲೂ ಸೈ ಎನಿಸದೆ ಹಿಂದೆ ಉಳಿದಿರುವುದು. ಅದಕ್ಕೆ ಕಾರಣಗಳನ್ನು ಹುಡುಕುತ್ತ ಹೋದಾಗ ಸಮಸ್ಯೆಗಳ ಆಗರ ನಮ್ಮ ಕೈ ಸೇರುತ್ತದೆ.
ಇದನ್ನೆಲ್ಲಾ ನಿವಾರಿಸಿ ಎಲ್ಲ ಸ್ತ್ರೀಯರನ್ನು ಮುಖ್ಯವಾಹಿನಿಗೆ ತಂದು ಭಾರತದ ಅಭಿವೃದ್ಧಿಯಲ್ಲಿ ಸ್ತ್ರೀಯರು ಸಮಪಾಲಾಗಬೇಕಾದರೆ “ಮಹಿಳಾ ಹಕ್ಕುಗಳು “ಅಗತ್ಯವಾಗಿವೆ.
ಅಂಬೇಡ್ಕರ್ ಅವರು ಮಹಿಳೆಯರ ಸಬಲೀಕರಣಕ್ಕಾಗಿ ನಾಲ್ಕು ಮಹತ್ವದ ಮಸೂದೆಗಳನ್ನು ಮಂಡಿಸಿದರು. ಹಲವಾರು ಸಂವಿಧಾನಾತ್ಮಕ ರಕ್ಷಣೆಗಳು ಮತ್ತು ಅವಕಾಶಗಳನ್ನು ಒದಗಿಸಿದರು. ಶಿಕ್ಷಣ, ಸಂಘಟನೆ, ಹೋರಾಟಗಳಿಂದ ಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯವೆಂದು ತಿಳಿಸಿದ ಹಿನ್ನಲೆಯಲ್ಲಿ 21ನೇ ಶತಮಾನವನ್ನು ‘ಮಹಿಳಾ ಸಬಲೀಕರಣ ‘ವರ್ಷವನ್ನಾಗಿ ಜಗತ್ತಿನಾದ್ಯಾಂತ ಆಚರಿಸಲಾಗುತ್ತಿದೆ.
Also Read: ಬಜೆಟ್‌ನಲ್ಲಿ ಚಿತ್ರದುರ್ಗಕ್ಕೆ ದಕ್ಕಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಸ್ತ್ರೀ ನಾಲ್ಕು ಗೋಡೆಗಳ ನಡುವೆ ಕಾಲ ಕಳೆಯುವ ಕಾಲವೀಗ ಕಣ್ಮರೆಯಾಗಿ ಪುರುಷ ಪ್ರಧಾನ ಸಮಾಜದಲ್ಲಿ ಪುರುಷನಷ್ಟೇ ಧೀಮಂತಿಕೆಯಿಂದ ಬದುಕಲು ಸಾಧ್ಯವಿದೆಯೆಂದು ಹಲವಾರು ಸಾಧನೆಗಳನ್ನು ಮಾಡುವುದರೊಂದಿಗೆ ಎಲ್ಲ ಕ್ಷೇತ್ರಗಳಲ್ಲೂ ಮುನ್ನೆಡೆಯುತ್ತಾ ಜಗತ್ತಿನ ದೃಷ್ಟಿಯನ್ನು ತನ್ನೆಡೆಗೆ ಸೆಳೆದಿದ್ದಾಳೆ. ಶಿಕ್ಷಣ, ಕ್ರೀಡೆ, ರಾಜಕೀಯ, ಮಾಧ್ಯಮ, ಕಲೆ ಮತ್ತು ಸಂಸ್ಕೃತಿ ಸೇವಾಕ್ಷೇತ್ರಗಳು, ವಿಜ್ಞಾನ ಮತ್ತು ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ವಿಶ್ವದ ಗೌರವಕ್ಕೆ ಪಾತ್ರಳಾಗಿದ್ದಾಳೆ.
ಪ್ರಪಂಚದಾದ್ಯಂತ ಸಾಮಾನ್ಯ ಮಹಿಳೆಯರಿಗೆ ಗೌರವ ಅವಕಾಶವಾಗಿದೆ ಮತ್ತು ಪುರುಷರೊಂದಿಗೆ ಸಮಾನವಾಗಿ ಭಾಗವಹಿಸಲು ಮಹಿಳೆಯರು ಶತಮಾನಗಳಷ್ಟು ಹಳೆಯದಾದ ಹೋರಾಟದಲ್ಲಿ ಬೇರೂರಿದೆ. ಅಗಾಧವಾದ ಪ್ರಗತಿಯನ್ನು ಸಾಧಿಸಲಾಗಿದ್ದರೂ, ಮಹಿಳೆಯರು ನಿಜವಾದ ಸಮಾನತೆಯನ್ನು ಸಾಧಿಸುವ ಮೊದಲು ಇನ್ನೂ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ.
ಹಿನ್ನೆಲೆಯಲ್ಲಿ ಕಾರ್ಮಿಕ ಪ್ರತಿಭಟನೆಗಳಲ್ಲಿ ತನ್ನ ಬೇರುಗಳಿಂದ ಹಿಡಿದು ಮಹಿಳಾ ಸಾಧನೆಗಳ ಜಾಗತಿಕ ಆಚರಣೆಯವರೆಗೂ ಅಂತರಾಷ್ಟ್ರೀಯ ಮಹಿಳಾ ದಿನವು ವಿಶ್ವದಾದ್ಯಂತ ಲಿಂಗ ಸಮಾನತೆ,ಸಬಲೀಕರಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟವನ್ನು ಎತ್ತಿ ತೋರಿಸುತ್ತದೆ.
ಸುಧಾರಣೆಗಳ ಹೊರತಾಗಿಯೂ ವಿಶ್ವದಾದ್ಯಂತ ಮಹಿಳಾ ಹಕ್ಕುಗಳನ್ನು ಸಂಪೂರ್ಣವಾಗಿ ಸಾಕಾರಗೊಳಿಸುವಲ್ಲಿ ಇನ್ನೂ ಪ್ರಮುಖ ಅಡೆತಡೆಗಳು ನಿಂತಿವೆ. 2025ರಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವು ಸಾಧನೆಗಳ ಮೌಲ್ಯಮಾಪನ ಮಾಡಲು, ಅಡೆತಡೆಗಳನ್ನು ಗುರುತಿಸಲು ಮತ್ತು ಲಿಂಗ ಸಮಾನ ಭವಿಷ್ಯದತ್ತ ಪ್ರಮುಖ ಹೆಜ್ಜೆಗಳನ್ನು ತೆಗೆದುಕೊಳ್ಳುವ ಬದ್ಧತೆಯನ್ನು ನವೀಕರಿಸಲು ಒಂದು ಮಹತ್ವದ ಸಂದರ್ಭವಾಗಿದೆ.
Also Read: QR ಕೋಡ್ ಸ್ಕ್ಯಾನ್ ಮಾಡಿ, ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ…
ಮಹಿಳೆಯರ ಜೀವನದ ಮೇಲೆ ಪರಿಣಾಮ ಬೀರುವ ಕಾನೂನುಗಳು, ನಿಯಮಗಳು ಮತ್ತು ಸಾಮಾಜಿಕ ಸಂಪ್ರದಾಯಗಳಲ್ಲಿ ರಚನಾತ್ಮಕ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ” ರಾಷ್ಟ್ರೀಯ ಮಹಿಳಾ ದಿನಾಚರಣೆಯ” ಸಾರ್ಥಕ್ಯವಾಗಲಿ ಎಂದು ಹಾರೈಸುತ್ತ ಸಮಸ್ತ ಮಹಿಳೆಯರಿಗೆ ಶುಭಾಶಯಗಳು.
