ಮುಖ್ಯ ಸುದ್ದಿ
Vanivilasa: ವಾಣಿವಿಲಾಸ ಜಲಾಶಯದಲ್ಲಿ ಜಲ ವೈಭೋಗ | ಸನಿಹವಾಗಿದೆ ಮೂರನೇ ಬಾರಿಗೆ ಕೋಡಿ ಬೀಳುವ ಕ್ಷಣ
CHITRADURGA NEWS |03 SEPTEMBER 2024
ಚಿತ್ರದುರ್ಗ: ಬಯಲುಸೀಮೆಯ ಜಲಪಾತ್ರೆ ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯ ಬಹುತೇಕ ಭರ್ತಿಯಾಗುತ್ತಿದ್ದು, ಮೂರನೇ ಬಾರಿಗೆ ಕೋಡಿ ಬೀಳುವ ಕ್ಷಣ ಸನಿಹವಾಗುತ್ತಿದೆ. ಭದ್ರಾ ಹಾಗೂ ಎತ್ತಿನಹೊಳೆ ಯೋಜನೆ ಅಡಿ ಹರಿಸಲಾಗುವ ನೀರು ವಾಣಿವಿಲಾಸ ಜಲಾಶಯ ಸೇರುವ ಸಮಯ ಸಮೀಪಿಸುತ್ತಿರುವುದೇ ಈ ಸಂಭ್ರಮಕ್ಕೆ ಕಾರಣ.
1933ರಲ್ಲಿ ಮೊದಲ ಬಾರಿಗೆ ವಾಣಿವಿಲಾಸ ಜಲಾಶಯ ಭರ್ತಿಯಾಗಿತ್ತು. 89 ವರ್ಷಗಳ ನಂತರ 2022 ಸೆ. 2ರಂದು ಮತ್ತೊಮ್ಮೆ ಕೋಡಿ ಬಿದ್ದಿತ್ತು. ಈ ಬಾರಿ ಭದ್ರಾ ಜಲಾಶಯದಿಂದ ನಿತ್ಯ 700 ಕ್ಯುಸೆಕ್ ನೀರು ಹರಿಸಲಾಗುತ್ತಿದ್ದು (ಪ್ರಸ್ತುತ ಜಲಾಶಯದ ನೀರಿನ ಮಟ್ಟ 118.90 ಅಡಿ, ಪೂರ್ಣಮಟ್ಟ 130 ಅಡಿ) ಶೀಘ್ರದಲ್ಲಿಯೇ ಎತ್ತಿನಹೊಳೆ ಯೋಜನೆಯ ನೀರು ವೇದಾವತಿ ನದಿ ಮೂಲಕ ಹರಿದು ಬರಲಿದೆ. ಒಂದೆರಡು ತಿಂಗಳಲ್ಲಿ ಮೂರನೇ ಬಾರಿಗೆ ವಾಣಿವಿಲಾಸದ ಒಡಲು ತುಂಬುವ ನಿರೀಕ್ಷೆ ಇದೆ.
ಕ್ಲಿಕ್ ಮಾಡಿ ಓದಿ: ಗರುಡ ವಾಹನದಲ್ಲಿ ಕೋಟೆನಾಡು ಪ್ರವೇಶಿಸಲಿದೆ ಹಿಂದೂ ಮಹಾಗಣಪತಿ
ಪಶ್ಚಿಮಘಟ್ಟದಲ್ಲಿ ಹುಟ್ಟುವ ನೇತ್ರಾವತಿ ನದಿಯ ಉಪನದಿಗಳ ನೀರನ್ನು 8 ಕಿರಿಯ ಅಣೆಕಟ್ಟೆಗಳಲ್ಲಿ ಸಂಗ್ರಹಿಸಿ, ನಾಲ್ಕು ಚೇಂಬರ್‌ಗಳ ಮೂಲಕ ನೀರನ್ನು ಎತ್ತಲಾಗುತ್ತಿದೆ. ಸಕಲೇಶಪುರ ಸಮೀಪದ ಹಾರೋಹಳ್ಳಿ ಹತ್ತಿರ ಇರುವ 4ನೇ ಚೇಂಬರ್ (ಎತ್ತಿನಹೊಳೆಯ ಕೊನೆಯ ಲಿಫ್ಟ್ ಪಾಯಿಂಟ್)ನಿಂದ ನಾಲೆಯ ಮೂಲಕ ಸುಮಾರು 30 ಕಿ.ಮೀ. ದೂರದ ತುಮಕೂರುವರೆಗೆ ನೀರು ಬರುತ್ತದೆ.
ಇದೇ ನಾಲೆಯ ಎಡಭಾಗಕ್ಕೆ ಗೇಟ್ ಅಳವಡಿಸಿದ್ದು, ಈ ಗೇಟ್ ಮೂಲಕ ವೇದಾವತಿ ನದಿಯ ಉಪ ಹಳ್ಳವಾಗಿರುವ ಅಹುತಿಗೆ ನೀರು ಬಿಡಲಾಗುತ್ತದೆ. ಆಗಸ್ಟ್ 21ರಂದು ಅಹುತಿ ಹಳ್ಳಕ್ಕೆ ಪ್ರಯೋಗಾರ್ಥ ನೀರು ಬಿಟ್ಟಿದ್ದು, ಮಾರ್ಗದಲ್ಲಿ ಬರುವ ಹಳೇಬೀಡು ಕೆರೆ, ಚಿಕ್ಕಮಗಳೂರು ತಾಲ್ಲೂಕಿನಲ್ಲಿರುವ ಬೆಳವಾಡಿ ಕೆರೆ ಒಳಗೊಂಡಂತೆ ಸುಮಾರು 6 ಕೆರೆಗಳು ತುಂಬಿದ ನಂತರ ವೇದಾವತಿ ನದಿಯನ್ನು ನೀರು ಸೇರುತ್ತದೆ ಎಂದು ಉಪಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ ಎಚ್. ಈಶ್ವರಯ್ಯ ಮಾಹಿತಿ ನೀಡಿದ್ದಾರೆ.
ಕ್ಲಿಕ್ ಮಾಡಿ ಓದಿ: ಅಕ್ಕ ಸಮ್ಮೇಳನದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ | ಮಾತುಕತೆ
ಅಹುತಿ ಹಳ್ಳದ ಮೂಲಕ 71.50 ಕಿ.ಮೀ. ಕ್ರಮಿಸಿ ವೇದಾವತಿ ಸೇರುವ ಎತ್ತಿನಹೊಳೆ ಯೋಜನೆಯ ನೀರು ಅಲ್ಲಿಂದ ಸುಮಾರು 61 ಕಿ.ಮೀ. ಕ್ರಮಿಸಿ (ಒಟ್ಟು 132.50 ಕಿ.ಮೀ.) ವಾಣಿವಿಲಾಸ ಜಲಾಶಯ ಸೇರುತ್ತದೆ. ಅಹುತಿ ಹಳ್ಳ ಹರಿದು ಬರುವ ಮಾರ್ಗದಲ್ಲಿನ ಕೆರೆಗಳು ಬಹುತೇಕ ಭರ್ತಿಯಾಗಿದ್ದು, ಶೀಘ್ರದಲ್ಲಿಯೇ ವೇದಾವತಿ ನದಿ ಮೂಲಕ ವಾಣಿವಿಲಾಸದ ಒಡಲು ಸೇರಲಿದೆ ಎಂದು ಹೇಳಿದ್ದಾರೆ.
ಆಗಸ್ಟ್ 28ರಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ಸಮಕ್ಷಮದಲ್ಲಿ ಪ್ರಯೋಗಾರ್ಥ ನೀರು ಹರಿಸುವ ಕಾರ್ಯ ಯಶಸ್ವಿಯಾಗಿದ್ದು, ಸೆ. 6ರಂದು ಎತ್ತಿನಹೊಳೆ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಕನಸಿನ ಈ ಯೋಜನೆ ಸಾಕಾರವಾಗುವ ಜತೆಗೆ ವಾಣಿವಿಲಾಸ ತುಂಬುವುದರಿಂದ ಈ ಭಾಗದ ಜನರಿಗೂ ಅನುಕೂಲವಾಗಲಿದೆ.