Connect with us

ಎರಡು ವರ್ಷದಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣ | ಸಂಸದ ಗೋವಿಂದ ಎಂ.ಕಾರಜೋಳ ಭರವಸೆ

mp karjola

ಮುಖ್ಯ ಸುದ್ದಿ

ಎರಡು ವರ್ಷದಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣ | ಸಂಸದ ಗೋವಿಂದ ಎಂ.ಕಾರಜೋಳ ಭರವಸೆ

CHITRADURGA NEWS | 19 JUNE 2024
ಚಿತ್ರದುರ್ಗ:‌ ಭದ್ರಾ ಮೇಲ್ದಂಡೆಗಾಗಿ ಚಿತ್ರದುರ್ಗದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ನಾನು ದನಿಯಾಗುವೆ. ನಿಮ್ಮೊಡನೆ ಜೊತೆಗಿದ್ದು ಹೋರಾಟ ಮಾಡುವೆ. ಇನ್ನೆರಡು ವರ್ಷಗಳಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂಸದ ಗೋವಿಂದ ಎಂ.ಕಾರಜೋಳ ಭರವಸೆ ನೀಡಿದರು.

ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ವತಿಯಿಂದ ಬುಧವಾರ ಚಿತ್ರದುರ್ಗದ ಸ್ಕೌಟ್ ಭವನದಲ್ಲಿ ಹಮ್ಮಿಕೊಂಡಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯನ್ನಾಗಿಸಲು ಕಡತಗಳನ್ನು ಬಗಲಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರದ ಮುಂದೆ ಓಡಾಡಿದ್ದೆ. ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಮಾತ್ರ ಬಾಕಿ ಇದೆ. 2023-24ರ ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಗೆ ₹5,300 ಕೋಟಿ ಅನುದಾಯ ಕಾಯ್ದಿರಿಸಿದ್ದು ಅದನ್ನು ತರುವ ಪ್ರಯತ್ನ ಮಾಡುತ್ತೇನೆ’ ಎಂದರು.

ಕ್ಲಿಕ್ ಮಾಡಿ ಓದಿ: ಸೋರುತ್ತಿದೆ ನನ್ನಿವಾಳ ಕೆರೆ | ಏರಿ ಆವರಿಸಿದ ಸೀಮೆಜಾಲಿ

‘ರಾಜ್ಯದಲ್ಲಿ 66 ಲಕ್ಷ ಹೆಕ್ಚೇರು ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಅವಕಾಶವಿದೆ. ಇದರಲ್ಲಿ 40 ಲಕ್ಷ ಬೃಹತ್ ನೀರಾವರಿ, 10 ಲಕ್ಷ ಸಣ್ಣನೀರಾವರಿ ಹಾಗೂ 16 ಲಕ್ಷ ಹೆಕ್ಟೇರು ರೈತರಿಂದ ಸ್ವಂತ ಖರ್ಚಿನಲ್ಲಿ ಅಂದರೆ ಬೋರ್‌ವೆಲ್ ಮೂಲಕ ನೀರಾವರಿ ಮಾಡಿಕೊಳ್ಳಬಹುದಾಗಿದೆ. ಇದುವರೆಗೂ 30 ಲಕ್ಷ ಹೆಕ್ಟೇರು ಮಾತ್ರ ಬೃಹತ್ ನೀರಾವರಿಯಾಗಿದ್ದು ಇನ್ನೂ ಹತ್ತ ಲಕ್ಷ ಹೆಕ್ಟೇರು ಬಾಕಿ ಇದೆ’ ಎಂದು ತಿಳಿಸಿದರು.

ಚಿತ್ರದುರ್ಗದ ಸ್ಕೌಟ್ಸ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಮಾತನಾಡಿದರು.

‘ದೇಶದಲ್ಲಿ ಎರಡು ಜಿಲ್ಲೆಗಳು ಮಾತ್ರ ಕಳೆದ 350 ವರ್ಷಗಳಿಂದ ಭೀಕರ ಬರಗಾಲ ಎದುರಿಸಿದ್ದವು. ಒಂದು ರಾಜಸ್ತಾನದಲ್ಲಿದ್ದರೆ ಮತ್ತೊಂದು ಅವಿಭಜಿತ ವಿಜಯಪುರ ಜಿಲ್ಲೆಯಾಗಿತ್ತು. ಆದರೆ ಆಲಮಟ್ಟಿ ಜಲಾಶಯ ನಿರ್ಮಾಣದಿಂದಾಗಿ ವಿಜಯಪುರ, ಬಾಗಲಕೋಟೆ ಜಿಲ್ಲೆಗಳು ಈಗ ಬರದಪಟ್ಟಿಯಿಂದ ಹೊರ ಬಂದಿದ್ದು ಈ ಸ್ಥಾನವ ಚಿತ್ರದುರ್ಗ ಪಡೆದಿದೆ. ದೇಶದಲ್ಲಿಯೇ ಬರದ ಪರಿಸ್ಥಿತಿ ಎದುರಿಸುವ ಜಿಲ್ಲೆಗಳಲ್ಲಿ ಚಿತ್ರದುರ್ಗ ಎರಡನೇ ಸ್ಥಾನದಲ್ಲಿದೆ . ಈ ಜಿಲ್ಲೆಗಳಿಂದ ಪ್ರತಿ ವರ್ಷ ಐವತ್ತು ಸಾವಿರ ಮಂದಿ ಗುಳೇ ಹೋಗುತ್ತಿದ್ದಾರೆ. ಬೆಂಗಳೂರಿಗೆ ಚಿತ್ರದುರ್ಗ ಹತ್ತಿರದಲ್ಲಿದ್ದರೂ ಏಕೆ ಅಭಿವೃದ್ದಿಯಾಗಿಲ್ಲವೆಂಬುದು ತಿಳಿಯದಾಗಿದೆ’ ಎಂದರು.

ಕ್ಲಿಕ್ ಮಾಡಿ ಓದಿ: ದೊಡ್ಡ ಮಾತನಾಡುತ್ತಿದ್ದಾರೆ ನೂತನ ಸಂಸದರು | ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ

‘ಬೃಹತ್‌ ಕೈಗಾರಿಕೆಗಳು ಬಂದರೆ ಒಂದಿಷ್ಟು ಲಾರಿಗಳು, ಲಾರೀ ಮಾಲೀಕರಿಗೆ ಅನುಕೂಲವಾಗುತ್ತದೆ. ಆದರೆ ನೀರಾವರಿ ಮಾತ್ರ ಎಲ್ಲ ವರ್ಗ, ಸಮುದಾಯದ ಬದುಕನ್ನು ಹಸನಾಗಿಸಬಲ್ಲದು. ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ಬಾಗಲಕೋಟೆ ಜಿಲ್ಲೆ ಜನ ನಿರಂತರ 40 ವರ್ಷ ಹೋರಾಟ ಮಾಡಿ ಯಶ ಕಂಡಿದ್ದಾರೆ. ಆಲಮಟ್ಟಿ ಜಲಾಶಯದಿಂದ 22 ಲಕ್ಷ ಹೆಕ್ಟೇರು ಪ್ರದೇಶವ ನೀರಾವರಿಗೆ ಒಳಪಡಿಸಬಹುದಾಗಿದ್ದು ಏಷ್ಯಾದಲ್ಲಿಯೇ ಅತಿ ದೊಡ್ಡ ಯೋಜನೆಯಾಗಿದೆ. ಜಲಾಶಯ ನಿರ್ಮಾಣಕ್ಕಾಗಿ 1.32 ಲಕ್ಷ ಹೆಕ್ಚೇರು ಭೂಮಿ ಮುಳುಗಡೆಯಾಗಿದೆ’ ಎಂದು ತಿಳಿಸಿದರು.

‘ಬಾಗಲಕೋಟೆಯಿಂದ ನಿಜಲಿಂಗಪ್ಪ ಅವರನ್ನು ಅಲ್ಲಿನ ಮಂದಿ ಗೆಲ್ಲಿಸಿದಾಗ ಸುಮ್ಮನೆ ಬಿಡಲಿಲ್ಲ. ಆಲಮಟ್ಟಿ ಜಲಾಶಯಕ್ಕೆ ಗುದ್ದಲಿ ಪೂಜೆ ಹಾಕಿಸಿದರು. 1964 ಮೇ ತಿಂಗಳಲ್ಲಿ ನಡೆದ ಅಡಿಗಲ್ಲು ಸಮಾರಂಭಕ್ಕೆ ಲಾಲ್ ಬಹದ್ದೂರ್ ಶಾಸ್ತಿ, ಎಸ್.ನಿಜಲಿಂಗಪ್ಪ, ಇಂದಿರಾಗಾಂಧಿ ಬಂದಿದ್ದರು. ಚೀನಾ ಯುದ್ದದಿಂದಾಗಿ ದೇಶದಲ್ಲಿ ಬರ ಪರಿಸ್ಥಿತಿ ಇದ್ದರೂ ವಿಜಯಪುರದ ಮಂದಿ ಈ ಮೂವರನ್ನು ಬಂಗಾರದಿಂದ ತುಲಾಭಾರ ಮಾಡಿದ್ದರು. ತುಲಾಭಾರ ಮಾಡುವಾಗ ಬಂಗಾರ ಸಾಲದು ಬಂದಾಗ ಕಾರ್ಯಕ್ರಮದಲ್ಲಿದ್ದ ಮಹಿಳೆಯರು ತಮ್ಮ ಮೈಮೇಲಿನ ಬಂಗಾರದ ಸರ ಹಾಕಿ ಸರಿದೂಗಿಸಿದ್ದರು. ನಮ್ಮ ಭಾಗಕ್ಕೆ ನೀರಾವರಿ ಆಗಬೇಕೆಂಬ ತುಡಿತ ಆ ಮಹಿಳೆಯರಲ್ಲಿ ಇತ್ತು. ಇಂದು ಸಾಕಾರಗೊಂಡಿದೆ’ ಎಂದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ‘ಆಲಮಟ್ಟಿ ಜಲಾಶಯ ನಿರ್ಮಾಣ ಮಾಡುವಾಗ ರಾಜ್ಯ ಸರ್ಕಾರ ಕೃಷ್ಣ ಜಲಭಾಗ್ಯ ನಿಗಮದ ಮೂಲಕ ಬಾಂಡ್‌ ಬಿಡುಗಡೆ ಮಾಡಿ ಸಂಪನ್ಮೂಲ ಕ್ರೋಡೀಕರಣ ಮಾಡಿತ್ತು. ಭದ್ರಾ ಮೇಲ್ಡಂಡೆಗೆ ಅನುದಾನದ ಕೊರತೆಯಾದರೆ ಬಾಂಡ್ ಮೂಲಕ ಹಣ ಸಂಗ್ರಹಿಸಲಿ. ಜಿಲ್ಲೆಯ ಉದ್ಯಮಿಗಳು, ಉದ್ಯೋಗಿಗಳು, ವ್ಯಾಪಾರಸ್ಥರು ಕೊಂಡುಕೊಳ್ಳುತ್ತಾರೆ’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು. ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಆರ್‌.ದಯಾನಂದ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ,ಕೆ.ಸಿ.ಹೊರಕೇರಪ್ಪ, ಹಂಪಯ್ಯನಮಾಳಿಗೆ ಧನಂಜಯ, ದೊಡ್ಡಸಿದ್ದವ್ವನಹಳ್ಳಿ ಸುಧಾ, ಜಗಳೂರು ಯಾದವರೆಡ್ಡಿ, ಹಿರೇ‌ಕಬ್ಬಿಗೆರೆ ನಾಗರಾಜ್‌, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಜಿ.ಬಿ.ಶೇಖರ್‌, ಸಿಪಿಐ ನ ಜಿಲ್ಲಾ ಕಾರ್ಯದರ್ಶಿ ಜಿ.ಸುರೇಶ್ ಬಾಬು ಇದ್ದರು. ಸಮಿತಿ ಸಂಚಾಲಕ ಜಿಕ್ಕಪ್ಪನಹಳ್ಳಿ ಷಣ್ಮುಖ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version