ಮುಖ್ಯ ಸುದ್ದಿ
ದೊಡ್ಡ ಮಾತನಾಡುತ್ತಿದ್ದಾರೆ ನೂತನ ಸಂಸದರು | ಮಾಜಿ ಸಂಸದ ಬಿ.ಎನ್.ಚಂದ್ರಪ್ಪ
CHITRADURGA NEWS | 19 JUNE 2024
ಚಿತ್ರದುರ್ಗ: ರಾಜ್ಯ ಸರ್ಕಾರದ ಸಂಪೂರ್ಣ ಸಹಕಾರ ಇಲ್ಲದೆ ಸಂಸದರು ಏನೂ ಮಾಡಲು ಆಗಲ್ಲ, ಆದರೆ, ನಮ್ಮ ಸಂಸದರು ದೊಡ್ಡ ದೊಡ್ಡ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಕುಟುಕಿದರು.
‘ಅನಿರೀಕ್ಷಿತ ಫಲಿತಾಂಶವನ್ನು ಜಿಲ್ಲೆಯಲ್ಲಿ ನೋಡಿದ್ದೇವೆ. ರಾಜ್ಯದಲ್ಲಿ ಇನ್ನೂ ನಾಲ್ಕು ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತದೆ. ಸರ್ಕಾರದ ಸಂಪೂರ್ಣ ಸಹಕಾರ ಇಲ್ಲದೆ ಸಂಸದರು ಏನೂ ಮಾಡಲು ಆಗುವುದಿಲ್ಲ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ರಾಜ್ಯದ ಎಲ್ಲ ಸಮೀಕ್ಷೆಗಳಲ್ಲಿ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎನ್ನುವ ವರದಿ ಬಂದಿದ್ದವು. ಬಿಜೆಪಿ ಕೂಡಾ ಚಿತ್ರದುರ್ಗವನ್ನು ಸೋಲುತ್ತೇವೆ ಎಂದು ಮರೆತಿದ್ದರು. ಆದರೆ ಈ ಫಲಿತಾಂಶ ಅಚ್ಚರಿ ಮೂಡಿಸಿದೆ. ಮೂರು ಚುನಾವಣೆ ಎದುರಿಸಿದ್ದೇನೆ. 2014 ರ ಚುನಾವಣೆಗಿಂತ 2019 ರಲ್ಲಿ 1 ಲಕ್ಷ ಹೆಚ್ಚು ಮತ ಪಡೆದಿದ್ದೆ, 2024 ರಲ್ಲೂ 85 ಸಾವಿರಕ್ಕಿಂತ ಹೆಚ್ಚು ಮತ ಬಂದಿವೆ. ತಾಂತ್ರಿಕವಾಗಿ ಸೋಲಾಗಿದೆ.ಮಾನಸಿಕವಾಗಿ ಗೆದ್ದಿದ್ದೇನೆ’ ಎಂದರು.
ಕ್ಲಿಕ್ ಮಾಡಿ ಓದಿ: ರೇಣುಕಾಸ್ವಾಮಿ ಕುಟುಂಬದ ಜತೆ ಸರ್ಕಾರವಿದೆ | ಗೃಹ ಸಚಿವ ಡಾ.ಜಿ.ಪರಮೇಶ್ವರ್
‘ಮತ ಹಾಕಿದ ಚಿತ್ರದುರ್ಗ ಜನರಿಗೆ ನಮನ ಸಲ್ಲಿಸುತ್ತೇನೆ. ಒಬ್ಬ ಸಂಸದ, ಅಭ್ಯರ್ಥಿ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಮನೆ ಮಗನಾಗಿದ್ದೆ ಎನ್ನುವುದನ್ನು ಎಲ್ಲರೂ ಹೇಳುತ್ತಾರೆ. ಸೋತವರು ಮತ್ತೆ ಇಲ್ಲಿಗೆ ಬಂದಿಲ್ಲ. ಸೋತಾಗಲೂ ಜಿಲ್ಲೆಯಲ್ಲಿ ಅವಿನಾಭವ ಸಂಬಂಧ ಇಟ್ಟುಕೊಂಡು ಓಡಾಡಿದ್ದೆ. ತಪ್ಪು ಮಾಡಿದ್ದರೆ ಹೇಳಬೇಕು. ಮತ್ತೆ ಈ ರೀತಿಯ ಸೋಲಾಗಿದ್ದಕ್ಕೆ ನೋವಿದೆ’ ಎಂದು ಬೇಸರಿಸಿದರು.
‘ಸಂಸದನಾಗಲು ಯಾವ ಮಾನದಂಡ ಇದೆ. ಅನಿರೀಕ್ಷಿತ ಫಲಿತಾಂಶದಿಂದ ಬೇಸರ ಮಾಡಿಕೊಳ್ಳುವುದಿಲ್ಲ. ಮುಂದೆಯು ಜಿಲ್ಲೆಗೆ ಬೆನ್ನು ತೋರಿಸುವುದಿಲ್ಲ. ಇದು ನನ್ನ ಕರ್ಮ ಭೂಮಿ. ಬದ್ಧತೆ ಇದೆ. ನನ್ನ ಸೇವೆ ಕ್ಷೇತ್ರದ ಜನತೆಗೆ ಸದಾ ಇರುತ್ತದೆ. ಸೋತೆ ಎಂದು ನಾನು ಭಾವಿಸಿಲ್ಲ. ಜತೆಗೆ ಈ ಬೇಸರವನ್ನು ಕ್ಷೇತ್ರದ ಅಬಿವೃದ್ಧಿಯ ಮೇಲೆ ತೋರಿಸುವುದಿಲ್ಲ’ ಎಂದರು.
‘ಚುನಾವಣೆ, ಮತಕ್ಕಾಗಿ ಗ್ಯಾರೆಂಟಿ ಜಾರಿಗೊಳಿಸಿದ್ದಲ್ಲ. ಅವುಗಳನ್ನು ನಿಲ್ಲಿಸಬಾರದು ಎನ್ನುವುದು ನನ್ನ ಅಭಿಲಾಷೆ. ಮುಂದುವರೆಯಬೇಕು. ಬದಲಾವಣೆ ಇದ್ದರೆ ಮಾಡಿಕೊಳ್ಳಬೇಕು. ಕಾಡುಗೊಲ್ಲ ಅಭಿವೃದ್ದಿ ನಿಗಮದ ಗೊಂದಲ ಬಗೆಹರಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ಜೆಡಿಎಸ್ ಬಿಜೆಪಿ ಮೈತ್ರಿ ಕೆಲಸ ಮಾಡಿದೆ. ಸಾಮಾಜಿಕ ನ್ಯಾಯದ ಪರವಾಗಿರುವ ಕಾಂಗ್ರೆಸ್ ಒಬ್ಬಂಟಿ ಆಗಿತ್ತು. ಜೆಡಿಎಸ್ ಕಾಂಗ್ರೆಸ್ ಜೊತೆಗೆ ಇದ್ದಾಗ ಪರಿಣಾಮ ಬೀರಲಿಲ್ಲ, ಆದರೆ, ಬಿಜೆಪಿ ಜೊತೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಉತ್ತರ ಭಾರತದಲ್ಲಿ ಯಾದವ ಸಮಾಜ ಬಿಜೆಪಿ ವಿರುದ್ಧವಾಗಿದೆ. ಆದರೆ, ಕರ್ನಾಟಕದಲ್ಲಿ ಸ್ವಲ್ಪ ಪರವಾಗಿದೆ’ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುಖಂಡರಾದ ಕೆ.ಎಂ.ಹಾಲಸ್ವಾಮಿ, ಲಕ್ಷ್ಮೀಕಾಂತ್, ಬಾಲಕೃಷ್ಣ ಯಾದವ್, ಕೆ.ಪಿ.ಸಂಪತ್ ಕುಮಾರ್, ಮರುಳಾರಾಧ್ಯ, ಮೈಲಾರಪ್ಪ ಇದ್ದರು.