ಮುಖ್ಯ ಸುದ್ದಿ
ಸೋರುತ್ತಿದೆ ನನ್ನಿವಾಳ ಕೆರೆ | ಏರಿ ಆವರಿಸಿದ ಸೀಮೆಜಾಲಿ
CHITRADURGA NEWS | 19 JUNE 2024
ಚಿತ್ರದುರ್ಗ: 500 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿರುವ 200 ಎಕರೆ ವಿಸ್ತೀರ್ಣದ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮದ ಕೆರೆ ಸೋರುತ್ತಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ದುರಸ್ತಿಗೆ ಆಗ್ರಹಿಸಿದ್ದಾರೆ.
ಸಾವಿರ ಮೀಟರ್ ಉದ್ದದ ಏರಿಯನ್ನು ಕೆರೆ ಹೊಂದಿದೆ. ನಿರ್ವಹಣೆ ಕೊರತೆಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಕೆರೆ ತೂಬಿಗೆ ಅಳವಡಿಸಿದ್ದ ಕಬ್ಬಿಣದ ಸರಳು ತುಕ್ಕು ಹಿಡಿದಿವೆ. ಕೆರೆ ಏರಿ ಮೇಲೆ ಸೀಮೆಜಾಲಿ ಗಿಡಗಳು ದಟ್ಟವಾಗಿ ಬೆಳೆದಿರುವ ಕಾರಣ, ಅಲ್ಲಲ್ಲಿ ಸಣ್ಣಸಣ್ಣ ರಂಧ್ರಗಳು ಬಿದ್ದಿದ್ದು ನೀರು ಸೋರಿಕೆಯಾಗುತ್ತಿದೆ.
ಜಾಲಿಗಿಡದ ಬೇರುಗಳ ಮೂಲಕ ಗೊದ್ದ, ಇರುವೆಗಳು ಏರಿ ಒಳ ಭಾಗದಲ್ಲಿ ನುಸುಳಿ ಸಣ್ಣಸಣ್ಣ ರಂಧ್ರ ಸೃಷ್ಟಿಸಿವೆ. ಕೆರೆಯಲ್ಲಿ ಸಂಗ್ರಹವಾಗಿದ್ದ ಮೂರನೇ ಒಂದು ಭಾಗದಷ್ಟು ನೀರು ಈಗಾಗಲೇ ಸೋರಿಕೆಯಾಗಿದೆ. ಕೋಡಿ, ತೂಬು, ಕೆರೆಯಂಗಳ ಪ್ರದೇಶದ ಒತ್ತುವರಿಯನ್ನು ತೆರವುಗೊಳಿಸಬೇಕು. ಏರಿ ದುರಸ್ತಿ ಕಾರ್ಯದ ಜತೆಗೆ ದಟ್ಟವಾಗಿ ಬೆಳೆದ ಗಿಡಗಳನ್ನು ಕೂಡಲೇ ತೆರವುಗೊಳಿಸಿ ಕೆರೆ ಸುತ್ತಲೂ ಟ್ರಂಚ್ ಮಾಡಿಸಬೇಕು ಎಂದು ಗ್ರಾಮಸ್ಥರ ಒತ್ತಾಯ.
ಕ್ಲಿಕ್ ಮಾಡಿ ಓದಿ: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಗೆ ಜಾಮೀನು | ನೀತಿ ಸಂಹಿತೆ ಉಲ್ಲಂಘನೆ ಕೇಸ್
ತೂಬು ಹಾಳಾಗಿರುವ ಕಾರಣ ನೀರು ಸೋರಿಕೆಯಾಗಿದೆ. ಜೆಸಿಬಿ ಮೂಲಕ ಮಣ್ಣು ಹಾಗೂ ಮರಳು ತುಂಬಿದ ಚೀಲಗಳನ್ನು ಏರಿಗೆ ಹಾಕುವ ಮೂಲಕ ನೀರಿನ ಸೋರಿಕೆ ನಿಯಂತ್ರಿಸಲಾಗುತ್ತದೆ. ಹಾಳಾಗಿರುವ ಕೆರೆ ತೂಬು ರಿಪೇರಿ ಹಾಗೂ ಕೋಡಿ ದುರಸ್ತಿ ಮಾಡಿಸಬೇಕಿರುವ ವಿಚಾರವನ್ನು ಸಣ್ಣ ನೀರಾವರಿ ಇಲಾಖೆ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇನಾಯತ್ ಪಾಷ.
ಕ್ಲಿಕ್ ಮಾಡಿ ಓದಿ: ದೊಡ್ಡ ಮಾತನಾಡುತ್ತಿದ್ದಾರೆ ನೂತನ ಸಂಸದರು | ಮಾಜಿ ಸಂಸದ ಬಿ.ಎನ್.ಚಂದ್ರಪ್ಪ
ಈಗಾಗಲೇ ಬರದಿಂದ ಹನಿ ನೀರಿಗೂ ಜನರು ಸಮಸ್ಯೆ ಅನುಭವಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಉತ್ತಮ ಮಳೆ ಸುರಿದ ಪರಿಣಾಮ ಕೆರೆಯಲ್ಲಿ ನೀರು ಸಂಗ್ರಹವಾಗಿದೆ. ಇದೀಗ ಈ ನೀರನ್ನು ಉಳಿಸಿಕೊಳ್ಳುವ ಕಾರ್ಯ ಮಾಡಬೇಕಿದೆ.