Connect with us

    Tribute Ceremony: ಕ್ರಾಂತಿಕಾರಕ ಹೆಜ್ಜೆ ಇಟ್ಟು ಮುಂದೆ ಸಾಗಿದ ಶಿವಕುಮಾರ ಶ್ರೀ | ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌

    sirigere sri

    ಮುಖ್ಯ ಸುದ್ದಿ

    Tribute Ceremony: ಕ್ರಾಂತಿಕಾರಕ ಹೆಜ್ಜೆ ಇಟ್ಟು ಮುಂದೆ ಸಾಗಿದ ಶಿವಕುಮಾರ ಶ್ರೀ | ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌

    CHITRADURGA NEWS | 21 SEPTEMBER 2024
    ಚಿತ್ರದುರ್ಗ: 1946ರಲ್ಲೇ ಸಿರಿಗೆರೆ ಮಠದಲ್ಲಿ ಎಲ್ಲಾ ಜಾತಿಯ ಜನರೊಡನೆ ಸಹಪಂಕ್ತಿ ಭೋಜನ ಆರಂಭಿಸಿ ಸಮಾಜದ ಜನರ ಸಿಟ್ಟಿಗೆ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಗುರಿಯಾಗಿದ್ದರು. ಅಕ್ಕನ ಬಳಗ ಮತ್ತು ಕಲಾಸಂಘಗಳ ಮೂಲಕ ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸಲು ಅವಿಶ್ರಾಂತವಾಗಿ ದುಡಿದರು ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಹೇಳಿದರು.

    ಸಿರಿಗೆರೆಯಲ್ಲಿ ನಡೆಯುತ್ತಿರುವ ಶಿವಕುಮಾರ ಶ್ರೀಗಳ 32ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ‘1940ರಲ್ಲಿ ಮಠದ ಆಡಳಿತ ಚುಕ್ಕಾಣಿ ಹಿಡಿದ ಶ್ರೀಗಳು ಸಮಾಜದಲ್ಲಿ ಕ್ರಾಂತಿಕಾರಕ ಹೆಜ್ಜೆ ಇಟ್ಟು ಮುಂದೆ ಸಾಗಿದರು. 1946ರಲ್ಲೇ ಮಠದಲ್ಲಿ ಎಲ್ಲಾ ಜಾತಿಯ ಜನರೊಡನೆ ಸಹಪಂಕ್ತಿ ಭೋಜನ ಆರಂಭಿಸಿ ಸಮಾಜದ ಜನರ ಸಿಟ್ಟಿಗೆ ಗುರಿಯಾಗಿದ್ದರು. ಅದ್ಯಾವುದನ್ನೂ ಲೆಕ್ಕಿಸದೆ ತಾವು ನಂಬಿದ್ದ ಆದರ್ಶಗಳನ್ನು ಮುಂದುವರಿಸಿದರು’ ಎಂದರು.

    ‘ಪಂಚೆ ಕಟ್ಟಿಕೊಂಡು ಕಟ್ಟಡ ನಿರ್ಮಾಣ ಕೆಲಸದಲ್ಲಿ ಶ್ರೀಗಳು ಪಾಲ್ಗೊಳ್ಳುತ್ತಿದ್ದರು. ಕಾಡಿಗೆ ಹೋಗಿ ಸೌದೆ ತಂದು ಶಾಲಾ ವಿದ್ಯಾರ್ಥಿಗಳ ದಾಸೋಹಕ್ಕೆ ನೆರವಾಗುತ್ತಿದ್ದರು. ಅಧ್ಯಾತ್ಮ, ಶಿಕ್ಷಣ, ಧಾರ್ಮಿಕ, ಸಾಂಸ್ಕೃತಿಕ ರಂಗದಲ್ಲಿ ಅವರು ಸಮರೋಪಾದಿಯಲ್ಲಿ ಕೆಲಸ ಮಾಡಿದ್ದರು’ ಎಂದು ತಿಳಿಸಿದರು.

    ವಿಧಾನ ಪರಿಷತ್‌ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ‘ಕರ್ನಾಟಕದಲ್ಲಿ ಅನ್ನದಾಸೋಹ ಮತ್ತು ಅಕ್ಷರ ದಾಸೋಹಕ್ಕೆ ವಿಶೇಷ ಕೊಡುಗೆ ನೀಡಿದ್ದು ವೀರಶೈವ ಮಠಗಳು. ತರಳಬಾಳು ಮಠದ ಶಿವಕುಮಾರ ಶ್ರೀಗಳು ನಾಡಿನ ಗ್ರಾಮಾಂತರ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದರು’ ಎಂದರು.

    ಕ್ಲಿಕ್ ಮಾಡಿ ಓದಿ: ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿ | ನೋಂದಣಿಗೆ ಅವಕಾಶ

    ‘ಶ್ರೀಗಳು ಕಠೋರ ನಡೆ ನುಡಿಯುಳ್ಳವರಾಗಿದ್ದರು. ಹೃದಯಾಂತರಾಳದಲ್ಲಿ ಕೋಮಲವಾಗಿದ್ದರು. ಅಸತ್ಯದಿಂದ ಸತ್ಯದ ಕಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ದ ಗುರುವಾಗಿದ್ದರು’ ಎಂದು ತಿಳಿಸಿದರು.

    ಹಾಸ್ಯ ಸಾಹಿತಿ ಎಂ.ಎಸ್.‌ ನರಸಿಂಹ ಮೂರ್ತಿ ಮಾತನಾಡಿ, ‘ವಚನ ಸಾಹಿತ್ಯ ಓದಲು ಯಾರ ನೆರವೂ ಬೇಡ. ಇದರಷ್ಟು ನೇರವಾದ ಮತ್ತು ಕಳಕಳಿಯುಳ್ಳ ಸಾಹಿತ್ಯ ಮತ್ತೊಂದಿಲ್ಲ. ವಚನ ಸಾಹಿತ್ಯವನ್ನು ಜಗತ್ತಿಗೆ ತಲುಪಿಸುವಲ್ಲಿ ತರಳಬಾಳು ಮಠದ ಕೊಡುಗೆ ಅಪಾರ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಅದನ್ನು ಮುಂದುವರಿಸಿಕೊಂಡು ಬಂದಿದ್ದು, 22,000 ವಚನಗಳನ್ನು ಅಂತರ್ಜಾಲಕ್ಕೆ ಅಳವಡಿಸಿದ್ದಾರೆ’ ಎಂದು ಹೇಳಿದರು.

    ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ಸೆಪ್ಟೆಂಬರ್ 21 | ವ್ಯವಹಾರ ಸುಗಮ, ಆಸ್ತಿ ವಿವಾದದಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ

    ಹಿರೇಕೆರೂರು ಶಾಸಕ ಯು.ಬಿ. ಬಣಕಾರ ಮಾತನಾಡಿ, ‘ಬಸವಣ್ಣನವರ ತತ್ವಗಳನ್ನು ಆದರ್ಶಮಯವಾಗಿ ಪಾಲನೆ ಮಾಡಿದ ಶ್ರೀಗಳಲ್ಲಿ ಶಿವಕುಮಾರ ಶ್ರೀ ಅಗ್ರಗಣ್ಯರು. ಅವರು ಗ್ರಾಮಾಂತರ ನಾಡಿನಲ್ಲಿ ಅಕ್ಷರಕ್ರಾಂತಿ ಮಾಡಿದ ಶಕ್ತಿಯಾಗಿದ್ದರು. ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವಂತಹ ಕೆಲಸ ತರಳಬಾಳು ಮಠದಿಂದ ಆಗಿದೆ’ ಎಂದು ತಿಳಿಸಿದರು.

    ‘ಧಾರ್ಮಿಕ ವಿಚಾರಗಳಿಗೆ ಸೀಮಿತವಾಗದೆ ಜನರ ಬದುಕಿಗೆ ಬೇಕಾದ ಎಲ್ಲಾ ರಂಗಗಳಲ್ಲಿಯೂ ತರಳಬಾಳು ಮಠ ಕೆಲಸ ಮಾಡುತ್ತಿದೆ. ತ್ರಿವಿಧ ದಾಸೋಹದ ಜೊತೆಗೆ ನ್ಯಾಯದಾನದ ಕೆಲಸ ನಡೆಯುತ್ತಾ ಬಂದಿದೆ’ ಎಂದರು.

    ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಆದ್ರಿಕಟ್ಟೆಯ ಬಸವರಾಜ್‌ ಗಿರಿಯಾಪುರ, ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ವಿದ್ಯಾಧರ್‌ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top