ಮುಖ್ಯ ಸುದ್ದಿ
ಪ್ರಭಾವಿ ಮಠಮಾನ್ಯಗಳಿಗೆ ಮಾತ್ರ ಅನುದಾನ | ಸರ್ಕಾರದ ನಡೆಗೆ ಸರ್ದಾರ್ ಸೇವಾ ಲಾಲ್ ಸ್ವಾಮೀಜಿ ಅಸಮಾಧಾನ
CHITRADURGA NEWS | 22 FEBRUARY 2024
ಚಿತ್ರದುರ್ಗ: ಕ್ರೈಸ್ತ ಪಾದ್ರಿಗಳು, ಮಿಷಿನರಿಗಳು ತಾಂಡಾಗಳಲ್ಲಿ ಬಡತನ, ಮುಗ್ಧತೆ ದುರ್ಬಳಕೆ ಮಾಡಿಕೊಂಡು ಆಮಿಷ, ಅಸೆ ಒಡ್ಡಿ ಮತಾಂತರ ಮಾಡಿಸುತ್ತಿರುವುದು ಹೆಚ್ಚಾಗಿದೆ. ಲಂಬಾಣಿ ತಾಂಡಾಗಳಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವವರು ತಮಗಿರುವ ಪರಿಶಿಷ್ಟ ಜಾತಿ ಮೀಸಲಾತಿ ತ್ಯಜಿಸಬೇಕು ಎಂದು ಚಿತ್ರದುರ್ಗದ ಬಂಜಾರ ಸೇವಾಲಾಲ್ ಗುರುಪೀಠದ ಜಗದ್ಗುರು ಸರ್ದಾರ್ ಸೇವಾ ಲಾಲ್ ಸ್ವಾಮೀಜಿ ತಾಕೀತು ಮಾಡಿದರು.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೈಸ್ತ ಪಾದ್ರಿಗಳು ಆಮಿಷ, ಅಸೆ ಒಡ್ಡಿ ಮತಾಂತರ ಮಾಡಿಸುವುದನ್ನು ಕೈಬಿಡಬೇಕು. ಈಗಾಗಲೇ ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ | ಮೂರು ದಿನ ಸರಳ ಆಚರಣೆ
ಬಜೆಟ್‍ನಲ್ಲಿ ಬಂಜಾರ ಸಮುದಾಯಕ್ಕೆ ಅನುದಾನ ಘೋಷಿಸಿಲ್ಲ. ತಾಂಡಾ ಆಭಿವೃದ್ಧಿ ನಿಗಮಕ್ಕೆ ₹ 500 ಕೋಟಿ ನೀಡಬೇಕು. ಕೇವಲ ಪ್ರಭಾವಿ ಮಠಮಾನ್ಯಗಳಿಗೆ ಮಾತ್ರ ಅನುದಾನ ನೀಡಲಾಗುತ್ತಿದೆ. ಹಿಂದುಳಿದ ಸಮಾಜಗಳ ಮಠಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿರುವ ₹11 ಸಾವಿರ ಕೋಟಿ ಅನುದಾನ ಬಳಕೆ ಮಾಡುವುದು ತಪ್ಪು, ಸಂವಿಧಾನದಲ್ಲಿ ಅದಕ್ಕೆ ಅವಕಾಶ ಇಲ್ಲ ಎಂದರು.
ಇದನ್ನೂ ಓದಿ: ರಾಜವೀರ ಮದಕರಿ ನಾಯಕ ಸಿನಿಮಾ | ನಟ ದರ್ಶನ್ ಹೇಳಿದ್ದೇನು ?
ಸೂರೆಗೊಂಡನಕೊಪ್ಪದಲ್ಲಿ ಈಚೆಗೆ ನಡೆದ ಸಂತ ಸೇವಾಲಾಲ್ ಜಯಂತ್ಯುತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸ್ವಾಮೀಜಿ, ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಬಂದಿದ್ದರೆ ಸಮಾಜದ ಬೇಡಿಕೆಗಳನ್ನು ಸಲ್ಲಿಸುತ್ತಿದ್ದೆವು. ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಮತ್ತು ಬಂಜಾರ ಸಮಾಜವನ್ನು ಮೀಸಲಾತಿಯಿಂದ ಹೊರಗಿಡುವ ಹುನ್ನಾರ ಕುರಿತಂತೆ ಚರ್ಚಿಸುವ ಉದ್ದೇಶವಿತ್ತು ಎಂದು ತಿಳಿಸಿದರು.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗಳಿ ತಾಂಡಾದಲ್ಲಿ ಫೆ.23ರಂದು ಅಜ್ಜಮ್ಮದೇವಿ ಜಾತ್ರೆ ನಡೆಯಲಿದೆ. ಉತ್ಸವದಲ್ಲಿ ಸುತ್ತಮುತ್ತಲಿನ 40 ಗ್ರಾಮಗಳ ಭಕ್ತರು ಪಾಲ್ಗೊಳ್ಳಲಿದ್ದಾರೆ. ಜಾತ್ರೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಕಲಾವಿದರಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲೇ ಭುಗಿಲೆದ್ದ ಕಾಂಗ್ರೆಸ್ ಮುಖಂಡರ ಅಸಮಾಧಾನ | ತೋಟದ ಮನೆ ಸಭೆಯಲ್ಲಿ ಬಹಿರಂಗ
ಗ್ರಾಮದ ಗುರುಪೀಠದ ಮಠಾಧೀಶರಾಗಿದ್ದ ಗುರುಗೋಪಾಲ ರಾಥೋಡ್ ಮಹಾರಾಜರು ಮೂಢನಂಬಿಕೆಗಳು ಮತ್ತು ಕಂದಾಚಾರಗಳನ್ನು ತೊಡೆದು ಹಾಕಿದ್ದರು, ಈ ಮೂಲಕ ಸಮಾಜವನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು ಎಂದರು.
ಮಠದ ಜೀರ್ಣೋದ್ಧಾರಕ್ಕೆ ಸರ್ಕಾರ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಲಂಬಾಣಿ ತಾಂಡಾಗಳಲ್ಲಿನ ಜನರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಬೇಕು, 2011ರಲ್ಲಿ ತಾಂಡಾದ ಜನರು ಬೇರೆ ರಾಜ್ಯಗಳಿಗೆ, ಮತ್ತು ಕಾಫಿ ಸೀಮೆಗಳಿಗೆ ಗುಳೆ ಹೋಗಿರುವ ಸಂದರ್ಭದಲ್ಲಿ ಜನಗಣತಿ ಮಾಡಲಾಗಿದೆ. ಈಗ ಹೊಸದಾಗಿ ಜನಗಣತಿ ಮಾಡಬೇಕು, ಆಗ ಜನಸಂಖ್ಯೆಯ ನಿಖರ ಮಾಹಿತಿ ದೊರೆಯುತ್ತದೆ ಎಂದು ಒತ್ತಾಯಿಸಿದರು.
ಗ್ರಾಮದಲ್ಲಿರುವ ಬಂಜಾರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಸುಭಾಷ್ ನಾಯ್ಕ, ಮುಖಂಡರಾದ ಬಂಗ್ಯಾನಾಯ್ಕ, ಯಮನೂರನಾಯ್ಕ, ಪೀರ್ಯಾನಾಯ್ಕ, ಧೇನ್ಯಾನಾಯ್ಕ ಇದ್ದರು.