ಮುಖ್ಯ ಸುದ್ದಿ
ಸಾಣೇಹಳ್ಳಿಯಲ್ಲಿ ‘ವರ್ಷದ ಹರ್ಷ’; ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವ
ಚಿತ್ರದುರ್ಗನ್ಯೂಸ್.ಕಾಂ
ಒಂದಿಷ್ಟು ಸಂತಸ, ನೋವಿನೊಂದಿಗೆ 2023ಕ್ಕೆ ವಿದಾಯ ಹೇಳುತ್ತಾ ನವೋಲ್ಲಾಸದಲ್ಲಿ 2024 ಸ್ವಾಗತಿಸಲು ದಿನಗಣನೆ ಪ್ರಾರಂಭವಾಗಿದೆ. ಈ ಕ್ಷಣವನ್ನು ಅರ್ಥಪೂರ್ಣವಾಗಿಸಲು ಸಾಣೇಹಳ್ಳಿ ಶಿವಕುಮಾರ ಕಲಾಸಂಘ ಸಿದ್ಧತೆ ಪ್ರಾರಂಭಿಸಿದೆ.
ಸಾಣೇಹಳ್ಳಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಶಿವಕುಮಾರ ಕಲಾಸಂಘದಿಂದ ಡಿ.31 ರಂದು ರಾತ್ರಿ ‘ವರ್ಷದ ಹರ್ಷ’ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಸಂಜೆ 6.30ಕ್ಕೆ ಮಠದ ಆವರಣದಲ್ಲಿ ವಚನ ಬೆರಗು; ಅರಿವಿನ ಮಾಲಿಕೆ ಕೃತಿ ಲೋಕಾರ್ಪಣೆ ಮೂಲಕ ಸಂಭ್ರಮ ಪ್ರಾರಂಭವಾಗಲಿದೆ.
ಹೊಸದುರ್ಗ ತಾಲ್ಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ. ಇಳಕಲ್ಲಿನ ಜಾನಪದ ವಿದ್ವಾಂಸರಾದ ಡಾ.ಶಂಭು ಬಳಿಗಾರ್ ಹಾಗೂ ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಜಿ.ಪ್ರಶಾಂತ ನಾಯಕ ಅತಿಥಿಗಳಾಗಿ ಭಾಗವಹಿಸುವರು.
ಈ ಸಂದರ್ಭದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ಬಸವ ಪ್ರಜ್ಞೆ, ಲಿಂಗಾಯತ ಮತ್ತು ಬಸವತತ್ವ, ಡಾ. ಪ್ರಶಾಂತ ನಾಯಕರವರ ಬಸವಣ್ಣ ಮತ್ತು ವಚನಗಳು, ಅಕ್ಕಮಹಾದೇವಿ ಮತ್ತು ವಚನಗಳು, ಕುಮಾರ್‍ವರ ಮಾದಾರ ಚೆನ್ನಯ್ಯ, ಉಮಾಶಂಕರ ಅವರ ಅಂಬಿಗರ ಚೌಡಯ್ಯ, ಪ್ರತಿಮಾ ಅವರ ಆಯ್ದಕ್ಕಿ ಲಕ್ಕಮ್ಮ, ಚರಣ ಜಂಬಾನಿ ಅವರ ಅಲ್ಲಮಪ್ರಭುದೇವರು, ಅಣ್ಣಪ್ಪ ಎಂ.ಮಳೀಮಠ ಅವರ ಮಡಿವಾಳ ಮಾಚಿದೇವರ ‘ವಚನ ಬೆರಗು; ಅರಿವಿನ ಮಾಲಿಕೆ’ ಎನ್ನುವ ಶರಣರ ಹತ್ತು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.
ಸಾಣೇಹಳ್ಳಿಯ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗುರುಪಾದೇಶ್ವರ ಪ್ರೌಢಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ, ಕಣಿಮಮ್ಮ ಕೋಲಾಟ ಸಂಘದಿಂದ ಕೋಲಾಟ ಹಾಗೂ ಬಸವೇಶ್ವರ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ಸಾಳಂಕಿ ರಚಿಸಿದ, ಮಾಲತೇಶ ಬಡಿಗೇರ ನಿರ್ದೇಶನದಲ್ಲಿ ಶಿವಸಂಚಾರ-23 ರ ತಂಡದವರು ‘ತಾಳಿಯ ತಕರಾರು’ ನಾಟಕ ಪ್ರದರ್ಶನವಾಗಲಿದೆ.
www.shivasanchara.org ಹಾಗೂ ಶಿವಸಂಚಾರ ಮತ್ತು ಮತ್ತೆ ಕಲ್ಯಾಣ ಪೇಸ್‌ಬುಕ್ ಪೇಜ್‌ಗಳಲ್ಲಿ ಸಹ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ ಎಂದು ಕಲಾಸಂಘ ತಿಳಿಸಿದೆ.