Connect with us

ಕೋಟೆನಾಡಲ್ಲಿ ಮಹಾತ್ಮರ ಪ್ರತಿಮೆಗಳು ರಾತ್ರೋರಾತ್ರಿ ತಲೆಯೆತ್ತುವ ವಿಸ್ಮಯ..!

ಕರುನಾಡ ವಿಜಯಸೇನೆ ಕಾರ್ಯಕರ್ತರು ಒನಕೆ ಓಬವ್ವ ವೃತ್ತದಲ್ಲಿ ಬಸವಣ್ಣನ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಮುಖ್ಯ ಸುದ್ದಿ

ಕೋಟೆನಾಡಲ್ಲಿ ಮಹಾತ್ಮರ ಪ್ರತಿಮೆಗಳು ರಾತ್ರೋರಾತ್ರಿ ತಲೆಯೆತ್ತುವ ವಿಸ್ಮಯ..!

ಚಿತ್ರದುರ್ಗ ನ್ಯೂಸ್.ಕಾಂ: ತಮ್ಮ ತತ್ವ, ಆದರ್ಶಗಳಿಂದ ಇಡೀ ಜಗತ್ತಿಗೆ ಬೆಳಕು ನೀಡಿದ ಮಹಾತ್ಮರ ಪ್ರತಿಮೆಗಳೇಕೆ ರಾತ್ರೋ ರಾತ್ರಿ ತಲೆ ಎತ್ತಿ ನಿಲ್ಲುತ್ತಿವೆ ಎನ್ನುವುದು ಚಿತ್ರದುರ್ಗದ ಮಟ್ಟಿಗೆ ಯಕ್ಷ ಪ್ರಶ್ನೆಯಾಗಿದೆ.

ಯುವಕರ ಒಂದು ಗುಂಪು ಶನಿವಾರ ತಡರಾತ್ರಿಯಲ್ಲಿ ನಗರದ ಹೃದಯಭಾಗ, ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿರುವ ವೀರ ವನಿತೆ ಒನಕೆ ಓಬವ್ವ ವೃತ್ತದಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪಿಸಲು ಯತ್ನಿಸಿದ್ದು, ಇದು ಪೊಲೀಸರಿಗೆ ಗೊತ್ತಾಗಿ ತಡೆ ಹಾಕಿದ್ದಾರೆ. ಈ ವೇಳೆ ಒಂದಷ್ಟು ವಾಗ್ವಾದ ಕೂಡಾ ನಡೆದಿದೆ.

ಇದನ್ನೂ ಓದಿ: ಮೊಳಕಾಲ್ಮೂರಿನಲ್ಲಿ ಬೀದಿ ಬದಿ ಬಂಗಾರ ನಾಣ್ಯಕ್ಕೆ ಹುಡುಕಾಟ

ಈಗಾಗಲೇ ಒನಕೆ ಓಬವ್ವ ವೃತ್ತ ಎಂದು ಹೆಸರಾಗಿರುವ ಹಾಗೂ ಒನಕೆ ಓಬವ್ವರ ಪ್ರತಿಮೆ, ಕೋಟೆ ರಕ್ಷಣೆಗಾಗಿ ಹೈದರಾಲಿಯ ಸೈನಿಕರ ಜೊತೆಗೆ ಬಡಿದಾಡಿದ ಪ್ರತಿಕೃತಿ ಇರುವ ವೃತ್ತದಲ್ಲಿ ಬಸವಣ್ಣನ ಪ್ರತಿಮೆ ಸ್ಥಾಪನೆ ಎಷ್ಟು ಸಮಂಜಸ ಎನ್ನುವುದು ಸಾಕಷ್ಟು ಜನರ ಪ್ರಶ್ನೆಯಾಗಿದೆ.

ಒಂದು ವೇಳೆ ಹೇಗೋ ಪ್ರತಿಮೆ ಇಟ್ಟುಬಿಟ್ಟರೆ ಆನಂತರ ತೆರವು ಮಾಡುವುದು ಕಷ್ಟ, ಅದು ಸೂಕ್ಷ್ಮ ವಿಚಾರವಾಗಿ ಬಿಡುತ್ತದೆ. ಎರಡು ಸಮುದಾಯಗಳ ನಡುವಿನ ಇರಿಸು-ಮುರಿಸಿಗೆ ಕಾರಣವಾಗುತ್ತದೆ ಎನ್ನುವುದು ಪ್ರತಿಮೆ ಸ್ಥಾಪನೆಗೆ ಮುಂದಾದವರಿಗೆ ಸ್ಪಷ್ಟವಾಗಿ ತಿಳಿದಿದೆ.

ಈ ವಿಚಾರ ಈಗ ಚಿತ್ರದುರ್ಗ ನಗರದಲ್ಲಿ ಬಹಳ ಚರ್ಚೆಯಲ್ಲಿದ್ದು, ಪರ-ವಿರೋಧ ಮಾತುಕತೆಗಳು ಜೋರಾಗಿದೆ. ಓಬವ್ವನ ವೃತ್ತದಲ್ಲಿ ಬಸವಣ್ಣನ ಪ್ರತಿಮೆ ಸ್ಥಾಪನೆಗೆ ಮುಂದಾದವರ ವಿರುದ್ಧ ಈಗಾಗಲೇ ಪ್ರತಿಭಟನೆಗಳೂ ನಡೆದಿವೆ.

ಇಂದು ನಗರಸಭೆ ಮಾಜಿ ಅಧ್ಯಕ್ಷ ಛಲವಾದಿ ಸಮುದಾಯದ ಮುಖಂಡ ಎಚ್.ಸಿ.ನಿರಂಜನಮೂರ್ತಿ ಈ ಬಗ್ಗೆ ಸುದ್ದಿಗೋಷ್ಠಿಯನ್ನೂ ಕರೆದಿದ್ದಾರೆ.

ಮತ್ತೊಂದು ಕಡೆ ಬಸವಣ್ಣನ ಪ್ರತಿಮೆ ಸ್ಥಾಪನೆ ವಿಚಾರವಾಗಿ ವೀರಶೈವ ಲಿಂಗಾಯತ ಸಮುದಾಯದ ಕೆಲವರ ಸಭೆಯನ್ನೂ ಕರೆಯಲಾಗಿದೆ.

ಈ ಪ್ರಯತ್ನ ಇದೇ ಮೊದಲಲ್ಲ:

ಇನ್ನೂ ಪ್ರತಿಮೆಗಳ ಸ್ಥಾಪನೆಯ ವಿಚಾರಕ್ಕೆ ಬಂದರೆ, ರಾತ್ರೋ ರಾತ್ರಿ ಸ್ಥಾಪನೆಯಾಗುತ್ತಿರುವುದು ಬಸವಣ್ಣನವರ ಪ್ರತಿಮೆ ಮಾತ್ರವಲ್ಲ. ಕೆಲ ತಿಂಗಳ ಹಿಂದೆ ಮಾಳಪ್ಪನಹಟ್ಟಿ ವೃತ್ತದಲ್ಲಿ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಕೂಡಾ ರಾತ್ರೋ ರಾತ್ರಿ ತಲೆ ಎತ್ತಿ ನಿಂತಿತ್ತು.

ಇದನ್ನೂ ಓದಿ: ಕೋಟೆನಾಡಲ್ಲಿ ರಾಹುಲ್ ಜಾರಕಿಹೊಳಿ ಭರ್ಜರಿ ರೌಂಡ್ಸ್

ಕಳೆದ ವಾರವಷ್ಟೇ ಚಿತ್ರದುರ್ಗ ಹೊಳಲ್ಕೆರೆ ರಸ್ತೆಯಲ್ಲಿ ಹೊಸ ಹೆದ್ದಾರಿ ಹಾಗೂ ದುರ್ಗವನ್ನು ಸಂಪರ್ಕಿಸುವ ರಸ್ತೆಗಳ ನಡುವೆ ನಿರ್ಮಾಣವಾದ ವೃತ್ತದಲ್ಲಿ ಶ್ರೀಕೃಷ್ಣ ಪರಮಾತ್ಮನ ಪ್ರತಿಮೆ ಇಟ್ಟು ಶ್ರೀ ಕೃಷ್ಣ ವೃತ್ತ ಎಂದು ನಾಮಕರಣ ಮಾಡಲಾಗಿದೆ.

ಈ ವಿಷಯಗಳು ಕೂಡಾ ಚರ್ಚೆಯಲ್ಲಿವೆ. ಆದರೆ, ಎಲ್ಲವನ್ನೂ ಜಾತಿಗೆ ತಳುಕು ಹಾಕುವುದರಿಂದ ಬಹಿರಂಗ ಚರ್ಚೆಗೆ ಬಂದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಯಾವ ಮಹಾ ಪುರುಷರ ಪ್ರತಿಮೆ ನಿರ್ಮಾಣಕ್ಕೂ ಯಾರೂ ಕೂಡಾ ಅಡ್ಡಿ ಮಾಡುವುದಿಲ್ಲ. ಎಲ್ಲದಕ್ಕೂ ಕೆಲವೊಂದಿಷ್ಟು ನಿಯಮಗಳಿವೆ. ಆ ನಿಯಮಗಳನ್ನು ಪಾಲಿಸಿಕೊಂಡು ಸ್ಥಾಪಿಸಿದರೆ ಎಲ್ಲವೂ ಆರೋಗ್ಯಕರವಾಗಿರುತ್ತದೆ.

ಆದರೆ, ಇಡೀ ಜಗತ್ತಿಗೆ ಬೆಳಕು ನೀಡಿದ, ಬದುಕಿನುದ್ದಕ್ಕೂ ಸ್ವಾರ್ಥದ ಲವಲೇಶವೂ ಇಲ್ಲದೆ ಬದುಕಿದ ಮಹಾತ್ಮರ ಪ್ರತಿಮೆಗಳನ್ನು ರಾತ್ರೋ ರಾತ್ರಿ ಸ್ಥಾಪನೆ ಮಾಡುವ ಮೂಲಕ ಅವರ ವಿಚಾರಗಳಿಗೆ ಅಪಮಾನ ಮಾಡುವ ಕೆಲಸ ಮಾಡಬಾರದು.

ಇಷ್ಟೆಲ್ಲಾ ನಡೆಯುತ್ತಿದ್ದರೂ ನಗರಸಭೆ ಹಾಗೂ ಜಿಲ್ಲಾಡಳಿತ ಈ ಬಗ್ಗೆ ದಿವ್ಯ ಮೌನ ವಹಿಸುತ್ತಿರುವುದು ಕೂಡಾ ವಿಪರ್ಯಾಸವಾಗಿದೆ.

ಓಬವ್ವನ ಪ್ರತಿಮೆಗೆ ಹಾಲಿನ ಅಭಿಷೇಕ-ಪ್ರತಿಭಟನೆ

ಶನಿವಾರ ತಡರಾತ್ರಿಯಲ್ಲಿ ಬಸವಣ್ಣನ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದ ವಿಷಯ ತಿಳಿಯುತ್ತಿದ್ದಂತೆ ಭಾನುವಾರ ಬೆಳಗ್ಗೆ ಸ್ಥಳಕ್ಕಾಗಮಿಸಿದ ಕರುನಾಡ ವಿಜಯಸೇನೆ ಕಾರ್ಯಕರ್ತರು ಒನಕೆ ಓಬವ್ವ ವೃತ್ತದಲ್ಲಿ ಬಸವಣ್ಣನ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಒನಕೆ ಓಬವ್ವ ವೃತ್ತದ ಮಧ್ಯೆ ಹೈಮಾಸ್ಟ್ ದೀಪವಿರುವ ಹುಲ್ಲು ಹಾಸಿನ ಬಳಿ ಒನಕೆಯನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಒನಕೆ ಓಬವ್ವನ ಪ್ರತಿಮೆಗೆ ಹರಿಶಿಣ, ಕುಂಕುಮ ಹಚ್ಚಿ ಹಾಲಿನ ಅಭಿಷೇಕ ಮಾಡಿದ ಪ್ರತಿಭಟನಾಕಾರರು, ಒನಕೆ ಓಬವ್ವನ ಇತಿಹಾಸಕ್ಕೆ ಮಸಿ ಬಳಿಯುವ ಕೆಲಸ ಯಾರು ಮಾಡಿದರೂ ಸಹಿಸುವುದಿಲ್ಲ. ಸರ್ಕಾರವೇ ಗುರುತಿಸಿರುವ ಜಾಗದಲ್ಲಿರುವ ಓಬವ್ವನ ಪ್ರತಿಮೆ ಬಳಿ ಮತ್ತೊಂದು ವೃತ್ತದ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವುಗಳು ಬಸವಣ್ಣನ ವಿರೋಧಿಗಳಲ್ಲ. ಆದರೆ ಒನಕೆ ಓಬವ್ವ ಪ್ರತಿಮೆ ಬಳಿ ಮತ್ತೊಂದು ಪ್ರತಿಮೆ ನಿರ್ಮಿಸುವುದು ಓಬವ್ವನಿಗೆ ಮಾಡುವ ಅಪಮಾನ. ಯಾವುದೇ ಕಾರಣಕ್ಕೂ ಈ ಜಾಗವನ್ನು ಬಸವೇಶ್ವರ ವೃತ್ತವಾಗಲು ಬಿಡುವುದಿಲ್ಲ ಎಂದರು.

ಕರುನಾಡ ವಿಜಯಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ನಗರ ಘಟಕದ ಅಧ್ಯಕ್ಷ ಅವಿನಾಶ್, ಉಪಾಧ್ಯಕ್ಷೆ ರತ್ನಮ್ಮ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಣಿಕಂಠ, ರಾಜಣ್ಣ, ಅಖಿಲೇಶ್, ಪಿ.ಆರ್.ಹರೀಶ್ ಕುಮಾರ್, ಸುರೇಶ್ ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version