ಮುಖ್ಯ ಸುದ್ದಿ
ಅಲಂಕೃತಗೊಂಡ ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ರಥೋತ್ಸವ | ನೆರಳಿಗಾಗಿ ಬೃಹತ್ ಚಪ್ಪರ
CHITRADURGA NEWS | 25 MARCH 2024
ಚಿತ್ರದುರ್ಗ: ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವದ ಪ್ರಮುಖ ಘಟ್ಟವಾದ ದೊಡ್ಡ ರಥೋತ್ಸವಕ್ಕೆ ಸಿದ್ಧತೆಗಳು ಬಹುತೇಕ ಅಂತಿಮ ಹಂತ ತಲುಪಿವೆ. ಮಾರ್ಚ್ 26 ರ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ರಥ ಬೀದಿಯಲ್ಲಿ ಸಾಗಲಿದೆ ತಿಪ್ಪೇಶನ ವೈಭವ.
80 ಟನ್ ತೂಕ ಹಾಗೂ 75 ಅಡಿ ಎತ್ತರವಿರುವ ರಥ 5 ಚಕ್ರಗಳನ್ನು ಹೊಂದಿದೆ. ರಥಕ್ಕೆ ಎರಡು ದಿನಗಳಿಂದ ಬಣ್ಣಬಣ್ಣದ ಬಾವುಟಗಳನ್ನು ಅಳವಡಿಸುವ ಕಾರ್ಯ ನಡೆದಿದೆ. ಗೊಂಬೆಗಳು ಐತಿಹಾಸಿಕ ಘಟನೆಗಳ ಬಿಂಬಿಸುವ ಚಿತ್ರಪಟಗಳನ್ನು ಅಳವಡಿಸಿಲಾಗಿದೆ. ರಥವನ್ನು ಎಳೆಯುವ 2 ಅಡಿ ಸುತ್ತಳತೆ ಇರುವ ಮಿಣಿಯನ್ನು (ಹಗ್ಗ) ಪರೀಕ್ಷಿಸಲಾಗಿದೆ.
ಪಟ್ಟಣದಲ್ಲಿ ಹದ್ದಿನ ಕಣ್ಣಿಡಲು ಪಟ್ಟಣದ ಬಹುಕೇತ ಸ್ಥಳಗಳಲ್ಲಿ ನೂರಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜಾತ್ರೆಯಲ್ಲಿ ಸರಗಳ್ಳತನ, ಮೊಬೈಲ್, ಜೇಬುಗಳ್ಳರನ್ನು ಹಿಡಿಯಲು ವಿಶೇಷ ತಂಡಗಳ ರಚನೆ ಮಾಡಲಾಗಿದೆ. ಈ ಎಲ್ಲ ಯೋಜನೆಗಳು ಕಾರ್ಯರೂಪಕ್ಕೆ ತಂದು ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗುತ್ತಿದೆ.
ಬಿಸಿಲಿನ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎರಡೂ ದೇವಾಲಯಗಳ ಆವರಣದಲ್ಲಿ ನೆರಳಿಗಾಗಿ ಬೃಹತ್ ಚಪ್ಪರದ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ಎಲ್ಲಾ ವಾರ್ಡ್ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಜತೆಗೆ ಕುಡಿಯುವ ನೀರಿಗೆ ವಿಶೇಷ ವ್ಯವಸ್ಥೆ ರೂಪಿಸಲಾಗಿದೆ.
ಭಕ್ತರಿಗೆ ಯಾವುದೇ ಕುಂದುಕೊರತೆ ಉಂಟಾಗದಂತೆ ಅಗತ್ಯ ಸಿದ್ಧತೆಯನ್ನು ಜಿಲ್ಲಾಡಳಿತ ಕೈಗೊಂಡಿದ್ದು, ಈಗಾಗಲೇ ಸಹಾಯವಾಣಿಗಳ ಕಾರ್ಯ ನಿರ್ವಹಿಸುತ್ತಿವೆ. ಜಾತ್ರೆಗೆ ಅಂತಿಮ ಹಂತದ ಸಿದ್ಧತೆಗಳನ್ನು ಕೈಗೊಳ್ಳಲು ತಾಲ್ಲೂಕು ಮಟ್ಟದ ಮತ್ತು ಸ್ಥಳೀಯ ಅಧಿಕಾರಿಗಳು ಪಟ್ಟಣದಲ್ಲಿ ಬೀಡು ಬಿಟ್ಟಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಜಾತ್ರೆ ವಿಶೇಷವಾಗಿ 200ಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. 10 ಸೆಕ್ಟರ್‌ಗಳನ್ನಾಗಿ ಮಾಡಲಾಗಿದ್ದು, ಪ್ರತಿ ಹಂತದ ಬಸ್ ಕಾರ್ಯಾಚರಣೆಗೆ ಪ್ರತ್ಯೇಕ ಸಾರಿಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಒಟ್ಟು 3 ದಿನಗಳವರೆಗೂ ಸಾರಿಗೆ ಇಲಾಖೆಯ ಚಿತ್ರದುರ್ಗ ವಿಭಾಗೀಯ ಕಚೇರಿಯ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಪಾವಗಡದಿಂದ 100 ಬಸ್‌ಗಳು., ದಾವಣಗೆರೆ ವಿಭಾಗದಿಂದ 200ಕ್ಕೂ ಹೆಚ್ಚು ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆಯಾಗಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸುಗಮ ಸಂಚಾರಿ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.