CHITRADURGA NEWS | 25 MARCH 2024 ಚಿತ್ರದುರ್ಗ: ವಾಣಿವಿಲಾಸ ಜಲಾಶಯದಿಂದ ಕೇವಲ 3 ಕಿ.ಮೀ. ದೂರದಲ್ಲಿರುವ ಭರಮಗಿರಿ ಗ್ರಾಮದ ಕೆರೆಗೆ ನೀರು ಹರಿಸಬೇಕು. ಇಲ್ಲವಾದರೆ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸುವುದು ಖಚಿತ. ನಿಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಹಿರಿಯೂರು ತಾಲ್ಲೂಕಿನ ಭರಮಗಿರಿ ಗ್ರಾಮದ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು.
ವಾಣಿವಿಲಾಸ ಜಲಾಶಯದಿಂದ ಶುಕ್ರವಾರ ಕಾಲುವೆಗೆ ನೀರು ಹರಿಸುತ್ತಿದ್ದಂತೆ ಇತ್ತ ಭರಮಗಿರಿ ಗ್ರಾಮದ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಸಭೆ ನಡೆಸಿ ಚುನಾವಣಾ ಬಹಿಷ್ಕಾರದ ನಿರ್ಧಾರ ಕೈಗೊಂಡಿದ್ದರು. ವಿಷಯ ತಿಳಿದು ಭಾನುವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಸಹಾಯಕ ಚುನಾವಣಾಧಿಕಾರಿ ಶಿವೇಗೌಡ, ತಹಶೀಲ್ದಾರ್ ರಾಜೇಶ್ ಕುಮಾರ್, ವಿಶ್ವೇಶ್ವರಯ್ಯ ನೀರಾವರಿ ನಿಗಮದ ಎಇಇ ವಿಜಯಕುಮಾರ್, ಗ್ರಾಮ ಲೆಕ್ಕಾಧಿಕಾರಿ ಗಿರೀಶ್ ನೇತೃತ್ವದ ತಂಡ ಗ್ರಾಮಕ್ಕೆ ಆಗಮಿಸಿ ರೈತರ ಜತೆ ಮಾತುಕತೆ ನಡೆಸಿತು.
ನೀತಿಸಂಹಿತೆ ಜಾರಿಯಲ್ಲಿರುವ ಕಾರಣದಿಂದ ಕೆರೆಗೆ ನೀರು ಹರಿಸುವ ಯೋಜನೆ ಜಾರಿ ಸಾಧ್ಯವಾಗದು. ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಮನವರಿಕೆ ಮಾಡಿದರು.
ನೀರಿಗೆ ತೊಂದರೆ ಇರುವ ಎಲ್ಲಾ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಕೊಡುತ್ತೇವೆ. ಇಷ್ಟು ಮಾತ್ರ ನಮ್ಮಿಂದ ಸಾಧ್ಯ. ಯಾವುದೇ ಕಾರಣಕ್ಕೂ ಮತದಾನ ಬಹಿಷ್ಕರಿಸುವಂತಹ ನಿರ್ಧಾರ ಬೇಡ. ಚುನಾವಣೆ ಮುಗಿದ ನಂತರ ನಿಮ್ಮ ಅಹವಾಲನ್ನು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರರು ಭರವಸೆ ನೀಡಿದರೂ. ಆದರೆ ಈ ಯಾವುದಕ್ಕೂ ಸಮ್ಮತಿಸಿದ ರೈತರು ಚುನಾವಣಾ ಮತದಾನ ಬಹಿಷ್ಕಾರ ಮಾಡುವುದು ಖಚಿತ ಎಂದು ತಿಳಿಸಿದರು.
ವಾಣಿವಿಲಾಸ ಅಣೆಕಟ್ಟೆ ನಿರ್ಮಾಣಕ್ಕೂ ಮೊದಲು ಅಂದಾಜು 300 ವರ್ಷದ ಹಿಂದೆ ಭರಮಪ್ಪ ನಾಯಕ ಎಂಬುವರು ಭರಮಗಿರಿ ಕೆರೆ ನಿರ್ಮಿಸಿದ್ದರು. ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿ, ಮಾದಿಹಳ್ಳಿ ಭಾಗದಲ್ಲಿ ಮಳೆಯಾದರೆ ಭರಮಗಿರಿ ಕೆರೆ ತುಂಬುತ್ತಿತ್ತು. ಈಚಿನ ವರ್ಷಗಳಲ್ಲಿ ಹತ್ತಾರು ಗೋಕಟ್ಟೆ, ಚೆಕ್ ಡ್ಯಾಂಗಳನ್ನು ನಿರ್ಮಿಸಿರುವ ಕಾರಣ ಕೆರೆಗೆ ನೀರು ಬರದಂತಾಗಿದೆ. ಕೆರೆ ಕೋಡಿ ಹರಿದು 25 ವರ್ಷದ ಮೇಲಾಗಿದೆ ಎಂದು ಅಚ್ಚುಕಟ್ಟು ರೈತರು ಹೇಳಿದರು.
ವಿವಿ ಸಾಗರ ನೀರನ್ನು ರಾಜಕಾರಣಿಗಳು ತಮ್ಮ ಪ್ರಭಾವ ಬಳಸಿ ಚಳ್ಳಕೆರೆ ತಾಲ್ಲೂಕಿಗೆ ಒಯ್ದಿದ್ದಾರೆ. ಆದರೆ ಜಲಾಶಯಕ್ಕೆ ಕೂಗಳತೆ ದೂರದಲ್ಲಿರುವ ಭರಮಗಿರಿ ಕೆರೆಗೆ ಏಕೆ ಹರಿಸಬಾರದು? ನಾವೇನು ಪಾಪ ಮಾಡಿದ್ದೇವೆ? ಎಂದು ಪ್ರಶ್ನಿಸಿದರು.
1,000 ಅಡಿ ಕೊರೆಸಿದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ನೀರು ಬಂದರೂ 15–20 ದಿನದಲ್ಲಿ ಒಣಗಿ ಹೋಗುತ್ತವೆ. ಕೆಲವೇ ಲಕ್ಷ ಮೊತ್ತದಲ್ಲಿ ಪೈಪ್‌ಲೈನ್ ಮೂಲಕ ಭರಮಗಿರಿ ಕೆರೆಗೆ ನೀರು ಹರಿಸಬಹುದಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದೇವೆ. ನೀತಿ ಸಂಹಿತೆಯ ನೆಪ ಹೇಳದೆ ಜಿಲ್ಲಾಧಿಕಾರಿಗಳ ಆದೇಶದ ಮೂಲಕ ನೀರು ಹರಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಲೋಕಸಭಾ ಚುನಾವಣೆಯ ಮತದಾನ ಮಾಡುವುದಿಲ್ಲ ಎಂದು ಅಚ್ಚುಕಟ್ಟು ರೈತರು ಎಚ್ಚರಿಸಿದರು.
ವಾಣಿವಿಲಾಸ ಅಣೆಕಟ್ಟೆಯ ನೀರನ್ನು 100 ಕಿ.ಮೀ. ದೂರದಲ್ಲಿರುವ ಚಳ್ಳಕೆರೆ ತಾಲ್ಲೂಕಿನ ಹಳ್ಳಿಗಳಿಗೆ ಒಯ್ಯಲು ಸಾಧ್ಯವಿದೆ. ಕೇವಲ 3 ಕಿ.ಮೀ. ದೂರದಲ್ಲಿರುವ ಭರಮಗಿರಿ ಕೆರೆಗೆ ತರಲು ಸಾಧ್ಯವಿಲ್ಲವೇ? ಕೆರೆ ತುಂಬಿದರೆ ವಾಣಿವಿಲಾಸ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳವಾರಹಟ್ಟಿ, ಕಕ್ಕಯ್ಯನಹಟ್ಟಿ, ಕುಂಟಪ್ಪನಹಟ್ಟಿ, ಬಳಗಟ್ಟ, ಭರಮಗಿರಿ, ಅಗಳೇರಹಟ್ಟಿ, ಕುರುಬರಹಳ್ಳಿ, ಕೂನಿಕೆರೆ ಪಂಚಾಯಿತಿ ವ್ಯಾಪ್ತಿಯ ಬೀರೇನಹಳ್ಳಿ, ಎ.ವಿ ಕೊಟ್ಟಿಗೆ ಗುಡಿಹಳ್ಳಿ ಗ್ರಾಮದವರೆಗೆ ಅಂತರ್ಜಲ ಹೆಚ್ಚುತ್ತದೆ.
2022 ರಲ್ಲಿ ರಾಜ್ಯದ ಬಹುತೇಕ ಕೆರೆಗಳು ತುಂಬಿದ್ದವು. ವಾಣಿವಿಲಾಸ ಜಲಾಶಯವೂ ಕೋಡಿ ಹರಿದು ದಾಖಲೆ ನಿರ್ಮಿಸಿತ್ತು. ಆದರೆ ಭರಮಗಿರಿ ಕೆರೆಗೆ ನೀರು ಬಂದಿರಲಿಲ್ಲ. ಕೆರೆಯ ಮೇಲ್ಭಾಗದಲ್ಲಿರುವ ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿ, ಮಾದಿಹಳ್ಳಿ ಭಾಗದಲ್ಲಿ ಹತ್ತಾರು ಗೋಕಟ್ಟೆ, ಚೆಕ್ ಡ್ಯಾಂಗಳನ್ನು ನಿರ್ಮಿಸಿರುವ ಕಾರಣ ಕೆರೆಗೆ ನೀರು ಬರದಂತಾಗಿದೆ. 25 ವರ್ಷದಿಂದ ಕೆರೆ ಭರ್ತಿಯಾಗಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪ್ರಾದೇಶಿಕ ಆಯುಕ್ತರು ಚಳ್ಳಕೆರೆ ತಾಲ್ಲೂಕಿಗೆ 0.25 ಟಿಎಂಸಿ ಅಡಿ ನೀರು ಹರಿಸುವಂತೆ ಆದೇಶ ಹೊರಡಿಸಿದ್ದು, ಅವರ ಆದೇಶದಂತೆ ವೇದಾವತಿ ನದಿಯ ಮೂಲಕ ನೀರು ಬಿಡಲಾಗುತ್ತಿದೆ. ಅದೇ ರೀತಿ ಚುನಾವಣೆ ಒಳಗೆ ಪೈಪ್‌ಲೈನ್ ಮೂಲಕ ಕೆರೆಗೆ ನೀರು ಹರಿಸಲು ಆಯುಕ್ತರು ಆದೇಶ ಮಾಡಲಿ ಎಂದು ಅಚ್ಚುಕಟ್ಟು ರೈತರು ಪಟ್ಟು ಹಿಡಿದರು.
ನೀರು ಇಲ್ಲದ ಕಾರಣ ನೂರಾರು ಎಕರೆ ಅಡಿಕೆ, ತೆಂಗು, ಬಾಳೆ, ದಾಳಿಂಬೆ ತೋಟಗಳು ಒಣಗಿ ಹೋಗಿವೆ. ಇದು ನಮ್ಮ ನಿರ್ಣಾಯಕ ಹೋರಾಟ. ಭರಮಗಿರಿ ಕೆರೆಗೆ ಪೈಪ್ ಲೈನ್ ಮೂಲಕ ವಾಣಿವಿಲಾಸದ ನೀರು ಹರಿಸುವವರೆಗೆ ಹೋರಾಟ ನಿಲ್ಲದು ಎಂದು ಮುಖಂಡರಯ ಎಚ್ಚರಿಸಿದರು.