ಮುಖ್ಯ ಸುದ್ದಿ
Mining Company: ಇಷ್ಟು ವರ್ಷದ ಲೆಕ್ಕದ ಜತೆ ಗಣಿ ಕಂಪನಿಯರನ್ನು ಸಭೆಗೆ ಕರೆಸಿ | ಸಂಸದ ಗೋವಿಂದ ಎಂ.ಕಾರಜೋಳ ಖಡಕ್ ಸೂಚನೆ
CHITRADURGA NEWS | 10 JULY 2024
ಚಿತ್ರದುರ್ಗ: ‘ಈ ನೆಲದ ಸೌಲಭ್ಯ ಪಡೆಯುವ ಗಣಿ ಕಂಪನಿಗಳು (Mining Company) ಗಳಿಸುವ ಆದಾಯವನ್ನು ಇಲ್ಲಿಯೇ ಖರ್ಚು ಮಾಡಬೇಕೇ ಹೊರತು ದೂರದ ಬೆಂಗಳೂರು, ಮುಂಬೈಗೆ ಅಲ್ಲ. ಮೊದಲು ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಿ’ ಎಂದು ಸಂಸದ ಗೋವಿಂದ ಎಂ.ಕಾರಜೋಳ ತಾಕೀತು ಮಾಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಗಣಿ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿದ ಅವರು, ‘ಕಂಪನಿಗಳಿರುವುದು ಕೇವಲ ಲಾಭಕ್ಕಲ್ಲ, ಸಾಮಾಜಿಕ ಬದ್ಧತೆಯೂ ಇರಬೇಕು’ ಎಂದರು.
‘ಜೆಎಸ್‌ಡಬ್ಲ್ಯೂ, ಜಾನ್ ಮೈನ್ಸ್, ವೇದಾಂತ ಸೇರಿದಂತೆ 8 ಗಣಿ ಕಂಪನಿಗೆ ಜಿಲ್ಲೆಯಲ್ಲಿ ಅವಕಾಶ ಕೊಡಲಾಗಿದೆ. ಇದರಲ್ಲಿ 5 ಚಾಲ್ತಿಯಲ್ಲಿವೆ. ಆದರೆ ಇವುಗಳಿಂದ ಸ್ಥಳೀಯರಿಗೆ ಏನು ಅನುಕೂಲ ಆಗಿದೆ ? ಎಂದು ಸಂಸದರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಕ್ಲಿಕ್ ಮಾಡಿ ಓದಿ: CRIME:ಶಿಕ್ಷಕಿ ಮನೆಯ ಬಂಗಾರ ದೋಚಿದ ಕಳ್ಳರು | ತಿಥಿ ಕಾರ್ಯಕ್ಕೆ ತೆರಳಿದ್ದಾಗ ಕೈಚಳಕ
‘ಮೂಲ ಸೌಲಭ್ಯ, ನೆಲ ಎಲ್ಲವನ್ನೂ ಕೊಟ್ಟು ಸ್ಥಳೀಯರಿಗೆ ಉದ್ಯೋಗ ಕೊಡದಿದ್ದರೆ ಏನು ಉಪಯೋಗ. ಇಲ್ಲಿಂದ ಜನ ಗುಳೆ ಹೋಗುತ್ತಿದ್ದಾರೆ. ಇಲ್ಲಿ ಕಾರ್ಯನಿರ್ವಹಿಸುವ ಗಣಿ ಕಂಪನಿಗಳಿಂದ ಈವರೆಗೆ ಎಷ್ಟು ಸಿಎಸ್‌ಆರ್ ನಿಧಿ ಬಂದಿದೆ. ಎಂದು ಪ್ರಶ್ನಿಸಿದ ಸಂಸದರು, ಕಂಪನಿಗಳು ಬೆಂಗಳೂರು, ಮುಂಬೈನಲ್ಲಿ ಕಾರ್ಪೋರೇಟ್ ಕಚೇರಿ ಮಾಡಿಕೊಂಡು ಅಲ್ಲಿ ಖರ್ಚು ಮಾಡಿದರೆ ಇಲ್ಲಿಗೆ ಅನುಕೂಲ ಇಲ್ಲ. ಇಲ್ಲಿ ಆದಾಯ ಪಡೆದು ಇಲ್ಲಿಯೇ ಖರ್ಚು ಮಾಡಬೇಕು’ ಎಂದು ಸೂಚಿಸಿದರು.
‘ಈ ಸಭೆ ಅಪೂರ್ಣವಾಗಿದೆ. ಮುಂದಿನ ಸಭೆಗೆ ಗಣಿ ಕಂಪನಿಯವರನ್ನು ಕರೆಸಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲಸ ಆರಂಭ ಮಾಡಿದ ದಿನದಿಂದ ಈವರೆಗೆ ಮಾಡಿರುವ ಸಿಎಸ್‌ಆರ್ ನಿಧಿಯ ಖರ್ಚು ವಿವರ ಬೇಕು. ಅವರಿಗೆ ಅನುಮತಿ ಕೊಡಲು ಹಾಕಿರುವ ನಿಬಂಧನೆಗಳ ಪಟ್ಟಿಯನ್ನು ತರಬೇಕು’ ಎಂದು ತಿಳಿಸಿದರು.
‘ಗಣಿ ಲಾರಿಗಳಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ರಸ್ತೆಗಳು ಹಾಳಾಗುತ್ತಿವೆ. 50 ವರ್ಷದಿಂದ ಗಣಿಗಾರಿಕೆ ನಡೆಸಿದರೂ ಪ್ರತ್ಯೇಕವಾಗಿ ಬೈಪಾಸ್ ರಸ್ತೆ ಮಾಡಿಲ್ಲ ಅಂದರೆ ಏನರ್ಥ. ವೇದಾಂತ ಮೈನಿಂಗ್ ಕಂಪನಿ 32 ವರ್ಷದಿಂದ ಕೆಲಸಮಾಡುತ್ತಿದೆ. ಅವರಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ಕೊಡೋಣ. ಆದರೆ, ನಮ್ಮ ಜನರಿಗೆ ಉದ್ಯೋಗ ಕೊಡಬೇಕು. ಇಲ್ಲಿಂದ ಹೊರಗೆ ಗುಳೆ ಹೋಗಬಾರದು. ಇಲ್ಲಿ ಕಚ್ಚಾವಸ್ತು ಇದೆ. ಅಗತ್ಯ ಸಹಕಾರ ಇದೆ. ಇಲ್ಲಿಯೇ ಕೈಗಾರಿಕೆ ಮಾಡಲಿ. ಬ್ರಿಟೀಷರಂತೆ ಇಲ್ಲಿಂದ ದೋಚಿಕೊಂಡು ಹೋಗುವವರು ಬೇಡ. ಇಲ್ಲಿ ಅಭಿವೃದ್ಧಿ ಆಗಬೇಕು’ ಎಂದು ಖಡಕ್ ಸಂದೇಶ ರವಾನಿಸಿದರು.
ಕ್ಲಿಕ್ ಮಾಡಿ ಓದಿ: ಕಳೆದುಕೊಂಡಿದ್ದ 80 ಮೊಬೈಲ್ ಹುಡುಕಿಕೊಟ್ಟ ಪೊಲೀಸರು
‘ಎಮ್ಮಿಗನೂರು ಗೋಮಾಳದಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡ ಬೇಡಿ. ಸರ್ಕಾರ ಖನಿಜ ಸಂಪನ್ಮೂಲಗಳನ್ನು ಗುತ್ತಿಗೆ ಕೊಡುವ ಉದ್ದೇಶ ಗಣಿ ಪ್ರದೇಶ ಅಭಿವೃದ್ಧಿ, ಸರ್ಕಾರಕ್ಕೆ ಆದಾಯ ಹಾಗೂ ಜನರಿಗೆ ಉದ್ಯೋಗ ಕೊಡಬೇಕು ಎನ್ನುವುದು ಆಶಯ. ಇದರೊಟ್ಟಿಗೆ ಸಾಮಾಜಿಕ ಜವಾಬ್ದಾರಿ ಕೂಡಾ ಅವರ ಮೇಲೆ ಇದೆ. ಶಾಲೆ, ರಸ್ತೆ, ಕೆರೆ ಕಟ್ಟೆ, ಕುಡಿಯುವ ನೀರಿನ ವ್ಯವಸ್ಥೆ ನೋಡಿಕೊಳ್ಳಬೇಕು. ಗಣಿಯಿಂದ ದೊಡ್ಡ ಪ್ರಮಾಣದ ಆದಾಯ ಬಂದಿರುತ್ತದೆ. ಅದರಲ್ಲಿ ಸಿಎಸ್‌ಎರ್ ನಿಧಿಯನ್ನು ನಮ್ಮ ಜಿಲ್ಲೆಯಲ್ಲೇ ಖರ್ಚು ಮಾಡಬೇಕು’ ಎಂದು ಸೂಚಿಸಿದರು.