ಮುಖ್ಯ ಸುದ್ದಿ
KDP meeting: ತಪ್ಪು ಮಾಹಿತಿ ನೀಡಬೇಡಿ | ಮೊದಲು ಆರ್‌ಒ ಪ್ಲಾಂಟ್ ದುರಸ್ತಿಗೊಳಿಸಿ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಖಡಕ್ ಸೂಚನೆ
CHITRADURGA NEWS | 12 JULY 2024
ಚಿತ್ರದುರ್ಗ: ‘ತಾಲ್ಲೂಕಿನ ಯಾವುದೇ ಹಳ್ಳಿಗೆ ಹೋದರೂ ಜನರು ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿರುವ ಬಗ್ಗೆ ದೂರು ನೀಡುತ್ತಿದ್ದಾರೆ. ಆರ್.ಒ ಪ್ಲಾಂಟ್‌ಗಳನ್ನು ಸಮರ್ಪಕವಾಗಿ ಏಕೆ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧಿಕಾರಿಗಳನ್ನು ಪ್ರಶ್ನಿಸಿದರು.
ತಾಲ್ಲೂಕಿನಲ್ಲಿ 106 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅವುಗಳಲ್ಲಿ 24 ಘಟಕಗಳನ್ನು ರಿಪೇರಿ ಮಾಡಬೇಕಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿ ಉತ್ತರ ನೀಡುತ್ತಿದ್ದಂತೆ ಶಾಸಕರಿ ಗರಂ ಆದ ಘಟನೆ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ (KDP meeting) ಯಲ್ಲಿ ನಡೆಯಿತು.
ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ, ತಾಲ್ಲೂಕಿನಲ್ಲಿ ನೂರಾರು ಶುದ್ಧ ನೀರಿನ ಘಟಕಗಳಲ್ಲಿ ನೀರು ಬರುತ್ತಿಲ್ಲ. ಕೂಡಲೇ ಪರಿಶೀಲಿಸಿ ಅವುಗಳ ರಿಪೇರಿಗೆ ಕ್ರಮ ವಹಿಸಬೇಕು. ಘಟಕಗಳ ನಿರ್ವಹಣಾ ಜವಾಬ್ದಾರಿ ಹೊತ್ತಿರುವ ಏಜೆನ್ಸಿಗಳಿಗೆ ಪ್ರತಿ ತಿಂಗಳು ಹಣ ಹೋಗುತ್ತಿದೆ. ಆದರೆ ಘಟಕಗಳಲ್ಲಿ ಮಾತ್ರ ನೀರು ಬರುತ್ತಿಲ್ಲ. ಅಧಿಕಾರಿಗಳು ಪ್ಲಾಂಟ್ ದುರಸ್ತಿಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಜಲಜೀವನ ಮಿಷನ್ ಕಾಮಗಾರಿ ಸಂಬಂಧ ತಾಲ್ಲೂಕಿನ ವಿವಿಧೆಡೆ ರಸ್ತೆಗಳನ್ನು ಅಗೆಯಲಾಗಿದೆ. ಇದರಿಂದ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್‌ಗಳಿಗೆ ಹಾನಿಯಾಗಿದೆ. ಕೊಳಚೆ ನೀರು ಕುಡಿಯುವ ನೀರಿನಲ್ಲಿ ಸೇರುವ ಅಪಾಯವಿದೆ. ಕಾವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವನೆಯಂತಹ ಘಟನೆ ಹಳ್ಳಿಗಳಲ್ಲಿ ಮರುಕಳಿಸಬಾರದು ಎಂದು ಶಾಸಕರು ಹೇಳಿದರು.
ರಸ್ತೆಗಳನ್ನು ಹಾಳು ಮಾಡಿದ್ದರೆ ನಿಯಮಾನುಸಾರ ಅವುಗಳನ್ನು ಸರಿಪಡಿಸುವುದು ಅವರ ಜವಾಬ್ದಾರಿಯಾಗಿದೆ. ಜೆಜೆಎಂ ಅಡಿ ಕಾಮಗಾರಿಗಳನ್ನು ಕೈಗೆತ್ತಿಕೊಂಡ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡದಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಬೇಕು. ಟೆಂಡರ್ ರದ್ದು ಮಾಡಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕು ವ್ಯಾಪ್ತಿಯ ಗಣಿ ಕಂಪನಿಗಳು ಸಿಎಸ್‌ಆರ್ ನಿಧಿಯಲ್ಲಿ ಶಾಲೆಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅಧಿಕಾರಿಗಳು 3ನೇ ಏಜೆನ್ಸಿ ಮೂಲಕ ಪರಿಶೀಲನೆ ಕೈಗೊಳ್ಳಬೇಕು. ಕಾಮಗಾರಿಗಳು ಕಳಪೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಸಿಎಸ್‌ಆರ್ ನಿಧಿಯಲ್ಲಿ ಜಿಲ್ಲೆಯಲ್ಲಿ ನಡೆಯುವ ಕಾಮಗಾರಿಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಸಮಗ್ರ ಮಾಹಿತಿ ನೀಡಬೇಕು, ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸಬೇಕು. ಮುಖ್ಯವಾಗಿ ಗ್ರಾ.ಪಂ ಆಡಳಿತ ಮಂಡಳಿಗೆ ಮಾಹಿತಿ ನೀಡಬೇಕು. ಜನಪ್ರತಿನಿಧಿಗಳನ್ನು ಒಳಗೊಂಡಂತೆ ಕಾಮಗಾರಿಗಳನ್ನು ನಡೆಸಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಬಾರದು ಎಂದರು.
ತಹಶೀಲ್ದಾರ್ ನಾಗವೇಣಿ, ಇಒ ಹನುಮಂತರಾಯಪ್ಪ, ಆಡಳಿತಾಧಿಕಾರಿ ಬಿ.ಆನಂದ್ ಇದ್ದರು.