Connect with us

    Livestock census: ಜಾನುವಾರು ಗಣತಿಗೆ ಕೌಂಟ್‌ಡೌನ್‌ | ಮನೆ– ಮನೆಗೆ ಬರಲಿದ್ದಾರೆ ಗಣತಿದಾರರು

    Livestock census

    ಮುಖ್ಯ ಸುದ್ದಿ

    Livestock census: ಜಾನುವಾರು ಗಣತಿಗೆ ಕೌಂಟ್‌ಡೌನ್‌ | ಮನೆ– ಮನೆಗೆ ಬರಲಿದ್ದಾರೆ ಗಣತಿದಾರರು

    CHITRADURGA NEWS | 26 AUGUST 2024
    ಚಿತ್ರದುರ್ಗ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಸೆಪ್ಟೆಂಬರ್‌ 1 ರಿಂದ ಡಿಸೆಂಬರ್‌ ಅಂತ್ಯದವರೆಗೆ 21ನೇ ಜಾನುವಾರು ಗಣತಿ ನಡೆಯಲಿದೆ.

    ಜಿಲ್ಲೆಯ ಎಲ್ಲಾ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಇಲಾಖೆಯ ಗಣತಿದಾರರು ಪ್ರತಿಯೊಂದು ಮನೆ, ಉದ್ಯಮ, ಸಂಸ್ಥೆಗಳಿಗೆ ಭೇಟಿ ನೀಡಿ, ಎಲ್ಲಾ ತರಹದ ಪ್ರಾಣಿ, ಸಾಕುಪ್ರಾಣಿಗಳು ಹಾಗೂ ಕುಕ್ಕುಟಗಳ ಮಾಹಿತಿಯನ್ನು ಸಂಗ್ರಹಿಸುವರು. ಬೀದಿ ದನಗಳು ಮತ್ತು ಬೀದಿ ನಾಯಿಗಳ ಮಾಹಿತಿಯನ್ನೂ ಸಹ ಇದೇ ವೇಳೆ ಸಂಗ್ರಹಿಸಲಾಗುವುದು. ಇದಲ್ಲದೆ ಕುಟುಂಬಸ್ಥರ ಸಾಮಾಜಿಕ ಸ್ಥಿತಿ, ಉದ್ಯೋಗ, ವಿದ್ಯಾರ್ಹತೆ ಮತ್ತು ಕೃಷಿ ಹಿಡುವಳಿ ಬಗ್ಗೆಯೂ ಸಹ ಮಾಹಿತಿಯನ್ನೂ ಸಂಗ್ರಹಿಸುವರು.

    ಕ್ಲಿಕ್ ಮಾಡಿ ಓದಿ: ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಮಹತ್ವದ ನಿರ್ಧಾರ | ಸಚಿವರು, ಶಾಸಕರ ಮುಂದೆ ತಮಟೆ ಚಳವಳಿ

    ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಿದ್ದು, ಒಟ್ಟು 1049 ಗ್ರಾಮಗಳಲ್ಲಿ 2,44,160 ಕುಟುಂಬಗಳಿವೆ. ಉಳಿದಂತೆ 168 ವಾರ್ಡ್‌ಗಳಲ್ಲಿ 74,505 ಕುಟುಂಬಗಳಿದ್ದು ಜಿಲ್ಲೆಯಲ್ಲಿ ಒಟ್ಟಾರೆ 3,18,665 ಕುಟುಂಬಗಳಿವೆ. ಗಣತಿಗಾಗಿ ಜಿಲ್ಲೆಯಲ್ಲಿ 75 ಎಣಿಕೆದಾರರು ಹಾಗೂ 18 ಮೇಲ್ವಿಚಾರಕರು ಕಾರ್ಯನಿರ್ವಹಿಸುವರು.

    2018-19ರ 20ನೇ ಜಾನುವಾರು ಗಣತಿ ಮಾಹಿತಿಯಂತೆ ಜಿಲ್ಲೆಯಲ್ಲಿ 2,21,608 ದನಗಳು, 1,13,304 ಎಮ್ಮೆಗಳು, 13,52,087 ಕುರಿಗಳು, 3,85,058 ಮೇಕೆಗಳು, 2,177 ಹಂದಿಗಳು, 772 ಮೊಲಗಳು, 26,520 ನಾಯಿಗಳು, 55 ಕುದುರೆ, ಇತರೆ 1,740 ಜಾನುವಾರುಗಳು ಸೇರಿದಂತೆ ಒಟ್ಟು 21,03,321 ಜಾನುವಾರುಗಳಿರುವುದು ದಾಖಲಾಗಿತ್ತು. ಅಲ್ಲದೆ 17,40,470 ನಾಟಿಕೋಳಿ, 153 ಬಾತುಕೋಳಿ, ಇತರೆ 951 ಸೇರಿದಂತೆ ಒಟ್ಟು 17,41,574 ಕೋಳಿಗಳಿರುವುದು ದಾಖಲಾಗಿರುತ್ತದೆ.

    ಕ್ಲಿಕ್ ಮಾಡಿ ಓದಿ: ನಗರಸಭೆಯಲ್ಲಿ ಶಾಸಕ ವೀರೇಂದ್ರ ಪಪ್ಪಿ ಮೇಲುಗೈ | ಬಹುಮತವಿದ್ದು ಸೋತ ಬಿಜೆಪಿ | ಪಕ್ಷೇತರ ಸದಸ್ಯೆಗೆ ಒಲಿದ ಅಧ್ಯಕ್ಷ ಗಾದಿ

    ಗಣತಿ ಸಂದರ್ಭದಲ್ಲಿ, ಯಾವ ತಳಿಯ ಜಾನುವಾರುಗಳು? ಯಾವ ವಯಸ್ಸು, ಎಷ್ಟು ರೈತರು, ಯಾವ ವರ್ಗದ ರೈತರು, ಎಷ್ಟು ಮಹಿಳೆಯರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ಈ ಮೂಲಕ ಸರ್ಕಾರ ತಮ್ಮ ಮುಂದಿನ ಯೋಜನೆಯನ್ನು ಸಿದ್ದಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ರೈತರು ಹಾಗೂ ಹೈನುಗಾರಿಕೆ ಕ್ಷೇತ್ರಗಳಿಗೆ ಬೇಕಾದ ನೀತಿ ಕಾರ್ಯಕ್ರಮ ನಿರೂಪಿಸುವುದಕ್ಕಾಗಿ ಗಣತಿಯ ಅಂಶಗಳು ಬಳಕೆಯಾಗುತ್ತವೆ.

    ಗಣತಿಯಲ್ಲಿ ಸಂಗ್ರಹಿಸಲಾಗುವ ಮಾಹಿತಿಯನ್ನು ಗೌಪ್ಯವಾಗಿಟ್ಟು, ವರದಿ ಸಲ್ಲಿಸಲಾಗುವುದು. ಇದರಿಂದಾಗಿ ಅಂಕಿ ಅಂಶಗಳ ಆಧಾರದ ಮೇಲೆ ಕೇಂದ್ರ, ರಾಜ್ಯಮಟ್ಟದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಯೋಜಿಸಿ, ಅನುಷ್ಠಾನಗೊಳಿಸಲು ಅವಶ್ಯವಾಗಿದೆ. ಅದುದರಿಂದ ಗಣತಿದಾರರು ಕುಟುಂಬ, ಉದ್ಯಮ, ಸಂಸ್ಥೆಗಳಿಗೆ ಭೇಟಿ ನೀಡಿದಾಗ ಅವರಿಗೆ ಸಂಪೂರ್ಣ ಹಾಗೂ ಸ್ಪಷ್ಟ ಮಾಹಿತಿಯನ್ನು ನೀಡಿ ಸಹಕರಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top