ಮುಖ್ಯ ಸುದ್ದಿ
ಕಾವಲು ಚೌಡೇಶ್ವರಿ ದೇವಿ ಜಾತ್ರೆ | ಕುತೂಹಲ ಹೆಚ್ಚಿಸಿದ ಜೋಡೆತ್ತಿನ ಗಾಡಿ ಸ್ಪರ್ಧೆ
CHITRADURGA NEWS | 19 FEBRUARY 2024
ಚಿತ್ರದುರ್ಗ: ದೂರದ ಸಿಗಂದೂರಿನಿಂದನ ಬಂದು ನಾಯಕನಹಟ್ಟಿಯಲ್ಲಿ ನೆಲೆಸಿರುವ ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೇವತೆ ಕಾವಲು ಚೌಡೇಶ್ವರಿಯ ಜಾತ್ರೆಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಫೆ.19ರ ಮಧ್ಯಾಹ್ನ 3 ಗಂಟೆಗೆ ಚೌಡೇಶ್ವರಿ ದೇವಿಯ ರಥಕ್ಕೆ ಕಳಶ ಸ್ಥಾಪನೆ ಮಾಡುವ ಮೂಲಕ ಮೂರು ದಿನದ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.
ಜಾತ್ರೆ ಪ್ರಯುಕ್ತ ಇದೇ ಮೊದಲ ಬಾರಿಗೆ ಜೋಡೆತ್ತಿನ ಗಾಡಿ ಸ್ಪರ್ಧೆ ಆಯೋಜಿಸಲಾಗಿದೆ. ಫೆ.20 ರ ಮಂಗಳವಾರ ಬೆಳಿಗ್ಗೆ ಸ್ಪರ್ಧೆ ನಡೆಯಲಿದೆ. ಪ್ರಥಮ ಬಹುಮಾನ ₹ 20,000, ದ್ವಿತೀಯ ಬಹುಮಾನ ₹ 15,000, ತೃತೀಯ ಬಹುಮಾನ ₹ 8,000 ಮತ್ತು ನಾಲ್ಕನೇ ಬಹುಮಾನ ₹ 4,000 ನಿಗದಿಪಡಿಲಾಗಿದ್ದು, 40ಕ್ಕೂ ಹೆಚ್ಚು ಜೋಡಿ ರಾಸುಗಳು ಆಗಮಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಬಾಗೂರು ಮೈಲಾರಲಿಂಗೇಶ್ವರ ದೇವಾಲಯ ಲೋಕಾರ್ಪಣೆ | ಭಕ್ತರ ಸಮ್ಮುಖದಲ್ಲಿ ದೋಣಿಸೇವೆ
ಫೆ. 21ರಂದು ಮಧ್ಯಾಹ್ನ 3 ಗಂಟೆಗೆ ವೀರ ಪೋತುರಾಜರಿಂದ ಪೂಜಾ ವಿಧಿವಿಧಾನಗಳ ಆಚರಣೆ, 4 ಗಂಟೆಗೆ ಭಕ್ತರಿಂದ ಸಿಡಿ ಉತ್ಸವ ನಡೆಸಿ ದೇವಿಗೆ ಕಂಕಣ ವಿಸರ್ಜನೆ ನಡೆಸಿ ಜಾತ್ರೆಯನ್ನು ಪರಿಸಮಾಪ್ತಿಗೊಳಿಸಲಾಗುತ್ತದೆ.
ಹೋಬಳಿಯ ನೆಲಗೇತನಹಟ್ಟಿ, ಎತ್ತಿನಹಟ್ಟಿ, ಉಪ್ಪಾರಹಟ್ಟಿ, ಗೌಡಗೆರೆ, ಬೋಸೆದೇವರಹಟ್ಟಿ, ಜಾಗನೂರಹಟ್ಟಿ ಸೇರಿದಂತೆ ತಳುಕು, ಮೊಳಕಾಲ್ಮುರು, ಜಗಳೂರು, ಕೊಟ್ಟೂರು, ಕೂಡ್ಲಿಗಿ, ದಾವಣಗೆರೆ ಜಿಲ್ಲೆ ಸೇರಿದಂತೆ ನೆರೆಯ ಆಂಧ್ರ ಪ್ರದೇಶದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತಮ್ಮ ಭಕ್ತಿ ಸಮರ್ಪಿಸುತ್ತಾರೆ ಎಂದು ಚೌಡೇಶ್ವರಿ ದೇವಸ್ಥಾನ ಸಮಿತಿ ಟ್ರಸ್ಟ್ ಅಧ್ಯಕ್ಷ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ (ಎತ್ತಿನಹಟ್ಟಿಗೌಡ್ರು) ಹೇಳುತ್ತಾರೆ.
ಜಾನುವಾರುಗಳಿಗೆ ಯಾವುದೇ ರೋಗಗಳು ಬಂದರೂ, ಈ ದೇಗುಲ ಪ್ರದಕ್ಷಿಣೆ ಮಾಡಿಸಿದರೆ ಸಾಕು ಪರಿಹಾರ ದೊರೆಯುತ್ತದೆ ಎನ್ನುವ ಬಲವಾದ ನಂಬಿಕೆ ಈ ಭಾಗದ ರೈತರಲ್ಲಿದೆ. ಇಂದಿಗೂ ಜಾತ್ರೆ ದಿನ ಸಂಜೆ ರೈತರು ತಮ್ಮ ಜಾನುವಾರುಗಳನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸುತ್ತಾರೆ. ಭಕ್ತರು ತಾವು ಬೆಳೆದ ದವಸ ಧಾನ್ಯಗಳನ್ನು ಅರ್ಪಿಸಿ ಪರುವು ಮಾಡಿಕೊಂಡು ಹರಕೆ ಸಲ್ಲಿಸುವುದು ಇಲ್ಲಿನ ವಿಶೇಷ.