ಮುಖ್ಯ ಸುದ್ದಿ
ಬಸ್ ಪ್ರಯಾಣ ದರ ಏರಿಕೆ | ಹಿಂಪಡೆಯುವಂತೆ ಜೆಡಿಎಸ್ ಆಗ್ರಹ
CHITRADURGA NEWS | 08 JANUARY 2025
ಚಿತ್ರದುರ್ಗ: ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಬಸ್ ಪ್ರಯಾಣ ದರವನ್ನು ಶೇ.15 ಏರಿಕೆ ಮಾಡಿರುವುದನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ತಕ್ಷಣ ಬಸ್ ಪ್ರಯಾಣ ದರ ಏರಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
Also Read: ವಾಣಿವಿಲಾಸ ಸಾಗರ ಜಲಾಶಯದ ಇಂದಿನ ಮಟ್ಟ
ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಮಾತನಾಡಿ, ರಾಜ್ಯ ಸರ್ಕಾರ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಜನಸಾಮಾನ್ಯರ ಮೇಲೆ ದರ ಹೆಚ್ಚಳದ ಹೊರೆ ಹೊರಿಸಿದೆ. ಸುಭದ್ರವಾಗಿದ್ದ ಕರ್ನಾಟಕದ ಆರ್ಥಿಕತೆಯನ್ನು ಹದಗೆಡೆಸಿದೆ ಎಂದು ದೂರಿದರು.
ಸಾರಿಗೆ ಪ್ರಯಾಣ ದರವನ್ನು ಶೇ.15 ಹೆಚ್ಚಳ ಮಾಡಿ ಈಗ ಜನಸಾಮಾನ್ಯರ ಮೇಲೆ ಅನಗತ್ಯವಾಗಿ ಬೆಲೆ ಏರಿಕೆಯ ಬರೆ ಹಾಕುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಸಾರಿಗೆ ಸಂಸ್ಥೆ ದಿವಾಳಿಯಾಗಿದ್ದು, ಈಗಾಗಲೇ ರಾಜ್ಯ ಸಾರಿಗೆ ಸಂಸ್ಥೆಗೆ 2,000 ಕೋಟಿ ಸಾಲ ಪಡೆಯಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ, ಅದರ ನಷ್ಟವನ್ನು ಸರಿದೂಗಿಸಲು ದರ ಹೆಚ್ಚಿಸಿ ಪುರುಷ ಪ್ರಯಾಣಿಕರಿಂದ ವಸೂಲಿ ಮಾಡಲಾಗುತ್ತಿದೆ. ಸರ್ಕಾರ ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಸಿದು ಕೊಳ್ಳುತ್ತಿದೆ ಎಂದರು.
Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್…
ರಾಜ್ಯ ಸರ್ಕಾರದ ಈ ತೀರ್ಮಾನ ಜನವಿರೋಧಿ ಮತ್ತು ಬಡವರ ವಿರೋಧಿ ಕ್ರಮವಾಗಿದೆ. ಬಸ್ ದರ ಏರಿಕೆಯನ್ನು ಜೆಡುಎಸ್ ಖಂಡಿಸುತ್ತದೆ. ಈ ಕೂಡಲೇ ರಾಜ್ಯ ಸರ್ಕಾರ ಅವೈಜ್ಞಾನಿಕ ಬಸ್ ಪ್ರಯಾಣ ದರ ಏರಿಕೆಯನ್ನು ವಾಪಾಸ್ ಪಡೆಯಬೇಕೆಂದು ಜನತಾದಳ ಪಕ್ಷ ಕಾರ್ಯಕರ್ತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ ನಗರಸಭೆ ಸದಸ್ಯ ನಸ್ರುಲ್ಲಾ, ತಾಲೂಕು ಅಧ್ಯಕ್ಷರಾದ ಸಣ್ಣ ತಿಮ್ಮಣ್ಣ, ಗಣೇಶ್ಮೂರ್ತಿ, ಅಧ್ಯಕ್ಷ ಹನುಮಂತರಾಯಪ್ಪ, ಕರಿಬಸಪ್ಪ, ವಿರಭದ್ರಪ್ಪ, ಲಿಂಗರಾಜು ಮಠದಹಟ್ಟಿ ವೀರಣ್ಣ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಗೀತಮ್ಮ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಬು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.