Connect with us

    ಸಂಗೇನಹಳ್ಳಿ ಕನ್ನಡ ಮೇಷ್ಟ್ರುಸಾಹಿತ್ಯ ತೋಟದ ಉತ್ಕೃಷ್ಟ ಫಸಲು ‘ಜಗಳೂರು ಸೀಮೆಯ ಜಾತ್ರೆಗಳು’

    ಮುಖ್ಯ ಸುದ್ದಿ

    ಸಂಗೇನಹಳ್ಳಿ ಕನ್ನಡ ಮೇಷ್ಟ್ರುಸಾಹಿತ್ಯ ತೋಟದ ಉತ್ಕೃಷ್ಟ ಫಸಲು ‘ಜಗಳೂರು ಸೀಮೆಯ ಜಾತ್ರೆಗಳು’

    CHITRADURGA NEWS | 09 MARCH 2024
    ಚಿತ್ರದುರ್ಗ: ವಿದ್ಯಾರ್ಥಿಗಳ ಪಾಲಿನ ನೆಚ್ಚಿನ ಕನ್ನಡ ಮೇಷ್ಟ್ರು ಡಾ।.ಸಂಗೇನಹಳ್ಳಿ ಅಶೋಕ ಕುಮಾರ್‌. ವೃತ್ತಿಯಿಂದ ನಿವೃತ್ತಿ ಹೊಂದಿದರು ಸಹ ಬರವಣಿಗೆ ಕೃಷಿ ಮುಂದುವರೆಸಿದ್ದಾರೆ. ‘ಜಗಳೂರು ಸೀಮೆಯ ಜಾತ್ರೆಗಳು ಸಾಂಸ್ಕೃತಿಕ ಅವಲೋಕನ’ ಉತ್ಕೃಷ್ಟ ಫಸಲಾಗಿ ಓದುಗನ ಜ್ಞಾನದ ದಾಹ ನೀಗಿಸಲು ಸಜ್ಜಾಗಿದೆ.

    ಡಾ.ಸಂಗೇನಹಳ್ಳಿ ಅಶೋಕ ಕುಮಾರ್‌ ಮೂಲತಃ ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಜಗಲೂರಿನವರು. 1957 ರ ಅಕ್ಟೋಬರ್‌ 4 ರಂದು ಸಂಗೇನಹಳ್ಳಿ ಎಸ್‌.ಹನುಮಂತರೆಡ್ಡಿ, ರಂಗಾಪುರ ಕೆ.ಎಸ್‌.ಹನುಮಕ್ಕ ದಂಪತಿಯ ಪುತ್ರನಾಗಿ ಜನಿಸಿದ್ದಾರೆ. ರಂಗಾಪುರದ ಕೂಲಿ ಮಠದಲ್ಲಿ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡಿದ ಇವರು, ಜಗಳೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಶಿಕ್ಷಣ ಹಾಗೂ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿ ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಪದವಿ, ಗುಲಬರ್ಗದ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕುವೆಂಪು ವಿಶ್ ವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.

    ಕ್ಲಿಕ್ ಮಾಡಿ ಓದಿ:https://chitradurganews.com/on-march-10-kannada-festival-award-ceremony-kt-sivakumar/

    ಜಗಳೂರಿನ ಹೊ.ಚಿ.ಬೋರಯ್ಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ 1983ರಲ್ಲಿ ವೃತ್ತಿ ಜೀವನಕ್ಕೆ ಕಾಲಿಡುತ್ತಾರೆ. ಈ ವೇಳೆ ಆರ್‌ಟಿಒ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಆಯ್ಕೆಯಾದರು ಸಹ ವರದಿ ಮಾಡಿಕೊಳ್ಳುವುದಿಲ್ಲ. ಚಿತ್ರದುರ್ಗ, ಕನಕಪುರ, ಮಂಡ್ಯ, ಹಿರಿಯೂರು, ಚಿತ್ರಹಳ್ಳಿ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

    ದಾವಣಗೆರೆ ವಿವಿಯ ಕನ್ನಡ ಅಧ್ಯಾಪಕರ ವೇದಿಕೆ ಅಧ್ಯಕ್ಷ, ಕಾರ್ಯದರ್ಶಿ, ಜತೆಗೆ ಕುವೆಂಪು ವಿವಿಯ ಅಕಾಡೆಮಿಕ್‌ ಕೌನ್ಸಿಲ್‌ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.‘ನಾನು ಬುದ್ಧನಲ್ಲ’, ‘ನನ್ನ ದೇವರು ಮತ್ತು ಇತರೆ ಕವಿತೆಗಳು’ ಕವನ ಸಂಕಲನ ರಚಿಸಿದ್ದಾರೆ. ಕುವೆಂಪು ವಿವಿಗೆ ‘ಸಂವಹನ ಕನ್ನಡ’, ದಾವಣಗೆರೆ ವಿವಿಗೆ ‘ಕನ್ನದ ದವನ’, ‘ಕನ್ನಡ ಸಂಸ್ಕೃತಿ’ ಎಂಬ ಪಠ್ಯ ಪುಸ್ತಕ ರೂಪಿಸಿದ್ದಾರೆ.

    ಬಹು ನಿರೀಕ್ಷಿತ ‘ಜಗಳೂರು ಸೀಮೆಯ ಜಾತ್ರೆಗಳು ಸಾಂಸ್ಕೃತಿಕ ಅವಲೋಕನ’ ಪುಸ್ತಕ ಮಾರ್ಚ್ 9ರಂದು ಬೆಳಿಗ್ಗೆ 10 ಗಂಟೆಗೆ ಜಗಳೂರಿನ ವಾಲ್ಮೀಕಿ ಭವನದಲ್ಲಿ ಕೃತಿ ಜನಾರ್ಪಣೆಗೊಳ್ಳುತ್ತಿದೆ.

    ಕ್ಲಿಕ್ ಮಾಡಿ ಓದಿ: https://chitradurganews.com/mobile-dialysis-unit-to-start-soon/

    ಈ ಕೃತಿಯ ಬಗ್ಗೆ ಜಗಳೂರಿನ ನಿವೃತ್ತ ಕೆನರಾ ಬ್ಯಾಂಕ್‌ ಡಿಎಂ ಆದ ಎನ್‌.ಟಿ. ಎರ್ರಿಸ್ವಾಮಿ ಬರೆದ ‘ಬರದನಾಡಲ್ಲಿ ಬಂಗಾರದಬೆಳೆ ಜಗಳೂರು ಸೀಮೆಯ ಜಾತ್ರೆಗಳು’ ಲೇಖನ ಮುಂದಿನಂತೆ…

    ಭಕ್ತಿ, ಆಚರಣೆ, ಪರಂಪರೆಯ ಹಿನ್ನೆಲೆ ಹೊಂದಿರುವ ಜಾತ್ರೆಗಳು ಕೇವಲ ಮನರಂಜನೆಯ ಉದ್ದೇಶ ದಿಂದ ನಡೆಯುವುದಿಲ್ಲ. ಸಹಬಾಳ್ವೆ ಮತ್ತು ಸಾಮೂಹಿಕ ಜವಾಬ್ದಾರಿ ಕೆಲಸ ಕಾರ್ಯಗಳು ಹೇಗಿರಬೇಕು ಎಂಬುದನ್ನು ಅವು ಜಗತ್ತಿಗೆ ಸಾರುತ್ತವೆ. ಜಾತ್ರೆಗಳ ಮೂಲಕ ಸಮಾಜದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳು ಪುನರುಜ್ಜೀವನ ಗೊಳ್ಳುತ್ತವೆ. ಅಲ್ಲಿನ ಸಮುದಾಯ ಆಹಾರ ಪದ್ಧತಿಯು ಇತಿಹಾಸ ಮತ್ತು ವರ್ತಮಾನಗಳನ್ನು ಬೆಸೆಯುತ್ತದೆ ಎಂದು ನಾಡಿನ ಖ್ಯಾತ ಚಿಂತಕರಾದ ಡಾ. ಪುರುಷೋತ್ತಮ ಬಿಳಿಮಲೆಯವರು ಜಾತ್ರೆಗಳನ್ನು ಕುರಿತು ಒಂದೆಡೆ ವ್ಯಾಖ್ಯಾನಿಸಿದ್ದಾರೆ. ಹಬ್ಬಗಳು ಊಟಕ್ಕೆ ಜಾತ್ರೆಗಳು ನೋಟಕ್ಕೆ , ಜನಮರುಳೋ ಜಾತ್ರೆ ಮರುಳೋ ಎಂಬ ಗಾದೆಮಾತುಗಳು ನಮಗೆ ತಿಳಿದೇ ಇದೆ.

    ಇಲ್ಲಿ ಈ ಮಾತನ್ನು ನೆನಪಿಸಿಕೊಳ್ಳಲು ಕಾರಣ ನಮ್ಮ ಜಗಳೂರು ನೆಲದಲ್ಲಿಯೇ ಹುಟ್ಟಿ, ಬೆಳೆದು ಬದುಕು ರೂಪಿಸಿಕೊಂಡು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಡಾ. ಸಂಗೇನಹಳ್ಳಿ ಅಶೋಕ್ ಕುಮಾರ್ ರವರು ಹಲವು ವರ್ಷಗಳ ಕಾಲ ಶ್ರಮವಹಿಸಿ ‘ಜಗಳೂರು ಸೀಮೆಯ ಜಾತ್ರೆಗಳು’ ಎನ್ನುವ ಸಾಂಸ್ಕೃತಿಕ ಅವಲೋಕನದ ಪುಸ್ತಕ ಒಂದನ್ನು ಹೊರ ತರುತ್ತಿದ್ದಾರೆ. ಮಾರ್ಚ್‌ 9ರಂದು ಬೆಳಿಗ್ಗೆ ಜಗಳೂರಿನ ವಾಲ್ಮೀಕಿ ಭವನದಲ್ಲಿ ಕೃತಿ ಜನಾರ್ಪಣೆ ಗೊಳ್ಳಲಿದೆ.

    ಭೌಗೋಳಿಕ ಭಿನ್ನತೆಗಳನ್ನು ಹೊಂದಿರುವ ಜಗಳೂರು ತಾಲೂಕು ಮ್ಯಾಸ ನಾಯಕರ, ಕಾಡುಗೊಲ್ಲರ ಬುಡಕಟ್ಟು ಸಂಸ್ಕೃತಿಯ ಆಗರ ವಾಗುವುದರ ಜೊತೆಗೆ ದಲಿತ, ಬಲಿತ ಸಮುದಾಯದ ಬಹುಮುಖಿ ಸಂಸ್ಕೃತಿಯನ್ನು ತನ್ನಲ್ಲಿ ಆವೀರ್ಭವಿಸಿಕೊಂಡಿದೆ. ಅಶೋಕನ ನೆಲೆವೀಡಾಗಿದ್ದ ಅಸಗೋಡು, ಜಗಳೂರು ಪಾಪ ನಾಯಕನ ಜಗಳೂರು, ಕಲ್ಲೇ ದೇವರಾದ ಕಲ್ಲೇದೇವರಪುರ, ಜನವಸತಿಯ ಮೂಲ ನೆಲೆಗಳಿಗೆ ಕರೆದೊಯ್ಯುವ ಜಿನಗಿ ಹಳ್ಳ ಎಲ್ಲವೂ ಭಿನ್ನ ವಿಭಿನ್ನ. ಉಣಲು ಉಡಲು ಇಲ್ಲಿ ಬರವಿದೆ ನಿಜ. ಆದರೆ ಸಾಂಸ್ಕೃತಿಕವಾಗಿ ಜಗಳೂರು ಸಮೃದ್ಧ, ಸಂಪತ್ ಭರಿತ ಬಂಗಾರದ ಬೆಳೆ ಬೆಳೆಯಬಲ್ಲ ಸಂತುಷ್ಟ ನೆಲ. ಜಗಲೂರನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಕರ್ನಾಟಕವೂ ತಿಳಿದೀತು. ಭಾರತವೂ ಅರ್ಥವಾದೀತು ಎಂಬಂತೆ ಡಾ. ಸಂಗೇನಹಳ್ಳಿ ಅಶೋಕ್ ಕುಮಾರ್ ಅವರು ಜಗಳೂರು ತಾಲೂಕಿನ ಜಾತ್ರೆ, ಉತ್ಸವ, ರಥೋತ್ಸವ, ತೇರು, ಆಚರಣೆಗಳು .ಸಂಪ್ರದಾಯಗಳನ್ನು ಬಹಳ ಅರ್ಥವತ್ತಾಗಿ ತಮ್ಮ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

    ಜಗಳೂರು ನನ್ನ ಬಾಲ್ಯದ ಎಲ್ಲಾ ಏಳು ಬೀಳುಗಳ ಆಡುಂಬಲ .ಈ ಸೀಮೆಯಲ್ಲಿ ನಡೆಯುತ್ತಿದ್ದ ಎಲ್ಲಾ ಹಬ್ಬ , ಹರಿದಿನ, ಉತ್ಸವ , ಪರಿಷೆ , ಜಾತ್ರೆಗಳನ್ನು ನಾನು ಬಾಲ್ಯದಿಂದಲೂ ನೋಡುತ್ತಾ ಬೆಳೆದವನು. ಜೀವನವು ತನ್ನ ಒಡಲಲ್ಲಿ ಅನೇಕ ವಿಸ್ಮಯಗಳನ್ನು ಇಟ್ಟುಕೊಂಡಿರುವಂತೆ ಜಾತ್ರೆಗಳು ಕೂಡ ತನ್ನ ಒಡ ಲಾಳದಲ್ಲಿ ವಿಸ್ಮಯಗಳ ಸರಮಾಲೆಯನ್ನು ಅಡಗಿಸಿ ಕೊಂಡಿದೆ. ಅಂತಹ ವಿಸ್ಮಯಗಳನ್ನು ಒಳಹೊಕ್ಕು ನೋಡುವ ಪ್ರಯತ್ನವನ್ನು ನಾನು ಮಾಡಿದ್ದೇನೆ ಎಂದು ಕೃತಿಕಾರ ಅಶೋಕ್‌ ಕುಮಾರ್‌ ಅವರು ನುಡಿಯುತ್ತಾರೆ.

    ಆರು ಅಧ್ಯಾಯಗಳಲ್ಲಿ ಹರಡಿಕೊಂಡಿರುವ ಜಗಳೂರು ಸೀಮೆಯ ಜಾತ್ರೆಗಳು ಕೃತಿ ಒಂದು ಅಚ್ಚುಕಟ್ಟಾದ ಕ್ಷೇತ್ರ ಆಧಾರಿತ ಮಾಹಿತಿಯುಕ್ತ ಅಧ್ಯಯನವಾಗಿದ್ದು ಅಶೋಕ್ ಕುಮಾರ್ ರವರ ಅಧ್ಯಯನ ಶ್ರದ್ಧೆಗೆ ನಿದರ್ಶನ ಒದಗಿಸುತ್ತಿದೆ ಎಂದು ನಾಡಿನ ಖ್ಯಾತ ಬರಹಗಾರರಾದ ಡಾ. ಬಂಜಗೆರೆ ಜಯಪ್ರಕಾಶ್ ರವರು ಈ ಕೃತಿಯ ಬಗ್ಗೆ ಸೂಕ್ತವಾದ ಮಾತುಗಳನ್ನೇ ಆಡಿದ್ದಾರೆ.

    ತಾಲೂಕಿನಲ್ಲಿ ನಡೆಯುವ ಪ್ರಮುಖ 66 ಜಾತ್ರೆಗಳ ಮೇಲೆ ಬೆಳಕು ಚೆಲ್ಲುವ ಅಶೋಕ್ ಕುಮಾರ್ ರವರು ಅವುಗಳನ್ನು ಐದು ಭಾಗಗಳಾಗಿ ವರ್ಗಿಕರಣ ಗೊಳಿಸಿದ್ದಾರೆ . ಮಹಿಳಾ ಕೇಂದ್ರಿತ ಜಾತ್ರೆಗಳು, ಪುರುಷ ಕೇಂದ್ರಿತ ಜಾತ್ರೆಗಳು, ಬುಡಕಟ್ಟು ವೀರರ ಪರವುಗಳು, ಮಠ ಸಂಬಂಧಿ ಪಾರಂಪರಿಕ ಉತ್ಸವಗಳು, ಹಾಗೂ ಸಂಕೀರ್ಣ ಆಚರಣೆಗಳಾಗಿ ಜಾತ್ರೆಗಳು ವಿಂಗಡನೆಗೊಂಡಿವೆ. ಪ್ರತಿಯೊಂದು ಅಧ್ಯಾಯವು ಕುತೂಹಲ ಭರಿತವಾಗಿ ಓದಿಸಿಕೊಂಡು ಹೋಗುತ್ತದೆ.

    ಚೌಡೇಶ್ವರಿ , ಮಾರಮ್ಮ, ಯಲ್ಲಮ್ಮ, ಸತ್ಯಮ್ಮ, ಕೊಂಡ್ಲಮ್ಮ ಹೆಣ್ಣು ದೇವತೆಗಳ ಜಾತ್ರೆಗಳ ವಿವರ ಒಂದೆಡೆಯಾದರೆ ಗಂಡು ದೇವರು ಗಳಾದ ಆಂಜನೇಯ, ಬಸವೇಶ್ವರ , ಮುಷ್ಟೂರೇಶ್ವರ , ವಿಶ್ವ ಬಂದು ಮರುಳಸಿದ್ದ, ಕಲ್ಲೇಶ್ವರ, ರಂಗನಾಥ, ಶಂಭುಲಿಂಗೇಶ್ವರ ಮುಂತಾದ ದೇವರ ಜಾತ್ರೆಗಳ ಮಾಹಿತಿ ಮತ್ತೊಂದೆಡೆ ಇದೆ. ಬುಡಕಟ್ಟು ವೀರರಾದ ಮೆಲ್ಲಜ್ಜ , ದೊಡ್ಡಣ್ಣ, ಬಡಣ್ಣ, ಗುಡ್ಡ ಚಿಕ್ಕಣ್ಣ, ಬೊಮ್ಮಕಾಟಪ್ಪ ,ಜಗಳೂರು ಪಾಪ ನಾಯಕರ ಜಾತ್ರೆಗಳ ಬಗ್ಗೆ ವಿಶೇಷ ಆಸಕ್ತಿ ಮೂಡುವ ಆಕರ್ಷಣೀಯ ಬರಹಗಳು ಇಲ್ಲಿವೆ.

    ಕಣ್ವ ಕುಪ್ಪೆ, ಮುಷ್ಟೂರು, ದೊಣೆಹಳ್ಳಿ, ಬಿದರಕೆರೆ ಗಳಲ್ಲಿರುವ ಮಠ ಸಂಬಂಧಿ ಜಾತ್ರೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಸಂಕೀರ್ಣ ಆಚರಣೆಗಳಾದ ಪೋತರಾಜರು, ಮೊಹರಂ, ಜೋಕುಮಾರನ ಅಳಲು, ದೊಂಗ ದ್ಯಾವರುಗಳ ರಸವತ್ತಾದ ಆಚರಣೆ, ಪದ್ಧತಿಗಳ ಬರಹಗಳು ನಿಮ್ಮ ಮನ ಸೆಳೆಯುತ್ತವೆ.

    ಒಟ್ಟಾರೆ ಕೃತಿ ಜಗಳೂರು ತಾಲೂಕಿನ ಜಾತ್ರೆಗಳ ಕುರಿತಾಗಿ ಇದ್ದರೂ ಇಡೀ ನಾಡಿನ ಜಾತ್ರೆಗಳ ಬಗ್ಗೆ ಇದು ಹೊಸ ಬೆಳಕೊಂದನ್ನು ಚೆಲ್ಲಬಹುದು. ಡಾ. ಅಶೋಕ್ ಕುಮಾರ್ ರವರ ಶ್ರಮ ಸಾರ್ಥಕವಾಗಬೇಕಾದರೆ ನಾವು ಪುಸ್ತಕ ಲೋಕಾರ್ಪಣೆಯ ಸಂಭ್ರಮದಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಆ ಪುಸ್ತಕವನ್ನು ಕೊಂಡು ಓದುವಂತಾಗಬೇಕು ಮಾರ್ಚ್ 9 ರಂದು ಕಾರ್ಯಕ್ರಮಕ್ಕೂ ಮುನ್ನ ಜಗಳೂರು ತಾಲೂಕಿನ ಹಿರಿಮೆ ಗರಿಮೆಗಳನ್ನು ಸಾರುವ ಸಾಂಸ್ಕೃತಿಕ ಹಿನ್ನೆಲೆಯ ಅರ್ಥಪೂರ್ಣ ಮೆರವಣಿಗೆ ಅಂಬೇಡ್ಕರ್ ಸರ್ಕಲ್ ಇಂದ ವಾಲ್ಮೀಕಿ ಭವನದವರಿಗೆ ನಡೆಯಲಿದೆ .ಬನ್ನಿ ಸಂಭ್ರಮಿಸೋಣ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top