Connect with us

    ವಿಜೃಂಭಣೆಯ ಕಣಿವೆ ಮಾರಮ್ಮ ಜಾತ್ರೆ | ಕುಂಚಿಗನಾಳಲ್ಲಿ ಜನವೋ ಜನ

    ಮುಖ್ಯ ಸುದ್ದಿ

    ವಿಜೃಂಭಣೆಯ ಕಣಿವೆ ಮಾರಮ್ಮ ಜಾತ್ರೆ | ಕುಂಚಿಗನಾಳಲ್ಲಿ ಜನವೋ ಜನ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 22 MARCH 2025

    ಚಿತ್ರದುರ್ಗ: ಶಕ್ತಿದೇವತೆ ಕುಂಚಿಗನಾಳ್ ಶ್ರೀ ಕಣಿವೆಮಾರಮ್ಮ ದೇವಿಯ ಜಾತ್ರಾ ಮಹೋತ್ಸವವೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

    Also Read: ನೀರು ಹಾಯಿಸಲು ಹೋಗಿದ್ದ ರೈತರ ಮೇಲೆ ಕರಡಿ ದಾಳಿ | ಗಂಭೀರ ಗಾಯ

    ರೇಷ್ಮೆ ಸೀರೆಗಳಿಂದ ಸಿಡಿ ಕಂಬವನ್ನು ಅಲಂಕರಿಸಿದ ನಂತರ ಶಾಸ್ತ್ರ, ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳು ನೆರವೇರಿದವು. ಆದರೆ, ಹರಕೆ ಹೊತ್ತ ಭಕ್ತರು ಸಿಡಿಯಾಡಲು ಅವಕಾಶವಿಲ್ಲ.

    ಈ ಕಾರಣಕ್ಕೆ ದೇವಿಯ ಮುಂಭಾಗದಲ್ಲೇ ಇರುವ ಬಸವನ ಉತ್ಸವ ಮೂರ್ತಿಯನ್ನು ತೊಟ್ಟಿಲೊಳಗೆ ಕೂರಿಸಿ, ಸಿಡಿ ಕಂಬಕ್ಕೆ ಕಟ್ಟಿ ಒಂಬತ್ತು ಸುತ್ತು ಸಿಡಿಯಾಡಿಸುವ ಮೂಲಕ ಆಚರಿಸಲಾಯಿತು. ಈ ವೇಳೆ ನೆರೆದಿದ್ದ ಭಕ್ತರಿಂದ ಉಧೋ ಉಧೋ ಹರ್ಷೋದ್ಗಾರ ಮೊಳಗಿತು.

    ಸರ್ಕಾರ ಸಿಡಿ ಉತ್ಸವಕ್ಕೆ ನಿರ್ಬಂಧ ವಿಧಿಸಿ, ಮೌಢ್ಯ ನಿಷೇಧ ಕಾಯ್ದೆ ವ್ಯಾಪ್ತಿಗೆ ಒಳಪಡಿಸಿದ ನಂತರ ಕಳೆದ ನಾಲ್ಕು ವರ್ಷಗಳಿಂದ ಕಣಿವೆಮಾರಮ್ಮ ದೇವಿಯ ಸಿಡಿ ಮಹೋತ್ಸವದಲ್ಲಿ ಹರಕೆ ಹೊತ್ತ ಭಕ್ತರು ಸಿಡಿ ಕಂಬಕ್ಕೆ ಪ್ರದಕ್ಷಿಣೆ ಹಾಕಿ ಭಕ್ತಿ ಸಮರ್ಪಿಸುತ್ತಿದ್ದಾರೆ.

    Also Read: ಏಪ್ರಿಲ್ 13 | ಹಿರೇಗುಂಟನೂರು ದ್ಯಾಮಲಾಂಬ ಜಾತ್ರೆ

    ಬಸವನ ಉತ್ಸವ ಮೂರ್ತಿಯೊಂದಿಗೆ ಸಿಡಿ ಮಹೋತ್ಸವಕ್ಕೆ ಯಾವುದೇ ಅಡ್ಡಿಯಾಗದಂತೆ ಆಚರಿಸಲಾಗುತ್ತಿದೆ. ಆದರೂ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಕ್ಷೀಣಿಸಿಲ್ಲ. ಕಣ್ಣಾಯಿಸಿದಷ್ಟು ದೂರ ಭಕ್ತಸಾಗರವೇ ರಾಜ್ಯದ ನಾನಾ ಭಾಗಗಳಿಂದ ಹರಿದು ಬಂದಿದ್ದರಿಂದ ಕಳೆಗಟ್ಟಿತ್ತು.

    ಜಾತ್ರೆ ಅಂಗವಾಗಿ ಬೆಳಗ್ಗೆಯಿಂದಲೇ ಅಭಿಷೇಕ ಸೇರಿ ಇತರೆ ಪೂಜಾ ಕೈಂಕರ್ಯಗಳು ನೆರವೇರಿದವು. ಬೃಹತ್ ಹೂವಿನ ಹಾರಗಳಿಂದಲೇ ಕಣಿವೆಮಾರಮ್ಮ ದೇವಿಯನ್ನು ಭಕ್ತರ ಕಣ್ಮನ ಸೆಳೆಯುವಂತೆ ಅರ್ಚಕರು ಅಲಂಕರಿಸಿದ್ದರು. ದೇಗುಲ ಕೂಡ ಪುಷ್ಪಾಲಂಕಾರದಿಂದ ಕಂಗೊಳಿಸಿತು.

    ನಗರ ಸೇರಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಗ್ರಾಮಸ್ಥರೂ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸರತಿ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ಅಮ್ಮನ ದರ್ಶನ ಪಡೆದರು. ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿಕೊಂಡರು. ಪುಟಾಣಿಗಳನ್ನು ದೇವಿಗೆ ಮುಟ್ಟಿಸಿ ಆಶೀರ್ವಾದ ಪಡೆದರು. ನೆರೆದಿದ್ದ ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು.

    Also Read: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?

    ಅನೇಕ ಎತ್ತಿನಗಾಡಿಯೊಂದಿಗೆ ಪಾನಕ, ಮಜ್ಜಿಗೆ ಸಮೇತ ಗ್ರಾಮೀಣ ಸೊಗಡಿನಲ್ಲಿ ಬಂದ ಹಲವರು ಗಮನ ಸೆಳೆದರು. ಅಲ್ಲಲ್ಲಿ ಬಿಡಾರ ಹೂಡಿ ಸಂಬಂಧಿಕರು, ಸ್ನೇಹಿತರೊಂದಿಗೆ ಜಾತ್ರೆಯನ್ನು ಸಂಭ್ರಮಿಸಿದರು.

    ಸಂಚಾರ ಸಮಸ್ಯೆ:

    ಸಿಡಿ ಮಹೋತ್ಸವ ಮುಗಿದ ನಂತರ ಎಲ್ಲರೂ ಕಣಿವೆಯಿಂದ ತಮ್ಮ ಮನೆಗಳಿಗೆ ಹಿಂದಿರುಗಲು ಮುಂದಾಗಿದ್ದರಿಂದಾಗಿ ವಿಪರೀತ ಟ್ರಾಫಿಕ್ ಕಿರಿಕಿರಿ ಉಂಟಾಯಿತು. ಅರ್ಧ ತಾಸು ಕಾದರೂ ವಾಹನಗಳು ಮುಂದಕ್ಕೆ ಕದಲಲಿಲ್ಲ. ಕಾರು, ದ್ವಿಚಕ್ರ, ಆಟೋಗಳ ಸಂಖ್ಯೆ ಹೆಚ್ಚಿದ್ದರಿಂದಾಗಿ ಒಂದೇ ದಾರಿಯಲ್ಲಿ ಸಾಗಲು ಭಕ್ತರು ಹರಸಾಹಸ ಪಡಬೇಕಾಯಿತು.

    ಭಕ್ತರಿಗೆ ಅನ್ನಸಂತರ್ಪಣೆ:

    ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆ ಮಾರಮ್ಮ ದೇವಿಯ ಮೂರ್ತಿಯನ್ನು ಅರ್ಚಕರು ಅತ್ಯಾಕರ್ಷಕವಾಗಿ ಅಲಂಕರಿಸಿದ್ದರು. ಇಲ್ಲಿಯೂ ಬೆಳಗ್ಗೆ 10ರಿಂದ ರಾತ್ರಿ 10ರ ವರೆಗೂ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top