ಮುಖ್ಯ ಸುದ್ದಿ
ಈ ವರ್ಷವೂ ಚಿತ್ರದುರ್ಗಕ್ಕೆ ಭದ್ರೆ ಹರಿಯುವುದು ಅನುಮಾನ | ಅಬ್ಬಿನಹೊಳಲು ಬಳಿ ಶೇ.9 ರಷ್ಟು ಮಾತ್ರ ಕಾಮಗಾರಿ
CHITRADURGA NEWS | 26 JUNE 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಈ ವರ್ಷ ನೀರು ಹರಿಯುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಇಷ್ಟು ವರ್ಷಗಳ ಕಾಲ ಅಜ್ಜಂಪುರ ಸಮೀಪದ ಅಬ್ಬಿನಹೊಳಲು ರೈತರ ಅಡ್ಡಿಯ ನೆಪ ಹೇಳಿಕೊಂಡು ಆಳುವ ಸರ್ಕಾರಗಳು ನೀರು ಹರಿಸುವುದು, ಕಾಮಗಾರಿ ಮುಗಿಸುವುದನ್ನು ಮುಂದೂಡುತ್ತಲೇ ಬಂದಿದ್ದವು.
ಕಳೆದ ಫೆಬ್ರವರಿ ತಿಂಗಳಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಬ್ಬಿನಹೊಳಲು ಗ್ರಾಮಕ್ಕೆ ಆಗಮಿಸಿ ರೈತರ ಜೊತೆಗೆ ಮಾತುಕತೆ ನಡೆಸಿದ ಪರಿಣಾಮ ಅಲ್ಲಿನ ರೈತರು ಕಾಮಗಾರಿ ನಡೆಸಲು ಅನುವು ಮಾಡಿಕೊಟ್ಟಿದ್ದರು.
ಈ ವೇಳೆ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ, ಅಕ್ಟೋಬರ್ 2 ರಂದು ನೀರು ಹರಿಸುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿ ಹೋಗಿದ್ದರು.
ಅಬ್ಬಿನಹೊಳಲು ಬಳಿ ಕಾಮಗಾರಿ ಎಷ್ಟಾಗಿದೆ:
ಅಬ್ಬಿನಹೊಳಲು ಬಳಿ ಭದ್ರಾ ಮೇಲ್ದಂಡೆ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ತೀರಾ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಈ ವರ್ಷದ ಅಕ್ಟೋಬರ್ ವೇಳೆಗೆ ಜಿಲ್ಲೆಗೆ ನೀರು ಹರಿಯುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: ನಿರ್ಮಿತಿ ಕೇಂದ್ರದ ಹಗರಣ | ಸಿಒಡಿ ತನಿಖೆಗೆ ವಹಿಸಿ | ಸಚಿವ ಡಿ.ಸುಧಾಕರ್
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ಕುರಿತು ಭದ್ರಾ ಮೇಲ್ದಂಡೆ ಕಾರ್ಯಪಾಲಕ ಇಂಜಿನಿಯರ್ ಪ್ರಕಾಶ್, ಚಿಕ್ಕಮಗಳೂರು ಜಿಲ್ಲೆಯ ಅಬ್ಬಿನಹೊಳಲು ಬಳಿ ಮಾರ್ಚ್ ತಿಂಗಳಲ್ಲಿ ಕೆಲಸ ಪ್ರಾರಂಭಿಸಲಾಗಿದೆ. ಆದರೆ, ಈವರೆಗೆ ಶೇ.8 ರಿಂದ 9 ರಷ್ಟು ಮಾತ್ರ ಕೆಲಸ ಆಗಿದೆ ಎಂದು ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 2024 ಫೆಬ್ರವರಿ ತಿಂಗಳಲ್ಲಿ ಅಬ್ಬಿನಹೊಳಲು ಗ್ರಾಮಕ್ಕೆ ಭೇಟಿ ನೀಡಿ ರೈತರ ಮನವೊಲಿಸಿ ಕೆಲಸ ಮಾಡಲು ಅನುವು ಮಾಡಿಕೊಡುವಂತೆ ಮಾಡಿದ್ದರು. ಈ ವೇಳೆ ಡಿ.ಕೆಶಿವಕುಮಾರ್ ಅಕ್ಟೋಬರ್ 2 ರಂದು ಚಿತ್ರದುರ್ಗಕ್ಕೆ ನೀರು ಹರಿಸುವ ಭರವಸೆ ನೀಡಿದ್ದರು.
ಇದನ್ನೂ ಓದಿ: ಇದ್ದೂ ಇಲ್ಲದಂತಾಗಿರುವ ಸಿಸಿ ಕ್ಯಾಮರಾಗಳನ್ನು ಮೊದಲು ರಿಪೇರಿ ಮಾಡಿಸಿ | ವೀರೇಂದ್ರ ಪಪ್ಪಿ ಸೂಚನೆ
ಆದರೆ, ಅಬ್ಬಿನಹೊಳಲು ಬಳಿ ಕೆಲಸ ಮಾಡುತ್ತಿರುವ ಗುತ್ತಿಗೆದಾರರು ತೀರಾ ನಿಧಾನಗತಿಯಲ್ಲಿದ್ದು, ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಇದೇ ಪ್ರಮಾಣದಲ್ಲಿ ಸಾಗಿದರೆ ಮುಂದಿನ ವರ್ಷದ ಮೇ ವೇಳೆಗೆ ಕಾಮಗಾರಿ ಮುಗಿಯಬಹುದು ಎಂದು ಅಂದಾಜಿಸಿದ್ದಾರೆ.
ಈ ಮಾರ್ಗದಲ್ಲಿ ಮುಖ್ಯ ರಸ್ತೆಗಳು ಸೇರಿದಂತೆ ವಿವಿಧೆಡೆ ಒಟ್ಟು 37 ದೊಡ್ಡ ಸೇತುವೆಗಳನ್ನು ಮಾಡಬೇಕು. ಈವರೆಗೆ 10 ಮಾತ್ರ ಆಗಿವೆ. ಇನ್ನೂ 27 ಸಿ.ಡಿ. ಮಾಡುವುದು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಗುತ್ತಿಗೆದಾರರಿಗೆ ನೋಟೀಸ್ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಮುಖ್ಯ ರಸ್ತೆ ಅಗಲೀಕರಣಕ್ಕೆ ತೀರ್ಮಾನ | ಸಚಿವ ಡಿ.ಸುಧಾಕರ್ ಸೂಚನೆ | ಎಲ್ಲ ಶಾಸಕರ ಸಹಮತ
ಕೆಡಿಪಿ ಸಭೆಯಲ್ಲಿ ಸಚಿವ ಡಿ.ಸುಧಾಕರ್ ಮಾತನಾಡಿ, ಗುತ್ತಿಗೆದಾರರಿಗೆ ಚುರುಕು ಮುಟ್ಟಿಸಿ ಇಲ್ಲವೆ ಅವರನ್ನು ಬ್ಲಾಕ್‍ಲಿಸ್ಟ್‍ಗೆ ಸೇರಿಸಿ ಎಂದರೆ, ಶಾಸಕರಾದ ಬಿ.ಜಿ.ಗೋವಿಂದಪ್ಪ, ಎಂ.ಚಂದ್ರಪ್ಪ, ಟಿ.ರಘುಮೂರ್ತಿ ಗುತ್ತಿದಾರರನ್ನು ಬದಲಾವಣೆ ಮಾಡಿ ಮತ್ತೆ ಟೆಂಡರ್ ಕರೆದು ಕೆಲಸ ಆರಂಭಿಸಲು ಮೂರು ತಿಂಗಳು ವ್ಯರ್ಥವಾಗುತ್ತದೆ. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ತೀರ್ಮಾನಿಸೋಣ ಎಂಬ ಅಭಿಪ್ರಾಯಕ್ಕೆ ಬಂದರು.
ಎಂಎಲ್ಸಿ ಕೆ.ಎಸ್.ನವೀನ್‍ಗೆ 5300 ಎಲ್ಲಿ ಎಂದ ಶಾಸಕರು:
ಸಭೆಯಲ್ಲಿದ್ದ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಇಷ್ಟು ನಿಧಾನವಾಗಿ ಕೆಲಸ ಮಾಡಿದರೆ ಜಿಲ್ಲೆಗೆ ಅಕ್ಟೋಬರ್ 2ಕ್ಕೆ ನೀರು ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿ, ಉಪಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಜನರಿಗೆ ಭರವಸೆ ಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ: ಸದ್ಯದಲ್ಲೇ ಅಡಿಕೆ ಬೆಳೆಗೆ ಸಬ್ಸಿಡಿ | ನರೇಗಾದಡಿ ಅಡಿಕೆ ನಾಟಿಗೆ ಚಿತ್ರದುರ್ಗ ರೈತರಿಗೂ ನೆರವು | ಜಿಪಂ ಕೆಡಿಪಿ ಸಭೆಯಲ್ಲಿ ಚರ್ಚೆ
ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಶಾಸಕ ಟಿ.ರಘುಮೂರ್ತಿ, ಕೇಂದ್ರ ಬಜೆಟ್‍ನಲ್ಲಿ ನೀವು ಘೋಷಣೆ ಮಾಡಿರುವ 5300 ಕೋಟಿ ಕೊಡಿಸಿ, ನಾವು ಕೆಲಸ ಮಾಡುತ್ತೇವೆ ಎಂದು ಕಾಲೆಳೆದರು.
ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ಲೋಕಸಭೆ ಚುನಾವಣೆ ವೇಳೆ ಗೋವಿಂದ ಕಾರಜೋಳ ಕೂಡಾ 5300 ಕೋಟಿ ರೂ. ತರುವುದಾಗಿ ಭರವಸೆ ನೀಡಿದ್ದಾರೆ. ಈಗ ಅಧಿವೇಶನ ನಡೆಯುತ್ತಿದೆ ಅವರಿಗೆ ತಿಳಿಸಿ ಎಂದು ಕುಟುಕಿದರು.
ಇದನ್ನೂ ಓದಿ: 4.80 ಕೋಟಿ ವಂಚಿಸಿ ವಿಯೆಟ್ನಾಂ ಸೇರಿದ್ದ ಆರೋಪಿ ಅಂದರ್ | ಕೋಡೆ ರಮಣಯ್ಯನಿಗೆ ಹೆಡೆಮುರಿ ಕಟ್ಟಿದ ಚಿತ್ರದುರ್ಗ ಪೊಲೀಸ್
ಪ್ರತಿಕ್ರಿಯಿಸಿದ ಕೆ.ಎಸ್.ನವೀನ್, ನಾನು ದೆಹಲಿಯಿಂದಲೇ ಬಂದಿದ್ದೇನೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ವಿ.ಸೋಮಣ್ಣ, ಸಂಸದರಾದ ಗೋವಿಂದ ಕಾರಜೋಳ ಭದ್ರಾ ಮೇಲ್ದಂಡೆ ಯೋಜನೆ ವರದಿ ಇಟ್ಟುಕೊಂಡು ನಿನ್ನೆ ರಾತ್ರಿ ಸಭೆ ನಡೆಸಿದ್ದಾರೆ. ಅಲ್ಲಿಂದ ಅನುದಾನ ತರುತ್ತಾರೆ. ಇದಕ್ಕೆ ರಾಜ್ಯ ಸರ್ಕಾರದ ಸಹಕಾರವೂ ಬೇಕು ಎಂದು ಸ್ಪಷ್ಟಪಡಿಸಿದರು.