ಮುಖ್ಯ ಸುದ್ದಿ
ಭದ್ರಾ ಮೇಲ್ದಂಡೆ ಯೋಜನೆ | ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಎಂಟ್ರಿ | ಕಾಮಗಾರಿಗೆ ಅಡ್ಡಿ ಮಾಡದಂತೆ ಅಬ್ಬಿನಹೊಳಲು ರೈತರಿಗೆ ಮನವಿ
CHITRADURGA NEWS | 03 MARCH 2024
ಚಿತ್ರದುರ್ಗ: ಅಬ್ಬಿನಹೊಳಲು ರೈತರ ಭೂ ಪರಿಹಾರದ ವಿಚಾರವಾಗಿ ನನ್ನ ತಲೆಯಲ್ಲಿ ಬೇರೆ ವಿಚಾರವಿದೆ. ಅದನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಆದರೆ, ನನ್ನ ಮೇಲೆ ವಿಶ್ವಾಸವಿಡಿ. ನಿಮಗೆ ನ್ಯಾಯಯುತ ಪರಿಹಾರ ಕೊಡಿಸುತ್ತೇನೆ. ಕಾಮಗಾರಿ ಆರಂಭಿಸಲು ಅವಕಾಶ ಮಾಡಿಕೊಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರಿಗೆ ಮನವಿ ಮಾಡಿದರು.
ಭಾನುವಾರ ಸಂಜೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಣೆಗೆ ತರೀಕೆರೆ ತಾಲೂಕಿನ ಅಜ್ಜಂಪುರ ಹೋಬಳಿಯ ಅಬ್ಬಿನಹೊಳಲು ಹಾಗೂ ಹೆಬ್ಬೂರು ಬಳಿ ನಿರ್ಮಿಸಿರುವ ಪಂಪ್‍ಹೌಸ್ ಕಾಮಗಾರಿ ವೀಕ್ಷಣೆ ಮಾಡಿ ರೈತರ ಜೊತೆಗೆ ಚರ್ಚೆ ನಡೆಸಿದರು.
ಇದನ್ನೂ ಓದಿ: ವರ್ಷಾಂತ್ಯಕ್ಕೆ ಮನೆ ಮನೆಗೆ ಮಾರಿಕಣಿವೆ ನೀರು
ಲೋಕಸಭೆ ಚುನಾವಣೆ ಒಳಗೆ ಅಥವಾ ಚುನಾವಣೆ ವೇಳೆಯಲ್ಲಿ ಸಮಯ ಕೊಡುತ್ತೇನೆ. ಈ ಭಾಗದ ಎಲ್ಲ ಶಾಸಕರು, ಒಂದಿಷ್ಟು ಜನ ರೈತರು ಬೆಂಗಳೂರಿಗೆ ಬನ್ನಿ. ಅಲ್ಲಿ ಕಾನೂನು ಸಲಹೆ ಪಡೆದು, ಅಧಿಕಾರಿಗಳು, ಗುತ್ತಿಗೆದಾರರ ಜೊತೆಗೆ ಚರ್ಚಿಸಿ ನಿಮ್ಮ ಸಮಸ್ಯೆಯನ್ನು ಪರಿಹರಿಸೋಣ ಎಂದು ಭರವಸೆ ನೀಡಿದರು.
21 ಸಾವಿರ ಕೋಟಿ ರೂ. ವೆಚ್ಚದ ಭದ್ರಾ ಮೇಲ್ದಂಡೆ ಕಾಮಗಾರಿಯಿಂದ 5 ಲಕ್ಷ ಎಕರೆಗೆ ನೀರು ಹರಿಯುತ್ತದೆ. 4 ಜಿಲ್ಲೆಗಳಿಗೆ ಸಂಬಂಧಪಟ್ಟ ಯೋಜನೆ ಇದಾಗಿದೆ. 33 ರೈತರಿಂದ ಅಡ್ಡಿಯಾಗಬಾರದು. ದಿನೇ ದಿನೇ ಬಡ್ಡಿ ಬೆಳೆಯುತ್ತದೆ. ಯೋಜನಾ ವೆಚ್ಚವೂ ಹೆಚ್ಚಾಗುತ್ತದೆ. ಗುತ್ತಿಗೆದಾರರು ಎಸ್‍ಆರ್ ದರ ಹೆಚ್ಚಿಸುತ್ತಾರೆ. ನಾವು ನಿಮ್ಮ ಪರ ಇದ್ದೇವೆ. ಸಹಾಯ ಮಾಡುತ್ತೇವೆ. ಒಂದೊಂದು ದಿನವೂ ಬಹಳ ಮುಖ್ಯ. ದೊಡ್ಡ ಯೋಜನೆಗೆ ತೊಂದರೆ ಆಗಬಾರದು ಎಂದು ರೈತರಿಗೆ ವಿವರಿಸಿದರು.
ಇದನ್ನೂ ಓದಿ: ಪೊಲಿಯೋ ಮುಕ್ತ ರಾಷ್ಟ್ರ ನಿರ್ಮಾಣ ಮಾಡಲು ದಿಟ್ಟ ಹೆಜ್ಜೆ
ಈ ಸಮಸ್ಯೆಯನ್ನು ಕಾನೂನು ಪ್ರಕಾರವೇ ನಾನು ತೀರ್ಮಾನ ಮಾಡಬೇಕಾಗುತ್ತದೆ. ಅದನ್ನು ಬಿಟ್ಟು ಏನು ಮಾಡಲು ಆಗುವುದಿಲ್ಲ. ರೈತರ ಸಂಕಷ್ಟ ನಮಗೆ ಅರ್ಥ ಆಗುತ್ತದೆ. ನಮ್ಮ ಜೇಬಿಂದ ಕೊಡುವುದಲ್ಲ. ಇದು ನಿಮ್ಮದೇ ದುಡ್ಡು. ಇಷ್ಟು ದೂರ ಬಂದಿದ್ದು, ನಿಮಗೆ ನ್ಯಾಯ ಕೊಡಿಸಲು, ಹಾಗಂತ ಕೆಲಸ ನಿಲ್ಲಬಾರದು ಎಂದು ತೀರ್ಮಾನ ಮಾಡಿ ನಮ್ಮ ಮಾತಿಗೆ ಮನ್ನಣೆ ನೀಡಿ. ಸರ್ಕಾರದ ಪರವಾಗಿ ನಿಮ್ಮಲ್ಲಿ ಕೇಳುತ್ತಿದ್ದೇನೆ. ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದರು.
ಈ ವೇಳೆ ರೈತರು ಯೋಜನೆಗೆ ಸ್ವಾಧೀನ ಮಾಡಿಕೊಂಡಿರುವ ಭೂಮಿಗೆ ಪರಿಹಾರ ನೀಡುವಲ್ಲಿ ಸಾಕಷ್ಟು ತಾರತಮ್ಯ ಆಗಿದೆ. ಎಲ್ಲ ರೈತರಿಗೆ ಸಮನಾಗಿ 40 ಲಕ್ಷ ರೂ.ಗಳಿಗೆ ಎಕರೆಯಂತೆ ನಿಗಧಿ ಮಾಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಬಿಜೆಪಿ ಮಹತ್ವದ ಸಭೆ | ಜಿಲ್ಲಾ ಪದಾಧಿಕಾರಿಗಳು, ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹ
ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಈಗಾಗಲೇ ನ್ಯಾಯಾಲಯಕ್ಕೆ ಹೋಗಿದ್ದೀರಿ. ನ್ಯಾಯಾಲಯ ಎಷ್ಟು ಕೊಡಲು ಹೇಳುತ್ತದೆಯೋ ಅದನ್ನು ಕೊಡಲೇಬೇಕು. ಇಲ್ಲಿ ನಿಮ್ಮ ಬೇಡಿಕೆಯಂತೆ ಪರಿಹಾರದಲ್ಲಿ ವ್ಯತ್ಯಾಸವಾದರೆ ರಾಜ್ಯದ ಇತರೆಡೆ ನಡೆಯುತ್ತಿರುವ ಎತ್ತಿನಹೊಳೆ, ಕೃಷ್ಣಾ, ಮುಂದೆ ಮೇಕೆದಾಟು ಮತ್ತಿತರೆ ಯೋಜನೆಗಳಿಗೂ ಅದೇ ಆಗುತ್ತದೆ. ಹಾಗಾಗಿ ಕಾನೂನು ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಸಭೆ ಮುಗಿಯುವ ಮುನ್ನಾ ಅಧಿಕಾರಿಗಳಿಗೆ ಸೂಚನೆ ನೀಡಿದ ಡಿ.ಕೆ.ಶಿವಕುಮಾರ್, ನಾಳೆಯಿಂದಲೇ ಕಾಮಗಾರಿ ಪ್ರಾರಂಭಿಸಿ. ರೈತರು ದಯವಿಟ್ಟು ಸಹಕಾರ ನೀಡುವಂತೆ ಮನವಿ ಮಾಡಿದರು.
ಇದನ್ನೂ ಓದಿ: ತೀವ್ರ ವಿರೋಧದ ನಡುವೆಯೂ ಚಿತ್ರದುರ್ಗ ಕಚೇರಿ ಎತ್ತಂಗಡಿ
ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಮಾತನಾಡಿ, ಅಬ್ಬಿನಹೊಳಲು ಬಳಿಯ 33 ರೈತರ ಪೈಕಿ 23 ರೈತರು ಪರಿಹಾರ ಮೊತ್ತ ಹೆಚ್ಚಳ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ರೈತರಿಗೆ ಅವಾರ್ಡ್ ಮೊತ್ತವನ್ನು ನ್ಯಾಯಾಲಯಕ್ಕೆ ಜಮಾ ಮಾಡಲಾಗಿದೆ. ಇಲ್ಲಿನ 1.7 ಕಿ.ಮೀ ಕಾಮಗಾರಿ ಪೂರ್ಣಗೊಳಿಸಲು ಅನುವು ಮಾಡಿಕೊಟ್ಟರೆ ತ್ವರಿತವಾಗಿ ಪೂರ್ಣಗೊಳಿಸಿ ಅಕ್ಟೋಬರ್ ವೇಳೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಪರೀಕ್ಷೆ ನಡೆಸಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ, ಬಿ.ಜಿ. ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ, ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ಶಿರಾ ಶಾಸಕ ಟಿ.ಬಿ.ಜಯಚಂದ್ರ, ತರೀಕೆರೆ ಶಾಸಕ ಶ್ರೀನಿವಾಸ್, ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್, ಕಡೂರು ಶಾಸಕ ಆನಂದ್, ಚಿಕ್ಕಮಗಳೂರು ಶಾಸಕ ತಮ್ಮಯ್ಯ, ಶೃಂಗೇರಿ ಶಾಸಕ ರಾಜೇಗೌಡ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಅಭಿಯಂತರ ಶಿವಪ್ರಕಾಶ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಮಾಜಿ ಸಂಸದ ಬಿ.ಎಂ.ಚಂದ್ರಪ್ಪ ಮತ್ತಿತರರಿದ್ದರು.
ಇದನ್ನೂ ಓದಿ: ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ಡೀನ್ ನೇಮಕಕ್ಕೆ ವಿರೋಧ