ಸಂಡೆ ಸ್ಪಷಲ್
Kannada Novel: 18. ಜಂಗಮಯ್ಯರಿಗೆ ಪುತ್ರೋತ್ಸವ
CHITRADURGA NEWS | 02 FEBRUARY 2025
ಹೊತ್ತು ನೆತ್ತಿಬಿಟ್ಟು ಪಡುವಗಡೆಗೆ ಜಾರಿದಂತೆ ಉಗಾದಿ ಆದ ಮೇಲೆ ಹೊನ್ನಾರ ಹೂಡಿ ಮಾಗಿ ಉಳುಮೆಗೆ ಸಿದ್ಧರಾಗಲು ಅಟ್ಟದಲ್ಲಿಟ್ಟಿದ್ದ ಮೊಂಡಗುಳಗಳನ್ನು ತೆಗೆದು ಕಮ್ಮಾರರ ಕುಲುಮೆಯಲ್ಲಿ ಕಾಯಿಸಿ ತಟ್ಟಿಸಿ ಮೊನೆಗುಳ ಮಾಡಿಸಿಕೊಳ್ಳಲು ಕೆಲವು ರೈತರು ಕಮ್ಮಾರಹಟ್ಟಿ ಕಡೆಗೆ ನಡೆದಿದ್ದರು. ಅಲ್ಲಿದ್ದ ಹುಣಿಸೆ ಮರದ ಬುಡದಲ್ಲಿ ಜೋಡಿಸಿದ್ದ ಕಲ್ಲುಗಳ ಮೇಲೆ ಕುಳಿತು ಅವರ ಮನೆವಾಳೆಗಳನ್ನು ಹಂಚಿಕೊಳ್ಳಲು ಸುರು ಮಾಡಿದ್ದರು.
ಹಿಂದಿನ ಸಂಚಿಕೆ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ
ಮೊನ್ನೆ ಗೊಲಗುಡ್ಡಕೆ ಕೊಳ್ಳಿ ಇಕ್ಕಿದ ವಿಷಯ ಪ್ರಸ್ತಾಪವಾಯ್ತು. ಕೆಲವರಿಗೆ ರಾತ್ರಿ ಗುಡ್ಡದ ಹತ್ತಿರ ಓಡಿ ಬೆಂಕಿ ಆರಿಸಿದ್ದು ಇನ್ನೂ ಹಸಿಹಸಿಯಾಗಿತ್ತು. ‘ಆವೊತ್ತು ಏನಾದ್ರೂ ಒಂಚೂರು ಯಾಮಾರಿದ್ರೆ ಪಡುವಲಗುಡ್ಡ ಪೂರ್ತಿ ಸುಟ್ಟು ಹೋಗ್ತಿತ್ತು. ಕೊಳ್ಳಿ ಇಕ್ಕಿದೋರಿಗೆ ಕೂಳು ನೀರು ಕೊಡದಂಗೆ ನಿತ್ರಾಣ ಮಾಡಿ ಶಿಕ್ಷೆ ಕೊಡಬೇಕಾಗಿತ್ತು. ನಮ್ ಗೌಡ್ರು ಉಂಬಕ್ಕಿಕ್ಕಿ ಕಳಿಸಿಕೊಟ್ಟಿದ್ದು ಸರಿ ಕಂಡಿಲ್ಲಲ್ಲ’.
ಅದಕ್ಕೆ “ಆ ಸೂಳೆ ಮಕ್ಕಿಗೆ ಇನ್ನಾ ಶಿಕ್ಷೆ ಕೊಡಬೇಕಾಗಿತ್ತು. ಅಯೋಗ್ಯರಿಗೆ ಉಂಬಾಕಿಕ್ಕಿ ಕಳಿಸಿದ್ದು ಸರೀನೇ?
ಏನಮಾರಾ?”, ಪ್ರಶ್ನೆ ಹಾಕಿದ ಒಬ್ಬಾತ. “ಏನು ಶಿಕ್ಷೆ ಕೊಡ್ತೀಯಪ್ಪಾ ಅವರು ಮಾಡಿದ್ದು ದೊಡ್ ತಪ್ಪು ಅಮ್ ಅವರಿಗೆ ತಿಳಿವಳಿಕೆಯಾಗೈತೆ. ಏನನಾ ಶಿಕ್ಷೆ ಮಾಡಾಕೋಗಿ ಇನ್ನೇನನಾ ಆಗಿದ್ರೆ, ಅದನ್ನ ಯಾರು ಹೊತ್ತಬೇಕಾಗಿತ್ತು ನೀನೇ ಯೋಚೆ ಮಾಡು”.
ಹಿಂದಿನ ಸಂಚಿಕೆ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು
“ಸಾಕು ಅವರಿಗೆ ಕಂಬಕ್ಕಟ್ಟಿ ರಾತ್ರೆಲ್ಲ ನಿಲ್ಲಿ ಶಿಕ್ಷೆ ಕೊಟ್ಟಿದ್ದೀವಿ. ದನದ ಮನಿಯಾಗೆ ಕೂಡಾಕಿದ್ವಿ, ಅವರು ಮುದ್ದೆ ‘ಉಂಡು ಎಲ್ಡ್ ದಿನ ಆಗಿತ್ತು. ಈಗ ಗೌಡ್ರು ಗೊಂಚಿಗಾರು ಯಜಮಾನಪ್ಪಾರು ಎಲ್ಲಾರೂ ಕೂಡಿ ಮಾತಾಡಿ ಈ ರೀತಿ ಮಾಡಿದಾರೆ. ಶಿಕ್ಷೆ ಕೊಡೋದ್ರಿಂದ ಜನ ತಮ್ಮ ತಪ್ ತಿದ್ದಿಕ್ಕಮದಿಲ್ಲ. ನೋಡಾನ ಅವರು ಸರಿ ಹೋಗ್ತಾರೊ ಹೆಂಗೊ. ತಿದ್‌ಕ್ಯಮ್‌ದಿದ್ರೆ, ಇಂಥದೇ ತಪ್ ಮಾಡಿ ಸಿಗೆ ಹಾಕ್ಯಯ್ತಾರೆ” ಇನ್ನೊಬ್ಬಾತ ತನ್ನ ತಿಳುವಳಿಕೆಯನ್ನ ಹಂಚಿಕೊಂಡಿದ್ದ.
ಅಷ್ಟೊತ್ತಿಗೆ ಇನ್ನೂ ನಾಕೈದು ಜನ ಕೈಯಲ್ಲಿ ಮೊಂಡಗುಳ ಹಿಡಿದು ಅಲ್ಲಿಗೆ ಬಂದರು. “ಇವು ಕಮ್ಮಾರೂ ಪಟ್ಟಾಗಿ ಉಂಡು ಮಲಗಿ ನಿದ್ದೆ ಮಾಡ್ತಾರೆ. ಯಾರಾನಾ ಅವ್ರ ಮನೇತಕೋಗಿ ಎಬ್ಬಿಸ್ಟಂಡ್ ಬರೆಪ್ಪಾ” ಹಿರಿಯರೊಬ್ಬರು ಸೂಚಿಸಿದ್ದರು. ಕೂಡಲೇ ಇಬ್ಬರು ಯುವಕರು ಕಮ್ಮಾರರ ಗುಡಿಸಲು ಎದ್ದು ಹೋಗಿದ್ದರು.
ಹಿಂದಿನ ಸಂಚಿಕೆ: 3. ಎಲ್ಲರೂ ಲಿಂಗವಂತರಾದರು
ಕಮ್ಮಾರರ ಗುಡಿಸಲ ಬಳಿಗೆ ತಲುಪಿದಾಗ ಇವರ ಊಹೆಯಂತೆ ಅವರೆಲ್ಲಾ ಮಲಗಿದ್ದರು. ಹತ್ತು ಹನ್ನೆರಡು ವರ್ಷದ ತಿಮ್ಮ ಹೆಸರಿನ ಹುಡುಗ ಮುಖ ತೊಳೆದುಕೊಳ್ಳುತ್ತಿದ್ದ. ಗುಡಿಸಲ ಬಳಿಗೆ ಹೋಗಿದ್ದವರು “ಮೊಂಡಗುಳ ಕಾಯಿಸಿ ಮೊನೆಗುಳ ಮಾಡಬೇಕು. ತಿದಿ, ಸುತ್ತಿಗೆ ಇಕ್ಕಳ ತಗಂಡ್ ಬಾ” ಎಂದು ಅವನನ್ನು ಕರೆದರು. “ಅಣ್ಣಾ ಇದ್ಲು ಇಲ್ಲ ಕಣಣ್ಣಾ ನೀವೇ ತರಬೇಕು.
ತಿದಿ ತಗಂಡ್ ನೀವು ನಡೀರಿ ನಾನು ಸುತ್ತಿಗೆ ಇಕ್ಕಳ ತಗಂಡ್ ಬತ್ತೀನಿ” ಎಂದುತ್ತರಿಸಿ ಗುಡಿಸಳೊಳಗಿಂದ ತಿದಿಯೊಂದನ್ನು ತಂದುಕೊಟ್ಟ, ಒಬ್ಬರು ತಿಥಿಯನ್ನು ಹೊತ್ತು ಕಮ್ಮಾರ ಕುಲುಮೆ ಬಳಿಗೆ ನಡೆದರು. ಇನ್ನೊಬ್ಬಾತ ಇದ್ದಿಲು ಜೋಡಿಸಲು ಅವನ ಮನೆ ಕಡೆ ನಡೆದು ಎದಿರಿಗೆ ಸಿಕ್ಕವರಲ್ಲಿ ಇದ್ದಿಲು ವಿಚಾರಿಸಿ, ಒಂದು ಈಚಲ ಪುಟ್ಟಿ ತುಂಬಾ ಇದ್ದಿಲು ತುಂಬಿಕೊಂಡು ಕುಲುಮೆ ಬಳಿಗೆ ತಲುಪಿದ. ಅಷ್ಟೊತ್ತಿಗೆ ಕಮ್ಮಾರರ ಹುಡುಗ ತಿಮ್ಮನೂ ಸುತ್ತಿಗೆ ಇಕ್ಕಳಗಳ ಸಮೇತ ಆಗಮಿಸಿದ ಕುಲುಮೆ ತೂತಿಗೆ ತಿದಿಯನ್ನು ಆನಿಸಿ ಒಬ್ಬರು ತಿದಿಯೊತ್ತಲು ಕುಳಿತರೆ ಇನ್ನೊಬ್ಬರು ಅಲ್ಲಿ ಸಿಕ್ಕ ಕಡ್ಡಿಯಲ್ಲಿ ತಂದು ಕುಲುಮೆಯಲ್ಲಿ ಹಾಕಿ ಕಡ್ಡಿ ತೀಡಿ ಬೆಂಕಿ ಬರಿಸಿದರು.
ಹಿಂದಿನ ಸಂಚಿಕೆ: 4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ
ಇನ್ನೊಬ್ಬರು ಇದ್ದಿಲುಗಳನ್ನು ಮೇಲೆ ಹಾಕಿ ಕುಲುಮೆ ತುಂಬಾ ಕೆಂಡದ ಉರಿ ಏಳಿಸಿದರು. ಕಮ್ಮಾರರ ಹುಡುಗ ತಿಮ್ಮ ಎರಡೆರಡೇ ಮೊಂಡಗುಳಗಳ ತುದಿಗಳನ್ನು ಬೆಂಕಿಯಲ್ಲಿ ತೂರಿಸಿ ಅವು ಕೆಂಪಗೆ ಕಾದ ಮೇಲೆ ಅದ್ದುಗಲ್ಲ ಮೇಲಿಟ್ಟು ಮೊನೆಗುಳಗಳನ್ನಾಗಿ ಮಾರ್ಪಡಿಸಿದ.
“ಹುಡುಗ ಚಾಲಾಕಿ ಐದಾನೆ ಏಟು ವೈನಾಗಿ ಕುಳ ತಟ್ಟುತಾನೆ” ಎಂದು ತಿಮ್ಮನ ಕಾಠ್ಯ ವಿಧಾನವನ್ನು ಮೆಚ್ಚಿ ಮಾತಾಡಿದರು. ಎಲ್ಲಾ ಮೊಂಡಕುಳಗಳನ್ನೂ ಮೊನೆಗುಳಗಳನ್ನಾಗಿ ಮಾಡಿದ ಬಳಿಕ “ಲೇ ತಿಮ್ಮಾ ನಿಮ್ಮೊರೆಲ್ಲಾ ಹಗಲೊತ್ತಿನಾಗೆ ಮಲಗಿ ಗೊರಕೆ ಹೊಡೀತಿದಾರೆ. ರಾತ್ರಿಗೆ ನಿದ್ದೆ ಬರುತ್ತಾ” ಒಬ್ಬಾತ ಪ್ರಶ್ನಿಸಿದ್ದ. “ನಾನು ಮಾತ್ರ ಹಗಲೊತ್ತು ಮಲಗಲ್ಲ. ರಾತ್ರಿ ಉಂಡು ಮನಿಕ್ಯಂಡ್ರೆ ಯಾರ್ಯಾರು ಮಲಗುತ್ತಾರೆ, ಯಾರು ಎದ್ದಿದ್ದಾರೆ, ಗೊತ್ತಾಗಲ್ಲ” ನಿರ್ಭಾವುಕವಾಗಿ ಉತ್ತರಿಸಿದ್ದ.
ಹಿಂದಿನ ಸಂಚಿಕೆ: 5. ಕೆನ್ನಳ್ಳಿಯ ದುರಂತ
“ಮನೇಗೆ ಕಾಳು ಐದಾವೇನೋ? ಇಲ್ಲಿದ್ರೆ ಮನಿಗೆ ಬಂದು ಜ್ವಾಳಾನೋ, ಸಚ್ಚೇನೋ ಇಸಗಂಡೋಗು” ನಿಮಿಗೆ ಜ್ವಾಳ ಸಚ್ಚೇನೇ ಬೇಕು ಎಂದು ಹಿರಿಯರೊಬ್ಬರು ಎದ್ದು ಹೊರಟರು. ಅಲ್ಲಿದ್ದವರು “ತಿಮ್ಮಾ ನೀವು ನಮ್ಮೂರಿಗೆ ಬಂದು ನಾಕೈದು ವರ್ಷ ಆಗೈತೆ ನೀವು ರಾಗಿ ನವಣೆ ತಿನ್ನೋದೇ ಕಲೀಲಿಲ್ಲ” ಅಂದರು. ನಮ್ಮೋರೆಲ್ಲಾ ಜ್ವಾಳದ ಭಾಕ್ರಿ ಸಜ್ಜೆ ಭಾಕ್ರಿ ತಿಂದೋರು. ಇಲ್ಲಿಗೆ ಬಂದ್ರೂ ಅವನ್ನೇ ತಿಂತೀವಿ”. ಉತ್ತರಿಸಿದ್ದ ತಿಮ್ಮ. ತಮ್ಮ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಊರಜನ ಕುಲುಮೆ ಬಳಿಗೆ ಬರತೊಡಗಿದ್ದರು. ಅವರಲ್ಲಿ ಊರಿಗೆ ಬಂದು ನೆಲಸಿದ್ದ ಮಣ್ಣು ಒಡ್ಡರು ತಮ್ಮ ಗುದ್ದಲಿಗಳ ಮೊನೆ ಮಾಡಿಸಲು ಬಂದಿದ್ದರು.
“ಬ್ಯಾಸ್ಗೆ ಬಂತು ಅಂದ್ರೆ ನಿಮ್ ಕೆಲಸಗಳು ಸುರುವಾಗ್ತವೆ. ನೀವಾಗ್ಲೆ ಯಾರ ಹೊಲದಾಗೆ ಏರಿ ಹಾಕಬೇಕು, ಬದು ಹಾಕಬೇಕು ಅಮ್ಮ ಯೋಚೆ ಮಾಡಿದ್ದೀರಿ ಅಲ್ವೆ” ಯುವಕರೊಬ್ಬರು ತಮಾಷೆ ಮಾಡಿದರು. “ಬ್ಯಾಸ್ಗೆ ಕಾಲದಾಗೆ ಮನೆಗಿರೊ ಕಾಳುಕಡಿ ಉಂಡು ಮುಗಿಸಿದ್ರೆ ಮಳೆಗಾಲದಾಗಿ ಏನ್ ತಿಂಬಾನಣ್ಣಾ. ನಾವು ರಟ್ಟೆ ನಂಬಿಕೊಂಡು ಬತುಕೋರು. ನೀವು ನಿಮ್ ಜಮಾನ್ನಾಗೆ ಹಿಡಿ ಬಿತ್ತಿ ಖಂಡುಗ ಬೆಳೀತಿರಿ. ನಮ್ಮೋವು ಹೆಸರಿಗೆ ಮಾತ್ರ ಹೊಲ. ಮಳೆ ಕೈಕೊಟ್ರೆ ಬೆಳಸೇನೂ ಆಗಲ್ಲ. ಎಲ್ಲೊರಕ್ಕೋ ಮೂರು ವರಕ್ಕೋ ಮುಂಗಾರದಾಗೆ ಒಂದೀಸು ಕಾಳು ಬೆಳಕಸ್ತೀವಿ. ಇಲ್ಲಿದ್ರೆ ನಮ್ ಕೈಕಸಬೇ ನಮ್ಮನ್ನೂ ಮಕ್ಕು ಮರೀನೂ ಸಾಕುತ್ತೆ” ಬೋವಿ ಸಮಾಧಾನದಾಗೇ ಉತ್ತರಿಸಿದ್ದ.
ಹಿಂದಿನ ಸಂಚಿಕೆ: 6. ಎಲ್ಲೆಲ್ಲಿಂದಲೋ ಬಂದರು
“ನೋಡ್ರಯ್ಯಾ ಬ್ಯಾಗ್ಗೆ ಕಾಲದಾಗೆ ಎದ್ದೇಟಿಗೆ ತಂಪೊತ್ತಿನಾಗೆ ಯಾರಾ-ರೋ ಹೊಲಕ್ಕೋಗಿ ನಟ್ಕಡೀತೀರ. ಅದೇ ನಾವು ಕುರುವಿಗೆ ಹುಲ್ಲಾಕು, ನೀರು ಕುಡ್ಲು, ಚಿಕ್ಕುಂಬೊತ್ತಾತು ಕರ ಬಿಟ್ಟ, ಉಣ್ಣು ಬರ್ರೋ ಬಿಸಿಲು ಏಾಐತೆ ಎಮ್ಮೆದನ ಮೇಸಾಕೆ ಹೊಡಕಂಡು ಹೋಗಬರಿ” ಅಮ್ಮ ನಮ್ಮುಡುಗರಿಗೆ ತಾರಾಡುಸ್ತೀವಿ. ಅವು ಎಮ್ಮೆ ದನಾ ಹೊಡಕಂಡ್ ಹೊಲ್ಲೆ ಹಿಂದಿಂದೇ ಹೋಗಿ ಸಗಣಿ ಕೂಡಾಕ್ತಿವಿ. ಆಮೇಲೆ ನಮ್ಮೂಟ” ಕೈಯಾಡಿಸುತ್ತಾ ಒಬ್ಬಾತ ತಿಳಿಸಿದ.
“ನಮಿಗೆ ಎಮ್ಮೆ ದನ ಸಾಕೋಕೆ ಆಗಿ ಬಂದಿಲ್ಲ. ಅದ್ರೆ ನಮ್ಮೋರು ಮ್ಯಾಕೆ ಪ್ಯಾಕೆ ಸಾಕ್ಯಯ್ತಿವಿ” ಬೋವಿ ಉತ್ತರಿಸಿದ್ದ. ಇನ್‌ಮೇಲೆ ಇದ್ದು ತರಬೇಕಣ್ಣೂ. ನಮ್ಮ ಇದ್ಲು ಎಲ್ಲಾ ಮುಗುದದಾವೆ ಕಮ್ಮಾರರ ಹುಡುಗ ಅಲ್ಲಿದ್ದವರಿಗೆ ತಿಳಿಸುತ್ತಿದ್ದ.
ಜಂಗಮಯ್ಯರಿಗೆ ಪುತ್ರೋತ್ಸವ:
ಗುಡಿಹಳ್ಳಿ ಮೈಲಾರ ಲಿಂಗೇಶ್ವರನ ಜಾತ್ರೆ ಮುಗಿದಿತ್ತು. ಗೌನಹಳ್ಳಿ ಒಕ್ಕಲು ಮಕ್ಕಳು ಬೆಳಗಿನಲ್ಲಿ ಎದ್ದು ಹೊಲಕ್ಕೆ ಹೋಗಿ ಚಂದ್ರನ ಬೆಳಕಿನಲ್ಲಿ ಕಬ್ಬಿಣದ ನೇಗಿಲು ಹೂಡಿ “ಚೋ” ಎಂದು ಎತ್ತುಗಳನ್ನು ಅದ್ದಿಸುತ್ತಾ ಉಳುಮ ಮಾಡುತ್ತಿದ್ದರು. ಒಂದು ಬೆಳಗಿನಲ್ಲಿ ಮಳಿಯಪ್ಪಯ್ಯರ ಪತ್ನಿ ಹೆರಿಗೇ ಬೇನೆಯಿಂದ ನರಳುವುದನ್ನು ನೋಡಲಾಗದೆ ಮಳಿಯಪ್ಪಯ್ಯ ಗೌಡರ ಮನೆಗೆ ಎಡತಾಕಿ ಹೆರಿಗೆ ಮಾಡಿಸುವ ಸೂಲಗಿತ್ತಿಯನ್ನು ಕರೆತರಬೇಕೆಂದು ಬೇಡಿಕೊಂಡಿದ್ದರು.
ಹಿಂದಿನ ಸಂಚಿಕೆ: 7. ಊರು ತೊರೆದು ಬಂದವರು
ಕೂಡಲೇ ಗೌಡರ ಮನೆಯ ಹಿರಿಯಾಕೆ ಸಗಣಿ ಕಸ ‘ಬಳಿಯುತ್ತಿದ್ದ ಹುಡುಗರನ್ನು ಸೂಲಗಿತ್ತಿಯನ್ನು ಕರೆತರಲು ಕಳಿಸಿ ಬಿಸಿ ನೀರಿನಲ್ಲಿ ಮುಖಕೈಕಾಲು ತೊಳೆದುಕೊಂಡು ಐಗಳು ವಾಸವಿದ್ದ ಗುಡಿಸಲಿಗೆ ಧಾವಿಸಿದರು. ಮನೆ ತಲುಪಿದ ಕೂಡಲೇ “ಬಿಸಿ ನೀರು ಕಾಸೀದೀರಾ” ಎಂದು ಕೇಳಿ ಖಚಿತಪಡಿಸಿಕೊಂಡು ಬಿಸಿನೀರಲ್ಲಿ ಬಸರಿಯ ಮೈಯ ಕೆಳಭಾಗವನ್ನು ಒರೆಸಿದರು. ಅಷ್ಟೊತ್ತಿಗೆ ಹಿಂದೆಯೇ ಬಂದು ಸೂಲಗಿತ್ತಿ ಕೆಂಚಮ್ಮಳಿಗೆ ಸುಪರ್ದು ವಹಿಸಿ ಪಕ್ಕ ಕುಳಿತರು.
ಸೂಲಗಿತ್ತಿ ಬಾಧೆ ಪಡುತ್ತಿದ್ದ ಬಸರಿಯನ್ನು ತನ್ನ ಕೈಗಳಲ್ಲಿ ಹಿಡಿದು-ಕೊಂಡು ಆಕೆಗೆ ಧೈತ್ಯ ಹೇಳುತ್ತಾ ಆಗಾ ಇಗಾ ಅನ್ನುವುದರೊಳಗೆ ಸುಖ ಪ್ರಸವ ಮಾಡಿಸಿದಳು. ಹೊರಗೆ ಬಂದ ಗಂಡು ಮಗು ಚೀರಿಕೊಂಡು ಅಳುತ್ತಾ ತನ್ನ ಉಸಿರಾಟ ಆರಂಭಿಸಿತ್ತು. ಕೂಡಲೇ ಉರಿಕೊಯ್ದು ಕೂಸಿನ ಮೈತೊಳೆದು ಬಾಣಂತಿಯನ್ನು ಹುಲ್ಲಿನ ಹಾಸಿಗೆ ಮೇಲೆ ದಪ್ಪನೆ ಹೊದಿಕೆ ಹಾಸಿ ಮಲಗಿಸಿ ಸುತ್ತ ತೆರೆಕಟ್ಟಿಸಿದಳು. ಸೂರೋದಯದ ಜತೆಗೆ ಪುತ್ರ ಜನನದಿಂದ ಮಳಿಯಪ್ಪಯ್ಯ ಮತ್ತುಳಿದವರು ಸಂಭ್ರಮಿಸಿದರು.
ಹಿಂದಿನ ಸಂಚಿಕೆ: 8. ಮೋಜಣಿಕೆ ಮಾಡಿದರು
ಬೆಳ್ಳಂಬೆಳಿಗ್ಗೆ ಊರ ಮುಂದಲ ಹಳ್ಳದಿಂದ ನೀರು ತರುವವರಿಗೆ ಐಗಳಿಗೆ ಗಂಡು ಕೂಸು ಜನಿಸಿರುವುದು ಸುದ್ದಿಯಾಗಿತ್ತು. ಕೆಲವರು ಒಣಬೇವಿನ ಸೊಪ್ಪಿನೊಂದಿಗೆ ಐಗಳ ಮನೆಗೆ ಹೋಗಿ ಅದನ್ನು ಕೊಟ್ಟು ಬೆಂಕಿಯಲ್ಲಿ ಒಣಬೇವಿನ ಸೊಪ್ಪಿನ ಹೊಗೆ ಹಾಕಲು ಸಲಹೆ ನೀಡಿ ಬಂದರು. ಈ ಊರಿನ ಜನರ ಸಹಕಾರ ಮನೋಭಾವವನ್ನು ಕಂಡು ಅನುಭವಿಸಿದ್ದ ಐಗಳಿಗೆ ಅಭಿಮಾನ ಮೂಡಿತ್ತು.
ಕೂಸು ಜನಿಸಿದ ಒಂಭತ್ತನೇ ದಿನ ಲಿಂಗಧಾರಣೆ ಮಾಡಿ ರುದ್ರಯ್ಯ ಎಂದು ನಾಮಕರಣ ಮಾಡಿದರು.
ರೈತರು ಕಬ್ಬಿಣ ನೇಗಿಲು ಹೊಡೆದು ಭೂಮಿಯನ್ನು ಸಡಿಲಗೊಳಿಸುವ ಕಾಠ್ಯ ಅರ್ಧಂಬರ್ಧ ಆಗಿರುವಾಗಲೇ ಸರಿಪಾದದಲ್ಲಿ ಭರಣಿ ಮಳೆ ಸುರಿಯಿತು.
ಹಿಂದಿನ ಸಂಚಿಕೆ: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ
ಊರಿನವರ ಊಹೆ ಮತ್ತು ಅಪೇಕ್ಷೆಯಂತೆ, ತುಂಬಿ ಹರಿದ ಹಳ್ಳದ ನೀರು ಹೊಲಗಳ ಮೇಲೆಲ್ಲಾ ಹರಡಿ ಹರಿದು, ಸಾಕಷ್ಟು ಸೊಪ್ಪು ಸದೆ ಮೆಕ್ಕಲು ಮಣ್ಣನ್ನು ತಂದು ಹಾಕಿತ್ತು. ಸಮೃದ್ಧವಾಗಿ ನೆನೆದಿದ್ದ ಜಮಿನುಗಳು ಆರಿ ಉಳುಮೆ ಮಾಡಲು ಹದಿನೈದು ದಿನ ಕಾಯಬೇಕಾಯ್ತು. ಮಾಮೂಲಿಯಂತೆ ಮುಂಗಾರಿ ಜೋಳದ ಜತೆಗೆ ಔಡಲ ಕಾಳ ಅಕ್ಕಡಿಯನ್ನು ಬಿತ್ತಿದರು. ದಿನ್ನೆಯ ಹೊಲಗಳಲ್ಲಿ ರಾಗಿ ಜತೆಗೆ, ಹುಚ್ಚೆಳ್ಳು, ಅಕ್ಕಡಿ ಹೊಲದ ಸುತ್ತಾ ಸಜ್ಜೆ ಬಿತ್ತಿದರು.
ಜಂಗಮಯ್ಯರು ತಮ್ಮ ಜಮಿಾನುಗಳಲ್ಲಿ ಏನಾದರೂ ಬಿತ್ತಿಸೋಣವೆಂದು ಪರದಾಡಿದರೆ ಎತ್ತುಕರ ಇದ್ದವರೆಲ್ಲಾ ತಮ್ಮ ತಮ್ಮ ಜಮಾನು ಹಸನುಗೊಳಿಸುವುದು ಎತ್ತುವುದರಲ್ಲಿ ತೊಡಗಿಕೊಂಡಿದ್ದರು. ಇವರಿಗೆ ಯಾರೂ ದೊರೆಯಲಿಲ್ಲ. ತಿಂಗಳೊಪ್ಪತ್ತು ಕಳೆದ ಮೇಲೆ ಅವರ ಜಮಾನು ಕೆಲಸಗಳು ಮುಗಿದ ಬಳಿಕೆ, ಐಗಳ ಜಮೀನುಗಳಲ್ಲಿ ಹದ ಆರಿ ಫಸಲು ಬೆಳೆಯಲು ತಡವಾಗಿತ್ತು.
ಹಿಂದಿನ ಸಂಚಿಕೆ: 10. ಹೊಸ ಬಂಡಿಗಳ ಆಗಮನ
ಅದರಿಂದ ಎರಡೂ ಹೊಲಗಳ ತುಂಬಾ ತನಿಯೌಡಲದ ಬೀಜಗಳನ್ನು ಮಾರಿಗೊಂದರಂತೆ ಊರಿಸಿ ಒಂದೊಂದು ತಂಬಿಗೆ ನೀರು ಹೊಯ್ದಿದರು. ವಾರದ ಬಳಿಕ ಹರಳು ಬೀಜಗಳು ಮೊಳಕೆಯೊಡೆದು ಮುಂದಿನ ವಾರದಲ್ಲಿ ನಾಕೈದು ಎಲೆಗಳಿಂದ ಕಂಗೊಳಿಸುತ್ತಿದ್ದರೆ ಜಂಗಮಯ್ಯರು ಪುತ್ರೋತ್ಸವದಂತೆ ಸುಖಿಸಿದ್ದರು.
ಊರ ಜನ “ಐನೋರೇ ಮೊಳಕಾಲ ಮಟ್ಟ ತೊಡೆಮಟ್ಟ ಔಡಲಗಿಡ ಬೆಳೆದಾಗ ದನಕರುಗಳು ಔಡಲ ಎಲೆ ತಿಂದ್ರೆ ಸರಿಗಿ ಸಾಯ್ತಾವೆ. ಅದಕೆ ದನಕರ ಮೇಯಾಕೆ ಹೋಗೋ ಕಾಲದಾಗೆ ಹೊಲಗಳಾಗೆ ಅಡ್ಡಾಡ್ತಾ ಇರಿ” ಎಂದು ಸಲಹೆ ನೀಡಿದ್ದರು. ಅದರಂತೆ ಇವರು ದಿನಕ್ಕೆರಡು ಮೂರು ಬಾರಿ ಹೊಲಗಳಿಗೆ ಎಡತಾಕುತ್ತಿದ್ದರು.
ಹಿಂದಿನ ಸಂಚಿಕೆ: 11. ಬಂಡಿ ತಂದ ಬದಲಾವಣೆ
ಗೌಡರ ಮನೆಯವರು ದನದ ಮನೆಯಲ್ಲಿ ಬೆಳಿಗ್ಗೆ ಹಾಲುಕರೆದುಕೊಳ್ಳುವಾಗ ಮಗಳಿಗೆ ಒಂದು ತಂಬಿಗೆ ತುಂಬಾ ನೊರೆಹಾಲು ಕೊಡುತ್ತಿದ್ದುದರಿಂದ ಕೂಸು ರುದ್ರಯ್ಯನನ್ನು ಸಾಕಲು ನೆರವಾಗಿತ್ತು. ತಾಯಿಗೆ ಎದೆ ಹಾಲು ಕಡಿಮೆ ಇದ್ದುದರಿಂದ ಗೌಡರ ನೊರೆ ಹಾಲು ಆಪತ್ತಿಗೆ ಆಸರೆಯಾಗಿತ್ತು. ಐಗಳ ಕುಟುಂಬದಲ್ಲಿ ರುದ್ರಯ್ಯನೇ ಮೊದಲ ಮಗನಾಗಿದ್ದರಿಂದ ಎಲ್ಲರೂ ಅವನ ಲಾಲನೆ ಪಾಲನೆ ಮತ್ತು ಅವನ ಬಾಲ ಲೀಲೆಗಳಿಂದ ಸುಖ ಸಂತೋಷ ಪಡೆಯುತ್ತಿದ್ದರು.
ರುದ್ರಯ್ಯನಿಗೆ ಐದು ತಿಂಗಳಾದಾಗ ಅವನ ಹುಟ್ಟುಗೂದಲು ತೆಗೆಸಲು ಯೋಚಿಸಿ ಗೌಡರು ಮತ್ತು ಗೊಂಚಿಕಾರರ ಸಂಗಡ ಮಳಿಯಪ್ಪಯ್ಯ ಪ್ರಸ್ತಾಪಿಸಿದರು. “ನೀವೆಷ್ಟು ಜನಕ್ಕೆ ಅನ್ನ ಹಾಕಬೇಕಾಗೈತೆ. ಎಲ್ಲಾ ನಾವೇ ತಾನೆ, ಏನೇನು ಬೇಕು ಇಸಗಂಡೋಗ್ರಿ” ಉದಾರತೆಯಿಂದ ಪ್ರತಿಕ್ರಿಯಿಸಿ ಬೇಕಾದ ವಸ್ತುಗಳನ್ನು ನೀಡಿದ್ದರು. ಅದೇ ವಾರದಲ್ಲಿ ಹಿರಿಯೂರಿಂದ ಬೆಲ್ಲ ಮಾರೋ ಅಲ್ಲಿ ಸಾಬಿ ತನ್ನ ಒಂಟೆತ್ತಿನ ಗಾಡಿಯಲ್ಲಿ ಬೆಲ್ಲ ಹೇರಿಕೊಂಡು ಬಂದಿದ್ದ, ಒಂದೇ ದಿನದಲ್ಲಿ ಅವನ ಬೆಲ್ಲವೆಲ್ಲಾ ಖರ್ಚಾಗಿ ಐದಾರು ಚೀಲ ರಾಗಿ, ಜೋಳ, ನವಣೆ ಸಜ್ಜೆ ಇತ್ಯಾದಿ ಸಂದಾಯವಾಗಿತ್ತು.
ಹಿಂದಿನ ಸಂಚಿಕೆ: 12. ಜಂಗಮಯ್ಯರ ಆಗಮನ
ಐಗಳಿಗೂ ಎರಡು ಮಣ ಬೆಲ್ಲ ಸಂದಾಯವಾಗಿತ್ತು. ರುದ್ರಯ್ಯನ ಜವಳಕಾರಿ ಸುಗಮವಾಗಿ ನೆರವೇರಿತ್ತು. ಗುಂಡಾಚಾರಿ ಸ್ವಪ್ರೇರಣೆಯಿಂದ ಒಂದು ಕೆಂಪು ಹರಳಿನ ಬಂಗಾರದ ಉಂಗುರವನ್ನು ಮಾಡಿ ತಂದು, ಜವಳಕಾರ ನೆರವೇರಿದ ಬಳಿಕ ಜಂಗಮರ ಮಗುವಿನ ಎಡಗೈ ಬೆರಳಿಗೆ ತೊಡಿಸಿದ್ದ. ಅವನ ಹೆಂಡತಿ ತಿಪ್ಪಕ್ಕ ತಾನೂ ಭಾಗಿಯಾಗಿ ಸಂಭ್ರಮಿಸಿದ್ದಳು,
ಗುಂಡಾಚಾರಿ ಮಗನಿಗೆ ಬಂಗಾರದ ಉಂಗುರ ತೊಡಿಸಿದ್ದು ಸಂತೋಷ ನೀಡಿತ್ತಾದರೂ ಮಳಿಯಪ್ಪಯ್ಯ ಸಂಕೋಚದಿಂದ ಚಡಪಡಿಸಿದ್ದರು. ಹರಳುಕಾಳು ಹಣ ತಂದರೆ ಆಚಾರಿಯ ರಿಣ ತೀರಿಸಬೇಕೆಂದುಕೊಂಡಿದ್ದರು.
ಹಿಂದಿನ ಸಂಚಿಕೆ: 13. ಮತ್ತೆರಡು ಬಂಡಿ ತಂದರು
ಅಲ್ಲಿ ಸಾಬಿ ಎರಡು ದಿನ ಊರಲ್ಲಿದ್ದು ಬೆಲ್ಲ ಮಾರಾಟದಿಂದ ಸಂಗ್ರಹವಾಗಿದ್ದ ಧಾನ್ಯಗಳನ್ನು ಹಿರಿಯೂರಿಗೆ ತಲುಪಿಸಲು ಯಜಮಾನಪ್ಪರನ್ನು ಕೋರಿಕೊಂಡಿದ್ದ. ಅವನ ಒಂಟೆತ್ತಿನ ಗಾಡಿಯಲ್ಲಿ ಒಂದು ಚೀಲ ಕಾಳು ಹೇರಿಕೊಂಡು ಊರವರಿಂದ ಸಂಗ್ರಹಿಸಿದ್ದ ಒಣ ಹುಲ್ಲು ಹೊರೆಗಳನ್ನು ಹಾಕಿಕೊಂಡಿದ್ದ. ಹಾಗಾಗಿ ಯಜಮಾನಪ್ಪರ ಮಗ ಸಿಲ್ಲಿಂಗಪ್ಪ ತನ್ನ ಹೊಸಾ ಗಾಡಿಯಲ್ಲಿ ಧಾನ್ಯದ ಚೀಲಗಳನ್ನು ಹೇರಿಕೊಂಡು ಹಿರಿಯೂರಿಗೆ ಹೊರಟಿದ್ದ. ಕಲ್ಲು ಗುಂಡಿಯಲ್ಲಿ ಹೋದರೆ ನೀರೊಳಗಿನ ಕಲ್ಲು ಗುಂಡುಗಳು ಗಾಲಿಯ ಗುಂಭಕ್ಕೆ ಪೆಟ್ಟು ಬೀಳಿಸುತ್ತವೆ ಎಂದು ಊರ ಮುಂದಲ ಹಳ್ಳದಲ್ಲಿ ಗಾಡಿ ಇಳಿಸಿ ಕಳ್ಳಣಿವೆ ದಾರಿ ಹಿಡಿದಿದ್ದರು.
ಹಿಂದಿನ ಸಂಚಿಕೆ: 14. ಗೌನಳ್ಳಿ ಬದುಕಿನಲ್ಲಿ ಬಂಡಿಗಳ ಪಾತ್ರ
ಮದ್ಯಾಹ್ನದೊತ್ತಿಗೆ ಹಿರಿಯೂರು ತಲುಪಿದ್ದರು. ಗಾಡಿಯಲ್ಲಿ ಹಿಂತಿರುಗುವಾಗ ಎರಡು ಮಣ ಬೆಲ್ಲ ಹಾಕಿ ತಾರೀಪ್ ಮಾಡಿ ಕಳಿಸಿಕೊಟ್ಟಿದ್ದ ಅಲ್ಲಿ ಸಾಬಿ.
ಈ ಮಧ್ಯೆ ಜಂಗಮಯ್ಯರ ಮರುಳಯ್ಯನ ಪತ್ನಿಯ ತಿಂಗಳು ಮುಟ್ಟು ನಿಂತು ಮೂರು ತಿಂಗಳಾಗಿತ್ತು ಆಕೆ ತನ್ನ ಗಂಡನಲ್ಲಿ “ಈಗ ಶ್ರಾವಣ ಮಾಸ ನವಮಾಸ ತುಂಬಿ ಹೆರಿಗೆಯಾಗುವಾಗ ಅಕ್ಕಾರಂಗೆ ಉಗಾದಿ ಎಡಬಲ ಆಗಬೌದು” ಎಂದು ತಿಳಿಸಿದ್ದಳು. ಮಳಿಯಪ್ಪಯ್ಯರ ಪತ್ನಿಯೂ ಮರುಳಯ್ಯನ ಹೆಂಡತಿಯಲ್ಲಿ ಉಂಟಾಗುತ್ತಿದ್ದ ಬದಲಾವಣೆಗಳನ್ನು ಗಮನಿಸುತ್ತಿದ್ದರು.
ಪತಿಪತ್ನಿ ಇಬ್ಬರೂ ಔಡಲಗಿಡಗಳ ಕಾವಲು ನೆಪ ಮಾಡಿಕೊಂಡು ಹಗಲು ಹೊತ್ತು ಆ ಹೊಲ ಮತ್ತೆ ಈ ಹೊಲ ಎಂದು ಹೊರಗಡೆಯೇ ಇರುತ್ತಿದ್ದರು.
ಹಿಂದಿನ ಸಂಚಿಕೆ ಓದಿ: 15.ಹಿರೇ ಬಡಗಿ ಗೌನಹಳ್ಳಿಗೆ ಬಂದರು
ಮನೆಯಲ್ಲಿ ತಾನೆ ಅಂಥಾ ಕೆಲಸಗಳೇನೂ ಇರುತ್ತಿರಲಿಲ್ಲ. ಮಗುವಾಗಿದ್ದ ರುದ್ರಯ್ಯನಿಗೆ ಸ್ನಾನ ಮಾಡಿಸಿ ಒಣಬೇವಿನ ಸೊಪ್ಪಿನ ಹೊಗೆ ಹಾಕಿ ತೊಟ್ಟಿಲಲಲ್ಲಿ ಮಲಗಿಸಿ ಬಿಟ್ಟರೆ ನಿಧಾನವಾಗಿ ಹೆಂಗಸರು ಸ್ನಾನ ಮಾಡಿ ಬಿಸಿಲಿಗೆ ತಲೆಗೂದಲನ್ನು ಒಡ್ಡುತ್ತಿದ್ದರು.
ಮಳಿಯಪ್ಪಯ್ಯ ಪಂಚಾಂಗ ಹಿಡಿದು ಕೂತರೆ ಸಮಯ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ. ಇನ್ನು ಶಿವಲಿಂಗಯ್ಯ ಊರ ಮುಂದಲ ಹಳ್ಳದಿಂದ ನೀರು ತರುವುದು, ಹಳ್ಳದಲ್ಲಿಯೇ ತಣ್ಣೀರು ಸ್ನಾನ ಮಾಡುವುದು, ಬೇಜಾರಾದರೆ ಅಕ್ಕಸಾಲಿ ಗುಂಡಾಚಾರಿಯ ಕಾರಸ್ಥಾನದ ಬಳಿ ಕುಳಿತು ಆಚಾರಿಯ ಕೈ ಚಳಕವನ್ನು ನೋಡುತ್ತಾ ವಿಸ್ಮಯಗೊಳ್ಳುತ್ತಿದ್ದ.
ಹಿಂದಿನ ಸಂಚಿಕೆ ಓದಿ: 16. ಬಡಗಿ ಕಂಡ ಗೌನಳ್ಳಿ
ಒಂದು ದಿನ ಮಳಿಯಪ್ಪಯ್ಯ ಪಂಚಾಂಗ ನೋಡಿ ಖಿನ್ನರಾಗಿದ್ದರು. “ಮುಂದಿನ ಉಗಾದಿಯಿಂದ ನಂದನ ಸಂವತ್ಸರ ಆರಂಭಗೊಳ್ಳುತ್ತೆ. ಇದು ಜನಜಾನುವಾರುಗಳನ್ನು ತೀರ ತೊಂದರೆಗೆ ಸಿಲುಕಿಸಬಹುದು. ನಿಮ್ಮಲ್ಲಿ ಅರುವತ್ತು ವರ್ಷಕ್ಕಿಂತ ಹಿರಿಯರಿದ್ದರೆ ಅವರಲ್ಲಿ ಈಗ್ಗೆ ಅರುವತ್ತು ವರ್ಷ ಮುಂಚೆ ಬಂದಿದ್ದ ನಂದನ ಸಂವತ್ಸರದಲ್ಲಿ ಹೈಂಗಿತ್ತು ಕೇಳಿ ತಿಳಿದುಕೊಳ್ಳಿರಿ” ಎಂದು ಗೌಡರು, ಗೊಂಚಿಕಾರರು ಮತ್ತು ಯಜಮಾನಪ್ಪರ ಬಳಿ ಪ್ರಸ್ತಾಪಿಸಿದ್ದರು.
ಯಜಮಾನಪ್ಪರು “ನನಿಗೆ ಸೆಂದಾಕ ನೆಪ್ಪೆತೆ. ಅವಾಗ ನನಿಗೆ ಹತ್ತು ಹನ್ನೆರ ಇದ್ದಿರಬೇಕು. ಗುಡಳ್ಳಿ ಪತ್ನಿ ತೇರಿನ ದಿನ ಅಸಿಲೇ ಮಳೆ ಕೊನೇ ಪಾದದಾಗೆ ಗುಡುಗು ಮಿಂಚು ಸಮೇತ ಮಳೆಯಾಗಿತ್ತು. ಎಲ್ಲಾರೂ ಚಿತ್ರಪಟ್ಕಂಡು ಬಿತ್ತಿದಿವಿ. ಮುಂದಕೆ ಮಳೇನೇ ಬಲ್ಲಿಲ್ಲ. ಕೆಲವು ಜ್ವಾಳದ ಪೈರು ಒಡೆ ಉಗದ್ದು, ಕಾಳು ಅಂಗೆ ಬತ್ತಿ ಒಣಗಿ ನಿಂತು, ಅಡಿವ್ಯಾಗೆ ಬೇಕಂಬೋ ಹುಲ್ಲಿತ್ತು. ದನಕರ ಮೇಯಿತಿದ್ದು, ಹೆಂಗೋ ಬರಗಾಲ ನೂಕಿದ್ವಿ, ಆವಾಗ ಊರಾಗೆ ಈಸೋಂದ್ ಮನೆ ಇಲ್ಲಿಲ್ಲ. ಮುಂಡ್ಲವರ ಮುಂಗಾರು ಕೈ ಕೊಡ್ತು. ಆದ್ರೆ ಹಿಂಗಾರದಾಗೆ ಮಳೆ ಬಂದಿತ್ತು. ಹೊಟ್ಟೆಗೆ ಗಂಜಿ ಬೆಳಕಂಡಿದ್ವಿ, “ಪರಮಾತ್ಮ ಇರುವೆಂಬತ್ತು ಕೋಟಿ ಸಲುವೋನು ಹೆಂಗೋ ನಡಸ್ತಾನೆ” ತಮ್ಮ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದರು. ಗೌಡ್ರಿಗೆ ಮತ್ತು ಗೊಂಚಿಕಾರಿಗೆ ಅರುವತ್ತು ವರ್ಷ ದಾಟಿದ್ರೂ ಬರಗಾಲದ ನೆಪ್ಪು ಸರಿಯಾಗಿ ಇಲ್ಲಿಲ್ಲ.
ಹಿಂದಿನ ಸಂಚಿಕೆ ಓದಿ: 17. ಕೊಳ್ಳಿ ಇಕ್ಕಿದರು
ಮೂರು ವರ್ಷ ಮಳೆ ಬೀಳದೆ ದೇಶಾಂತರ ವಲಸೆ ಬಂದಿದ್ದ ಮಳಿಯಪ್ಪಯ್ಯರಿಗೆ ಕೊಂಚ ದಿಗಿಲಾಗಿತ್ತು. ನೋಡೋಣ ಈ ಊರಾಗೆ ಪರಿಸ್ಥಿತಿ ಹೆಂಗಿರುತ್ತೋ ಅಂದುಕೊಂಡಿದ್ದರು.