ಚಳ್ಳಕೆರೆ
ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಸರ್ಕಾರಿ ಕಾಲೇಜು | ನೀರಿಲ್ಲದೆ ವಿದ್ಯಾರ್ಥಿಗಳ ಪರದಾಟ
CHITRADURGA NEWS | 14 JANUARY 2024
ಚಿತ್ರದುರ್ಗ (CHITRADURGA): ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಪರಶುರಾಂಪುರ ಸರ್ಕಾರಿ ಕಾಲೇಜು ವಿದ್ಯುತ್ ಸಂಪರ್ಕ…ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯದ ಕೊರತೆಯಿಂದ ಬಳಲುತ್ತಿದೆ.
ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಾಧನೆಯ ಜ್ಞಾನ ದೇಗುಲಕ್ಕೆ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ರೈತ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಪರಶುರಾಂಪುರದದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕಾಲೇಜು ವಿಭಾಗದ ಕೊಠಡಿ ಮತ್ತು ಪ್ರಯೋಗಾಲಯ ಕಾಮಗಾರಿ 2017– 18ನೇ ಸಾಲಿನಲ್ಲಿ ಪ್ರಾರಂಭ ಗೊಂಡಿತ್ತು. ₹ 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಟ್ಟಡವನ್ನು 2022ರ ಡಿಸೆಂಬರ್‌ನಲ್ಲಿ ತರಾತುರಿಯಲ್ಲಿ ಉದ್ಘಾಟಿಸಲಾಗಿತ್ತು. ಆದರೆ ಪ್ರಯೋಗಾಲಯಕ್ಕೆ ಬೇಕಾಗುವ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಲೇಜಿನಲ್ಲಿ ನೀರಿನ ವ್ಯವಸ್ಥೆ ಇಲ್ಲ. ಪಕ್ಕದಲ್ಲೇ ಹೈಟೆಕ್ ಶೌಚಾಲಯವಿದೆ. ಆದರೆ ಬಳಕೆಗೆ ನೀರೇ ಇಲ್ಲ. ಮೂಲ ಸೌಲಭ್ಯ ವಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಉದ್ಘಾಟನೆ ಬಳಿಕ ಚಳ್ಳಕೆರೆ ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರ್ ಅತ್ತ ತಿರುಗಿಯೂ ನೋಡಿಲ್ಲ. ಕೂಡಲೇ ಸಂಬಂಧಪಟ್ಟ ಇಲಾಖೆ ಎಚ್ಚೆತ್ತು ಎಲ್ಲ ಸೌಲಭ್ಯ ಕಲ್ಪಿಸಿ ಕಟ್ಟಡವನ್ನು ಕಾಲೇಜಿಗೆ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಮೊದಲು ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಬಿಡುಗಡೆಗೊಳಿಸಿ| ರಾಜ್ಯ ರೈತ ಆಗ್ರಹ
ಕಳೆದ ವರ್ಷ ಪಿಯು ಪರೀಕ್ಷೆಯಲ್ಲಿ ಇಡೀ ಜಿಲ್ಲೆಯಲ್ಲಿಯೇ ಫಲಿತಾಂಶ ಕಡಿಮೆ ಯಾಗಿತ್ತು. ಆದರೆ ಪರಶುರಾಂಪುರ ಕಾಲೇಜು ಉತ್ತಮ ಫಲಿತಾಂಶ ಪಡೆದಿತ್ತು. ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳು ದೊರೆತರೆ ಇನ್ನೂ ಹೆಚ್ಚಿನ ಅಂಕ ಗಳಿಸಲು ಅನುಕೂಲವಾಗುತ್ತದೆ. ಒಂದು ವೇಳೆ ಸೌಲಭ್ಯ ಕಲ್ಪಿಸದಿದ್ದರೆ ಕಾಲೇಜಿನ ಮುಂದೆ ಧರಣಿ ಮಾಡಲಾಗುವುದು ಎಂದು ರೈತ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಖಂಡ, ಪದಾಧಿಕಾರಿಗಳಾದ ಚಿಕ್ಕಣ್ಣ, ಪ್ರಕಾಶ, ನವೀನ್ ಗೌಡ, ಜಂಪಣ್ಣ, ಹನುಮಂತರಾಯ, ಭಾಷ, ಅಣ್ಣಪ್ಪ ಎಚ್ಚರಿಸಿದ್ದಾರೆ.