ಲೋಕಸಮರ 2024
ಹಿರಿಯೂರಿನಲ್ಲಿ ಗೋವಿಂದ ಎಂ.ಕಾರಜೋಳ ರೋಡ್ ಶೋ | ಕಾರ್ಯಕರ್ತರಲ್ಲಿ ಹೆಚ್ಚಿದ ಉತ್ಸಾಹ
CHITRADURGA NEWS | 15 APRIL 2024
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಅವರು ದಕ್ಷಿಣ ಕಾಶಿ ಹಿರಿಯೂರಿನಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಬಿಜೆಪಿ– ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ರೋಡ್ ಶೋ ಗೂ ಮುನ್ನ ತಾಲ್ಲೂಕಿನ ಐಮಂಗಲ ಗ್ರಾಮದ ಹೊರವಲಯದಲ್ಲಿ ಬಿಜೆಪಿ–ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯಾನಂತರ 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಸರ್ಕಾರ ಯಾವುದೇ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ವಿಫಲವಾಗಿದ್ದು, ಪ್ರಧಾನಿ ಮೋದಿ ಅವರು ಕೇವಲ 10 ವರ್ಷದ ಆಡಳಿತದಲ್ಲಿ ವಿಶ್ವವೇ ಭಾರತದತ್ತ ನೋಡುವಂತೆ ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ’ ಎಂದರು.
ಕ್ಲಿಕ್ ಮಾಡಿ ಓದಿ: ಯುವಜನರು ತಪ್ಪದೇ ಮತ ಚಲಾಯಿಸಿ | ಜಿ.ಎನ್.ಮಲ್ಲಿಕಾರ್ಜುನ
‘30 ವರ್ಷದಿಂದ ಶಾಸಕನಾಗಿ, ಸಚಿವನಾಗಿ ಜನಮೆಚ್ಚುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡುವ ಮೂಲಕ ಸೇವೆಗೆ ಅವಕಾಶ ಕೊಡಬೇಕು’ ಎಂದು ಮನವಿ ಮಾಡಿದರು.
ಕ್ಲಿಕ್ ಮಾಡಿ ಓದಿ: ಅಂಬೇಡ್ಕರ್ ಬಗ್ಗೆ ಲೇಖಕ ಅರುಣ್ ಜೋಳದಕೂಡ್ಲಿಗಿ ಮಾತುಗಳು…
ಸಭೆ ಬಳಿಕ ವಾಣಿವಿಲಾಸಪುರ, ಜವನಗೊಂಡನಹಳ್ಳಿ, ಆರನಕಟ್ಟೆ, ಹರ್ತಿಕೋಟೆಯಲ್ಲಿ ಪ್ರಚಾರ ನಡೆಸಿದರು. ಇದರ ಬೆನ್ನಲ್ಲೇ ತಾಲ್ಲೂಕಿನ ಎಂ.ಡಿ. ಕೋಟೆ, ಮದ್ದನಕುಂಟೆ, ಸೊಂಡೆಕೆರೆ, ರಾಮಜೋಗಿಹಳ್ಳಿ, ವದ್ದೀಕೆರೆ, ಬಿದರಕೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಯುವ ಮುಖಂಡ ಉಮೇಶ್ ಕಾರಜೋಳ ಪ್ರಚಾರ ನಡೆಸಿ, ‘ಚಿತ್ರದುರ್ಗ ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಶೂನ್ಯ. ಭದ್ರಾ ಮೇಲ್ದಂಡೆ ಕಾಮಗಾರಿ ವಿಳಂಬಕ್ಕೆ ಕಾಂಗ್ರೆಸ್ ಕಾರಣ. ಹಿರಿಯೂರು ತಾಲ್ಲೂಕಿನಲ್ಲಿ ನೀರಾವರಿ ಕ್ಷೇತ್ರಕ್ಕೆ ಗೋವಿಂದ ಕಾರಜೋಳ ಕೊಡುಗೆ ಹೆಚ್ಚು’ ಎಂದು ಹೇಳಿದರು.
‘ಜಿಲ್ಲೆಯಲ್ಲಿ ಬರ ತಾಂಡವಾಡುತ್ತಿದೆ. ಕುಡಿಯುವ ನೀರಿಗೆ ಗ್ರಾಮೀಣ ಭಾಗದ ಜನ ಪರದಾಡುತ್ತಿದ್ದಾರೆ. ಜನ–ಜಾನುವಾರು ರಕ್ಷಣೆ ಮಾಡಲು ಆಗದ ಕಾಂಗ್ರೆಸ್ ಸರ್ಕಾರ ಇನ್ನೂ ಗ್ಯಾರಂಟಿಗಳ ಗುಂಗಿನಿಂದ ಹೊರಬಂದಿಲ್ಲ. ಗ್ಯಾರಂಟಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಸಮರ್ಪಕವಾಗಿ ಹಣ ಬರುತ್ತಿಲ್ಲ’ ಎಂದರು.
‘ನಮ್ಮ ತಂದೆಯವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಚಿತ್ರದುರ್ಗ ಜಿಲ್ಲೆಯ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಧರ್ಮಪುರ ಹೋಬಳಿ ಕೆರೆಗಳಿಗೆ ನೀರು ಹರಿಸುವ ಯೋಜನೆ ಜಾರಿಯಲ್ಲಿ ಅವರ ಅಪಾರ ಶ್ರಮವಿದೆ’ ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ಅಂಬೇಡ್ಕರರನ್ನು ಪ್ರಧಾನಿ ಮಾಡಬಹುದಿತ್ತು
ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಜಯಣ್ಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರಳಿ, ಮುಖಂಡರಾದ ಎಂ. ರವೀಂದ್ರಪ್ಪ, ಎನ್.ಆರ್. ಲಕ್ಷ್ಮೀಕಾಂತ್, ಡಿ. ಯಶೋಧರ, ಗನ್ನಾಯಕನಹಳ್ಳಿ ಮಹೇಶ್, ಸಿದ್ದಾರ್ಥ, ವಿ. ವಿಶ್ವನಾಥ್, ಹನುಮಂತರಾಯಪ್ಪ, ಜಿ.ರಾಧಾ, ತಾಹೆರಾಬಾನು, ಎನ್. ತಿಪ್ಪೀರಯ್ಯ, ಡಿ.ಆರ್. ಆನಂದ್, ಸಿಂಧುತನಯ, ಶಿವಣ್ಣ, ಹರೀಶ್ ಕುಮಾರ್, ಜನಾರ್ದನ್, ಪರಮೇಶ್, ರಾಘವೇಂದ್ರ, ಪ್ರಕಾಶ್, ಆದರ್ಶ, ವೀರೇಂದ್ರ, ಹನುರಾಮಂತರಾಯ, ರಾಜೇಶ್, ಹನುಮಂತೇಗೌಡ ಇದ್ದರು.