ಲೋಕಸಮರ 2024
ಚಳ್ಳಕೆರೆಯ ಕೆ.ಟಿ.ಕುಮಾರಸ್ವಾಮಿ ಭೇಟಿಯಾದ ಗೋವಿಂದ ಕಾರಜೋಳ | ಮತ್ತೆ ಬಿಜೆಪಿ ಸೇರಲು ಆಹ್ವಾನ
CHITRADURGA NEWS | 05 APRIL 2024
ಚಿತ್ರದುರ್ಗ: ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿರುವ ಗೋವಿಂದ ಕಾರಜೋಳ ಮತಬುಟ್ಟಿ ಭದ್ರ ಮಾಡಿಕೊಳ್ಳುವ ತಾಲೀಮು ನಡೆಸುತ್ತಿದ್ದು, ಬಿಜೆಪಿ ಜೊತೆಗಿದ್ದು ಬಿಟ್ಟು ಹೋದವರು, ಬಿಜೆಪಿಯಿಂದ ಹೊರಗಿರುವ ಪ್ರಭಾವಿಗಳನ್ನು ಪಕ್ಷದತ್ತ ಸೆಳೆಯಲು ತಂತ್ರ ಹೆಣೆದಿದ್ದಾರೆ.
ಇದರ ಭಾಗವಾಗಿ ಚಳ್ಳಕೆರೆಯ ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ಪುತ್ರ ಕೆ.ಟಿ.ಕುಮಾರಸ್ವಾಮಿ ಅವರನ್ನು ಕಾಟಪ್ಪನಹಟ್ಟಿಯಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ನಾಮಪತ್ರ ಸಲ್ಲಿಸುವ ಅವಧಿ ಮುಕ್ತಾಯ | ಚಿತ್ರದುರ್ಗ ಲೋಕಸಭೆಗೆ ಸಲ್ಲಿಕೆಯಾದ ನಾಮಪತ್ರಗಳೆಷ್ಟು ಗೊತ್ತಾ
ಈ ವೇಳೆ ನಾನು, ನಿಮ್ಮ ತಂದೆ ತಿಪ್ಪೇಸ್ವಾಮಿ ಆತ್ಮೀಯರು, ಜೊತೆಗೆ ಶಾಸಕರಾಗಿ ಕೆಲಸ ಮಾಡಿದವರು. ನೀವು ಬಿಜೆಪಿಯಲ್ಲಿದ್ದವರು. ಕಾರಣಾಂತರಗಳಿಂದ ದೂರ ಆಗಿದ್ದೀರಿ. ಈಗ ಮತ್ತೆ ಬರಬೇಕು ಎಂದು ಮನವಿ ಮಾಡಿದ್ದಾರೆ.
ನಿಮ್ಮ ಬೆಂಬಲಿಗರು, ಹಿತೈಷಿಗಳ ಸಭೆ ಕರೆದು ಎಲ್ಲ ಜೊತೆಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಂಡು ನಮಗೆ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಚೌಕಾಸಿ ಇಲ್ಲದೆ ತರಕಾರಿ ಖರೀಧಿಸಿದ ಗೋವಿಂದ ಕಾರಜೋಳ
ಇದಕ್ಕೆ ಪ್ರತಿಕ್ರಿಯಿಸಿರುವ ಕೆ.ಟಿ.ಕುಮಾರಸ್ವಾಮಿ, ಗೋವಿಂದ ಕಾರಜೋಳ ನನ್ನ ತಂದೆಯ ಸಮಾನರು. ತಂದೆಯ ಜೊತೆಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು.
2008ರಲ್ಲಿ ನನ್ನ ತಂದೆ ಬಿಜೆಪಿ ಸೇರಿ ಶಾಸಕರಾಗಿದ್ದರು. ಅಂದಿನಿಂದಲೂ ಬಿಜೆಪಿ ಕಟ್ಟುವ ಕೆಲಸ ಮಾಡಿದ್ದೇವೆ. ಯಾವುದೋ ಕಾರಣಕ್ಕೆ ಪಕ್ಷದಿಂದ ಹೊರಗೆ ಬಂದಿದ್ದೇವೆ.
ಇದನ್ನೂ ಓದಿ: ಕೋಟೆನಾಡಿನಲ್ಲಿ ಸಿಎಂ ಸಿದ್ದರಾಮಯ್ಯ | ದುರ್ಗದ ಬಗ್ಗೆ ಐದು ಪ್ರಮುಖ ವಿಚಾರ ಪ್ರಸ್ತಾಪ
ನಮ್ಮ ಬೆಂಬಲಿಗರ ಜೊತೆಗೆ ಮಾತನಾಡುತ್ತಿದ್ದಾಗ ಶೇ.90 ರಷ್ಟು ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಚರ್ಚಿಸಿದ್ದೇವೆ. ಗೋವಿಂದ ಕಾರಜೋಳ ಅವರಂತಹ ನಾಯಕರು ಜಿಲ್ಲೆಗೆ ಬಂದಿರುವುದು ನಮ್ಮ ಅದೃಷ್ಟ. ಅವರನ್ನು ಉಳಿಸಿಕೊಳ್ಳಬೇಕು. ಅವರಿಗೆ ಶಕ್ತಿ ತುಂಬಬೇಕು. ಎಲ್ಲ ಪ್ರಮುಖರು, ಕಾರ್ಯಕರ್ತರು ಬೆಂಬಲಿಗರ ಜೊತೆಗೆ ಮಾತನಾಡಿ 2-3 ದಿನಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ. ನಿಮ್ಮ ಜೊತೆಗೆ ನಾವಿರುತ್ತೇವೆ ಎಂದು ಭರವಸೆ ನೀಡಿದ್ದಾರೆ.