CHITRADURGA NEWS | 30 MARCH 2024 ಚಿತ್ರದುರ್ಗ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಕರ್ತವ್ಯ ಲೋಪವೆಸಗಿದ ನಾಲ್ವರು ಶಿಕ್ಷಕರನ್ನು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ ರೆಡ್ಡಿ ಅಮಾನತು ಮಾಡಿದ್ದಾರೆ.
ಶುಕ್ರವಾರ ವಿಜ್ಞಾನ ವಿಷಯದ ಪರೀಕ್ಷೆ ನಡೆದಿದೆ. ಈ ವೇಳೆ ಚಳ್ಳಕೆರೆ ತಾಲ್ಲೂಕು ಪರಶುರಾಂಪುರದ ಕರ್ನಾಟಕ ಪಬ್ಲಿಕ್ ಶಾಲಾ ಪರೀಕ್ಷಾ ಕೇಂದ್ರ ಕೊಠಡಿ ಸಂಖ್ಯೆ 1,14, 16 ಹಾಗೂ 18 ರಲ್ಲಿ ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದರು ಸಹ ಯಾವುದೇ ಕ್ರಮವಹಿಸದ ನಾಲ್ವರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.
ಚಳ್ಳಕೆರೆ ತಾಲ್ಲೂಕು ಪಿ.ಓಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಚಂದ್ರಶೇಖರ, ಕೊರ್ಲಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಪ್ರಕಾಶ್, ಮಂಜರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ರೇವಣ್ಣ ಹಾಗೂ ಗೋಸಿಕೆರೆ ರಾಧಾಕೃಷ್ಣ ಗ್ರಾಮಾಂತರ ಪ್ರೌಢಶಾಲೆ ಸಹ ಶಿಕ್ಷಕ ರಾಘವೇಂದ್ರ ಅಮಾನತುಗೊಂಡ ಶಿಕ್ಷಕರು.
ಪರೀಕ್ಷಾ ಕೇಂದ್ರಗಳಲ್ಲಿ ನಕಲು ಪ್ರಕರಣ ತಡೆಯಲು ಇದೇ ಮೊದಲ ಬಾರಿಗೆ 78 ಪರೀಕ್ಷಾ ಕೇಂದ್ರಗಳ 1007 ಪರೀಕ್ಷಾ ಕೊಠಡಿಗಳಿಗೆ ಸಿ.ಸಿ. ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿದ ಸಿ.ಸಿ.ಟಿವಿ ಕ್ಯಾಮೆರಾದಲ್ಲಿನ ನೇರ ದೃಶ್ಯಾವಳಿಯನ್ನು ಡಯಟ್ ಕೇಂದ್ರದಲ್ಲಿ ಕುಳಿತು ವೀಕ್ಷಿಸಲು ಸಿದ್ಧತೆ ಮಾಡಲಾಗಿದೆ. ಈ ತಂತ್ರಜ್ಞಾನದ ನೆರವಿನಿಂದ ಶಿಕ್ಷಕರ ಕರ್ತವ್ಯ ಲೋಪ ಪತ್ತೆಯಾಗಿದೆ.