Connect with us

RTO ಕಚೇರಿಯಲ್ಲಿ ಕಡತ ನಿರ್ವಹಣೆಯ ವೈಪಲ್ಯ | ಸುಮೋಟೊ ಕೇಸ್

ಮುಖ್ಯ ಸುದ್ದಿ

RTO ಕಚೇರಿಯಲ್ಲಿ ಕಡತ ನಿರ್ವಹಣೆಯ ವೈಪಲ್ಯ | ಸುಮೋಟೊ ಕೇಸ್

CHITRADURGA NEWS | 25 JANUARY 2025

ಚಿತ್ರದುರ್ಗ: ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಚಿತ್ರದುರ್ಗ ನಗರದ ತಾಲ್ಲೂಕು ಉಪನೊಂದಣಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Also Read: ಸರಗಳ್ಳನನ್ನು ಬಂಧಿಸಿದ ಚಳ್ಳಕೆರೆ ಪೊಲೀಸರು | 7 ಸರ, 2 ಬೈಕ್ ವಶಕ್ಕೆ

ಕಚೇರಿ ಹಾಜರಾತಿ, ನಗದು ಘೋಷಣಾ ವಹಿ, ಚಲನವಲನ ವಹಿ ಸೇರಿದಂತೆ ಇತರೆ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಉಪನೊಂದಣಾಧಿಕಾರಿಗಳ ಕಚೇರಿ ಪರಿಶೀಲನೆ ವೇಳೆ, ಅಧಿಕಾರಿ ಹಾಗೂ ಸಿಬ್ಬಂದಿ ಅಲ್ಮೆರಾ ಹಾಗೂ ಕಬ್ಬಿಣದ ಲಾಕರ್ ಕೀಲಿ ತೆರೆದು ಪರಿಶೀಲನೆ ನೀಡಿದ ಕಾರಣ, ಅವುಗಳನ್ನು ಸೀಲ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಲೋಕಾಯುಕ್ತ ಪೊಲೀಸರ ನೇತೃತ್ವದಲ್ಲಿ ಅಲ್ಮೆರಾ ಹಾಗೂ ಕಬ್ಬಿಣದ ಲಾಕರ್ ತೆರೆದು, ಅನಧಿಕೃತ ನಗದು ದೊರೆತರೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿವರಣೆ ಕೇಳಿ ನೋಟಿಸು ನೀಡುವಂತೆ ಸೂಚಿಸಿದರು.

ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಎಲ್ಲವೂ ಆನ್‍ಲೈನ್ ವಹಿವಾಟು ಇರುವುದರಿಂದ ಯಾವುದೇ ನಗದು ವ್ಯವಹಾರ ನಡೆಯುವುದಿಲ್ಲ ಎಂದು ಉಪನೋಂದಣಾಧಿಕಾರಿ ತಿಪ್ಪೇರುದ್ರಪ್ಪ ಮಾಹಿತಿ ನೀಡಿದರು. ಭೌತಿಕ ಕಡತಗಳನ್ನು ನಿರ್ವಹಿಸುವಾಗ ಕಡತ ಟಿಪ್ಪಣಿ ಸಹಿತ ಕಡತ ಪ್ರಕ್ರಿಯೆ ಸಮರ್ಪಕವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಉಪನೋಂದಣಾಧಿಕಾರಿಗೆ ನಿರ್ದೇಶನ ನೀಡಿದರು.

Also Read: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಶನಿವಾರದ ಹತ್ತಿ ರೇಟ್ ಎಷ್ಟಿದೆ?

ನಂತರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಭೇಟಿ ನೀಡಿದ ಸಂದರ್ಭದಲ್ಲಿ, ತೆರಿಗೆ ನೀಡದ ಹಾಗೂ ವಿವಿಧ ಪ್ರಕರಣಗಳ ಕಾರಣ ಜಪ್ತಿ ಮಾಡಿದ ವಾಹನಗಳನ್ನು ಇಷ್ಟು ವರ್ಷಗಳ ಕಾಲ ಕಚೇರಿ ಆವರಣದಲ್ಲಿ ಇರಿಸಿಕೊಂಡಿದ್ದೀರಿ, ಕಾಲ ಕಳೆದಂತೆ ವಾಹನದ ಮೌಲ್ಯವೂ ಕಡಿಮೆಯಾಗುತ್ತದೆ. ಇದರಿಂದ ವಾಹನದವರಿಗೂ, ಸರ್ಕಾರಕ್ಕೂ ನಷ್ಟ ಉಂಟಾಗುತ್ತದೆ. ಹೀಗಾಗಿ ನಿಯಮಾನುಸಾರ ಹರಾಜು ಮಾಡಿ, ಸರ್ಕಾರಕ್ಕೆ ಹಣ ತುಂಬುವಂತೆ ನಿರ್ದೇಶನ ನೀಡಿದರು.

ಸುಮಾರು 2006 ರಿಂದ 12 ವಾಹನಗಳನ್ನು ಜಪ್ತಿ ಮಾಡಲಾಗಿದೆ. ವಾಹನ ಮಾಲೀಕರಿಗೆ ನೋಟಿಸು ನೀಡಲಾಗಿದೆ. ಮಾಲಿಕರ ಒಪ್ಪಿಗೆ ದೊರೆಯದ ಕಾರಣ ಹರಾಜು ಪ್ರಕ್ರಿಯೆ ನಡೆಸಿಲ್ಲ. ಕೂಡಲೇ ನಿಯಮಾನುಸಾರ ಹರಾಜು ಮಾಡಿ, ಸರ್ಕಾರಕ್ಕೆ ಹಣ ತುಂಬುವುದಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೆಸಿಂಘೆ ಹೇಳಿದರು.

ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅಧಿಕಾರಿಗಳು ನಗದು ಘೋಷಣಾ ವಹಿ ಹಾಗೂ ಚಲನವಲನ ವಹಿಯಲ್ಲಿ ಸರಿಯಾಗಿ ಮಾಹಿತಿ ತುಂಬಿರದ ಕಾರಣ ಸ್ವಯಂ ಪ್ರೇರಿತ ದೂರು ದಾಖಲಿಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ಮಂಗಳವಾರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜನಸ್ಪಂದನ ಸಭೆ ನಡೆಸಲಾಗುತ್ತದೆ. ಕಳೆದ 58 ಜನಸ್ಪಂದನ ಕಾರ್ಯಕ್ರಮದಲ್ಲಿ ಒಂದೂ ಅರ್ಜಿಗಳು ಸ್ವೀಕಾರವಾಗಿಲ್ಲ ಎಂದು ಜನಸ್ಪಂದನ ಕಾರ್ಯಕ್ರಮದ ವಹಿಯಲ್ಲಿ ನಮೂದು ಮಾಡಿರುವುದಕ್ಕೆ ಸೋಜಿಗ ವ್ಯಕ್ತಪಡಿಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ವ್ಯಾಪಕ ಪ್ರಚಾರ ನೀಡದೆ, ಕೇವಲ ದಾಖಲೆಗೆ ಕಾರ್ಯಕ್ರಮ ಮಾಡಿರುವಂತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

Also Read: ರೈತರಿಂದ KEB ಸ್ಟೇಷನ್ ಮುತ್ತಿಗೆ | ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

ಜಿಲ್ಲೆಯಲ್ಲಿ ನೊಂದಣಿಗೆ ಎಫ್.ಸಿ. ಮುಗಿದು ಹೋಗಿರುವ ವಾಹನಗಳನ್ನು ಕೂಡಲೇ ವಶ ಪಡೆದೆಕೊಳ್ಳಬೇಕು. ಈ ವಾಹನಗಳು ಇತರೆ ಅಪರಾಧ ಪ್ರಕರಣಗಳಲ್ಲಿ ಬಳಕೆಯಾಗುವ ಸಂಭವವಿದೆ. ಕೂಡಲೇ ಅಧಿಕಾರಿಗಳು ಎಚ್ಚತ್ತು ಎಫ್.ಸಿ ಮುಗಿದ ವಾಹನಗಳು ರಸ್ತೆಯಲ್ಲಿ ಓಡಾಟ ನಡೆಸದಂತೆ ತಡೆಯಬೇಕು ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ, ಪರಿಶೀಲನೆ:

 ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಜಿಲ್ಲಾಸ್ಪತ್ರೆಯ ವಿವಿಧ ವಾರ್ಡ್‍ಗಳಿಗೆ ಖುದ್ದಾಗಿ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದರು. ಜಿಲ್ಲಾಸ್ಪತ್ರೆಯ ಕಾರ್ಯವೈಖರಿ, ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿ, ವೈದ್ಯರು ಹಾಗೂ ರೋಗಿಗಳಿಂದ ಆಸ್ಪತ್ರೆಯ ಕುರಿತು ಮಾಹಿತಿ ಪಡೆದರು.

 ಜಿಲ್ಲಾಸ್ಪತ್ರೆಯ ಹೊರರೋಗಿಗಳ ವಿಭಾಗದ ಅರ್ಥೋಪೆಡಿಕ್ ಒಪಿಡಿ, ಸರ್ಜಿಕಲ್ ಒಪಿಡಿ, ಫಿಜಿಯೋಥೆರಪಿ, ಮಹಿಳೆಯರು ಹಾಗೂ ಪುರಷರ ತುರ್ತು ಚಿಕಿತ್ಸಾ ವಾರ್ಡ್, ಶಸ್ತ್ರಚಿಕಿತ್ಸಾ ವಿಭಾಗ, ಡೆಂಗ್ಯೂ ಚಿಕಿತ್ಸಾ ವಿಭಾಗ, ಮಾನಸಿಕ ಹೊರ ರೋಗಿಗಳ ವಿಭಾಗ, ಕಿವಿ, ಮೂಗು ಮತ್ತು ಗಂಟಲು ವಿಭಾಗ, ದಂತ ವೈದ್ಯರ ಕೊಠಡಿ, ನೇತ್ರ ಹೊರರೋಗಿಗಳ ವಿಭಾಗ, ಜಿಲ್ಲಾಸ್ಪತ್ರೆಯ ಸಾರ್ವಜನಿಕ ಶೌಚಾಲಯ ಹಾಗೂ ಔಷಧಿ ವಿತರಣಾ ಕೊಠಡಿ ಭೇಟಿ ನೀಡಿ ಪರಿಶೀಲಿಸಿದರು.

ಔಷಧಿ ವಿತರಣಾ ಕೊಠಡಿಗೆ ಭೇಟಿ ನೀಡಿ ಪರಿಶೀಲಿಸಿದ ಉಪಲೋಕಾಯುಕ್ತರು, ಔಷಧಿ ದಾಸ್ತಾನು ಸ್ವೀಕಾರ ಹಾಗೂ ಔಷಧಿ ವಿತರಣೆ ವಿವರವನ್ನು ಸಂಬಂಧಿಸಿದ ವಹಿಯಲ್ಲಿ ಸಮರ್ಪಕವಾಗಿ ನಮೂದಿಸದಿರುವುದನ್ನು ಗಮನಿಸಿ, ಅನಗತ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಇರುವ ಔಷಧಿಗಳನ್ನು ಅಗತ್ಯ ಇರುವ ಆಸ್ಪತ್ರೆಗಳಿಗೆ ಪೂರೈಕೆ ಮಾಡಬೇಕು ಎಂದು ಸೂಚನೆ ನೀಡಿದರಲ್ಲದೆ, ದಾಸ್ತಾನು ಹಾಗೂ ವಿತರಣೆ ವಹಿಯಲ್ಲಿನ ಲೋಪದೋಷಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ಸೂಚನೆ ನೀಡಿದರು.

Also Read: ಟೌನ್ ಕೋ-ಆಪರೇಟಿವ್ ಬ್ಯಾಂಕ್ ಚುನಾವಣೆ | ನಿಶಾನಿ ಜಯ್ಯಣ್ಣ ಟೀಮ್ ನಾಮಪತ್ರ ಸಲ್ಲಿಕೆ

ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ.ಸಿಇಓ ಎಸ್.ಜೆ.ಸೋಮಶೇಕರ್,ಲೋಕಾಯುಕ್ತದ ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೇಕರ್ ಹಾಗೂ ಜಿ.ವಿ. ವಿಜಯಾನಂದ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಕಿರಣ್ ಪಿ. ಎಂ. ಪಾಟೀಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾ.ಎಂ.ವಿಜಯ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ್, ಜಿಲ್ಲಾ ಶಸ್ತ್ರಚಿಕತ್ಸಕ ಡಾ.ಎಸ್.ಪಿ.ರವೀಂದ್ರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version