ಮುಖ್ಯ ಸುದ್ದಿ
S.M.Krishna: ಚಿತ್ರದುರ್ಗಕ್ಕೆ ನೀರು ಕೊಟ್ಟ ಪುಣ್ಯಾತ್ಮ ಎಸ್.ಎಂ.ಕೃಷ್ಣ | ಜಿ.ಎಚ್.ತಿಪ್ಪಾರೆಡ್ಡಿ
CHITRADURGA NEWS | 10 DECEMBER 2024
ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಚಿತ್ರದುರ್ಗಕ್ಕೆ ನೀರು ಕೊಟ್ಟ ಪ್ರಾತಃ ಸ್ಮರಣಿಯರು ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸ್ಮರಿಸಿಕೊಂಡಿದ್ದಾರೆ.
ನಾನು ಎರಡನೇ ಬಾರಿಗೆ ಪಕ್ಷೇತರ ಶಾಸಕನಾಗಿ ಆಯ್ಕೆಯಾದಾಗ ಎಸ್.ಎಂ.ಕೃಷ್ಣ ಅವರು ಮೊದಲ ಮುಖ್ಯಮಂತ್ರಿ ಆಗಿದ್ದರು.
ಕಾರಣಾಂತರಗಳಿಂದ ದೆಹಲಿಗೆ ಹೋಗಿದ್ದಾಗ ಅಲ್ಲಿಗೆ ಎಸ್.ಎಂ.ಕೃಷ್ಣ ಬರುವ ವಿಚಾರ ಗೊತ್ತಾಯಿತು. ಅಲ್ಲೇ ಉಳಿದು, ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಿದೆ. ಅರೇ ನೀನೇನು ಇಲ್ಲಿ ಎಂದು ಮಾತನಾಡಿಸಿದರು. ನಿಮ್ಮ ಜೊತೆ ಕ್ಷೇತ್ರದ ವಿಚಾರ ಮಾತಾಡಬೇಕಿತ್ತು ಸರ್ ಎಂದೆ.
ಹಾಗಾದರೆ ಬಾ ಕಾರು ಹತ್ತು ಎಂದು ಜೊತೆಗೆ ಕೇದುಕೊಂಡರು. ಕಾರಿನಲ್ಲಿ ಹೋಗುತ್ತಾ, ಚಿತ್ರದುರ್ಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದೆ. ಒಂದು ಕೊಡ ನೀರಿಗೂ ಮಹಿಳೆಯರು ರಾತ್ರಿಯಿಡಿ ಕಾಯುತ್ತಾರೆ. ಹೆಣ್ಣು ಕೊಡದ ಸ್ಥಿತಿ ಇದೆ. ಮನೆಗಳಿಗೆ ಬಾಡಿಗೆಗೆ ಜನ ಬರುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಸೂಳೆಕೆರೆಯಿಂದ ನೀರು ತರಲು ಡಿಪಿಆರ್ ಮಾಡಿಸಲಾಗಿದೆ. ಅದಕ್ಕೆ ಅನುಮೋದನೆ ನೀಡುವಂತೆ ಮನವಿ ಮಾಡಿದೆ.
ಎಲ್ಲವನ್ನೂ ಕೇಳಿಸಿಕೊಂಡ ಎಸ್.ಎಂ.ಕೃಷ್ಣ ಅವರು, ತಕ್ಷಣ ಬೆಂಗಳೂರಿಗೆ ಕಾರ್ಯದರ್ಶಿಗೆ ಪೊನ್ ಮಾಡಿ ಈ ವಿಚಾರ ಸಂಪುಟ ಸಭೆಯಲ್ಲಿ ತರುವಂತೆ ತಿಳಿಸಿದರು. ಆದರೆ, ಕಾರ್ಯದರ್ಶಿಗಳು, ಈಗಾಗಲೇ ವಿಷಯ ಅಂತಿಮವಾಗಿದೆ ಎಂದರು. ಆದರೆ, ಎಸ್.ಎಂ.ಕೃಷ್ಣ ಅವರು ಹೆಚ್ಚುವರಿಯಾಗಿ ಸೇರಿಸಲು ಸೂಚನೆ ನೀಡಿದರು.
ಆನಂತರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸೂಳೆಕೆರೆಯಿಂದ ಚಿತ್ರದುರ್ಗಕ್ಕೆ ನೀರು ತರುವ 90 ಕೋಟಿ ಮೊತ್ತದ ಡಿಪಿಆರ್ ಗೆ ಅನುಮೋದನೆ ನೀಡಿದರು.
ಇದು ಆ ಕಾಲಕ್ಕೆ ಅತ್ಯಂತ ದೊಡ್ಡ ಮೊತ್ತದ ಕಾಮಗಾರಿ. ಇದರ ಪರಿಣಾಮ 2007 ರಲ್ಲಿ ಚಿತ್ರದುರ್ಗಕ್ಕೆ ನೀರು ಹರಿಯಿತು. ದುರ್ಗದ ನೀರಿನ ಬರ ನೀಗಿತು.
ಈ ಕಾರಣಕ್ಕೆ ಚಿತ್ರದುರ್ಗದ ಜನ ಎಸ್.ಎಂ.ಕೃಷ್ಣ ಅವರನ್ನು ಸ್ಮರಿಸಿಕೊಳ್ಳಬೇಕು ಎಂದು ಜಿ.ಎಚ್.ತಿಪ್ಪಾರೆಡ್ಡಿ ಪತ್ರಕರ್ತರ ಜೊತೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
(ಬಚ್ಚೇಗೌಡರು, ನಗರಾಭಿವೃದ್ಧಿ ಸಚಿವರಾಗಿದ್ದಾಗ ಒಮ್ಮೆ ಚಿತ್ರದುರ್ಗಕ್ಕೆ ಬಂದಾಗ ನಬಾರ್ಡ್ ನೆರವಿನಿಂದ ಚಿತ್ರದುರ್ಗದ ಕುಡಿಯುವ ನೀರಿನ ಯೋಜನೆಗೆ ಡಿಪಿಆರ್ ತಯಾರಿಸಲು ಸೂಚಿಸಿದ್ದರು. ಇದಕ್ಕೆ ಎಸ್ಎಂಕೆ ಅನುಮೋದನೆ ಕೊಡಿಸಿದ್ದರು.)