ಮುಖ್ಯ ಸುದ್ದಿ
ಚಿತ್ರದುರ್ಗದಲ್ಲಿ ವಕೀಲರ ರಾಜ್ಯಮಟ್ಟದ ಸಮಾವೇಶ | ಒಳಮೀಸಲಾತಿ ಕುರಿತ ಚರ್ಚೆಗೆ ನಿರ್ಣಯ
CHITRADURGA NEWS | 10 DECEMBER 2024
ಚಿತ್ರದುರ್ಗ: ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿ ಡಿ.14 ಶನಿವಾರ ಬೆಳಗ್ಗೆ 10.30ಕ್ಕೆ ರಾಜ್ಯ ಮಟ್ಟದ ಮಾದಿಗ ವಕೀಲರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯ ಅರುಣ್‍ಕುಮಾರ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ತರಾಸು ರಂಗಮಂದಿರದಲ್ಲಿ ವಕೀಲರ ಸಮಾವೇಶ ನಡೆಯಲಿದ್ದು, ರಾಜ್ಯದ ಸುಮಾರು 700 ವಕೀಲರು ಭಾಗವಹಿಸಲಿದ್ದಾರೆ ಎಂದರು.
ಇದನ್ನೂ ಓದಿ: ಹಿರಿಯೂರು, ಚಳ್ಳಕೆರೆಯಲ್ಲಿ ಲೋಕಾಯುಕ್ತ ದಾಳಿ | ಅರಣ್ಯ ಇಲಾಖೆ ACF ಸುರೇಶ್‍ಗೆ ಬೆಳ್ಳಂ ಬೆಳಗ್ಗೆ ಶಾಕ್
ಸುಪ್ರೀಂಕೋರ್ಟ್ 2024 ಆಗಸ್ಟ್ 1 ರಂದು ಐತಿಹಾಸಿಕ ತೀರ್ಪು ನೀಡಿದೆ. ಅದರನ್ವಯ ರಾಜ್ಯ ಸರ್ಕಾರ ಅಕ್ಟೋಬರ್ 28ರ ಸಂಪುಟ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‍ದಾಸ್ ಅವರ ಏಕಸದಸ್ಯ ಆಯೋಗ ರಚಿಸಿದ್ದು, ಈ ಸಮಿತಿ ಎಂಪೇರಿಕಲ್ ಡಾಟಾ ಸಂಗ್ರಹಿಸಲಿದೆ.
ಈ ಕಾರ್ಯಸೂಚಿಗೆ ತಕ್ಕಂತೆ ನಾವು ನಮ್ಮ ಸಮಾಜವನ್ನು ಅಣಿಗೊಳಿಸಿ ಸಮಂಜಸ ಮಾಹಿತಿ ಒದಗಿಸಬೇಕಾಗಿದೆ. ಈ ಹಿನ್ನೆಲೆಯಿಂದ ರಾಜ್ಯದ ಎಲ್ಲ ಜಿಲ್ಲೆಗಳ ಮಾದಿಗ ಸಮಾಜದ ನ್ಯಾಯವಾದಿಗಳು ಡಿ.14 ರಂದು ಚಿತ್ರದುರ್ಗದಲ್ಲಿ ಸೇರಿ ಚರ್ಚಿಸಲಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಅಡಿಕೆ ಧಾರಣೆ | ಚನ್ನಗಿರಿಯಲ್ಲಿ 51 ಸಾವಿರ ದಾಟಿದ ರಾಶಿ ಅಡಿಕೆ
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ವಿಕ್ರಮ್‍ನಾಥ್, ಬೇಲಾ ಎಂ.ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರಶರ್ಮ ಒಳಗೊಂಡಂತೆ 6:1ರ ಅನುಪಾತದಲ್ಲಿ ಪರಿಶಿಷ್ಟ ಜಾತಿಗಳಿಗೆ ಉಪವರ್ಗೀಕರಣ ಮಾಡಬಹುದೆಂದು ಆಯಾಯಾ ರಾಜ್ಯಗಳಿಗೆ ತೀರ್ಪು ನೀಡಿದ್ದಾರೆ.
ಹಿಂದೆ ಇದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ ಸದಾಶಿವ ಆಯೋಗವನ್ನು ರಚಿಸಿ ಸತತ 7 ವರ್ಷಗಳ ಕಾಲ 20 ಲಕ್ಷದ 54 ಸಾವಿರ ಕುಟುಂಬಗಳನ್ನು ವೈಜ್ಞಾನಿಕ ಸಮೀಕ್ಷೆಗೊಳಪಡಿಸಿ ನಂತರ 2012ರಲ್ಲಿ ಆಯೋಗದ ವರದಿಯನ್ನು ಅಂದಿನ ಮುಖ್ಯಮಂತ್ರಿ ಸದಾನಂದಗೌಡರಿಗೆ ಸಲ್ಲಿಸಿತ್ತು.
ಇದನ್ನೂ ಓದಿ: ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾ, ಐಟಿಐ ಮಾಡಿದವರಿಗೆ ಉದ್ಯೋಗ
ಪರಿಶಿಷ್ಟರ ನೂರೊಂದು ಜಾತಿಗಳಲ್ಲಿ ಮಾದಿಗ-ಮಾದಿಗ ಸಹಸಂಬಂಧಿತ ಜಾತಿಗಳಿಗೆ ಶೇ.6ರಷ್ಟು, ಹೊಲೆಯ ಸಹಸಂಬಂಧಿತ ಜಾತಿಗಳಿಗೆ ಶೇ.5ರಷ್ಟು, ಸ್ಪೃಶ್ಯ ಜಾತಿಗಳಾದ ಕೊರಮ, ಕೊರಚ, ಬೋವಿ, ಲಂಬಾಣಿಗಳಿಗೆ ಶೇ.3ರಷ್ಟು, ಅಲೆಮಾರಿ ಅಸ್ಪೃಶ್ಯ ಜಾತಿಗಳಿಗೆ ಶೇ.1ರಷ್ಟನ್ನು ಜನಸಂಖ್ಯಾ ಆಧಾರಿತವಾಗಿ ಒಳಮೀಸಲಾತಿ ಕಲ್ಪಿಸಿದೆ ಎಂದು ವಿವರಿಸಿದರು.
ಸಮಾವೇಶದಲ್ಲಿ ಸಚಿವರಾದ ಆರ್.ವಿ.ತಿಮ್ಮಾಪುರ, ಮಾಜಿ ಸಚಿವ ಹೆಚ್. ಆಂಜನೇಯ, ಸಂಸದರಾದ ಗೋವಿಂದ ಕಾರಜೋಳ, ಮಾಜಿ ಸಂಸದ ಎ.ನಾರಾಯಣಸ್ವಾಮಿ ಸೇರಿದಂತೆ ಇತರೆ ಮಾದಿಗ ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಮೆಕ್ಕೆಜೋಳ, ತೊಗರಿಬೆಳೆ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಸಮಾವೇಶದಲ್ಲಿ ತೆಗೆದುಕೊಳ್ಳಲಾಗುವ ನಿರ್ಣಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಈಗಾಗಲೇ ಹಲವಾರಿ ಭಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒಳಮೀಸಲಾತಿ ತ್ವರಿತವಾಗಿ ಜಾರಿ ಮಾಡುವಂತೆ ಒತ್ತಾಯಿಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ನ್ಯಾಯಾವಾದಿಗಳಾದ ಬೀಸನಹಳ್ಳಿ ಜಯ್ಯಣ್ಣ, ಕುಮಾರ್ ಚಂದ್ರಪ್ಪ, ರಾಜಣ್ಣ, ಸುರೇಶ್, ರಾಮಣ್ಣ, ರಮೇಶ್, ರಾಮಬಾಬು, ಲೋಕೇಶ್, ದಾಸಪ್ಪ, ರಾಜಪ್ಪ, ನರಹರಿ ಇತರರಿದ್ದರು.