CHITRADURGA NEWS | 22 MAY 2024 ಚಿತ್ರದುರ್ಗ: ಜಿಲ್ಲೆಯ ಅನ್ನದಾತರಿಗೆ ಇದೊಂದು ಸಂತಸದ ಸುದ್ದಿ. ಮೆಕ್ಕೆಜೋಳ, ಶೇಂಗಾ, ಅಡಿಕೆ ಬೆಳೆಗಳಿಗೆ ಔಷಧಿ ಸ್ಪ್ರೆ ಮಾಡಲು ಪಡುತ್ತಿದ್ದ ಕಷ್ಟ ಆ ದೇವರಿಗೆ ಪ್ರೀತಿ ಎಂಬಂತಾಗಿತ್ತು. ಈ ಎಲ್ಲದಕ್ಕೂ ತಿಲಾಂಜಲಿ ಹಾಕುವ ಸಮಯ ಬಂದಿದೆ. ಇನ್ನೂ ಏನಿದ್ದರೂ ಡ್ರೋನ್ ಸದ್ದು.
ಡ್ರೋನ್ ಮೂಲಕ ಔಷಧಿ ಸಿಂಪರಣೆ ಮಾಡಬಹುದು ಎನ್ನುವುದನ್ನು ಇಷ್ಟು ದಿನ ಮಾಧ್ಯಮಗಳಲ್ಲಿ ಕೇಳಿ, ಓದಿದ್ದ ರೈತರ ಹೊಲಕ್ಕೆ ಡ್ರೋನ್ ಬರಲಿದೆ. ಹೌದು, ಐಎಫ್ಎಫ್ಸಿಒಸಂಸ್ಥೆಯಿಂದ ಜಿಲ್ಲೆಗೆ ಔಷಧಿ ಸಿಂಪರಣೆ ಮಾಡಲು ಬೇಕಾಗುವ ಡ್ರೋನ್ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಚಿತ್ರದುರ್ಗ ಜಿಲ್ಲೆಗೆ 4 ಡ್ರೋನ್ ಗಳು ಬಂದಿವೆ.
ಡ್ರೋನ್ ಸಾಗಾಣೆ ಮಾಡಲು ಬ್ಯಾಟರಿ ಚಾಲಿತ ಮೂರು ಚಕ್ರದ ಆಟೊ
ಚಿತ್ರದುರ್ಗ ಹಾಗೂ ಹಿರಿಯೂರು ಟಿಎಪಿಸಿಎಂಸ್‌ಗಳಿಗೆ ತಲಾ ಒಂದೊಂದು ಡ್ರೋನ್‌ಗಳನ್ನು ಉಚಿತವಾಗಿ ಕೊಡಲಾಗಿದೆ. ಇದರೊಟ್ಟಿಗೆ ಓರ್ವ ಮಹಿಳೆ ಮತ್ತು ಪುರುಷ ಉದ್ದಿಮೆದಾರರಿಗೆ ಎರಡು ಡ್ರೋನ್ ಕೊಡಲಾಗುತ್ತದೆ.
12 ಲಕ್ಷ ರೂ. ವೆಚ್ಚದ ಡ್ರೋನ್ ಬರೋಬ್ಬರಿ ಅರ್ಧ ಕಿ.ಮೀ ಎತ್ತರಕ್ಕೆ ಹಾರುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಹತ್ತು ಲೀಟರ್ ಔಷಧಿ ಹಾಕುವ ಟ್ಯಾಂಕ್ ಅಳವಡಿಸಿದ್ದು, 8 ರಿಂದ 10 ನಿಮಿಷದಲ್ಲಿ ಒಂದು ಎಕರೆಗೆ ಔಷಧಿ ಸಿಂಪರಣೆ ಮಾಡಬಹುದಾಗಿದೆ. ಡ್ರೋನ್ ಹೊಂದಲು ಅನುಮತಿ ಅಗತ್ಯವಾಗಿದ್ದು, ಇಫ್ಕೋ 15 ದಿನಗಳ ತರಬೇತಿ ಕೊಡಿಸಿ, ಡಿಜಿಸಿಎ (Directorate General of Civil Aviation) ಮೂಲಕ ಪರಿಶೀಲನೆ ನಡೆಸಿ ಲೈಸೆನ್ಸ್ ಕೊಡಲಾಗುತ್ತದೆ.
ಈ ಹಿಂದೆ ಡ್ರೋನ್ ಹಾರಾಟದ ಲೈಸೆನ್ಸ್ ಪಡೆಯಲು ಪಾಸ್‌ಪೋರ್ಟ್ ಕಡ್ಡಾಯವಾಗಿತ್ತು. ಆದರೆ, ಈಗ ಈ ನಿಯಮ ಸಡಿಲಗೊಳಿಸಿದ್ದು, ಪಾಸ್ ಪೋರ್ಟ್ ಇಲ್ಲದೆಯೂ ಡ್ರೋನ್ ಹಾರಿಸುವ ಲೈಸೆನ್ಸ್ ಪಡೆಯಬಹುದಾಗಿದೆ. 12 ಲಕ್ಷ ವೆಚ್ಚದ ಡ್ರೋನ್ ಜೊತೆಗೆ ಅದನ್ನು ಸಾಗಾಣೆ ಮಾಡಲು ಬ್ಯಾಟರಿ ಚಾಲಿತ ಮೂರು ಚಕ್ರದ ಆಟೊ, ಐದು ಸೆಟ್ ಬ್ಯಾಟರಿ, ಒಂದು ಜನರೇಟರ್ ಕೊಡಲಾಗುತ್ತದೆ.
ಔಷಧ ಸಿಂಪರಣೆ ಮಾಡುವ ಡ್ರೋನ್
ಡ್ರೋನ್ ಪಡೆಯುವ ಸಂಸ್ಥೆ ಒಂದು ಲಕ್ಷ ಶ್ಯೂರಿಟಿ ಇಡಬೇಕಾಗುತ್ತದೆ. ಐದು ವರ್ಷದಲ್ಲಿ 20 ಸಾವಿರ ಎಕರೆಗೆ ಸಿಂಪರಣೆ ಮಾಡಿದರೆ ಆನಂತರ ಅವರ ಹೆಸರಿಗೆ ಡ್ರೋನ್ ಕೊಡಲಾಗುತ್ತದೆ. ಎಲ್ಲ ಬೆಳೆಗಳಿಗೆ ಪೋಷಕಾಂಶ ನಿರ್ವಹಣೆಗೆ ಡ್ರೋನ್ ಮೂಲಕ ಔಷಧ ಸಿಂಪರಣೆಗೆ ಬಳಸಬಹುದು. ಎಲೆಗಳ ಮೇಲೆ ಪೋಷಕಾಂಶ ಸಿಂಪರಣೆಯಿಂದ ಉತ್ತಮ ಬೆಳವಣಿಗೆ ಚೆನ್ನಾಗಿ ಆಗಲಿದೆ.
ಡ್ರೋನ್ ಡೆಮೋ ವೀಡಿಯೊ ನೋಡಿ: https://www.facebook.com/share/v/mw4HfgpGJ1S98dnF/?mibextid=oFDknk
ರೈತರು ಡ್ರೋನ್ ಸೌಲಭ್ಯ ಪಡೆಯುವುದು ಹೇಗೆ: ಮೆಕ್ಕೆಜೋಳ, ಶೇಂಗಾ, ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಡ್ರೋನ್ ಮೂಲಕ ಔಷಧ ಸಿಂಪರಣೆ ಮಾಡಬಹುದಾಗಿದೆ. ಡ್ರೋನ್ ಸೌಲಭ್ಯಕ್ಕೆ ಸಂಪರ್ಕಿಸಲು ಮೊಬೈಲ್ ಆಪ್ ರೂಪಿಸಿದೆ.
ಸಹಾಕಾರ ಕಿಸಾನ್ ಉದಯ್ ಆಪ್ ಮೂಲಕ ನೊಂದಣಿ ಮಾಡಿಕೊಳ್ಳಬೇಕು. ಆಪ್ ಮೂಲಕ ಯಾವ ಬೆಳೆಗೆ, ಯಾವ ದಿನದಂದು ಡ್ರೋನ್ ಬೇಕಾಗಲಿದೆ ಎನ್ನುವ ಮಾಹಿತಿ ನಮೂದು ಮಾಡಿದರೆ, ಹತ್ತಿರದಲ್ಲಿರುವ ಪೈಲೆಟ್ ಮೂಲಕ ಸಂಪರ್ಕಿಸಿ ನಿಮಗೆ ಡ್ರೋನ್ ತಲುಪಿಸಲಾಗುತ್ತದೆ. ಪ್ರತಿ ಎಕರೆಗೆ 300 ರೂ. ಚಾರ್ಜ್ ಮಾಡಲಾಗುತ್ತದೆ.