ಮುಖ್ಯ ಸುದ್ದಿ
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು | ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಕೇಸರಿ ಪಡೆ ಆಕ್ರೋಶ
CHITRADURGA NEWS | 28 JUNE 2024
ಚಿತ್ರದುರ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ₹ 187 ಕೋಟಿ ಹಗರಣದ ಅಕ್ರಮ ಖಂಡಿಸಿ ಶುಕ್ರವಾರ
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಿಜೆಪಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
‘ರಾಜ್ಯಾದ್ಯಂತ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳಿಗೆ ಬಿಜೆಪಿ ಮುತ್ತಿಗೆ ಹಾಕುತ್ತಿದೆ. ಕಳೆದ ಒಂದು ವರ್ಷದಿಂದ ರಾಜ್ಯ ಸರ್ಕಾರ ನಿರಂತರ ಭ್ರಷ್ಟಾಚಾರದಲ್ಲಿ ತೊಡಗಿದೆ. ಅಭಿವೃದ್ಧಿ ನಿಂತು ಹೋಗಿದೆ. ಬಿಜೆಪಿ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿ ಅಧಿಕಾರಕ್ಕೆ ಬಂದವರು, ಅಭಿವೃದ್ಧಿಯನ್ನೇ ಮರೆತಿದ್ದಾರೆ’ ಎಂದು ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಈ ರೀತಿಯ ಭ್ರಷ್ಟಾಚಾರ ನಡೆದಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಆಂಧ್ರದ ಲೋಕಸಭಾ ಚುನಾವಣೆಗೆ ಹಣ ಬಳಕೆ ಮಾಡಲಾಗಿದೆ. ಬಾರ್‌ನಲ್ಲಿ ಕುಳಿತು ಕುಡಿದ ಬಿಲ್ ಅನ್ನು ಸಹ ವಾಲ್ಮೀಕಿ ನಿಗಮದ ಹಣದಲ್ಲಿ ಕೊಟ್ಟಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ಯಡಿಯೂರಪ್ಪ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪಿಸಿ ನೂರಾರು ಕೋಟಿ ಅನುದಾನ ನೀಡಿದರು. ಸಮಾಜದ ಬಡ ಮಕ್ಕಳು, ಹಿಂದುಳಿದವರ ಅಭಿವೃದ್ಧಿಗೆ ಮೀಸಲಿಟ್ಟಿದ್ದರು. ಆದರೆ, ಈ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಸಚಿವರಾಗಿದ್ದ ನಾಗೇಂದ್ರ ರಾಜೀನಾಮೆ ಪಡೆಯಲಾಗಿದೆ. ಇದು ನಾಗೇಂದ್ರ ಒಬ್ಬರ ತಪ್ಪಲ್ಲ. ಮುಖ್ಯಮಂತ್ರಿ ಆರ್ಥಿಕ ಸಚಿವರ ಗಮನದಲ್ಲೇ ಪ್ರಕರಣ ನಡೆದಿದೆ’ ಎಂದು ದೂರಿದರು.
ಕ್ಲಿಕ್ ಮಾಡಿ ಓದಿ: ಕೆಎಸ್‌ಸಿಎ ಕ್ರಿಕೆಟ್ ಆಯ್ಕೆ ಟ್ರಯಲ್ಸ್ 30ಕ್ಕೆ | ಬೆಳಗಟ್ಟದ ಸಿಸಿಎ ಟರ್ಫ್ ಮೈದಾನ
‘ಬೇರೆ ರಾಜ್ಯಗಳ ಲೋಕಸಭೆ ಚುನಾವಣೆಗೆ ಕರ್ನಾಟಕವನ್ನು ಎಟಿಎಂ ಆಗಿ ಮಾಡಿಕೊಂಡಿದ್ದಾರೆ. ರಾಹುಲ್ ಗಾಂಧಿಗೆ ಹಣ ಕೊಡಬೇಕು. ನಿಗಮ ಹಣವನ್ನ ಬಳಕೆ ಮಾಡಿಕೊಂಡಿರುವುದು ಸಿಎಂ ಗಮನಕ್ಕೆ ಬರದೆ ಇರಲು ಸಾಧ್ಯ ಇಲ್ಲ. ಸಚಿವ ಶರಣ ಪ್ರಕಾಶ್ ಪಾಟೀಲ್, ನಿಗಮದ ಅಧ್ಯಕ್ಷ ಬಸವರಾಜ ದದ್ದಲ್ ಹೆಸರು ಇದೆ. ಸ್ವತಃ ಮುಖ್ಯಮಂತ್ರಿ ಕೂಡಾ ಇದರಲ್ಲಿ ಭಾಗಿಯಾಗಿದ್ದಾರೆ. ಎಲ್ಲರೂ ರಾಜೀನಾಮೆ ಕೊಡಬೇಕು’ ಎಂದು ಆಗ್ರಹಿಸಿದರು.
‘ರಾಜ್ಯದಲ್ಕಿ ಭೀಕರ ಬರಗಾಲ ಬಂದಾಗ ರೈತರಿಗೆ ಈ ಸರ್ಕಾರ ಸ್ಪಂದಿಸಿಲ್ಲ. ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಆಗಿದೆ. ಇದಕ್ಕೆ ತಕ್ಕ ಪ್ರಾಯಶ್ಚಿತ್ತ ಆಗಬೇಕು. ಲೆಕ್ಕಾಧಿಕಾರಿ ಚಂದ್ರಶೇಖರ್ ಬರೆದಿದ್ದ ಡೆತ್‌ನೋಟ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ. ಲೋಕಸಭೆ ಚುನಾವಣೆಗೆ ಹಣ ಕೊಡಲು ಕಾಂಗ್ರೆಸ್ ಹೈಕಮಾಂಡ್ ಒತ್ತಡವಿತ್ತು. ಹಾಗಾಗಿ ಬೇರೆ ನಿಗಮಗಳಲ್ಲೂ ಅವ್ಯವಹಾರ ಆಗಿದೆ. ಎಸ್‌ಇಪಿ, ಟಿಎಸ್‌ಪಿ ಅನುದಾನವೂ ದುರ್ಬಳಕೆ ಆಗಿದೆ. ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಮಂತ್ರಿಗಳೆಲ್ಲರೂ ರಾಜೀನಾಮೆ ಕೊಡಬೇಕು’ ಎಂದು ಒತ್ತಾಯಿಸಿದರು.
ಕ್ಲಿಕ್ ಮಾಡಿ ಓದಿ: ಈ ವರ್ಷವೂ ಚಿತ್ರದುರ್ಗಕ್ಕೆ ಭದ್ರೆ ಹರಿಯುವುದು ಅನುಮಾನ
‘ವಾಲ್ಮೀಕಿ ನಿಗಮದ 187 ಕೋಟಿ ರೂ.ಗಳನ್ನು ಆಂಧ್ರಪ್ರದೇಶದ ಚುನಾವಣೆಗೆ ಕಳಿಸಿದ್ದಾರೆ. ಅನೇಕ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿದ್ದಾರೆ. ಬಿಟ್ಟಿ ಭಾಗ್ಯ ಕೊಟ್ಟು ಹೆಣ್ಣು ಮಕ್ಕಳನ್ನು ಮರುಳು ಮಾಡಿ ಈಗ ಬೆಲೆ ಹೆಚ್ಚಿಸಿದ್ದಾರೆ. ಸಂಪನ್ಮೂಲ 60 ಸಾವಿರ ಕೋಟಿ ಬೇಕು. ಅದಕ್ಕೆ ನಾಯಕರ ದುಡ್ಡೇ ಬೇಕಾ. ಬಡವರು, ಬೋರ್‌ವೆಲ್ ಹಾಕಿಸುವ ಹಣ ನುಂಗಿದರೂ ಒಬ್ಬ ಶಾಸಕರು ಪ್ರಶ್ನೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು’ ಎಂದು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಆಗ್ರಹಿಸಿದರು.
ಶಾಸಕ ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ರಾಮಚಂದ್ರಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರುಳಿ, ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಮುಖಂಡರಾದ ಲಿಂಗಮೂರ್ತಿ, ಕೆ.ಟಿ.ಕುಮಾರ ಸ್ವಾಮಿ, ಜಿ.ಎಸ್.ಅನಿತ್, ಎಂ.ಸಿ.ರಘುಚಂದನ್, ಉಮೇಶ್ ಕಾರಜೋಳ, ರಾಮದಾಸ್, ಡಾ.ಸಿದ್ದಾರ್ಥ್, ಹನುಮಂತೇಗೌಡ, ಚಂದ್ರ ವಿ.ಎಸ್.ಹಳ್ಳಿ, ಸಂಪತ್, ಸುರೇಶ್ ಸಿದ್ದಾಪುರ, ಪಂಪಾ, ಚಾಲುಕ್ಯ ನವೀನ್, ಸಿದ್ದೇಶ್, ಕಲ್ಲೇಶಯ್ಯ, ಕವನ, ವೆಂಕಟೇಶ್ ಯಾದವ್ ಇತರರು ಪಾಲ್ಗೊಂಡಿದ್ದರು.