ಹಿರಿಯೂರು
ಪೊಲೀಸ್ ಭದ್ರತೆಯಲ್ಲಿ ಮೃತನ ಅಂತ್ಯ ಸಂಸ್ಕಾರ | ರುದ್ರಭೂಮಿ ಜಾಗಕ್ಕೆ ಪಟ್ಟು
ಚಿತ್ರದುರ್ಗನ್ಯೂಸ್.ಕಾಂ
ರುದ್ರಭೂಮಿ ಸಮಸ್ಯೆ ಕಾರಣಕ್ಕೆ ಮೃತ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರವನ್ನು ರಸ್ತೆ ಬಳಿ ಮಾಡಲು ಮುಂದಾಗಿದ್ದ ಘಟನೆ ಹಿರಿಯೂರು ತಾಲ್ಲೂಕಿನ ಮಾರಿಕಣಿವೆ ರಸ್ತೆ ಬಳಿ ನಡೆದಿದೆ.
ವಾಣಿ ವಿಲಾಸಪುರ ರಸ್ತೆಯಲ್ಲಿರುವ ಉಪ್ಪಾರಹಟ್ಟಿ ಗ್ರಾಮದಲ್ಲಿ ರುದ್ರಭೂಮಿ ಇಲ್ಲದ ಕಾರಣ ಮೃತ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರವನ್ನು ರಸ್ತೆ ಬಳಿ ಮಾಡಲು ಮುಂದಾಗಿದ್ದರು. ಇದಕ್ಕೆ ಸ್ಥಳೀಯರು ಅಡ್ಡಿಪಡಿಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಬಳಿಕ ಪೊಲೀಸ್ ಭದ್ರತೆಯಲ್ಲಿ ಬುಧವಾರ ಸಂಜೆ ಉಪ್ಪಾರಹಟ್ಟಿಯ ಕಲ್ಲಪ್ಪ ಪಾರ್ಥಿವ ಶರೀರಕ್ಕೆ ಮೊದಲು ಇದ್ದ ರುದ್ರಭೂಮಿಯಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದನ್ನೂ ಓದಿ: ಬಾಳೆದಿಂಡಿನಿಂದ ನಾರು ಸಂಸ್ಕರಣೆ ತರಬೇತಿ ಕಾರ್ಯಾಗಾರ | ಕೂಡಲೇ ಅರ್ಜಿ ಸಲ್ಲಿಸಿ
ಮಂಗಳವಾರ ಉಪ್ಪಾರಹಟ್ಟಿಯಲ್ಲಿ ಕಲ್ಲಪ್ಪ ಮೃತಪಟ್ಟಿದ್ದರು. ಗ್ರಾಮದಲ್ಲಿ ರುದ್ರಭೂಮಿ ಇಲ್ಲದ ಕಾರಣಕ್ಕೆ ಅವರ ಅಂತ್ಯಕ್ರಿಯೆ ರಸ್ತೆ ಬದಿಯಲ್ಲಿ ನಡೆಸಲು ಸ್ಥಳೀಯರು ಅವಕಾಶಕೊಟ್ಟಿರಲಿಲ್ಲ. ಸ್ಥಳೀಯರು ಹಾಗೂ ಸಂಬಂಧಿಕರು ಆಕ್ರೋಶಗೊಂಡು ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ರುದ್ರಭೂಮಿ ಸಮಸ್ಯೆ ಪರಿಹರಿಸಬೇಕು ಎಂದು ಪಟ್ಟು ಹಿಡಿದರು.
ಈ ವೇಳೆ ಗ್ರಾಮಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ರಾಜೇಶ್ ಕುಮಾರ್ ಮೃತರ ಸಂಬಂಧಿಕರ ಮನ ಒಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಪೊಲೀಸ್ ಭದ್ರತೆಯಲ್ಲಿ ಅಂತ್ಯಸಂಸ್ಕಾರ ಮಾಡಿಸಿ, ವಾರದೊಳಗೆ ರುದ್ರಭೂಮಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಇದನ್ನೂ ಓದಿ: ಕೋರ್ಟ್ ನೋಟೀಸ್ ಬಂದ ದಿನವೇ ಮಾರಣಾಂತಿಕ ಹಲ್ಲೆ | 6 ವರ್ಷ ಕಠಿಣ ಜೈಲು ಶಿಕ್ಷೆ
ಈಗಾಗಲೇ ಯರದಕಟ್ಟೆ ಗೋಮಾಳದ ಸರ್ವೆ ನಂ. 19ರಲ್ಲಿ 1.17 ಎಕರೆ ಜಮೀನನ್ನು ರುದ್ರಭೂಮಿಗೆ ಮಂಜೂರು ಮಾಡಿ ಪಹಣಿ ಬಂದಿದ್ದು, ಒಂದು ವರ್ಷ ಕಳೆದಿದೆ. ಅಲ್ಲಿಂದ ಇಲ್ಲಿಯವರೆಗೆ ಸುಮಾರು ಏಳೆಂಟು ಮಂದಿ ಮರಣ ಹೊಂದಿದ್ದಾರೆ. ಆದಾಗ್ಯೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ಅಲ್ಲಿನ ಸ್ಥಳೀಯರು ಬಿಡುತ್ತಿಲ್ಲ. ಆದ್ದರಿಂದ ವಿ.ವಿ.ಪುರ ರಸ್ತೆಯ ಪಕ್ಕದಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ.
ಉಪಾರಹಟ್ಟಿ ಗ್ರಾಮದಲ್ಲಿ ಉಪ್ಪಾರ ಸಮುದಾಯಕ್ಕೆ ಸೇರಿದ ನೂರು ಮನೆಗಳಿದ್ದು, ಸುಮಾರು 600ಕ್ಕೂ ಹೆಚ್ಚು ಜನರಿದ್ದಾರೆ. ಹಟ್ಟಿಯಲ್ಲಿರುವ ಯಾರಿಗೂ ಒಂದಿಂಚು ಭೂಮಿ ಇಲ್ಲ. ಕೂಲಿಯೇ ಎಲ್ಲರಿಗೂ ಬದುಕಿನ ಆಧಾರ. ಹಟ್ಟಿಯಲ್ಲಿ ಯಾರಾದರೂ ಮರಣ ಹೊಂದಿದರೆ ಶವಸಂಸ್ಕಾರ ಮಾಡಲು ಒಂದಡಿ ಜಾಗವಿಲ್ಲ. ಸತ್ತವರನ್ನು ನೆಮ್ಮದಿಯಿಂದ ಅಂತ್ಯಸಂಸ್ಕಾರ ಮಾಡಲು ಜಾಗ ಕೇಳುವುದೇ ತಪ್ಪಾ ಎಂಬ ಪ್ರಶ್ನೆ ಗ್ರಾಮಸ್ಥರದ್ದು.
ಜಿಲ್ಲಾ ಉಪ್ಪಾರ ಸಮಾಜದ ನಿಕಟಪೂರ್ವ ಅಧ್ಯಕ್ಷ ಆರ್.ಮೂರ್ತಿ, ತಾಲ್ಲೂಕು ಘಟಕದ ಅಧ್ಯಕ್ಷ ಆಲೂರು ರಾಮಣ್ಣ, ನಿಂಗರಾಜ, ಶೇಖರಪ್ಪ, ಕಾಂತರಾಜ್, ಮಹಾಲಿಂಗಪ್ಪ, ಮುಖಂಡ ನಾಗರಾಜ್ ಉಪ್ಪಾರ ಇದ್ದರು.