ಮೊಳಕಾಳ್ಮೂರು
ಕೋರ್ಟ್ ನೋಟೀಸ್ ಬಂದ ದಿನವೇ ಮಾರಣಾಂತಿಕ ಹಲ್ಲೆ | 6 ವರ್ಷ ಕಠಿಣ ಜೈಲು ಶಿಕ್ಷೆ
ಚಿತ್ರದುರ್ಗ ನ್ಯೂಸ್.ಕಾಂ: ಮನೆಯ ಜಾಗದ ವಿಚಾರಕ್ಕೆ ನ್ಯಾಯಾಲಯದಲ್ಲಿ ದಾವೆ ಹಾಕಿದ್ದು, ನ್ಯಾಯಾಲಯದ ನೋಟೀಸ್ ಬಂದ ದಿನವೇ ಹಲ್ಲೆ ನಡೆಸಿದ್ದ ಇಬ್ಬರು ವ್ಯಕ್ತಿಗಳಿಗೆ ಚಿತ್ರದುರ್ಗ ನ್ಯಾಯಾಲಯ 6 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಮೊಳಕಾಲ್ಮೂರು ತಾಲೂಕಿನ ಹೊಸಹಳ್ಳಿ ಗ್ರಾಮದ ಗವಿಸಿದ್ದಪ್ಪ ಮತ್ತು ಕರಿಚಿತ್ತಪ್ಪ ಶಿಕ್ಷೆಗೆ ಗುರಿಯಾದವರು.
ಮೊಳಕಾಲ್ಮೂರು ತಾಲೂಕಿನ ಹೊಸಹಳ್ಳಿ ಗ್ರಾಮದ ಎಳ್ಳೆನಾಗಪ್ಪ ಹಾಗೂ ಗವಿಸಿದ್ದಪ್ಪ, ಕರಿಚಿತ್ತಪ್ಪ ಎಂಬುವವರ ನಡುವೆ ಮನೆಯ ಜಾಗದ ವಿಚಾರವಾಗಿ ಮನಸ್ತಾಪವಾಗಿತ್ತು.
ಈ ಹಿನ್ನೆಲೆಯಲ್ಲಿ ಎಳ್ಳೆನಾಗಪ್ಪ ಮೊಳಕಾಲ್ಮೂರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹಾಕಿದ್ದರು.
ಇದನ್ನೂ ಓದಿ: ಹಕ್ಕಿ ಗೂಡಿಗೆ ಆಹಾರ ಕಲ್ಪಿಸಿದ ಶ್ರೀಗಳು | ಹೊಸದುರ್ಗ ಮಠಾಧೀಶರ ವಿನೂತನ ಕಾರ್ಯ
2019 ಮೇ 7 ರಂದು ಗವಿಸಿದ್ದಪ್ಪ, ಕರಿಚಿತ್ತಪ್ಪ ಅವರಿಗೆ ನ್ಯಾಯಾಲಯದಿಂದ ನೋಟೀಸ್ ಬಂದಿದೆ.
ಇದೇ ದಿನ ರಾತ್ರಿ ಎಳ್ಳೆ ನಾಗಪ್ಪ ಅವರ ಮನೆಯ ಬಳಿ ಬಂದ ಆರೋಪಿತರು, ನ್ಯಾಯಾಲಯದಿಂದ ನೋಟೀಸ್ ಕೊಡಿಸುತ್ತೀಯಾ ಎಂದು ದೂರಿ ಕೊಡಲಿಯಿಂದ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಎಳ್ಳೆನಾಗಪ್ಪ ಜೊತೆಗಿದ್ದ ಕೃಷ್ಣಪ್ಪ ಎಂಬುವವರ ಮೇಲೆಯೂ ಹಲ್ಲೆ ನಡೆಸಿದ್ದು, ತೀವ್ರ ಸ್ವರೂಪದ ಗಾಯಗಳಾಗಿವೆ.
ಮೊಳಕಾಲ್ಮೂರು ತಾಲೂಕು ರಾಂಪುರ ಠಾಣೆಯಲ್ಲಿ ಗವಿಸಿದ್ದಪ್ಪ, ಕರಿಚಿತ್ತಪ್ಪ, ಗೋಪಾಲ ಹಾಗೂ ಚಿಕ್ಕನಾಗಮ್ಮ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಸಿದ ಪಿಎಸ್‍ಐ ಎ.ಕಿರಣ್‍ಕುಮಾರ್ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದರು.
ಸದರಿ ಪ್ರಕರಣದ ವಿಚಾರಣೆ ನಡೆಸಿದ ಚಿತ್ರದುರ್ಗ ಪ್ರಧಾನ ಜಿಲ್ಲಾ ಮತ್ರ ಸತ್ರ ನ್ಯಾಯಾಧೀಶರಾದ ಬಿ.ಕೆ.ಗೀತಾ, ಆರೋಪ ಸಾಬೀತಾದ್ದರಿಂದ ಗವಿಸಿದ್ದಪ್ಪ ಹಾಗೂ ಕರಿಚಿತ್ತಪ್ಪ ಅವರಿಗೆ ಕಲಂ 307ರ ಅಡಿಯಲ್ಲಿ 6 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ದಂಡ, ಕಲಂ 326ರ ಅಡಿಯಲ್ಲಿ 5 ವರ್ಷ ಕಠಿಣ ಶಿಕ್ಷೆ 30 ಸಾವಿರ ದಂಡ ಹಾಗೂ ಕಲಂ 324ರಲ್ಲಿ 1 ವರ್ಷ ಸಾದಾ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದ್ದಾರೆ.
ಪ್ರಕರಣದಲ್ಲಿ ಮೂರು ಮತ್ತು ನಾಲ್ಕನೇ ಆರೋಪಿಗಳಾಗಿದ್ದ ಗೋಪಾಲ ಹಾಗೂ ಚಿಕ್ಕನಾಗಮ್ಮ ವಿರುದ್ದ ಆರೋಪ ಸಾಬೀತಾಗದ ಕಾರಣ ಅವರನ್ನು ಬಿಡುಗಡೆ ಮಾಡಿ ತೀರ್ಪು ನೀಡಿದ್ದಾರೆ.
ದಂಡದ ಮೊತ್ತದಲ್ಲಿ 1 ಲಕ್ಷ ರೂ.ಗಳನ್ನು ಗಾಯಾಳು ಕೃಷ್ಣಪ್ಪ ಅವರಿಗೆ ಹಾಗೂ ಪಿರ್ಯಾದಿ ಎಳ್ಳೆನಾಗಪ್ಪ ಅವರಿಗೆ 50 ಸಾವಿರ ರೂ. ನೀಡಲು ಆದೇಶಿಸಲಾಗಿದೆ.
ಆಪಾದಿತರು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದ ಕಾರಣ ಅವರ ನ್ಯಾಯಾಂಗ ಬಂಧನದ ಅವಧಿಯನ್ನೂ ಸೆಟ್ ಆಫ್ ಮಾಡಲಾಗಿದೆ.
ಪ್ರಕರಣದಲ್ಲಿ ಪ್ರಧಾನ ಸರ್ಕಾರಿ ಅಭಿಯೋಜಕ ಬಿ.ಗಣೇಶ್ ನಾಯ್ಕ್ ವಾದ ಮಂಡಿಸಿದ್ದರು.