ಹಿರಿಯೂರು
ಇ-ಸ್ವತ್ತಿಗೆ ಲಂಚ | ನಗರಸಭೆ ಸದಸ್ಯನ ಬಂಧನ
ಚಿತ್ರದುರ್ಗ ನ್ಯೂಸ್.ಕಾಂ: ಇ-ಸ್ವತ್ತು ಮಾಡಿಸಿಕೊಡಲು ಲಂಚದ ಬೇಡಿಕೆ ಇಟ್ಟು, 5 ಸಾವಿರ ಮುಂಗಡ ಪಡೆಯುವ ವೇಳೆ ಹಿರಿಯೂರು ನಗರಸಭೆ ಸದಸ್ಯರೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹಿರಿಯೂರು ನಗರಸಭೆಗೆ ಪಕ್ಷೇತರರಾಗಿ ಆಯ್ಕೆಯಾಗಿರುವ ಡಿ.ಸಣ್ಣಪ್ಪ ಬಂಧಿತ ಸದಸ್ಯ.
ಬೆಂಗಳೂರಿನ ಕೆಐಎಡಿಬಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಟಿ.ನಟರಾಜ್ ಎನ್ನುವವರು, ಹಿರಿಯೂರು ತಾಲೂಕು ಬಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಮ್ಮ ತಾಯಿಯ ಹೆಸರಿನಲ್ಲಿರುವ ಮನೆಗೆ ಇ-ಸ್ವತ್ತು ಪಡೆಯಲು ಹೋಗಿದ್ದಾಗ ಈ ಘಟನೆ ನಡೆದಿದೆ.
1981ರಲ್ಲಿ ಇಲ್ಲಿ ನಿವೇಶನ ಖರೀಧಿಸಿ, 2007ರಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಈಗ ಮನೆಯ ಮೇಲೆ ಮತ್ತೊಂದು ಮನೆ ನಿರ್ಮಾಣಕ್ಕೆ ಸಾಲಕ್ಕಾಗಿ ಬ್ಯಾಂಕಿಗೆ ಹೋದಾಗ ಇ-ಸ್ವತ್ತು ಕೇಳಿದ್ದಾರೆ.
ಇದನ್ನೂ ಓದಿ: ಹೊಳಲ್ಕೆರೆಯಲ್ಲಿ ಜನತಾ ದರ್ಶನ | ಎಷ್ಟು ಜನ ಅರ್ಜಿ ಸಲ್ಲಿಸಿದ್ರು
ಈ ಹಿನ್ನೆಲೆಯಲ್ಲಿ 2023 ಆಗಸ್ಟ್ 1 ರಂದು ಹಿರಿಯೂರು ನಗರಸಭೆಗೆ ಬಂದು ಇಲ್ಲಿನ ಕೇಸ್ ವರ್ಕರ್ ಕೆ.ರಮೇಶ್ ಅವರನ್ನು ವಿಚಾರಿಸಿದ್ದಾರೆ. ಲೇಔಟ್ ಪ್ಲಾನ್ ಬರುವುದಿಲ್ಲ ಎಂದು ಹಿಂಬರಹ ನೀಡಿದ್ದಾರೆ.
ಆನಂತರ ನವೆಂಬರ್ ತಿಂಗಳಲ್ಲಿ ಮತ್ತೆ ನಗರಸಭೆಗೆ ಭೇಟಿ ನೀಡಿದಾಗ ನಗರಸಭೆ ಸದಸ್ಯ ಡಿ.ಸಣ್ಣಪ್ಪ ಮಾಡಿಸಿಕೊಡುತ್ತಾರೆ ಎನ್ನುವ ಮಾಹಿತಿ ಸಿಕ್ಕಿದೆ.
ಸಣ್ಣಪ್ಪ ಅವರನ್ನು ವಿಚಾರಿಸಿದಾಗ 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 5 ಸಾವಿರ ಕೇಳಿದ್ದಾರೆ. ಲಂಚ ಕೊಡಲು ಇಷ್ಟವಿಲ್ಲದೆ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
2024 ಜನವರಿ 2 ರಂದು 5 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ವೈ.ಎಸ್.ಶಿಲ್ಪಾ ಕೈಗೊಂಡಿದ್ದಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎನ್.ವಾಸುದೇವರಾಮ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿದ್ದು, ಉಪಾಧೀಕ್ಷಕರಾದ ಎನ್.ಮೃತ್ಯಂಜಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.